Site icon Vistara News

Suryakumar Yadav : ಐಸಿಸಿ ವರ್ಷದ ಟಿ20 ತಂಡ ಸ್ಪರ್ಧೆಯಲ್ಲಿ ಭಾರತದ ಸ್ಫೋಟಕ ಬ್ಯಾಟರ್​ಗೆ ಅಗ್ರಸ್ಥಾನ

Suryakumar Yadav

ಬೆಂಗಳೂರು: 2024ರ ಆರಂಭದೊಂದಿಗೆ, ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ತನ್ನ ವಾರ್ಷಿಕ ಪ್ರಶಸ್ತಿಗಳಿಗೆ ನಾಮನಿರ್ದೇಶನಗಳನ್ನು ಘೋಷಿಸಿದೆ. ಐಸಿಸಿ ಟಿ20 ರ್ಯಾಂಕಿಂಗ್​ನಲ್ಲಿ ನಂ.1 ಸ್ಥಾನದಲ್ಲಿರುವ ಭಾರತದ ಸೂರ್ಯಕುಮಾರ್ ಯಾದವ್ (Suryakumar Yadav) 2023ರ ಟಿ20 ಕ್ರಿಕೆಟರ್ ಆಫ್ ದಿ ಇಯರ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ನ್ಯೂಜಿಲೆಂಡ್​ನ ಮಾರ್ಕ್ ಚಾಪ್ಮನ್, ಜಿಂಬಾಬ್ವೆಯ ಸಿಕಂದರ್ ರಾಜಾ ಮತ್ತು ಉಗಾಂಡಾದ ಅಲ್ಪೇಶ್ ರಾಮ್ಜಾನಿ ಅವರು ಯಾದವ್ ಗೆ ಪೈಪೋಟಿ ನೀಡುತ್ತಿದ್ದಾರೆ.

ಸೂರ್ಯಕುಮಾರ್ ಯಾದವ್: 17 ಟಿ20 ಇನ್ನಿಂಗ್ಸ್​ಗಳಲ್ಲಿ ಯಾದವ್ 48.86ರ ಸರಾಸರಿಯಲ್ಲಿ 733 ರನ್ ಗಳಿಸಿದ್ದು, 155.95ರ ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಶ್ರೀಲಂಕಾ (112*) ಮತ್ತು ದಕ್ಷಿಣ ಆಫ್ರಿಕಾ (100) ವಿರುದ್ಧ ಕ್ರಮವಾಗಿ ಸ್ಮರಣೀಯ ಶತಕಗಳನ್ನು ಬಾರಿಸಿದ 33 ವರ್ಷದ ಸೂರ್ಯ , ದಕ್ಷಿಣ ಆಫ್ರಿಕಾ ವಿರುದ್ಧ ಕೇವಲ 45 ಎಸೆತಗಳಲ್ಲಿ ಶತಕ ಬಾರಿಸಿದ್ದಾರೆ.

ಸಿಕಂದರ್ ರಾಜಾ: 2023 ರಲ್ಲಿ ಜಿಂಬಾಬ್ವೆ ತಂಡ ಹಲವಾರು ಹಿನ್ನಡೆಗಳನ್ನು ಹೊಂದಿರುವ ಹೊರತಾಗಿಯೂ ಬ್ಯಾಟ್ ಮತ್ತು ಬಾಲ್ ಎರಡರಲ್ಲೂ ಪ್ರಭಾವಶಾಲಿ ಪ್ರದರ್ಶನವನ್ನು ನೀಡಿದ ರಾಜಾ ತಂಡದ ಪಾಲಿಗೆ ಯಶಸ್ವಿ ಆಟಗಾರನಾಗಿದ್ದರು. ಅವರು 11 ಪಂದ್ಯಗಳಲ್ಲಿ 515 ರನ್ ಗಳಿಸಿರುವ ಜತೆಗೆ 11 ವಿಕೆಟ್​ಗಳನ್ನು ಉರುಳಿಸಿದ್ದಾರೆ. ಐಸಿಸಿ ಟಿ 20 ವಿಶ್ವಕಪ್ ಆಫ್ರಿಕನ್ ಅರ್ಹತಾ ಪಂದ್ಯಗಳಲ್ಲಿ ರಾಜಾ ಮಿಂಚಿದ್ದರು. ಅಲ್ಲಿ ಆಲ್ರೌಂಡರ್ ಅತಿ ಹೆಚ್ಚು ರನ್ ಗಳಿಸಿದ ಮತ್ತು ಮೂರನೇ ಅತಿ ಹೆಚ್ಚು ವಿಕೆಟ್ ಪಡೆದವರಾಗಿದ್ದರು.

ಇದನ್ನೂ ಓದಿ : Virat kohli : ರಾಮ ಧನಸ್ಸು ಭಂಗಿಯೊಂದಿಗೆ ಕೇಶವ್ ಮಹಾರಾಜ್ ಸ್ವಾಗತಿಸಿದ ಕೊಹ್ಲಿ

ಮಾರ್ಕ್ ಚಾಪ್ಮನ್: ವಿಶ್ವಕಪ್ 2023 ರ ಕಾರಣದಿಂದಾಗಿ ಹಲವಾರು ಉನ್ನತ ಆಟಗಾರರಿಗೆ ವಿಶ್ರಾಂತಿ ನೀಡಿದ್ದರಿಂದ ನ್ಯೂಜಿಲ್ಯಾಂಡ್​ ತಂಡದ ಪರವಾಗಿ ಮಾರ್ಕ್ ಚಾಪ್ಮನ್ ಟಿ 20 ಪಂದ್ಯಗಳಲ್ಲಿ ಅವಕಾಶ ಪಡೆದುಕೊಂಡರು. ಇದು ಮಧ್ಯಮ ಕ್ರಮಾಂಕದ ಬ್ಯಾಟರ್​ಗೆ ಹೆಚ್ಚು ಅವಕಾಶಗಳನ್ನು ನೀಡಿತು. ಚಾಪ್ಮನ್ 17 ಇನ್ನಿಂಗ್ಸ್​ಗಳಲ್ಲಿ 50.54 ಸರಾಸರಿಯಲ್ಲಿ 556 ರನ್ ಗಳಿಸಿದ್ದಾರೆ. ನ್ಯೂಜಿಲೆಂಡ್​ನ ಪಾಕಿಸ್ತಾನ ಪ್ರವಾಸದಲ್ಲಿ ನಿಷ್ಕಳಂಕ ಕ್ರಿಕೆಟ್ ಪ್ರದರ್ಶಿಸಿದ 29 ವರ್ಷದ ಚಾಪ್ಮನ್​ ಐದು ಪಂದ್ಯಗಳ ಸರಣಿಯಲ್ಲಿ 290 ರನ್ ಗಳಿಸಿದ್ದರು. ಇದರಲ್ಲಿ ರಾವಲ್ಪಿಂಡಿಯಲ್ಲಿ ಅಜೇಯ 104* ರನ್ ಸೇರಿದೆ.

ಅಲ್ಪೇಶ್ ರಾಮ್ಜಾನಿ: 2023ರಲ್ಲಿ ಆಫ್ರಿಕಾದ ಮತ್ತೊಂದು ರಾಷ್ಟ್ರವಾದ ಉಗಾಂಡಾ ತಂಡ ನಮೀಬಿಯಾದೊಂದಿಗೆ ಮುಂಬರುವ ಟಿ 20ವಿಶ್ವಕಪ್ 2024ರಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದೆ. ಈ ತಂಡದ ಸ್ಪಿನ್ನರ್ ಅಲ್ಪೇಶ್ ರಾಜ್ಮಣಿ ತಂಡದ ಪ್ರೇರಕ ಶಕ್ತಿಯಾದರು. ಎಡಗೈ ಸ್ಪಿನ್ ಬೌಲಿಂಗ್​ನೊಂದಿಗೆ ಅವರು ಹೆಚ್ಚು ಸಾಧನೆ ಮಾಡಿದ್ದಾರೆ. 30 ಪಂದ್ಯಗಳಲ್ಲಿ ರಾಮ್ಜಾಜಿ 449 ರನ್ ಹಾಗೂ 55 ವಿಕೆಟ್ ಕಬಳಿಸಿದ್ದಾರೆ.

Exit mobile version