Site icon Vistara News

Test Rankings: ಬ್ಯಾಟಿಂಗ್​ ಶ್ರೇಯಾಂಕದಲ್ಲಿ ಭಾರೀ ಪ್ರಗತಿ ಸಾಧಿಸಿದ ವಿರಾಟ್​, ರೋಹಿತ್​

virat kohli and Rohit Sharma test

ದುಬೈ: ದಕ್ಷಿಣ ಆಫ್ರಿಕಾ ವಿರುದ್ಧದ ಐತಿಹಾಸಿಕ ಕೇಪ್ ಟೌನ್ ಟೆಸ್ಟ್ ಗೆಲುವು ಸಾಧಿಸಿದ ಭಾರತೀಯ ಕ್ರಿಕೆಟಿಗರು ನೂತನ ಐಸಿಸಿ ಪುರುಷರ ಟೆಸ್ಟ್ ಶ್ರೇಯಾಂಕದಲ್ಲಿ(Test Rankings) ಗಮನಾರ್ಹ ಪ್ರಗತಿ ಸಾಧಿಸಿದ್ದಾರೆ. ಭಾರತದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ(Virat Kohli) ಮೂರು ಸ್ಥಾನ ಮೇಲಕ್ಕೇರಿದ್ದು, ರ‍್ಯಾಂಕಿಂಗ್‌ನಲ್ಲಿ 6ನೇ ಸ್ಥಾನ ಪಡೆದುಕೊಂಡಿದ್ದಾರೆ.

ಭಾರತದ ನಾಯಕ ರೋಹಿತ್ ಶರ್ಮಾ(Rohit Sharma) ಕೂಡ ತಮ್ಮ ಶ್ರೇಯಾಂಕದಲ್ಲಿ ಗಮನಾರ್ಹ ಸುಧಾರಣೆ ಕಂಡಿದ್ದಾರೆ. ನಾಲ್ಕು ಸ್ಥಾನಗಳ ಜಿಗಿತದೊಂದಿಗೆ, ಅವರು ಟಾಪ್​ ಟೆನ್​ ಪ್ರವೇಶಿಸಿದ್ದಾರೆ ಸದ್ಯ ಅವರು 10 ನೇ ಸ್ಥಾನದಲ್ಲಿದ್ದಾರೆ. ಕೇಪ್​ ಟೌನ್​ ಟೆಸ್ಟ್‌ನಲ್ಲಿ ರೋಹಿತ್​ 39 ಮತ್ತು ಅಜೇಯ 16 ಸ್ಕೋರ್‌ಗಳೊಂದಿಗೆ ನಿರ್ಣಾಯಕ ಪಾತ್ರವನ್ನು ವಹಿಸಿದ್ದರು. ಇದು ಅವರ ಶ್ರೇಯಾಂಕ ಏರಿಕೆಗೆ ಪ್ರಮುಖ ಕಾರಣವಾಯಿತು.

ದಕ್ಷಿಣ ಆಫ್ರಿಕಾದ ಬ್ಯಾಟರ್​ ಏಡೆನ್ ಮಾರ್ಕ್ರಾಮ್ ಭಾರತ ವಿರುದ್ಧದ ದ್ವಿತೀಯ ಟೆಸ್ಟ್​ನ ದ್ವಿತೀಯ ಇನಿಂಗ್ಸ್​ನಲ್ಲಿ ಶತಕ ಬಾರಿಸಿ ಮಿಂಚಿದ್ದರು. ಈ ಪರಿಣಾಮ ಅವರು ಒಂಬತ್ತು ಸ್ಥಾನಗಳ ಜಿಗಿತ ಕಂಡು ಅಗ್ರ 20ನೇ ಸ್ಥಾನಕ್ಕೆ ಪ್ರವೇಶಿಸಿದ್ದಾರೆ.

ಕೇನ್​ಗೆ ಮೊದಲ ಸ್ಥಾನ

ನ್ಯೂಜಿಲ್ಯಾಂಡ್ ತಂಡದ ನಾಯಕ ಕೇನ್​ ವಿಲಿಯಮ್ಸನ್​ ಅವರು 864 ರೇಟಿಂಗ್​ ಅಂಕದೊಂದಿಗೆ ಬ್ಯಾಟಿಂಗ್​ ಶ್ರೇಯಾಂಕದಲ್ಲಿ ಅಗ್ರಸ್ಥಾನ ಪಡೆದಿದ್ದಾರೆ. 818 ರೇಟಿಂಗ್​ ಅಂಕ ಗಳಿಸಿರುವ ಆಸ್ಟ್ರೇಲಿಯಾದ ಮಧ್ಯಮ ಕ್ರಮಾಂಕದ ಬ್ಯಾಟರ್​ ಸ್ಟೀವನ್​ ಸ್ಮಿತ್​ ಮೂರನೇ ಸ್ಥಾನದಲ್ಲಿದ್ದಾರೆ. ಆಸೀಸ್​ ತಂಡದ ಮತೋರ್ವ ಬ್ಯಾಟರ್​ ಮಾರ್ನಸ್​ ಲಬುಶೇನ್​(802 ರೇಟಿಂಗ್​ ಅಂಕ), ಕಿವೀಸ್​ನ ಡೇರಿಯಲ್​ ಮಿಚೆಲ್​(786 ರೇಟಿಂಗ್​ ಅಂಕ) ಕ್ರಮವಾಗಿ ನಾಲ್ಕು ಮತ್ತು 5ನೇ ಸ್ಥಾನದಲ್ಲಿದ್ದಾರೆ. ಅಗ್ರ 5 ಸ್ಥಾನಗಳ ಪೈಕಿ ಬಹುಪಾಲು ಆಸೀಸ್​ ಮತ್ತು ಕಿವೀಸ್​ ತಂಡದ ಆಟಗಾರರೇ ಕಾಣಿಸಿಕೊಂಡಿದ್ದಾರೆ. ಇಂಗ್ಲೆಂಡ್​ನ ಜೋ ರೂಟ್​ 859 ಅಂಕದೊಂದಿಗೆ ದ್ವಿತೀಯ ಸ್ಥಾನ ಪಡೆದಿದ್ದಾರೆ.

ಇದನ್ನೂ ಓದಿ Rohit Sharma: ವಿಶೇಷ ದಾಖಲೆಯ ಹೊಸ್ತಿಲಲ್ಲಿ ರೋಹಿತ್​; ಬೇಕಿದೆ 18 ಸಿಕ್ಸರ್​

ಬೌಲರ್​ಗಳ ಶ್ರೇಯಾಂಕದಲ್ಲಿ ಮೊಹಮ್ಮದ್ ಸಿರಾಜ್(Mohammed Siraj) ಉತ್ತಮ ಪ್ರಗತಿ ಸಾಧಿಸಿದ್ದಾರೆ. 13 ಸ್ಥಾನಗಳ ಏರಿಕೆ ಕಂಡು 17ನೇ ಸ್ಥಾನ ಪಡೆದಿದ್ದಾರೆ. ಕೇಪ್​ ಟೌನ್​ ಟೆಸ್ಟ್​ನಲ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ 15 ರನ್​ಗೆ 6 ವಿಕೆಟ್​ ಕಿತ್ತು ಅಸಾಧಾರಣ ಬೌಲಿಂಗ್​ ಪ್ರದರ್ಶನ ತೋರಿದ್ದರು. ಜಸ್​ಪ್ರೀತ್​ ಬುಮ್ರಾ(Jasprit Bumrah) ಅವರು ಒಂದು ಸ್ಥಾನ ಮೇಲಕ್ಕೆತ್ತಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ದ್ವಿತೀಯ ಟೆಸ್ಟ್​ ಪಂದ್ಯದಲ್ಲಿ ಅವರ ಬೌಲಿಂಗ್​ ಪ್ರದರ್ಶನವು ಭಾರತದ ಏಳು ವಿಕೆಟ್‌ಗಳ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಸದ್ಯ ಬುಮ್ರಾ 4ನೇ ಸ್ಥಾನದಲ್ಲಿದ್ದಾರೆ. ಅನುಭವಿ ಸ್ಪಿನ್ನರ್​ ಆರ್​.ಅಶ್ವಿನ್​ 863 ರೇಟಿಂಗ್​ ಅಂಕದೊಂದಿಗೆ ಬೌಲರ್​ಗಳ ಶ್ರೇಯಾಂಕದಲ್ಲಿ ಅಗ್ರ ಸ್ಥಾನದಲ್ಲೇ ಮುಂದುವರಿದಿದ್ದಾರೆ.

Exit mobile version