ನವ ದೆಹಲಿ: 2024ರಲ್ಲಿ ಶ್ರೀಲಂಕಾದಲ್ಲಿ ನಡೆಯಲಿರುವ ಪುರುಷರ ಅಂಡರ್-19 ವಿಶ್ವಕಪ್ (World Cup) ವೇಳಾಪಟ್ಟಿಯನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಶುಕ್ರವಾರ ಪ್ರಕಟಿಸಿದೆ. ಇದು 15 ನೇ ಆವೃತ್ತಿಯ ಜೂನಿಯರ್ ವಿಶ್ವಕಪ್ ಆಗಿದ್ದು, ಶ್ರೀಲಂಕಾದ ರಾಜಧಾನಿ ಕೊಲಂಬೊದ ಐದು ಸ್ಥಳಗಳಲ್ಲಿ ಪಂದ್ಯಗಳು ನಡೆಯಲಿವೆ. ಅಂಡರ್ 19 ವಿಶ್ವಕಪ್ 2024 ಜನವರಿ 13 ರಿಂದ ಫೆಬ್ರವರಿ 4 ರವರೆಗೆ ನಡೆಯಲಿದ್ದು, ಅಭ್ಯಾಸ ಪಂದ್ಯಗಳು ಜನವರಿ 6 ರಿಂದ 12 ರವರೆಗೆ ನಡೆಯಲಿವೆ. ಮೊದಲ ಸುತ್ತಿನಲ್ಲಿ 16 ತಂಡಗಳನ್ನು ತಲಾ ನಾಲ್ಕು ಗುಂಪುಗಳಾಗಿ ವಿಂಗಡಿಸಲಾಗಿದೆ, ನಂತರ ಸೂಪರ್ ಸಿಕ್ಸ್ ಹಂತ ನಡೆಯಲಿದೆ.
ಹಾಲಿ ಚಾಂಪಿಯನ್ ಭಾರತ ಜನವರಿ 14 ರಂದು 2020ರ ಚಾಂಪಿಯನ್ ಬಾಂಗ್ಲಾದೇಶ ವಿರುದ್ಧ ತನ್ನ ಅಭಿಯಾನ ಪ್ರಾರಂಭಿಸಲಿದೆ. ‘ಎ’ ಗುಂಪಿನಲ್ಲಿ ಭಾರತದೊಂದಿಗೆ ಐರ್ಲೆಂಡ್ ಮತ್ತು ಅಮೆರಿಕ ಸ್ಥಾನ ಪಡೆದಿವೆ. ಪ್ರತಿ ಗುಂಪಿನಲ್ಲಿ ಅಗ್ರ ಮೂರು ತಂಡಗಳು ಸೂಪರ್ ಸಿಕ್ಸ್ ಹಂತಕ್ಕೆ ಪ್ರವೇಶಿಸಲಿವೆ.
ವೇಳಾಪಟ್ಟಿಯನ್ನು ಪ್ರಕಟಿಸಿದ ಐಸಿಸಿ ಈವೆಂಟ್ಸ್ ಮುಖ್ಯಸ್ಥ ಕ್ರಿಸ್ ಟೆಟ್ಲಿ, ಐಸಿಸಿ ಅಂಡರ್ 19 ಪುರುಷರ ಕ್ರಿಕೆಟ್ ವಿಶ್ವಕಪ್ ಜಾಗತಿಕ ಪ್ರೇಕ್ಷಕರಿಗೆ ಕ್ರೀಡೆಯ ಭವಿಷ್ಯದ ತಾರೆಗಳನ್ನು ಪರಿಚಯಿಸುವ ದೀರ್ಘಕಾಲದ ಇತಿಹಾಸವನ್ನು ಹೊಂದಿದೆ. ವಿರಾಟ್ ಕೊಹ್ಲಿ, ಸ್ಟೀವ್ ಸ್ಮಿತ್, ಕೇನ್ ವಿಲಿಯಮ್ಸನ್ ಮತ್ತು ಏಂಜೆಲೊ ಮ್ಯಾಥ್ಯೂಸ್ ಈ ಪಂದ್ಯಾವಳಿಯಲ್ಲಿ ವಿಶ್ವ ವೇದಿಕೆಗೆ ಪ್ರವೇಶಿಸಿದ ಕೆಲವು ಹೆಸರುಗಳು, ಮತ್ತು 41 ಪಂದ್ಯಗಳಲ್ಲಿ ಮೂಲಕ ಹೊಸ ಪ್ರತಿಭೆಗಳ ಹುಡುಕಾಟ ನಡೆಯಲಿದೆ ಎಂದು ಹೇಳಿದರು.
ಯಾವ ಸ್ವರೂಪದ ಟೂರ್ನಿ
16 ತಂಡಗಳನ್ನು ಎ, ಬಿ, ಸಿ, ಡಿ ಎಂದು ನಾಲ್ಕು ಗುಂಪುಗಳಾಗಿ ವಿಂಗಡಿಸಲಾಗಿದೆ. ಅಂಕಗಳ ಆಧಾರದ ಎ ಮತ್ತು ಡಿ ಗುಂಪಿನ ತಲಾ ಮೂರು ತಂಡಗಳು ಒಂದು ಗುಂಪಾಗಿ ಸೂಪರ್ ಸಿಕ್ಸ್ ಹಂತಕ್ಕೇರಿದರೆ ಬಿ ಮತ್ತು ಸಿ ಗುಂಪಿನಿಂದ ತಲಾ ಮೂರು ತಂಡಗಳು ಮತ್ತೊಂದು ಗುಂಪಿನಲ್ಲಿ ಸೂಪರ್ ಸಿಕ್ಸ್ ಹಂತಕ್ಕೆ ಪ್ರವೇಶ ಪಡೆಯುತ್ತವೆ. ಈ ಹಂತದಲ್ಲಿ ಎರಡು ಗುಂಪಿನ ಅಗ್ರ ಎರಡು ತಂಡಗಳು ಸೆಮಿಪೈನಲ್ಗೆ ಪ್ರವೇಶ ಪಡೆಯಲಿದೆ. ಗೆಲ್ಲುವ ತಂಡಗಳು ಫೈನಲ್ಗೆ ಎಂಟ್ರಿ ಗಿಟ್ಟಿಸಲಿದೆ.
ಇದನ್ನೂ ಓದಿ : World Cup 2023 : ಏಕ ದಿನ ವಿಶ್ವ ಕಪ್ನ ಬಹುಮಾನ ಎಷ್ಟು ಗೊತ್ತೇ? ಇಲ್ಲಿದೆ ಎಲ್ಲ ವಿವರ
ಸೂಪರ್ ಸಿಕ್ಸ್ನಲ್ಲಿ ಒಂದು ತಂಡವು ಗುಂಪು ಹಂತದಲ್ಲಿ ವಿಭಿನ್ನ ಸ್ಥಾನಗಳನ್ನು ಪಡೆದ ಮತ್ತೊಂದು ಗುಂಪಿನ ಎರಡು ತಂಡಗಳ ವಿರುದ್ಧ ಆಡುತ್ತದೆ. ‘ಡಿ’ ಗುಂಪಿನಲ್ಲಿ ಎರಡನೇ ಮತ್ತು ಮೂರನೇ ಸ್ಥಾನ ಪಡೆಯುವ ತಂಡಗಳನ್ನು ಎ1 ತಂಡ ‘ಸಿ’ ಗುಂಪಿನಲ್ಲಿ ಮೊದಲ ಮತ್ತು ಮೂರನೇ ಸ್ಥಾನ ಪಡೆಯುವ ತಂಡಗಳನ್ನು ಎದುರಿಸಲಿದೆ.
ಸೂಪರ್ ಸಿಕ್ಸ್ ನಲ್ಲಿ ಅಗ್ರ ಎರಡು ಸ್ಥಾನ ಪಡೆಯುವ ತಂಡಗಳು ಜನವರಿ 30 ಮತ್ತು ಫೆಬ್ರವರಿ 1 ರಂದು ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ಸೆಮಿಫೈನಲ್ ಗೆ ಅರ್ಹತೆ ಪಡೆಯಲಿವೆ ಮತ್ತು ಫೈನಲ್ ಫೆಬ್ರವರಿ 4 ರ ಭಾನುವಾರ ಪಿ ಸಾರಾ ಓವಲ್ ನಲ್ಲಿ ನಡೆಯಲಿದೆ.
ನೇರ ಅರ್ಹತೆ ಪಡೆದ ತಂಡಗಳು : ಶ್ರೀಲಂಕಾ (ಆತಿಥೇಯ), ಅಫ್ಘಾನಿಸ್ತಾನ, ಆಸ್ಟ್ರೇಲಿಯಾ, ಬಾಂಗ್ಲಾದೇಶ, ಇಂಗ್ಲೆಂಡ್, ಭಾರತ, ಐರ್ಲೆಂಡ್, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್, ಜಿಂಬಾಬ್ವೆ
ಪ್ರಾದೇಶಿಕ ಅರ್ಹತೆ: ನಮೀಬಿಯಾ (ಆಫ್ರಿಕಾ ಪ್ರಾದೇಶಿಕ ಕ್ವಾಲಿಫೈಯರ್), ನೇಪಾಳ, ನ್ಯೂಜಿಲೆಂಡ್ (ಇಎಪಿ ಪ್ರಾದೇಶಿಕ ಕ್ವಾಲಿಫೈಯರ್), ಸ್ಕಾಟ್ಲೆಂಡ್ (ಯುರೋಪ್ ಪ್ರಾದೇಶಿಕ ಕ್ವಾಲಿಫೈಯರ್), ಯುಎಸ್ಎ (ಅಮೇರಿಕಾಸ್ ಪ್ರಾದೇಶಿಕ ಕ್ವಾಲಿಫೈಯರ್).
ಪಂದ್ಯ ನಡೆಯುವ ಸ್ಥಳಗಳು
ನಾನ್ ಡೆಸ್ಕ್ರಿಪ್ಟ್ಸ್ ಕ್ರಿಕೆಟ್ ಕ್ಲಬ್, ಆರ್.ಪ್ರೇಮದಾಸ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ, ಪಿ.ಸಾರಾ ಓವಲ್. ಕೊಲಂಬೊ, ಕೊಲಂಬೊ ಕ್ರಿಕೆಟ್ ಕ್ಲಬ್, ಸಿಂಘಲೀಸ್ ಸ್ಪೋರ್ಟ್ಸ್ ಕ್ಲಬ್