ಬೆಂಗಳೂರು: ಭಾರತದಲ್ಲಿ ನಡೆಯುತ್ತಿರುವ ವಿಶ್ವಕಪ್ 2023 ರಲ್ಲಿ (ICC World Cup 2023) ಅಫ್ಘಾನಿಸ್ತಾನದ ತಂಡದ ಪ್ರದರ್ಶನ ಎಲ್ಲರನ್ನೂ ಮಂತ್ರಮುಗ್ಧರನ್ನಾಗಿಸುತ್ತಲೇ ಇದೆ. ಮಂಗಳವಾರ ಆಸ್ಟ್ರೇಲಿಯಾ ವಿರುದ್ಧ ಅಫ್ಘಾನಿಸ್ತಾನ ಗೆಲ್ಲಲೇಬೇಕಾದ ಪಂದ್ಯದಲ್ಲಿ, ಆರಂಭಿಕ ಆಟಗಾರ ಇಬ್ರಾಹಿಂ ಜದ್ರನ್ ಶತಕ ಬಾರಿಸಿದ್ದಾರೆ. ಈ ಮೂಲಕ ವಿಶ್ವಕಪ್ ಕ್ರಿಕೆಟ್ನಲ್ಲಿ ಶತಕ ಬಾರಿಸಿದ ಮೊದಲ ಅಫ್ಘಾನ್ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅಂದ ಹಾಗೆ ಈ ಶತಕ ಬಾರಿಸಲು ಅವರಿಗೆ ಸಚಿನ್ ತೆಂಡೂಲ್ಕರ್ ಅವರೇ ಪ್ರೇರಣೆಯಂತೆ. ಇನಿಂಗ್ಸ್ ಮುಕ್ತಾಯಗೊಂಡ ನಂತರ ಅವರು ಈ ಸತ್ಯವನ್ನು ಬಹಿರಂಗಪಡಿಸಿದ್ದಾರೆ.
21 ವರ್ಷದ ಇಬ್ರಾಹಿಂ ತಮ್ಮ ಏಕದಿನ ವೃತ್ತಿಜೀವನದಲ್ಲಿ ಆರಂಭದಿಂದಲೂ ದಾಖಲೆಗಳನ್ನು ಮುರಿಯುತ್ತಿದ್ದಾರೆ. ಇದೀಗ ವಿಶ್ವಕಪ್ ಇತಿಹಾಸದಲ್ಲಿ ತಮ್ಮ ದೇಶದಿಂದ ಮೊದಲ ಶತಕ ಗಳಿಸಿದ ಸಾಧನೆ ಮಾಡಿದ್ದಾರೆ. ಡೈನಾಮಿಕ್ ಬಲಗೈ ಬ್ಯಾಟರ್ 131 ಎಸೆತಗಳಲ್ಲಿ ಶತಕವನ್ನು ಪೂರ್ಣಗೊಳಿಸಿದ್ದಾರೆ. ಈ ಮೂಲಕ ವಿಶ್ವಕಪ್ನಲ್ಲಿ ಶತಕ ಗಳಿಸಿದ ನಾಲ್ಕನೇ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಅವರೊಂದಿಗೆ ಹಶ್ಮತುಲ್ಲಾ ಶಾಹಿದಿ, ಅಜ್ಮತುಲ್ಲಾ ಒಮರ್ಜೈ ಮತ್ತು ಕೊನೆಯಲ್ಲಿ ರಶೀದ್ ಖಾನ್ ಅವರ ಕೆಲವು ಮಿಂಚಿನ ಬ್ಯಾಟಿಂಗ್ನಿಂದಾ ಆಸ್ಟ್ರೇಲಿಯಾ ವಿರುದ್ದ 291 ರನ್ಗಳ ಅಸಾಧಾರಣ ಮೊತ್ತವನ್ನು ಪೇರಿಸಿತು. 143 ಎಸೆತಗಳಲ್ಲಿ 129 ರನ್ ಗಳಿಸಿದ ಜದ್ರಾನ್ ಐತಿಹಾಸಿಕ ಶತಕದ ನಂತರ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದರು. ಈ ವೇಳೆ ಅವರು ಶತಕದ ಕ್ರೆಡಿಟ್ ಅನ್ನು ಸಚಿನ್ಗೆ ಕೊಟ್ಟಿದ್ದಾರೆ.
ಮೊದಲೇ ನಿಶ್ಚಯಿಸಿದ್ದೆ
ಇನ್ನಿಂಗ್ಸ್ ಮಧ್ಯದ ವಿರಾಮದ ಸಮಯದಲ್ಲಿ ವೀಕ್ಷಕವಿವರಣೆಗಾರರೊಂದಿಗೆ ಮಾತನಾಡಿದ ಜದ್ರಾನ್, ಚೆನ್ನೈನಲ್ಲಿ ಪಾಕಿಸ್ತಾನ ವಿರುದ್ಧದ ಶತಕ ಬಾರಿಸುವ ಅವಕಾಶವನ್ನು ಕಳೆದುಕೊಂಡ ಈ ಟೂರ್ನಿಯಲ್ಲೇ ಶತಕಕ ಗಳಿಸಲು ದೃಢ ನಿಶ್ಚಯ ಹೊಂದಿದ್ದೆ ಎಂಬುದನ್ನು ತಿಳಿಸಿದರು.
“ವಿಶ್ವಕಪ್ನಲ್ಲಿ ಶತಕ ಬಾರಿಸಿದ ಮೊದಲ ಅಫ್ಘಾನಿಸ್ತಾನದ ಬ್ಯಾಟರ್ ಆಗಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ. ಈ ಪಂದ್ಯಾವಳಿಗೆ ಮೊದಲು ನಾನು ನಿಜವಾಗಿಯೂ ಶತಕ ಬಾರಿಸಲು ಶ್ರಮಿಸಿದ್ದೇನೆ. ಪಾಕ್ ಪಂದ್ಯದ ಬಳಿಕ ನನ್ನ ಮುಂದಿನ 3 ಪಂದ್ಯಗಳಲ್ಲಿ ನಾನು 100 ರನ್ ಗಳಿಸುತ್ತೇನೆ ಎಂದು ನನ್ನ ತರಬೇತುದಾರರಿಗೆ ತಿಳಿಸಿದ್ದೆ ” ಎಂದು ಜದ್ರಾನ್ ಹೇಳಿದ್ದಾರೆ.
ಸಚಿನ್ ತೆಂಡೂಲ್ಕರ್ ಅವರೊಂದಿಗಿನ ಮಾತುಕತೆಯೂ ಈ ಶತಕಕ್ಕೆ ನೆರವಾಯಿತು ಎಂಬುದಾಗಿ ಅವರು ಹೇಳಿದ್ದಾರೆ. ಅಫ್ಘಾನಿಸ್ತಾನ ಪ್ರಸ್ತುತ ಏಳು ಪಂದ್ಯಗಳಲ್ಲಿ ನಾಲ್ಕು ಗೆಲುವುಗಳೊಂದಿಗೆ ಪಾಯಿಂಟ್ಸ್ ಟೇಬಲ್ನಲ್ಲಿ ಆರನೇ ಸ್ಥಾನದಲ್ಲಿದೆ. ಮೊದಲ ಬಾರಿಗೆ ವಿಶ್ವಕಪ್ ಸೆಮಿಫೈನಲ್ ಪ್ರವೇಶ ಪಡೆಯುವ ಅವಕಾಶ ಹೊಂದಿದೆ.
“ನಾನು ಪಂದ್ಯಕ್ಕೆ ಮುನ್ನಾ ದಿನ ಸಚಿನ್ ತೆಂಡೂಲ್ಕರ್ ಅವರೊಂದಿಗೆ ಉತ್ತಮ ಮಾತುಕತೆ ನಡೆಸಿದ್ದೇನೆ. ಅದು ಅದ್ಭುತ ಅನುಭವವಾಗಿದ್ದು, ಅದನ್ನು ನಾನು ಪದಗಳಲ್ಲಿ ವ್ಯಕ್ತಪಡಿಸಲು ಸಾಧ್ಯವಿಲ್ಲ. ಅವರು ಕ್ರಿಕೆಟ್ ಆಡಲು ಪ್ರಾರಂಭಿಸುವ ಮೊದಲು ಇಲ್ಲಿ ಬಾಲ್ ಪಿಕರ್ (ಬಾಲ್-ಬಾಯ್) ಆಗಿದ್ದರು ಎಂದು ಅವರು ನನಗೆ ಹೇಳಿಕೊಂಡರು. ಪಂದ್ಯಕ್ಕೂ ಮುನ್ನ ಸಚಿನ್ ತೆಂಡೂಲ್ಕರ್ ಮಾಡಿದ್ದನ್ನು ನಾನೂ ಮಾಡುತ್ತೇನೆ ಮತ್ತು ಅವರಿಗೆ ಹೆಮ್ಮೆ ತರುತ್ತೇನೆ ಎಂದು ಮಾತುಕೊಟ್ಟಿದ್ದೆ. ಅದನ್ನು ಮಾಡಿ ತೀರಿಸಿದೆ ಎಂದು ಹೇಳಿದರು.
ಅಂಕಪಟ್ಟಿಯಲ್ಲಿ ಮೊದಲ ನಾಲ್ಕರೊಳಗೆ ಸ್ಥಾನ ಪಡೆಯಲು ಅಫಘಾನಿಸ್ತಾನ ತಂಡ ಯೋಜನೆ ರೂಪಿಸಿದೆ. ಅಶ್ಮತು್ಲಲಾ ಶಾಹಿದಿ ನೇತೃತ್ವದ ತಂಡವು ಆಸ್ಟ್ರೇಲಿಯಾ ವಿರುದ್ಧ ಗೆದ್ದರೆ ಅವರ ಅವಕಾಶಗಳು ಹೆಚ್ಚಾಗಲಿವೆ.