Site icon Vistara News

World Cup 2023 : ವಿಶ್ವ ಕಪ್‌ ಆರಂಭಕ್ಕೆ ಮೊದಲೇ ವಿನೂತನ ದಾಖಲೆ; ವಿಶಿಷ್ಟ ರೀತಿಯಲ್ಲಿ ಟ್ರೋಫಿ ಅನಾವರಣ!

ODI World Cup trophy

#image_title

ಮುಂಬಯಿ: ಮುಂದಿನ ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿ ಭಾರತದ ಆತಿಥ್ಯದಲ್ಲಿ ನಡೆಯಲಿರುವ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ 2023 (World Cup 2023) ಹವಾ ಜೋರಾಗಿದೆ. ಕ್ರಿಕೆಟ್‌ ಕಾರಿಡಾರ್‌ನಲ್ಲಿ ಬರೀ ಅದರದ್ದೇ ಚರ್ಚೆ. ವೇಳಾಪಟ್ಟಿ, ಪಂದ್ಯದ ತಾಣಗಳು. ತಂಡಗಳು ಬಗ್ಗೆ ವಿಶ್ಲೇಷಣೆ ನಡೆಯುತ್ತಿದೆ. ಈ ಎಲ್ಲ ಉತ್ಸಾಹದ ನಡುವೆ, ಏಕದಿನ ವಿಶ್ವಕಪ್ ಟ್ರೋಫಿ ತನ್ನ ಪ್ರವಾಸ ಆರಂಭಿಸಿದೆ. ವಿಶೇಷ ಏನೆಂದರೆ ಈ ಟ್ರೋಫಿ ತನ್ನ ಯಾನ ಆರಂಭಿಸಿದ್ದು ವಾಯು ಮಂಡಲದಿಂದ. ಅಂದರೆ 1,20,000 ಅಡಿ ಎತ್ತರದಲ್ಲಿ (36.5 ಕಿಲೋಮೀಟರ್‌ ಎತ್ತರದಲ್ಲಿ ) ಟ್ರೋಫಿ ಅನಾವರಣಗೊಂಡಿದೆ. ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ಅವರು ಅದರ ವಿಡಿಯೊವನ್ನು ಟ್ವಿಟರ್‌ ಮೂಲಕ ಶೇರ್‌ ಮಾಡಿದ್ದು ಕ್ರೀಡಾ ಇತಿಹಾಸದಲ್ಲಿಯೇ ಮೊದಲ ಬಾರಿಗೆ ವಿಶ್ವ ಕಪ್‌ ವಾಯು ಮಂಡಲದಲ್ಲಿ ಅನಾವರಣಗೊಂಡಿದೆ ಎಂದು ಬರೆದುಕೊಂಡಿದ್ದಾರೆ.

ಈ ಟ್ರೋಫಿ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಮ್‌ನಲ್ಲಿ ಇಳಿದಿದ್ದು, ಅದಕ್ಕಿಂತ ಮೊದಲು ವಾಯು ಮಂಡಲಕ್ಕೇರುವ ಮೂಲಕ ಸಂಚಲನ ಮೂಡಿಸಿತು. ಇದರೊಂದಿಗೆ ಕ್ರೀಡಾಕ್ಷೇತ್ರದಲ್ಲಿ ಟ್ರೋಫಿಯೊಂದು ಬಾಹ್ಯಾಕಾಶದ ಸಮೀಪಕ್ಕೆ ಹೋಗಿ ಬಂದ ವಿಶೇಷ ದಾಖಲೆಯನ್ನು ಬರೆಯಿತು. ಟ್ರೋಫಿಯನ್ನು ಬೆಸ್ಪೋಕ್ ಸ್ಟ್ರಾಟೋಸ್ಫೆರಿಕ್ ಬಲೂನ್‌ಗೆ ಜೋಡಿಸಿದ ನಂತರ ವಾಯು ಮಂಡಲಕ್ಕೆ ಏರಿಸಲಾಗಿದೆ. ಬಲೂನ್‌ ಜತೆಗೆ ಹೋಗಿರುವ 4ಕೆ ಕ್ಯಾಮೆರಾಗಳ ಮೂಲಕ ಭೂಮಿಯ ಅಂಚಿನಲ್ಲಿ ಟ್ರೋಫಿಯ ಕೆಲವು ಅದ್ಭುತ ದೃಶ್ಯಗಳನ್ನು ಸೆರೆ ಹಿಡಿಯಲಾಗಿದೆ. ಟ್ರೋಫಿಯ ಯಾನ ಜೂನ್ 27ರಂದು ಭಾರತದಿಂದ ಪ್ರಾರಂಭವಾಗಲಿದ್ದು, ಪ್ರಪಂಚದಾದ್ಯಂತ ಪ್ರಯಾಣಿಸಲಿದೆ. ಸೆಪ್ಟೆಂಬರ್ 4 ರಂದು ಭಾರತಕ್ಕೆ ಮರಳಲಿದೆ.

ಜೂನ್​ 24ರಂದು ಬಲೂನ್ ಸಹಾಯದಿಂದ ಟ್ರೋಫಿಯನ್ನು ವಾಯು ಮಂಡಲಕ್ಕೆ ಕಳುಹಿಸಲಾಗಿತ್ತು. ಅದಕ್ಕಿಂತ ಮೊದಲು ಈ ಬಾರಿ ವಿಶೇಷವಾಗಿ ಹೇಗೆ ಟ್ರೋಫಿ ಅನಾವರಣ ಮಾಡಬಹುದು ಎಂಬ ಚರ್ಚೆಯೂ ನಡೆದಿತ್ತು. ಈ ವೇಳೆ ಬಂದ ಸಲಹೆ ಪ್ರಕಾರ ವಾಯು ಮಂಡಲಕ್ಕೆ ಕಳುಹಿಸಲಾಗಿದೆ. ವಾಯು ಮಂಡಲಕ್ಕೆ ಕಳುಹಿಸುವ ಮೊದಲು ನಾನಾ ರೀತಿಯಲ್ಲಿ ಪರೀಕ್ಷೆ ಮಾಡಲಾಗಿತ್ತು. ಬಾಹ್ಯಾಕಾಶ ಕೇಂದ್ರದ ನೆರವಿನಿಂದ ಟ್ರೋಫಿಯನ್ನು ಮೇಲಕ್ಕೆ ಕಳುಹಿಸಿ ಅಲ್ಲಿಂದ ಫೋಟೊಗಳನ್ನು ತೆಗೆದು ಬಳಿಕ ನರೇಂದ್ರ ಮೋದಿ ಸ್ಟೇಡಿಯಮ್​ನಲ್ಲಿ ಇಳಿಸಲಾಗಿದೆ.

ಜೂನ್‌ 27ರಂದು ಪ್ರಯಾಣ ಆರಂಭ

ನರೇಂದ್ರ ಮೋದಿ ಸ್ಟೇಡಿಯಮ್​ನಲ್ಲಿ ಇಳಿದಿರುವ ವಿಶ್ವ ಕಪ್ ಟ್ರೋಫಿ ಜೂನ್​ 27ರಿಂದ ಪ್ರಯಾಣ ಆರಂಭಿಸಲಿದೆ. ಅಲ್ಲದೆ ಇದುವರೆಗಿನ ಅತ್ಯಂತ ಸುದೀರ್ಘವಾದ ಪ್ರಯಾಣ ಮಾಡಲಿದೆ. ವಿಶ್ವದಾದ್ಯಂತದ ವಿವಿಧ ದೇಶಗಳು ಮತ್ತು ನಗರಗಳಲ್ಲಿ ಅಭಿಮಾನಿಗಳಿಗೆ ಈ ಟ್ರೋಫಿಯನ್ನು ವೀಕ್ಷಣೆ ಮಾಡುವ ಅವಕಾಶ ಲಭಿಸಲಿದೆ. ಟ್ರೋಫಿಯು ಕುವೈತ್, ಬಹ್ರೇನ್, ಮಲೇಷ್ಯಾ, ಯುಎಸ್ಎ, ನೈಜೀರಿಯಾ, ಉಗಾಂಡಾ, ಫ್ರಾನ್ಸ್, ಇಟಲಿ, ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕ ಮತ್ತು ಆತಿಥೇಯ ದೇಶ ಭಾರತ ಸೇರಿದಂತೆ ವಿಶ್ವದ 18 ದೇಶಗಳಿಗೆ ಪ್ರಯಾಣಿಸಲಿದೆ.

2019ರ ನಂತರ ವಿಶ್ವ ಕಪ್​ ಟ್ರೋಫಿ ವಿಶ್ವದಾದ್ಯಂತದ ಕ್ರಿಕೆಟ್ ಅಭಿಮಾನಿಗಳಿಗೆ ದರ್ಶನ ನೀಡುತ್ತಿರುವುದು ಇದೇ ಮೊದಲು. ಈ ಯಾನದ ಮೂಲಕ ಕೋಟ್ಯಂತರ ಕ್ರಿಕೆಟ್​ ಅಭಿಮಾನಿಗಳಿಗೆ ವಿಶ್ವ ಕಪ್ ಟ್ರೋಫಿಯ ನೋಡಿ ಆನಂದಿಸುವ ಅವಕಾಶ ನೀಡಲಾಗಿದೆ.

ಟ್ರೋಫಿಯ ಟೂರ್ ಕುರಿತು ಮಾತನಾಡಿದ ಐಸಿಸಿ ಮುಖ್ಯ ಕಾರ್ಯನಿರ್ವಾಹಕ ಜೆಫ್ ಅಲ್ಲಾರ್ಡೈಸ್, ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ ಟ್ರೋಫಿ ಪ್ರವಾಸ ಪ್ರಮುಖ ಮೈಲಿಗಲ್ಲಾಗಿದೆ. ಈ ಪ್ರವಾಸದಲ್ಲಿ ಪ್ರಮುಖ ರಾಷ್ಟ್ರಗಳಿಗೆ ಭೇಟಿ ನೀಡುತ್ತದೆ. ಸಮುದಾಯದಲ್ಲಿ ದೊಡ್ಡ ಸಂಚಲನ ಸೃಷ್ಟಿಸುತ್ತದೆ. ವಿಶ್ವದಾದ್ಯಂತದ ಹೆಗ್ಗುರುತುಗಳನ್ನು ಸೃಷ್ಟಿಸುವ ಜತೆಗೆ ಕ್ರಿಕೆಟ್ ಅಭಿವೃದ್ಧಿ ಕಾರ್ಯಕ್ರಮಗಳಿಗೂ ಬೆಂಬಲ ನೀಡಲಿದೆ ಎಂದು ಹೇಳಿದರು.

ಕ್ರಿಕೆಟ್ ಒಂದು ಶತಕೋಟಿಗೂ ಹೆಚ್ಚು ಅಭಿಮಾನಿಗಳನ್ನು ಹೊಂದಿದೆ. ನಮ್ಮ ಕ್ರೀಡೆಯ ಕೆಲವು ಶ್ರೇಷ್ಠ ದಂತಕಥೆಗಳು ಎತ್ತಿಹಿಡಿದಿರುವ ಈ ಪ್ರಸಿದ್ಧ ಟ್ರೋಫಿಗೆ ಹತ್ತಿರವಾಗಲು ಸಾಧ್ಯವಾದಷ್ಟು ಜನರಿಗೆ ಅವಕಾಶ ನೀಡುವುದೇ ನಮ್ಮ ಉದ್ದೇಶ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ : Team India : ಭಾರತ ಮಹಿಳೆಯರ ತಂಡದ ಮಾಜಿ ವೇಗದ ಬೌಲರ್‌ಗೆ ವಿಶ್ವ ಕ್ರಿಕೆಟ್‌ನ ವಿಶೇಷ ಗೌರವ

ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಮಾತನಾಡಿ “ಕ್ರಿಕೆಟ್ ಬೇರೆ ಯಾವುದೇ ಕ್ರೀಡೆಗಿಂಗ ಹೆಚ್ಚು ಭಾರತವನ್ನು ಒಂದುಗೂಡಿಸುತ್ತದೆ. ಆರು ವಾರಗಳ ಹೃದಯಸ್ಪರ್ಶಿ ಕ್ರಿಕೆಟ್ ಜಾತ್ರೆಯಲ್ಲಿ ವಿಶ್ವದ 10 ಅತ್ಯುತ್ತಮ ತಂಡಗಳಿಗೆ ಆತಿಥ್ಯ ವಹಿಸಲು ನಾವು ತಯಾರಿ ನಡೆಸುತ್ತಿದ್ದು, ನಮ್ಮ ಉತ್ಸಾಹ ಇಮ್ಮಡಿಯಾಗಿದೆ ಎಂದಿದ್ದಾರೆ.

ನಾವು ವಿಶ್ವ ಕಪ್​ಗೆ ಕ್ಷಣಗಣನೆ ನಡೆಸುತ್ತಿದ್ದು. ಟ್ರೋಫಿಯ ಟೂರ್ ಮೂಲಕ ಅಭಿಮಾನಿಗಳಿಗೆ ಈ ವಿಶ್ವ ಕಪ್​ನಲ್ಲಿ ಭಾಗಿಯಾಗಲು ಅವಕಾಶ ನೀಡಿದಂತಾಗಿದೆ. ದೇಶಾದ್ಯಂತ ವಿಶೇಷ ಸ್ಥಳಗಳು, ನಗರಗಳನ್ನು ದಾಟಲಿದೆ ಎಂದು ಹೇಳಿದರು.

ಟ್ರೋಫಿ ಸಾಗುವ ದೇಶಗಳು

Exit mobile version