ಅಹಮದಾಬಾದ್: ವಿಶ್ವಕಪ್ ಫೈನಲ್ ಪಂದ್ಯದಲ್ಲಿ (ICC World Cup 2023) ರೋಹಿತ್ ಶರ್ಮಾ ಬಳಗವು ಸೋಲನುಭವಿಸಿದ್ದು ಶತಕೋಟಿ ಭಾರತೀಯರನ್ನು ದುಃಖ, ಬೇಸರದ ಮಡುವಿಗೆ ತಳ್ಳಿದೆ. ಟೂರ್ನಿಯುದ್ದಕ್ಕೂ ಉತ್ತಮವಾಗಿ ಆಟವಾಡಿ, ಫೈನಲ್‌ನಲ್ಲಿ ಎಡವಿದರಲ್ಲ, ವಿಶ್ವಕಪ್ ಕೈತಪ್ಪಿತಲ್ಲ ಎಂಬ ಬೇಸರ ಎಲ್ಲರನ್ನೂ ಕಾಡುತ್ತಿದೆ. ಇದರ ಬೆನ್ನಲ್ಲೇ, ವಿಶ್ವಕಪ್ ಫೈನಲ್ ಪಂದ್ಯದ ವೀಕ್ಷಣೆಗೆ ಆಹ್ವಾನ ನೀಡಿಲ್ಲ ಎಂದು 1983ರಲ್ಲಿ ವಿಶ್ವಕಪ್ ವಿಜೇತ ತಂಡದ ನಾಯಕ ಕಪಿಲ್ ದೇವ್ (Kapil Dev) ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಎಬಿಪಿ ನ್ಯೂಸ್ ಜತೆ ಮಾತನಾಡುವಾಗ ಕಪಿಲ್ ದೇವ್ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ನೀವೇಕೆ ವಿಶ್ವಕಪ್ ಫೈನಲ್ ಮ್ಯಾಚ್ ವೀಕ್ಷಿಸಲು ಮೈದಾನಕ್ಕೆ ಹೋಗಿಲ್ಲ’ ಎಂಬ ಪ್ರಶ್ನೆಗೆ, “ಫೈನಲ್ ಪಂದ್ಯದ ವೀಕ್ಷಣೆಗೆ ನನ್ನನ್ನು ಆಹ್ವಾನಿಸಿಲ್ಲ, ಅದಕ್ಕಾಗಿ ನಾನು ಹೋಗಿಲ್ಲ. ನಾನು 1983ರ ವಿಶ್ವಕಪ್ ತಂಡದೊಂದಿಗೆ ಈ ಬಾರಿಯ ಫೈನಲ್ ವೀಕ್ಷಿಸಲು ಬಯಸಿಲ್ಲ. ಆದರೆ, ಈ ಬಾರಿಯ ವಿಶ್ವಕಪ್ ಫೈನಲ್ ಪಂದ್ಯ ದೊಡ್ಡ ಇವೆಂಟ್. ಜನ ಹೆಚ್ಚಿನ ಜವಾಬ್ದಾರಿಗಳನ್ನು ನಿಭಾಯಿಸುತ್ತಿದ್ದಾರೆ. ಕೆಲವೊಂದು ಸಲ ಅವರು ಮರೆತುಬಿಡುತ್ತಾರೆ” ಎಂದು ಹೇಳಿದ್ದಾರೆ.
ಕಪಿಲ್ ದೇವ್ ಹೇಳಿದ್ದಿಷ್ಟು…
Kapil Dev Not invited to World Cup Finals#KapilDev #IndiaVsAustralia #WorldcupFinal #IndiaVsAustraliaWC2023 #WC2023 pic.twitter.com/zLRDB8ASdd
— Veer Wolf (@wolfbaaz) November 19, 2023
ತವರು ನೆಲದಲ್ಲಿ ನಡೆದ ವಿಶ್ವ ಕಪ್ ಆವೃತ್ತಿಯಲ್ಲಿ ಟ್ರೋಫಿ ಗೆದ್ದೇ ಗೆಲ್ಲುತ್ತೇವೆ ಎಂಬ ಟೀಮ್ ಇಂಡಿಯಾದ ಹುಮ್ಮಸ್ಸು ಬತ್ತಿ ಹೋಯಿತು. ನರೇಂದ್ರ ಮೋದಿ ಸ್ಟೇಡಿಯಮ್ನಲ್ಲಿ ನಡೆದ ಏಕ ದಿನ ವಿಶ್ವ ಕಪ್ನ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ತಲೆ ಬಾಗಿದ ಟೀಮ್ ಇಂಡಿಯಾದ ಪ್ರಯತ್ನಗಳು ಭಗ್ನವಾಗಿದೆ. 2003ರ ವಿಶ್ವ ಕಪ್ನ ಫೈನಲ್ ಫಲಿತಾಂಶವು ಮತ್ತೊಂದು ಬಾರಿ ಪುನರಾವರ್ತನೆಯಾಗಿದೆ. ಅಂದು ಭಾರತ ತಂಡ ಆಸ್ಟ್ರೇಲಿಯಾ ತಂಡದ ವಿರುದ್ಧವೇ 125 ರನ್ಗಳಿಂದ ಸೋಲು ಕಂಡಿತ್ತು.
ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತ ಭಾರತ ತಂಡ ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನ ಪಡೆಯಿತು. ಆದರೆ, ಬ್ಯಾಟಿಂಗ್ ವೈಫಲ್ಯ ಎದುರಿಸಿದ ಭಾರತ ತಂಡ ನಿಗದಿತ 50 ಓವರ್ಗಳಲ್ಲಿ 240 ರನ್ಗಳಿಗೆ ಆಲ್ಔಟ್ ಆಯಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡ 43 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 241 ರನ್ ಬಾರಿಸಿ ನಿರಾಯಾಸ ವಿಜಯ ಕಂಡಿತು. ಆಸ್ಟ್ರೇಲಿಯಾ ತಂಡದ ಪರ ಆರಂಭಿಕ ಬ್ಯಾಟರ್ ಟ್ರಾವಿಸ್ ಹೆಡ್ 137 ರನ್ ಬಾರಿಸಿ ಗೆಲುವಿನ ರೂವಾರಿ ಎನಿಸಿಕೊಂಡರು.
ಇದನ್ನೂ ಓದಿ: Jasprit Bumrah: ವಿಶ್ವಕಪ್ನಲ್ಲಿ ಕಪಿಲ್ ದೇವ್ ದಾಖಲೆ ಮುರಿದ ಜಸ್ಪ್ರೀತ್ ಬುಮ್ರಾ
ವಿರಾಟ್ ಕೊಹ್ಲಿ ಸರಣಿ ಶ್ರೇಷ್ಠ
ವಿಶ್ವಕಪ್ ಆವೃತ್ತಿಯಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ತೋರಿದ ಟೀಮ್ ಇಂಡಿಯಾದ ಸ್ಟಾರ್ ಆಟಗಾರ ಕಿಂಗ್ ಖ್ಯಾತಿಯ ವಿರಾಟ್ ಕೊಹ್ಲಿ (Virat Kohli) ಅವರು ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಟೂರ್ನಿಯಲ್ಲಿ ಅವರು 11 ಪಂದ್ಯಗಳನ್ನು ಆಡಿ ಒಟ್ಟು 765 ರನ್ ಬಾರಿಸಿ ಅತ್ಯಧಿಕ ರನ್ಗಳಿಸಿದ ಆಟಗಾರ ಎನಿಸಿಕೊಂಡರು. ಅವರ ಈ ಸಾಧನೆಗೆ ಈ ಪ್ರಶಸ್ತಿ ಒಲಿದಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ