ದುಬೈ: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ತೋರುತ್ತಿರುವ ಟೀಮ್ ಇಂಡಿಯಾದ ಯುವ ಬ್ಯಾಟರ್ ಯಶಸ್ವಿ ಜೈಸ್ವಾಲ್(Yashasvi Jaiswal) ಅವರು ಐಸಿಸಿ ನೂತನ ಟೆಸ್ಟ್ ಬ್ಯಾಟಿಂಗ್(ICC Test Rankings) ಶ್ರೇಯಾಂಕದಲ್ಲಿ ಮತ್ತೆ ಮೂರು ಸ್ಥಾನಗಳ ಜಿಗಿತ ಕಂಡು 12ನೇ ಸ್ಥಾನ ಪಡೆದಿದ್ದಾರೆ. ಕಳೆದ ವಾರ 14 ಸ್ಥಾನಗಳ ಪ್ರಗತಿ ಸಾಧಿಸಿ 15ನೇ ಸ್ಥಾನ ಅಲಂಕರಿಸಿದ್ದರು.
ನೂತನ ಶ್ರೇಯಾಂಕದಲ್ಲಿ ಜೈಸ್ವಾಲ್ 727 ರೇಟಿಂಗ್ ಅಂಕದೊಂದಿಗೆ 12ನೇ ಸ್ಥಾನ ಪಡೆದಿದ್ದಾರೆ. ಅಂತಿಮ ಟೆಸ್ಟ್ನಲ್ಲಿಯೂ ಉತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿದರೆ ಅಗ್ರ 10ರೊಳಗೆ ಸ್ಥಾನ ಪಡೆಯುವ ಅವಕಾಶವಿದೆ. 893 ರೇಟಿಂಗ್ ಅಂಕ ಹೊಂದಿರುವ ನ್ಯೂಜಿಲ್ಯಾಂಡ್ನ ಮಾಜಿ ನಾಯಕ ಕೇನ್ ವಿಲಿಯಮ್ಸನ್(Kane WILLIAMSON) ಈ ಬಾರಿಯೂ ಅಗ್ರಸ್ಥಾನದಲ್ಲೇ ಮುಂದುವರಿದಿದ್ದಾರೆ. ರಾಂಚಿ ಟೆಸ್ಟ್ನ ಮೊದಲ ಇನಿಂಗ್ಸ್ನಲ್ಲಿ ಶತಕ ಬಾರಿಸಿದ ಜೋ ರೂಟ್(Joe Root) 2 ಸ್ಥಾನಗಳ ಪ್ರಗತಿ ಸಾಧಿಸಿ ಮೂರನೇ ಸ್ಥಾನಕ್ಕೇರಿದ್ದಾರೆ.
Yashasvi Jaiswal moves to number 12 in ICC Test batters ranking.
— Johns. (@CricCrazyJohns) February 28, 2024
– He is 2nd behind Virat Kohli among Indians, What a growth. 🫡 pic.twitter.com/Bo46JttI0C
ಈ ಬಾರಿಯ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಅತಿ ಹೆಚ್ಚು ಪ್ರಗತಿ ಸಾಧಿಸಿದ್ದು ಇಂಗ್ಲೆಂಡ್ನ ಜಾಕ್ ಕ್ರಾಲಿ. 10 ಸ್ಥಾನಗಳ ಏರಿಕೆ ಕಂಡು 17ನೇ ಸ್ಥಾನ ಪಡೆದಿದ್ದಾರೆ. ವೈಯಕ್ತಿಕ ಕಾರಣ ನೀಡಿ ಟೆಸ್ಟ್ ಸರಣಿಯಿಂದ ಹಿಂದೆ ಸರಿದ ಟೀಮ್ ಇಂಡಿಯಾದ ಅನುಭವಿ ಬ್ಯಾಟರ್ ವಿರಾಟ್ ಕೊಹ್ಲಿ 2 ಸ್ಥಾನಗಳ ಕುಸಿತದೊಂದಿಗೆ 9ನೇ ಸ್ಥಾನ ಪಡೆದಿದ್ದಾರೆ.
ಕಾರು ಅಪಘಾತದಲ್ಲಿ ಗಾಯಗೊಂಡು ಸರಿ ಸುಮಾರು ಒಂದು ವರ್ಷಗಳಿಗಿಂತಲೂ ಕ್ರಿಕೆಟ್ನಿಂದ ದೂರ ಉಳಿದಿರುವ ಟೀಮ್ ಇಂಡಿಯಾದ ರಿಷಭ್ ಪಂತ್ 699 ರೇಟಿಂಗ್ ಅಂಕದೊಂದಿಗೆ ಬ್ಯಾಟಿಂಗ್ ಶ್ರೇಯಾಂಕದಲ್ಲಿ 14ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.
ಆಲ್ರೌಂಡರ್ಗಳ ಪಟ್ಟಿಯಲ್ಲಿ ಯಾವುದೇ ದೊಡ್ಡ ಬದಲಾವಣೆ ಸಂಭವಿಸಿಲ್ಲ. ಕಳೆದ ಬಾರಿಯಂತೆಯೇ ರವಿಂದ್ರ ಜಡೇಜಾ ಅಗ್ರಸ್ಥಾನ, ಆರ್.ಅಶ್ವಿನ್ ದ್ವಿತೀಯ ಸ್ಥಾನದಲ್ಲೇ ಮುಂದುವರಿದಿದ್ದಾರೆ. ಬೌಲಿಂಗ್ ಶ್ರೇಯಾಂಕದಲ್ಲಿ ಜಸ್ಪ್ರೀತ್ ಬುಮ್ರಾ 4ನೇ ಟೆಸ್ಟ್ ಆಡದಿದ್ದರೂ ಕೂಡ ತಮ್ಮ ಅಗ್ರಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಅಶ್ವಿನ್ ದ್ವಿತೀಯ ಸ್ಥಾನ ಪಡೆದಿದ್ದಾರೆ. ಚೈನಾಮನ್ ಖ್ಯಾತಿಯ ಸ್ಪಿನ್ನರ್ ಕುಲ್ದೀಪ್ ಯಾದವ್ ಬರೋಬ್ಬರಿ 10 ಸ್ಥಾನಗಳ ಜಿಗಿತ ಕಂಡು 32ನೇ ಸ್ಥಾನಕ್ಕೇರಿದ್ದಾರೆ.
ಇದನ್ನೂ ಓದಿ KL Rahul: ಲಂಡನ್ನಲ್ಲಿ ಚಿಕಿತ್ಸೆ; ಐಪಿಎಲ್ ಟೂರ್ನಿಯಿಂದ ಹೊರಬೀಳಲಿದ್ದಾರೆ ರಾಹುಲ್!
ಟಾಪ್ 5 ಬ್ಯಾಟರ್ಗಳು
1. ಕೇನ್ ವಿಲಿಯಮ್ಸನ್- 893 ರೇಟಿಂಗ್ ಅಂಕ
2. ಸ್ಟೀವನ್ ಸ್ಮಿತ್-818 ರೇಟಿಂಗ್ ಅಂಕ
3. ಜೋ ರೂಟ್-799 ರೇಟಿಂಗ್ ಅಂಕ
4. ಡ್ಯಾರಿಲ್ ಮಿಚೆಲ್-780 ರೇಟಿಂಗ್ ಅಂಕ
5. ಬಾಬರ್ ಅಜಂ-768 ರೇಟಿಂಗ್ ಅಂಕ
ಟಾಪ್ 5 ಬೌಲರ್ಗಳು
1. ಜಸ್ಪ್ರೀತ್ ಬುಮ್ರಾ-867 ರೇಟಿಂಗ್ ಅಂಕ
2. ರವಿಚಂದ್ರನ್ ಅಶ್ವಿನ್-846 ರೇಟಿಂಗ್ ಅಂಕ
3. ಕಗಿಸೊ ರಬಾಡ-834 ರೇಟಿಂಗ್ ಅಂಕ
4. ಪಾಟ್ ಕಮಿನ್ಸ್-828 ರೇಟಿಂಗ್ ಅಂಕ
5. ಜೋಶ್ ಹ್ಯಾಜಲ್ವುಡ್-818 ರೇಟಿಂಗ್ ಅಂಕ