Site icon Vistara News

ICC Test Championship; ಕಿವೀಸ್​ ವಿರುದ್ಧ ಲಂಕಾಗೆ ಸೋಲು; ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ಫೈನಲ್​ ಪ್ರವೇಶಿಸಿದ ಭಾರತ

WTC Final 2023

ಕ್ರೈಸ್ಟ್ ಚರ್ಚ್: ಕ್ರಿಕೆಟ್​ ಅಭಿಮಾನಿಗಳನ್ನು ತುದಿಗಾಲಲ್ಲಿ ನಿಲ್ಲಿಸಿದ ಶ್ರೀಲಂಕಾ(Sri Lanka) ಮತ್ತು ನ್ಯೂಜಿಲ್ಯಾಂಡ್(New Zealand)​ ವಿರುದ್ಧದ ಟೆಸ್ಟ್​ ಪಂದ್ಯದಲ್ಲಿ ಅಂತಿಮವಾಗಿ ಕಿವೀಸ್​ ಕೈ ಮೇಲಾಗಿದೆ. ರೋಚಕ ಹಣಾಹಣಿಯಲ್ಲಿ ನ್ಯೂಜಿಲ್ಯಾಂಡ್ ತಂಡವು ಅಂತಿಮ ಎಸೆತದಲ್ಲಿ ಈ ಪಂದ್ಯವನ್ನು ಗೆದ್ದುಕೊಂಡಿದೆ. ಈ ಸೋಲಿನ ಮೂಲಕ ಶ್ರೀಲಂಕಾದ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​​ ಫೈನಲ್(ICC Test Championship) ಆಸೆ ಕಮರಿ ಹೋಗಿದೆ. ಲಂಕಾ ಸೋಲಿನಿಂದ ಭಾರತ ತಂಡವು ಫೈನಲ್​​ಗೆ ಅರ್ಹತೆ ಪಡೆದಿದೆ.

ಆಸ್ಟ್ರೇಲಿಯಾ ವಿರುದ್ಧ ಅಹಮದಾಬಾದ್‌ ನರೇಂದ್ರ ಮೋದಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ಸಾಗುತ್ತಿರುವ ಅಂತಿಮ ಟೆಸ್ಟ್​ ಪಂದ್ಯ ಡ್ರಾ ಗೊಂಡರೂ ಭಾರತಕ್ಕೆ ಇನ್ನು ಯಾವುದೇ ಚಿಂತೆ ಇಲ್ಲ. ಲಂಕಾ ಸೋಲಿನೊಂದಿಗೆ ಭಾರತ ಅಧಿಕೃತವಾಗಿ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ಗೆ ಲಗ್ಗೆ ಇಟ್ಟಿದೆ. ಫೈನಲ್ ಪಂದ್ಯ ಲಂಡನ್​ನ ಓವಲ್​ ಕ್ರೀಡಾಂಗಣದಲ್ಲಿ ಜೂನ್​ 7ರಿಂದ 11 ರ ವರೆಗೆ ನಡೆಯಲಿದೆ. ಫೈನಲ್​ನಲ್ಲಿ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಸೆಣಸಾಟ ನಡೆಸಲಿದೆ.

ಇದನ್ನೂ ಓದಿ IND VS AUS: ಸಚಿನ್​ ತೆಂಡೂಲ್ಕರ್​ ದಾಖಲೆ ಮುರಿದ ವಿರಾಟ್​ ಕೊಹ್ಲಿ; ಏನದು?

ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್​ಗೇರಲು ಭಾರತ ಹಾಗೂ ಶ್ರೀಲಂಕಾ ತಂಡಗಳ ನಡುವೆ ಪೈಪೋಟಿ ಏರ್ಪಟ್ಟಿತ್ತು. ಹೀಗಾಗಿ ರೋಹಿತ್​ ಪಡೆ ನೇರವಾಗಿ ಫೈನಲ್​ ಪ್ರವೇಶಿಸ ಬೇಕಿದ್ದರೆ ಆಸೀಸ್ ವಿರುದ್ಧದ ಟೆಸ್ಟ್ ಸರಣಿಯನ್ನು 3-0 ಅಥವಾ 3-1 ಅಂತರದಿಂದ ಗೆಲ್ಲಬೇಕಾಗಿತ್ತು.​ ಆದರೆ ಅಂತಿಮ ಟೆಸ್ಟ್ ಪಂದ್ಯ ಡ್ರಾದತ್ತ ಸಾಗಿರುವುದರಿಂದ ಭಾರತಕ್ಕೆ ಲಂಕಾ ಸೋಲುವುದು ಅನಿವಾರ್ಯವಾಗಿತ್ತು. ಲಂಕಾ ತಂಡಕ್ಕೆ ಫೈನಲ್​ಗೇರಲು ಕಿವೀಸ್​ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ಗೆಲ್ಲಬೇಕಿತ್ತು. ಆದರೆ ಇದೀಗ ಲಂಕಾ ಸೋಲು ಕಂಡು ಈ ರೇಸ್​ನಿಂದ ಹೊರಬಿದ್ದಿದೆ.

ರೋಚಕ ಗೆಲುವು ಸಾಧಿಸಿದ ನ್ಯೂಜಿಲ್ಯಾಂಡ್​

ಗೆಲುವಿಗೆ 285 ರನ್ ಗುರಿ ಪಡೆದ ನ್ಯೂಜಿಲ್ಯಾಂಡ್​ ತಂಡಕ್ಕೆ ಕೇನ್ ವಿಲಿಯಮ್ಸನ್ ಶತಕ ಬಾರಿಸಿ ನೆರವಾದರು. ಒಂದು ವಿಕೆಟ್ ನಷ್ಟಕ್ಕೆ 28 ರನ್ ಗಳಿಸಿದ್ದಲ್ಲಿಂದ ಸೋಮವಾರ ಅಂತಿಮ ದಿನದಾಟ ಆರಂಭಿಸಿದಾಗ ಮಳೆ ಅಡ್ಡಿಯಾಯಿತು. ಮಳೆಯ ಕಾರಣದಿಂದ 37 ಓವರ್ ಗಳ ಪಂದ್ಯ ನಷ್ಟವಾಯಿತು. 53 ಓವರ್ ಗಳಲ್ಲಿ 257 ರನ್ ಗಳಿಸಬೇಕಾದ ಅನಿವಾರ್ಯತೆಗೆ ಸಿಲುಕಿದ ನ್ಯೂಜಿಲ್ಯಾಂಡ್​ಗೆ ವಿಲಿಯಮ್ಸನ್ ಮತ್ತು ಮೊದಲ ಇನಿಂಗ್ಸ್​ನ ಹೀರೋ ಡ್ಯಾರಿಲ್ ಮಿಚೆಲ್ ನೆರವಾದರು. ವಿಲಿಯಮ್ಸನ್ ಅಜೇಯ 121 ರನ್ ಗಳಿಸಿದರೆ, ಮಿಚೆಲ್ 86 ಎಸೆತಗಳಲ್ಲಿ 81 ರನ್ ಮಾಡಿದರು. ಕೊನೆಯ ಮೂರು ಎಸೆತದಲ್ಲಿ ಐದು ರನ್ ಅಗತ್ಯವಿದ್ದಾಗ ವಿಲಿಯಮ್ಸನ್ ಅವರು ಬೌಂಡರಿ ಬಾರಿಸಿದರು. ಮುಂದಿನ ಎಸೆತ ಡಾಟ್​ ಆಯಿತು. ಕೊನೆಯ ಎಸೆತದಲ್ಲಿ ಒಂದು ರನ್ ಕದಿಯುವ ಸವಾಲಿನಲ್ಲಿ ವಿಲಿಯಮ್ಸನ್​ ರನೌಟ್​ ಅಪಾಯದಿಂದ ಪಾರಾಗಿ ತಂಡಕ್ಕೆ ಗೆಲುವು ತಂದಿತ್ತರು.

Exit mobile version