ಮುಂಬಯಿ: ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಮುಂಬರುವ ಏಕ ದಿನ ವಿಶ್ವ ವಿಶ್ವಕಪ್ನ (World Cup 2023) ಮಸ್ಕಟ್ಗಳು ಅನಾವರಣಗೊಳಿಸಿದೆ. ಕ್ರಿಕೆಟ್ ಆಡುವ ಪುರುಷ ಹಾಗೂ ಮಹಿಳೆಯರನ್ನು ಪ್ರತಿನಿಧಿಸುವ ಎರಡು ಬೊಂಬೆಗಳು ಇದಾಗಿವೆ. ಈ ಮಸ್ಕಟ್ಗಳು ಮುಂದಿನ ಪೀಳಿಗೆಯ ಕ್ರಿಕೆಟ್ ಅಭಿಮಾನಿಗಳನ್ನು ಪ್ರೋತ್ಸಾಹಿಸುವ ಹಾಗೂ ಕ್ರಿಕೆಟ್ ಸ್ಫೂರ್ತಿಯ ಏಕತೆಯನ್ನು ಪ್ರತಿನಿಧಿಸುತ್ತವೆ ಎಂದು ಹೇಳಲಾಗಿದೆ.
ಬಹುನಿರೀಕ್ಷಿತ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ಗೆ ಮುಂಚಿತವಾಗಿ ಕ್ರಿಕೆಟ್ ಜ್ವರವು ಹೆಚ್ಚಾಗುತ್ತಿದ್ದು, ಏತನ್ಮಧ್ಯೆ ಐಸಿಸಿ ಮಸ್ಕಟ್ಗಳನ್ನು ಅನಾವರಣಗೊಳಿಸಿದೆ. ಕ್ರಿಕೆಟ್ ವಿಶ್ವ ಕಪ್ ಅಭಿಮಾನಿಗಳನ್ನು ತೊಡಗಿಸಿಕೊಳ್ಳುವ ಮತ್ತು ರಂಜಿಸುವ ಗುರಿಯನ್ನು ಹೊಂದಿವೆ ಎಂದು ಐಸಿಸಿ ಹೇಳಿದೆ. ಅದಕ್ಕೆ ಪೂರಕವಾಗಿ ಮಸ್ಕಟ್ಗಳನ್ನು ರೂಪಿಸಿದ್ದೇವೆ ಎಂದು ಹೇಳಿದೆ. ಐಸಿಸಿ ಈ ಮಸ್ಕಟ್ಗಳಿಗೆ ಹೆಸರನ್ನು ಇಟ್ಟಿಲ್ಲ. ಬದಲಾಗಿ ಅಭಿಮಾನಿಗಳಿಗೆ ಹೆಸರಿಡುವ ಅವಕಾಶ ಕಲ್ಪಿಸಿದೆ. ಆಗಸ್ಟ್ 27ರ ಒಳಗೆ ಕ್ರಿಕೆಟ್ ಅಭಿಮಾನಿಗಳು ಈ ಮಸ್ಕಟ್ಗಳಿಗೆ ಹೆಸರು ನೀಡಬಹುದು. ಉತ್ತಮ ಹೆಸರನ್ನು ಐಸಿಸಿ ಆಯ್ಕೆ ಮಾಡಲಿದೆ.
ಆಗಸ್ಟ್ 19 ರಂದು ಗುರುಗ್ರಾಮದಲ್ಲಿ ನಡೆದ ಅನಾವರಣ ಕಾರ್ಯಕ್ರಮದಲ್ಲಿ ಐಸಿಸಿ ಅಂಡರ್ -19 ಮಹಿಳಾ ಮತ್ತು ಪುರುಷರ ವಿಜೇತ ಭಾರತ ಮಹಿಳೆಯರ ಹಾಗೂ ಪುರುಷರ ತಂಡಗಳ ನಾಯಕರಾದ ಶಫಾಲಿ ವರ್ಮಾ ಮತ್ತು ಯಶ್ ಧುಲ್ ಭಾಗವಹಿಸಿದ್ದರು. ಈ ಮೂಲಕ ಮಸ್ಕಟ್ಗಳು ಲಿಂಗ ಸಮಾನತೆ ಮತ್ತು ವೈವಿಧ್ಯತೆಯ ಸಂಕೇತಗಳಾಗಿ ಹೊರಹೊಮ್ಮಿವೆ.
ಭಾರತದಲ್ಲಿ ನಡೆದ ಉದ್ಘಾಟನಾ ಕಾರ್ಯಕ್ರಮವು ಮೋಡಿಮಾಡುವ 3 ಡಿ ಅನಾಮಾರ್ಫಿಕ್ ವೀಡಿಯೊ ಪ್ರದರ್ಶನವನ್ನು ಒಳಗೊಂಡಿತ್ತು, ಇದು ಮಸ್ಕಟ್ಗಳ ಮೂಲವನ್ನು ಮತ್ತು ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ 2023ರ ಪ್ರಯಾಣವನ್ನು ಅನಾವರಣಗೊಳಿಸಿತು. ಆನ್-ಸೈಟ್ ಮತ್ತು ದೂರದ ಪ್ರೇಕ್ಷಕರನ್ನು ಸಮಾನವಾಗಿ ತೊಡಗಿಸಿಕೊಳ್ಳುವ ಆಪ್ಟಿಕಲ್ ಇಲ್ಯುಶನ್ ಪ್ರದರ್ಶನ ನೀಡಲಾಯಿತು.
ಐಸಿಸಿ ಈವೆಂಟ್ಸ್ ಮುಖ್ಯಸ್ಥ ಕ್ರಿಸ್ ಟೆಟ್ಲಿ ಮಾತನಾಡಿ, “ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ 2023ಕ್ಕೆ ಮುಂಚಿತವಾಗಿ ಐಸಿಸಿಯ ಮಸ್ಕಟ್ ಜೋಡಿಯನ್ನು ಅನಾವರಣಗೊಳಿಸಲು ನಾವು ಸಂತೋಷಪಡುತ್ತೇವೆ. ಸಂಸ್ಕೃತಿಗಳು ಮತ್ತು ಗಡಿಗಳನ್ನು ಮೀರಿ ಕ್ರಿಕೆಟ್ ಸಾರ್ವತ್ರಿಕ ಆಕರ್ಷಣೆ ಗಳಿಸುತ್ತಿವೆ. ಅಂತೆಯೇ ಈ ಮಸ್ಕಟ್ಗಳು ಏಕತೆ ಮತ್ತು ಉತ್ಸಾಹದ ಪ್ರತಿಕಗಳಾಗಿವೆ. ಅದೇ ರೀತಿ ಲಿಂಗ ಸಮಾನತೆಯನ್ನೂ ನಿರೂಪಿಸುತ್ತವೆ ಎಂದು ಹೇಳಿದರು.
ಇದನ್ನೂ ಓದಿ : Jasprit bumrah : ವೇಗದ ಬೌಲರ್ ಜಸ್ಪ್ರಿತ್ ಬುಮ್ರಾ ಅವರ ಒಟ್ಟು ಸಂಪತ್ತಿನ ಮಾಹಿತಿ ಬಹಿರಂಗ
ಮಸ್ಕಟ್ ಜೋಡಿಯು ಟೂರ್ನಿಯ ಉದ್ದಕ್ಕೂ ಮತ್ತು ಪಂದ್ಯಾವಳಿಯ ಸಮಯದಲ್ಲಿ, ಪ್ರಸಾರ ಮತ್ತು ಡಿಜಿಟಲ್ ಮಾಧ್ಯಮಗಳ ಮೂಲಕ ಕಾಣಿಸಿಕೊಳ್ಳಲಿದೆ. ಆನ್ ಲೈನ್ ಮತ್ತು ಸ್ಟೇಡಿಯಂಗಳಲ್ಲಿ ಮಾರಾಟಕ್ಕೂ ಲಭ್ಯವಿರುತ್ತದೆ. ಇದು ಸನ್ ಗ್ಲಾಸ್ ರೀತಿಯಲ್ಲೂ ಲಭ್ಯವಿರುತ್ತದೆ.