ದುಬೈ: ಐಸಿಸಿ ಶ್ರೇಯಾಂಕದಲ್ಲಿ (ICC Rankings) ಅಗ್ರಸ್ಥಾನಕ್ಕೇರಿ ಇತಿಹಾಸ ನಿರ್ಮಿಸಿದ್ದ ಪಾಕಿಸ್ತಾನ(Pakistan) ತಂಡದ ಸಂತೋಷವುಳಿದಿದ್ದು ಕೇವಲ 48 ಗಂಟೆಗಳು ಮಾತ್ರ. ಭಾನುವಾರ ನಡೆದ ಅಂತಿಮ ಏಕದಿನ ಪಂದ್ಯದಲ್ಲಿ ಪ್ರವಾಸಿ ನ್ಯೂಜಿಲ್ಯಾಂಡ್ ವಿರುದ್ಧ ಸೋಲು ಕಂಡ ಪರಿಣಾಮ ಪಾಕಿಸ್ತಾನ ಅಗ್ರಸ್ಥಾನದಿಂದ ಕೆಳಗಿಳಿದಿದೆ.
ಮೇ 5 ಶುಕ್ರವಾರ ನಡೆದ ನಾಲ್ಕನೇ ಏಕದಿನ ಪಂದ್ಯದಲ್ಲಿ ಪಾಕ್ ತಂಡ ಕಿವೀಸ್ ವಿರುದ್ಧ 102 ರನ್ಗಳ ಅಮೋಘ ಗೆಲುವು ದಾಖಲಿಸಿತ್ತು. ಹೀಗಾಗಿ ಶ್ರೇಯಾಂಕಲ್ಲಿ ಭಾರಿ ಪ್ರಗತಿ ಸಾಧಿಸುವ ಮೂಲಕ 5ನೇ ಸ್ಥಾನದಿಂದ ಒಮ್ಮೆಲೇ 4 ಸ್ಥಾನ ಏರಿಕೆ ಕಂಡು ನಂ.1 ಸ್ಥಾನಕ್ಕೇರಿತ್ತು. ಆದರೆ ಇದೀಗ ಅಂತಿಮ ಪಂದ್ಯದಲ್ಲಿ ಸೋಲು ಕಂಡ ಕಾರಣ ಅಗ್ರಸ್ಥಾನದಿಂದ ಮೂರನೇ ಸ್ಥಾನಕ್ಕೆ ಕುಸಿದಿದೆ. ಪಾಕಿಸ್ತಾನ ತಂಡ ಸದ್ಯ 122 ರೇಟಿಂಗ್ ಅಂಕ ಹೊಂದಿದೆ.
ಪಾಕ್ ತಂಡದ ಕುಸಿತದಿಂದಾಗಿ ಆಸ್ಟ್ರೇಲಿಯಾ(Australia) ಮತ್ತು ಟೀಮ್ ಇಂಡಿಯಾ(team india) ಕ್ರಮವಾಗಿ ಮತ್ತೆ ಮೊದಲೆರಡು ಸ್ಥಾನದಲ್ಲಿ ಕಾಣಿಸಿಕೊಂಡಿದೆ. ಉಭಯ ತಂಡಗಳು 113 ರೇಟಿಂಗ್ ಅಂಕ ಹೊಂದಿದೆ. ಕಡಿಮೆ ಪಂದ್ಯಗಳನ್ನು ಆಡಿದ ಲೆಕ್ಕಾಚಾರದಲ್ಲಿ ಆಸೀಸ್ ತಂಡ ಅಗ್ರಸ್ಥಾನ ಪಡೆದಿದೆ.
ಇದನ್ನೂ ಓದಿ ICC Rankings: ಏಕದಿನ ಶ್ರೇಯಾಂಕದಲ್ಲಿ ಅಗ್ರ ಸ್ಥಾನ ಸಂಪಾದಿಸಿದ ಪಾಕಿಸ್ತಾನ
ಅಂತಿಮ ಪಂದ್ಯದಲ್ಲಿ ಪಾಕ್ಗೆ ಸೋಲು
ಕರಾಚಿಯಲ್ಲಿ ನಡೆದ ಸರಣಿಯ ಅಂತಿಮ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ನ್ಯೂಜಿಲ್ಯಾಂಡ್ 49.3 ಓವರ್ನಲ್ಲಿ ತನ್ನಲ್ಲೇ ವಿಕೆಟ್ ಕಳೆದುಕೊಂಡು 299 ರನ್ ಗಳಿಸಿತು. ದೊಡ್ಡ ಮೊತ್ತವನ್ನು ಬೆನ್ನಟ್ಟಿದ ಪಾಕಿಸ್ತಾನ 46.1 ಓವರ್ನಲ್ಲಿ 252 ರನ್ಗಳಿಗೆ ಸರ್ವಪತನ ಕಂಡು 47 ರನ್ಗಳ ಸೋಲಿಗೆ ತುತ್ತಾಯಿತು. ಚೇಸಿಂಗ್ ವೇಳೆ ಪಾಕ್ ಪರ ಇಫ್ತಿಕರ್ ಅಹಮದ್ ಅಜೇಯ 94 ರನ್, ಸಲ್ಮಾನ್ 57 ರನ್ ಬಾರಿಸಿದರು. ಆದರೆ ಇವರಿಂದ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ. 5 ಪಂದ್ಯಗಳ ಸರಣಿಯಲ್ಲಿ ಪಾಕ್ 4-1 ಅಂತರದಿಂದ ಸರಣಿಯನ್ನು ವಶಪಡಿಸಿಕೊಂಡಿತು.