ದುಬೈ: ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯಲ್ಲಿ ಅಮೋಘ ಬೌಲಿಂಗ್ ಮೂಲಕ ಮಿಂಚಿದ್ದ ಭಾರತದ ಯುವ ಸ್ಪಿನ್ನರ್ ರವಿ ಬಿಷ್ಟೋಯಿ(Ravi Bishnoi) ಅವರು ನೂತನ ಐಸಿಸಿ ಟಿ20 ಬೌಲಿಂಗ್ ರ್‍ಯಾಂಕಿಂಗ್‌ನಲ್ಲಿ(ICC T20 Rankings) ಜೀವನಶ್ರೇಷ್ಠ ಸಾಧನೆಗೈದಿದ್ದಾರೆ. ಬ್ಯಾಟಿಂಗ್ ಶ್ರೇಯಾಂಕದಲ್ಲಿ ಸೂರ್ಯಕುಮಾರ್ ಯಾದವ್(Suryakumar Yadav) ತಮ್ಮ ಅಗ್ರಸ್ಥಾನದಲ್ಲೇ ಮುಂದುವರಿದಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧ ಮುಕ್ತಾಯ ಕಂಡ 5 ಪಂದ್ಯಗಳ ಟಿ20 ಸರಣಿಯಲ್ಲಿ ರವಿ ಬಿಷ್ಣೋಯಿ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ತೋರುವ ಮೂಲಕ ಒಟ್ಟು 9 ವಿಕೆಟ್‌ಗಳನ್ನು ಪಡೆದು ಸರಣಿಶ್ರೇಷ್ಠ ಪ್ರಶಸ್ತಿ ಪಡೆದಿದ್ದರು. ಈ ಸಾಧನೆಯಿಂದ ಅವರು ಇದೀಗ ಟಿ20 ಕ್ರಿಕೆಟ್ನಲ್ಲಿ ನಂ.1 ಬೌಲರ್ ಆಗಿ ಹೊರಹೊಮ್ಮಿದ್ದಾರೆ. ಈ ಹಿಂದೆ ನಂ.1 ಸ್ಥಾನದಲ್ಲಿದ್ದ ಅಫಘಾನಿಸ್ತಾನದ ಅನುಭವಿ ಸ್ಪಿನ್ನರ್ ರಶೀದ್ ಖಾನ್(Rashid Khan) ಅವರು ದ್ವಿತೀಯ ಸ್ಥಾನಕ್ಕೆ ಕುಸಿದಿದ್ದಾರೆ. ಸದ್ಯ ಬಿಷ್ಟೋಯಿ 699 ರೇಟಿಂಗ್ ಅಂಕ ಹೊಂದಿದ್ದಾರೆ. 2ನೇ ಸ್ಥಾನದಲ್ಲಿರುವ ರಶೀದ್ 692 ರೇಟಿಂಗ್ ಅಂಕ ಪಡೆದಿದ್ದಾರೆ. ಬಿಷ್ಟೋಯಿ ಹೊರತುಪಡಿಸಿ ಉಳಿಯ ಯಾವುದೇ ಟೀಮ್ ಇಂಡಿಯಾ ಬೌಲರ್ಗಳು ಕೂಡ ಟಾಪ್ 10ನಲ್ಲಿ ಸ್ಥಾನ ಪಡೆದಿಲ್ಲ.
RAVI BISHNOI BECOMES THE NO.1 RANKED T20I BOWLER…!!! 🇮🇳 pic.twitter.com/HYkgELQN5s
— Mufaddal Vohra (@mufaddal_vohra) December 6, 2023
ಭವಿಷ್ಯದ ತಾರೆ
23 ವರ್ಷದ ಬಿಷ್ಣೋಯಿ ಕಳೆದ ವರ್ಷ ಫೆಬ್ರವರಿಯಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯಲ್ಲಿ ಆಡುವ ಮೂಲಕ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದರು. ಸದ್ಯ ಉತ್ತಮ ಬೌಲಿಂಗ್ ಪ್ರದರ್ಶನ ತೋರುತ್ತಿರುವ ಅವರು ಭವಿಷ್ಯದ ಭರವಸೆಯ ಆಟಗಾರನಾಗಿ ಕಾಣಿಸಿಕೊಂಡಿದ್ದಾರೆ. 21 ಟಿ20 ಪಂದ್ಯಗಳನ್ನು ಆಡಿರುವ ಅವರು ಒಟ್ಟು 34 ವಿಕೆಟ್‌ಗಳನ್ನು ಪಡೆದಿದ್ದಾರೆ. ಏಕೈಕ ಏಕದಿನ ಪಂದ್ಯ ಆಡಿ 1 ವಿಕೆಟ್ ಉರುಳಿಸಿದ್ದಾರೆ.
ಅಂಡರ್ 19 ವಿಶ್ವಕಪ್ ಹಾಗೂ ಐಪಿಎಲ್ನಲ್ಲಿ ಪಂಜಾಬ್ ಕಿಂಗ್ಸ್ ಪರ ಆಡುವ ಮೂಲಕ ಕ್ರಿಕೆಟ್ ಜರ್ನಿ ಆರಂಭಿಸಿದ ಬಿಷ್ಣೋಯಿ ಹಂತ ಹಂತವಾಗಿ ಬೆಳೆದು ಕ್ರಿಕೆಟ್ನಲ್ಲಿ ಮೇಲೆಕ್ಕೇರಿದ ಪ್ರತಿಭೆ. ಐಪಿಎಲ್ ವೇಳೆ ಅನಿಲ್ ಕುಂಬ್ಳೆ ಅವರ ಮಾರ್ಗದರ್ಶನದಲ್ಲಿ ಸ್ಪಿನ್ ಬೌಲಿಂಗ್ನಲ್ಲಿ ಪರಿಪಕ್ವತೆ ಕಂಡುಕೊಂಡ ಅವರು ಇದೀಗ ಟಿ20 ಬೌಲಿಂಗ್ ಶ್ರೇಯಾಂಕದಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ. ಪ್ರಸ್ತುತ ಅವರು ಲಕ್ನೋ ತಂಡದ ಆಟಗಾರನಾಗಿದ್ದಾರೆ.
ಇದನ್ನೂ ಓದಿ Suryakumar Yadav : ಕೊಹ್ಲಿ ದಾಖಲೆ ಮುರಿಯಲು ಸಜ್ಜಾಗಿದ್ದಾರೆ ಸೂರ್ಯಕುಮಾರ್
ಸೂರ್ಯಕುಮಾರ್ ನಂ.1 ಬ್ಯಾಟರ್
ಸರಿ ಸುಮಾರು ಒಂದು ವರ್ಷಕ್ಕಿಂತಲೂ ಅಧಿಕವಾಗಿ ಟಿ20 ಬ್ಯಾಟಿಂಗ್ ಶ್ರೇಯಾಂಕದಲ್ಲಿ ನಂ.1 ಸ್ಥಾನ ಕಾಯ್ದುಕೊಂಡಿರುವ ಟೀಮ್ ಇಂಡಿಯಾದ ಹಾರ್ಡ್ ಹಿಟ್ಟರ್ ಸೂರ್ಯಕುಮಾರ್ ಯಾದವ್ ಈ ಬಾರಿಯೂ ಅಗ್ರಸ್ಥಾನದಲ್ಲೇ ಮುಂದುವರಿಸಿದ್ದಾರೆ. ಆಸೀಸ್ ವಿರುದ್ಧದ ಟಿ20 ಸರಣಿಯಲ್ಲಿ ನಾಯಕನಾಗಿ ತಂಡವನ್ನು ಮುನ್ನಡೆಸಿದ ಅವರು ತಮ್ಮ ಚೊಚ್ಚಲ ನಾಯಕತ್ವದಲ್ಲ ಭಾರತಕ್ಕೆ ಟಿ20 ಸರಣಿಯನ್ನು ಗೆದ್ದು ಕೊಟ್ಟ ಸಾಧನೆ ಮಾಡಿದ್ದರು. ಅಲ್ಲದೆ ಸರಣಿಯಲ್ಲಿ ಉತ್ತಮ ಬ್ಯಾಟಿಂಗ್ ಕೂಡ ಪ್ರದರ್ಶಿಸಿಸಿದ್ದರು. ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಗೂ ಅವರೇ ನಾಯಕನಾಗಿ ಮುಂದುವರಿದಿದ್ದಾರೆ.
ಯುವ ಆಟಗಾರ ಋತುರಾಜ್ ಗಾಯಕ್ವಾಡ್ ಅವರು ಬ್ಯಾಟಿಂಗ್ ಶ್ರೇಯಾಂಕದಲ್ಲಿ ಒಂದು ಸ್ಥಾನ ಕುಸಿತ ಕಂಡು 688 ರೇಟಿಂಗ್ ಅಂಕದೊಂದಿಗೆ 7ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಪಾಕಿಸ್ತಾನ ತಂಡದ ವಿಕೆಟ್ ಕೀಪರ್ ಕಮ್ ಬ್ಯಾಟರ್ ಮೊಹಮ್ಮದ್ ರಿಜ್ವಾನ್ (787 ರೇಟಿಂಗ್ ಅಂಕ) ದ್ವಿತೀಯ ಸ್ಥಾನ, ದಕ್ಷಿಣ ಆಫ್ರಿಕಾದ ಐಡೆನ್ ಮಾರ್ಕ್ರಮ್(756 ರೇಟಿಂಗ್ ಅಂಕ) ಮೂರನೇ ಸ್ಥಾನದಲ್ಲಿದ್ದಾರೆ.