Site icon Vistara News

ICC World Cup 2023: ಟೀವಿ ವೀಕ್ಷಣೆಯಲ್ಲಿ ದಾಖಲೆ ಬರೆದ ವಿಶ್ವಕಪ್​ ಫೈನಲ್​ ಪಂದ್ಯ

India vs Australia Final

ಮುಂಬಯಿ: ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ(ICC Cricket World Cup 2023) ಭಾರತ ಮತ್ತು ಆಸ್ಟ್ರೇಲಿಯಾ(India vs Australia, Final) ನಡುವಣ ಫೈನಲ್​ ಪಂದ್ಯವನ್ನು ಟೀವಿಯಲ್ಲಿ ಒಟ್ಟು 30 ಕೋಟಿ ಮಂದಿ ವೀಕ್ಷಿಸಿದ್ದಾರೆ ಎಂದು ಸ್ಟಾರ್ ಸ್ಪೋರ್ಟ್ಸ್‌ ಸಂಸ್ಥೆಯು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ನವೆಂಬರ್​ 19ರಂದು ವಿಶ್ವಕಪ್​ ಫೈನಲ್​ ಪಂದ್ಯ ನಡೆದಿತ್ತು. ಇದು ಕ್ರಿಕೆಟ್ ವಿಶ್ವಕಪ್ ಫೈನಲ್ ಪಂದ್ಯದ ಇತಿಹಾಸದಲ್ಲೇ ದಾಖಲಾದ ಗರಿಷ್ಠ ವೀಕ್ಷಕರ ದಾಖಲೆಯಾಗಿದೆ.

ಒಟ್ಟಾರೆಯಾಗಿ ಈ ಟೂರ್ನಿಯನ್ನು ಅಂದರೆ ಅಕ್ಟೋಬರ್​ 5ರಿಂದ ನವೆಂಬರ್​ 19 ತನಕ ಟೀವಿಯಲ್ಲಿ ಸುಮಾರು 52 ಕೋಟಿ ಮಂದಿ ವೀಕ್ಷಿಸಿದ್ದಾರೆ ಎಂದು ಸ್ಟಾರ್ ಸ್ಪೋರ್ಟ್ಸ್‌ ತಿಳಿಸಿದೆ.

ಡಿಜಿಟಲ್​ ಮಾಧ್ಯಮದಲ್ಲೂ ದಾಖಲೆ

ಫೈನಲ್ ಪಂದ್ಯವನ್ನು ಡಿಸ್ನಿ+ ಹಾಟ್‌ಸ್ಟಾರ್‌ನಲ್ಲಿ ಏಕಕಾಲಕ್ಕೆ 5.9 ಕೋಟಿ ಮಂದಿ ವೀಕ್ಷಿಸಿದ್ದರು. ಡಿಜಿಟಲ್‌ ವೀಕ್ಷಣೆಯಲ್ಲಿ ಇದು ಕೂಡ ಹೊಸ ದಾಖಲೆ ಎನಿಸಿದೆ. ಅಹಮದಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ 6 ವಿಕೆಟ್ ಅಂತರದಿಂದ ಸೋಲು ಕಂಡು ವಿಶ್ವಕಪ್​ ಟ್ರೋಫಿ ಗೆಲ್ಲುವಲ್ಲಿ ವಿಫಲವಾಗಿತ್ತು.

ಸ್ಟೇಡಿಯಂ ವೀಕ್ಷಣೆಯಲ್ಲಿಯೂ ದಾಖಲೆ

12.5 ಲಕ್ಷ (1.25 ಮಿಲಿಯನ್‌) ಪ್ರೇಕ್ಷಕರು ಸ್ಟೇಡಿಯಂನಲ್ಲಿ ನೇರವಾಗಿ ಪಂದ್ಯವನ್ನು ವೀಕ್ಷಣೆ ಮಾಡಿದ್ದಾರೆ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ) ಮಂಗಳವಾರ ಹೇಳಿದೆ. ಇದು ವಿಶ್ವಕಪ್​ ಇತಿಹಾಸದಲ್ಲೇ ದಾಖಲೆಯ ವೀಕ್ಷಣೆ ಎಂಬ ಹಿರಿಮೆ ಪಡೆದಿದೆ. ಈ ಹಿಂದೆ 2015ರಲ್ಲಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್​ ಜಂಟಿ ಆತಿಥ್ಯದಲ್ಲಿ ನಡೆದ ವಿಶ್ವಕಪ್‌ ಟೂರ್ನಿಯನ್ನು ಒಟ್ಟು 10.16 ಲಕ್ಷ (1.016 ಮಿಲಿಯನ್‌) ಮಂದಿ ವೀಕ್ಷಿಸಿದ್ದರು. ಭಾನುವಾರ ಅಹಮದಾಬಾದ್​ನ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಫೈನಲ್ ಪಂದ್ಯವನ್ನು 1.3 ಲಕ್ಷ ಮಂದಿ ನೇರವಾಗಿ ವೀಕ್ಷಿಸಿದ್ದಾರೆ. ಇದು ಮಾತ್ರವಲ್ಲದೆ ದೇಶದ ವಿವಿಧ ನಗರಗಳ ಪಿವಿಆರ್​ ಐನಾಕ್ಸ್​ನ 150 ಸಿನಿಮಾ ಮಂದಿರಗಳಲ್ಲಿ 70 ಸಾವಿರಕ್ಕೂ ಅಧಿಕ ಮಂದಿ ಪಂದ್ಯವನ್ನು ವೀಕ್ಷಿಸಿದ್ದಾರೆ.

ಇದನ್ನೂ ಓದಿ IND vs AUS: ಭಾರತ ತಂಡ ಗೆದ್ದದ್ದು ರಿಂಕು ಬಾರಿಸಿದ ಸಿಕ್ಸರ್​ನಿಂದಲ್ಲ; ಮತ್ತೆ ಹೇಗೆ?

ಭಾರತಕ್ಕೆ ಸೋಲಿನ ಆಘಾತ

ಫೈನಲ್​ ಪಂದ್ಯದಲ್ಲಿ ಟಾಸ್ ಸೋತ ಭಾರತ ತಂಡ ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನ ಪಡೆಯಿತು. ಬ್ಯಾಟಿಂಗ್ ವೈಫಲ್ಯ ಎದುರಿಸಿದ ಭಾರತ ತಂಡ ನಿಗದಿತ 50 ಓವರ್​ಗಳಲ್ಲಿ 240 ರನ್​ಗಳಿಗೆ ಆಲ್ಔಟ್ ಆಯಿತು. ಪ್ರತಿಯಾಗಿ ಬ್ಯಾಟ್​ ಮಾಡಿದ ಆಸ್ಟ್ರೇಲಿಯಾ ತಂಡ 43 ಓವರ್​ಗಳಲ್ಲಿ 4 ವಿಕೆಟ್ ಕಳೆದುಕೊಂಡು 241 ರನ್ ಬಾರಿಸಿ ಗೆಲುವು ಸಾಧಿಸಿತು. ಟ್ರಾವಿಸ್ ಹೆಡ್​ 137 ರನ್​ ಬಾರಿಸಿ ಭಾರತದ ಗೆಲುವನ್ನು ಕಸಿದರು. ಆಸೀಸ್​ ಪಾಲಿಗೆ ಗೆಲುವಿನ ರೂವಾರಿ ಎನಿಸಿಕೊಂಡರು.

Exit mobile version