ದುಬೈ: ಐಸಿಸಿ ನೂತನ ಏಕದಿನ ಶ್ರೇಯಾಂಕ(ICC Rankings) ಪಟ್ಟಿಯಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ(Rohit Sharma) ಮತ್ತು ಹಾರ್ದಿಕ್ ಪಾಂಡ್ಯ(Hardik Pandya) ಉತ್ತಮ ಪ್ರಗತಿ ಸಾಧಿಸಿದ್ದಾರೆ. ಬ್ಯಾಟರ್ಗಳ ಶ್ರೇಯಾಂಕದಲ್ಲಿ ರೋಹಿತ್ ಒಂದು ಸ್ಥಾನ ಏರಿಕೆ ಕಂಡು ಎಂಟನೇ ಸ್ಥಾನದಲ್ಲಿದ್ದರೆ, ಪಾಂಡ್ಯ ಬೌಲಿಂಗ್ ಶ್ರೇಯಾಂಕದಲ್ಲಿ 10 ಸ್ಥಾನಗಳ ಜಿಗಿತ ಕಂಡು 76ನೇ ಸ್ಥಾನ ಪಡೆದಿದ್ದಾರೆ.
ಬುಧವಾರ ಐಸಿಸಿ ಶ್ರೇಯಾಂಕ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಪಾಕಿಸ್ತಾನದ ನಾಯಕ ಬಾಬರ್ ಅಜಂ ಬ್ಯಾಟರ್ಗಳ ಪಟ್ಟಿಯಲ್ಲಿ ಅಗ್ರ ಸ್ಥಾನ ಅಲಂಕರಿಸಿದ್ದಾರೆ. ದಕ್ಷಿಣ ಆಫ್ರಿಕಾದ ರಸ್ಸಿ ವಾನ್ ಡರ್ ಡಸ್ಸೆನ್ 2ನೇ, ಪಾಕ್ನ ಇಮಾಮ್-ಉಲ್-ಹಕ್ 3ನೇ ಮತ್ತು ಭಾರತದ ಶುಭಮನ್ ಗಿಲ್ 5ನೇ ಸ್ಥಾನ ಪಡೆದಿದ್ದಾರೆ. ಉಳಿದಂತೆ ವಿರಾಟ್ ಕೊಹ್ಲಿ ಏಳನೇ ಸ್ಥಾನದಲ್ಲಿದ್ದಾರೆ. ಕೆ.ಎಲ್. ರಾಹುಲ್ 38ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.
ಬೌಲಿಂಗ್ ಶ್ರೇಯಾಂಕದಲ್ಲಿ ಸಿರಾಜ್ ನಂ.3
ಬೌಲಿಂಗ್ ಶ್ರೇಯಾಂಕದಲ್ಲಿ ಆಸ್ಟ್ರೇಲಿಯಾದ ಜೋಶ್ ಹ್ಯಾಜಲ್ವುಡ್ ಅವರು ನಂ.1 ಸ್ಥಾನದಲ್ಲಿಯೇ ಮುಂದುವರಿದಿದ್ದಾರೆ. ನ್ಯೂಜಿಲ್ಯಾಂಡ್ನ ಹಿರಿಯ ವೇಗಿ ಟ್ರೆಂಟ್ ಬೌಲ್ಟ್ ದ್ವಿತೀಯ ಸ್ಥಾನದಲ್ಲಿದರೆ, ಟೀಮ್ ಇಂಡಿಯಾದ ಮೊಹಮ್ಮದ್ ಸಿರಾಜ್ ಮೂರನೇ ಸ್ಥಾನದಲ್ಲಿದ್ದಾರೆ. ಮಿಚೆಲ್ ಸ್ಟಾರ್ಕ್ ಸ್ಟಾರ್ಕ್ 4 ಮತ್ತು ಅಫ್ಘಾನಿಸ್ಥಾನದ ರಶೀದ್ ಖಾನ್ 5ನೇ ಸ್ಥಾನದಲ್ಲಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿ ಮುಕ್ತಾಯ ಕಾಣುವ ಮೊದಲು ಮೊಹಮ್ಮದ್ ಸಿರಾಜ್ ನಂ.1 ಸ್ಥಾನದಲ್ಲಿದ್ದರು. ಆದರೆ ಆಸೀಸ್ ವಿರುದ್ಧದ ಸರಣಿಯಲ್ಲಿ ಕಳಪೆ ಬೌಲಿಂಗ್ ಪ್ರದರ್ಶನ ತೋರಿದ ಕಾರಣ ಅವರು ಹಠಾತ್ 2 ಸ್ಥಾನಗಳ ಕುಸಿತ ಕಂಡು ಮೂರನೇ ಸ್ಥಾನ ಪಡೆದರು. ಸದ್ಯ ಅವರು ಇದೇ ಸ್ಥಾನದಲ್ಲಿ ಮುಂದುವರಿಸಿದ್ದಾರೆ. ಉಳಿದಂತೆ ಕುಲ್ದೀಪ್ ಯಾದವ್ (23), ಬುಮ್ರಾ (26), ಮೊಹಮ್ಮದ್ ಶಮಿ (32), ರವೀಂದ್ರ ಜಡೇಜಾ (78) ಸ್ಥಾನದಲ್ಲಿದ್ದಾರೆ.
ಉಪನಾಯಕ ಹಾರ್ದಿಕ್ ಪಾಂಡ್ಯ ಆಲ್ರೌಂಡರ್ಗಳ ಪಟ್ಟಿಯಲ್ಲಿ 13 ನೇ ಸ್ಥಾನದಲ್ಲಿದ್ದಾರೆ. ಮೊದಲ ಸ್ಥಾನದಲ್ಲಿ ಬಾಂಗ್ಲಾದೇಶದ ಹಿರಿಯ ಆಟಗಾರ ಶಕೀಬ್ ಅಲ್ ಹಸನ್ ಕಾಣಿಸಿಕೊಂಡಿದ್ದಾರೆ. ದ್ವಿತೀಯ ಸ್ಥಾನ ಅಫಘಾನಿಸ್ತಾನದ ಮೊಹಮ್ಮದ್ ನಬಿ ಪಾಲಾಗಿದೆ.