ಅಹಮದಾಬಾದ್: ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧದ ವಿಶ್ವ ಕಪ್ (ind vs pak) ಪಂದ್ಯದಲ್ಲಿ ಭಾರತ ತಂಡ ಸುಲಭ ಜಯ ದಾಖಲಿಸಿದೆ. ಜಿದ್ದಾಜಿದ್ದಿನ ಪೈಪೋಟಿ ಎದುರಾಗಬಹುದು ಎಂದು ಅಂದಾಜಿಸಲಾಗಿದ್ದ ಪಂದ್ಯದಲ್ಲಿ ಭಾರತ ತಂಡ ಏಳು ವಿಕೆಟ್ ಸುಲಭ ಜಯ ದಾಖಲಿಸಿದೆ. ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡರಲ್ಲೂ ಭಾರತ ತಂಡ ಪಾರಮ್ಯ ಮೆರೆದಿದೆ. ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ಸೇರಿದ್ದ 1 ಲಕ್ಷಕ್ಕೂ ಅಧಿಕ ಅಭಿಮಾನಿಗಳ ಮುಂದೆ ಭಾರತ ತಂಡದ ಆಟಗಾರರು ಕ್ರಿಕೆಟ್ ವೈಭವ ಮೆರೆದಿದ್ದಾರೆ. ಅಂದ ಹಾಗೆ ಇದು ಭಾರತ ತಂಡಕ್ಕೆ ವಿಶ್ವ ಕಪ್ ಟೂರ್ನಿಗಳಲ್ಲಿ ಪಾಕ್ ವಿರುದ್ಧ ಲಭಿಸಿದ ಗರಿಷ್ಠ ವಿಕೆಟ್ಗಳ ಜಯವಾಗಿದೆ. ಈ ಮೂಲಕವೂ ಭಾರತ ತಂಡ ಒಂದು ದಾಖಲೆಯನ್ನು ಮಾಡಿದೆ.
ವಿಕೆಟ್ಗಳ ಆಧಾರದ ಗೆಲುವನ್ನು ನೋಡಿದರೆ ನರೇಂದ್ರ ಮೋದಿ ಸ್ಟೇಡಿಯಮ್ನಲ್ಲಿ ಭಾರತ ತಂಡಕ್ಕೆ ಲಭಿಸಿರುವ ಗೆಲುವು ಇದುವರೆಗಿನ ವಿಶ್ವ ಕಪ್ಗಳಲ್ಲಿ ವಿಕೆಟ್ ಆಧಾರದಲ್ಲಿ ದೊರೆತ ಗರಿಷ್ಠ ವಿಕೆಟ್ಗಳ ಗೆಲುವಾಗಿದೆ. ಈ ಮೂಲಕವು ರೋಹಿತ್ ಬಳಗ ಜಯವನ್ನು ಇನ್ನಷ್ಟು ಸ್ಮರಣೀಯಗೊಳಿಸಿದೆ.
ಏನಾಯಿತು ಪಂದ್ಯದಲ್ಲಿ?
ಬೌಲರ್ಗಳ ಸಂಘಟಿತ ಹೋರಾಟ ನಾಯಕ ರೋಹಿತ್ ಶರ್ಮಾ (86) ಅವರ ಅಬ್ಬರದ ಅರ್ಧ ಶತಕದ ನೆರವು ಪಡೆದ ಭಾರತ ತಂಡ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ (Ind vs Pak) ವಿರುದ್ಧದ ವಿಶ್ವ ಕಪ್ (ICC World Cup 2023) ಪಂದ್ಯದಲ್ಲಿ 7 ವಿಕೆಟ್ಗಳ ಭರ್ಜರಿ ಗೆಲುವು ತನ್ನದಾಗಿಸಿಕೊಂಡಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ತವರೂರು ಗುಜರಾತ್ನ ಅಹಮದಾಬಾದ್ನಲ್ಲಿ ನಡೆದ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು ಹೀನಾಯವಾಗಿ ಸೋಲಿಸಿತು. ಪಂದ್ಯ ನಡೆದ ಸ್ಟೇಡಿಯಮ್ ಕೂಡ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಹೆಸರಿನಲ್ಲಿರುವ ಕಾರಣ ಚರ್ಚೆ ಯೂ ಜೋರಾಗಿತ್ತು. ಆದರೆ ಭಾರತ ಬಳಗ ಪಾಕ್ ತಂಡವನ್ನು ಕ್ಯಾರೇ ಎನ್ನದೇ ಗೆಲುವು ಸಾಧಿಸಿತು.
ಇದರೊಂದಿಗೆ ಹಾಲಿ ವಿಶ್ವ ಕಪ್ನಲ್ಲಿ ಭಾರತ ತಂಡ ಅತ್ಯುತ್ತಮ ಆರಂಭ ಪಡೆದಿದ್ದು ಹ್ಯಾಟ್ರಿಕ್ ಜಯ ಭಾರತದ ಪಾಲಾಗಿದೆ. ಮೊದಲ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾವನ್ನು ಸೋಲಿಸಿದ್ದ ಭಾರತ ತಂಡ ನಂತರದ ಪಂದ್ಯದಲ್ಲಿ ಅಪಘಾನಿಸ್ತಾನ ತಂಡದ ವಿರುದ್ಧ ಸವಾರಿ ಮಾಡಿತ್ತು. ಇದೀಗ ಪಾಕ್ ವಿರುದ್ಧವೂ ನಿರಾಯಾಸ ಗೆಲುವು ತನ್ನದಾಗಿಸಿಕೊಂಡಿದೆ. ಈ ವಿಜಯದೊಂದಿಗೆ ಪಾಕ್ ವಿರುದ್ಧ ವಿಶ್ವ ಕಪ್ ಇತಿಹಾಸದಲ್ಲಿನ ತನ್ನ ಮುನ್ನಡೆಯನ್ನು 8-0 ಅಂತರಕ್ಕೆ ಮುಂದುವರಿಸಿಕೊಂಡಿತು ಟೀಮ್ ಇಂಡಿಯಾ.
ಇದನ್ನೂ ಓದಿ : Rohit Sharma : ಒಂದು ಪಂದ್ಯದಲ್ಲಿ ನಾಲ್ಕು ದಾಖಲೆ ಸೃಷ್ಟಿಸಿದ ರೋಹಿತ್ ಶರ್ಮಾ
ಜಸ್ಪ್ರಿತ್ ಬುಮ್ರಾ, ಮೊಹಮ್ಮದ್ ಸಿರಾಜ್, ಹಾರ್ದಿಕ್ ಪಾಂಡ್ಯ, ಕುಲ್ದೀಪ್ ಯಾದವ್, ರವೀಂದ್ರ ಜಡೇಜಾ ತಲಾ 2 ವಿಕೆಟ್ ಪಡೆಯುವ ಮೂಲಕ ಭಾರತ ತಂಡಕ್ಕೆ ಮುನ್ನಡೆಗೆ ಕಾರಣರಾದರು. ಪಾಕ್ ವಿರುದ್ಧದ ಗೆಲುವಿನಲ್ಲಿ ಬೌಲರ್ಗಳ ಪಾಲು ದೊಡ್ಡದಿದೆ. ಪ್ರಮುಖ ಬ್ಯಾಟರ್ಗಳನ್ನು ಔಟ್ ಮಾಡುವ ಮೂಲಕ ಸಣ್ಣ ಮೊತ್ತದ ಸವಾಲು ಎದುರಾಗುವಂತೆ ನೋಡಿಕೊಂಡರು. ಇನಿಂಗ್ಸ್ ಉದ್ದಕ್ಕೂ ಭಾರತದ ಬೌಲರ್ಗಳು ಹಾಗೂ ಫೀಲ್ಡರ್ಗಳು ಮೆರೆದಾಡಿದರು. ಪಾಕ್ ಬ್ಯಾಟರ್ಗಳು ಅಕ್ಷರಶಃ ಪರದಾಡಿದರು.
ಇದು ಭಾರತ ತಂಡಕ್ಕೆ ಪಾಕಿಸ್ತಾನ ವಿರುದ್ಧ ಏಕ ದಿನ ಮಾದರಿಯಲ್ಲಿ ಸಿಗುತ್ತಿರುವ ಸತತ ಎರಡನೇ ವಿಜಯ. ಸೆಪ್ಟೆಂಬರ್ 4ರಂದು ನಡೆದಿದ್ದ ಏಷ್ಯಾ ಕಪ್ ಸೂಪರ್ ಸಿಕ್ಸ್ ಹಣಾಹಣಿಯಲ್ಲಿ ಪಾಕ್ ವಿರುದ್ಧ 228 ರನ್ಗಳ ಬೃಹತ್ ಅಂತರದ ಗೆಲುವು ದಾಖಲಿಸಿತ್ತು ಭಾರತ.