Site icon Vistara News

ICC U19 World Cup 2024: ನಾಳೆಯಿಂದ ಅಂಡರ್​-19 ವಿಶ್ವಕಪ್​ ಟೂರ್ನಿ ಆರಂಭ; ಭಾರತ ಪಂದ್ಯ ಯಾವಾಗ?

icc u19 world cup 2024 teams

ಜೊಹಾನ್ಸ್​ಬರ್ಗ್​: 2024ರ ಪುರುಷರ ಅಂಡರ್-19 ವಿಶ್ವಕಪ್ (U-19 World Cup) ಟೂರ್ನಿ ನಾಳೆ(ಜನವರಿ 19)ಯಿಂದ ಆರಂಭಗೊಳ್ಳಲಿದೆ. ಶುಕ್ರವಾರ ನಡೆಯುವ ಉದ್ಘಾಟನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ vs ವೆಸ್ಟ್​ ಇಂಡೀಸ್,​ ಐರ್ಲೆಂಡ್​ vs ಯುಎಸ್​​ಎ ಕಣಕ್ಕಿಳಿಯಲಿದೆ. ಭಾರತ ತನ್ನ ಮೊದಲ ಪಂದ್ಯವನ್ನು ಜನವರಿ 20 ರಂದು ಬಾಂಗ್ಲಾ ವಿರುದ್ಧ ಆಡಲಿದೆ.

ಅಸಲಿಗೆ ಈ ಟೂರ್ನಿ ಶ್ರೀಲಂಕಾದಲ್ಲಿ ನಡೆಯಬೇಕಿತ್ತು. ಆದರೆ, ಲಂಕಾ ಕ್ರಿಕೆಟ್​ ಮಂಡಳಿಯ ಆಡಳಿತದಲ್ಲಿ ಸರ್ಕಾರದ ವ್ಯಾಪಕ ಹಸ್ತಕ್ಷೇಪದಿಂದಾಗಿ ಐಸಿಸಿ (ICC) ಇತ್ತೀಚೆಗೆ ಶ್ರೀಲಂಕಾ ಕ್ರಿಕೆಟ್ ಮಂಡಳಿಯನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಿತ್ತು. ಹೀಗಾಗಿ ದಕ್ಷಿಣ ಆಫ್ರಿಕಾಗೆ ಟೂರ್ನಿಯ ಆತಿಥ್ಯ ಲಭಿಸಿತ್ತು. ಪಂದ್ಯಾವಳಿ ಜನವರಿ 19 ರಿಂದ ಫ್ರೆಬ್ರವರಿ 11 ರವರೆಗೆ ನಡೆಯಲಿದೆ. 50 ಓವರ್​ಗಳ ಮಾದರಿಯಲ್ಲಿ ಪಂದ್ಯಾಟ ನಡೆಯಲಿದೆ.

ಇದನ್ನೂ ಓದಿ U19 World Cup: ಅಂಡರ್​ 19 ವಿಶ್ವಕಪ್​ ತಂಡಗಳ ಆಟಗಾರರ ಪಟ್ಟಿ ಪ್ರಕಟಿಸಿದ ಐಸಿಸಿ

ಭಾರತ ಯಶಸ್ವಿ ತಂಡ


ಐದು ಪ್ರಶಸ್ತಿಗಳನ್ನು ಗೆದ್ದಿರುವ ಭಾರತ, ಪಂದ್ಯಾವಳಿಯ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ತಂಡವಾಗಿದ್ದು, ಆಸ್ಟ್ರೇಲಿಯಾ ಮೂರು ಪ್ರಶಸ್ತಿಗಳೊಂದಿಗೆ ನಂತರದ ಸ್ಥಾನದಲ್ಲಿದೆ. ಪಾಕಿಸ್ತಾನ ಎರಡು ಬಾರಿ ಗೆದ್ದರೆ, ಇಂಗ್ಲೆಂಡ್, ಬಾಂಗ್ಲಾದೇಶ, ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ತಲಾ ಒಂದು ಬಾರಿ ಕಿರೀಟವನ್ನು ಎತ್ತಿ ಹಿಡಿದಿವೆ.

41 ಪಂದ್ಯಗಳು

ಈ ಟೂರ್ನಿಯಲ್ಲಿ ಒಟ್ಟು 41 ಪಂದ್ಯಗಳು ನಡೆಯಲಿದೆ. ದಕ್ಷಿಣ ಆಫ್ರಿಕಾದ ಐದು ಸ್ಟೇಡಿಯಂಗಳಲ್ಲಿ ಪಂದ್ಯಾವಳಿಯನ್ನು ನಡೆಸಲು ನಿರ್ಧರಿಸಲಾಗಿದೆ. ಅವುಗಳೆಂದರೆ, ಬ್ಲೋಮ್‌ಫಾಂಟೈನ್‌ನ ಮಂಗಾಂಗ್ ಓವಲ್ ಮೈದಾನ, ಪೂರ್ವ ಲಂಡನ್‌ನ ಬಫಲೋ ಪಾರ್ಕ್ ಸ್ಟೇಡಿಯಂ, ಕಿಂಬರ್ಲಿಯಲ್ಲಿ ಕಿಂಬರ್ಲಿ ಓವಲ್ ಮೈದಾನ, ಪಾಚೆಫ್‌ಸ್ಟ್ರೂಮ್‌ನ ಜೆಬಿ ಮಾರ್ಕ್ಸ್ ಓವಲ್ ಮತ್ತು ಬೆನೋನಿಯ ವಿಲೋಮೂರ್ ಪಾರ್ಕ್ ಸ್ಟೇಡಿಯಂ ಆಗಿದೆ.

16 ತಂಡಗಳು

ಒಟ್ಟು 16 ತಂಡಗಳು ಪ್ರಶಸ್ತಿಗಾಗಿ ಸೆಣಸಾಡಲಿವೆ. ಭಾರತ, ಬಾಂಗ್ಲಾದೇಶ, ಯುಎಸ್​ಎ, ವೆಸ್ಟ್ ಇಂಡೀಸ್, ನಮೀಬಿಯಾ, ಇಂಗ್ಲೆಂಡ್, ಅಫಘಾನಿಸ್ತಾನ, ನೇಪಾಳ, ದಕ್ಷಿಣ ಆಫ್ರಿಕಾ, ಪಾಕಿಸ್ತಾನ, ಶ್ರೀಲಂಕಾ, ನ್ಯೂಜಿಲ್ಯಾಂಡ್​, ಜಿಂಬಾಬ್ವೆ, ಐರ್ಲೆಂಡ್, ಸ್ಕಾಟ್ಲೆಂಡ್​ ಮತ್ತು ಆಸ್ಟ್ರೇಲಿಯಾ. ಈ ತಂಡಗಳನ್ನು ನಾಲ್ಕು ಗುಂಪುಗಳಾಗಿ ವಿಂಗಡಿಸಲಾಗಿದೆ.

ಹೊಸ ರೂಪದಲ್ಲಿ ಟೂರ್ನಿ

2022 ರ ಆವೃತ್ತಿಯ ಅಗ್ರ 11 ಪೂರ್ಣ ಸದಸ್ಯ ತಂಡಗಳು ನೇರವಾಗಿ ಅರ್ಹತೆ ಪಡೆದಿವೆ ಮತ್ತು ಐದು ತಂಡಗಳು – ನಮೀಬಿಯಾ, ನೇಪಾಳ, ನ್ಯೂಜಿಲೆಂಡ್, ಸ್ಕಾಟ್ಲೆಂಡ್ ಮತ್ತು ಯುಎಸ್ಎ – ಪ್ರಾದೇಶಿಕ ಅರ್ಹತಾ ಸ್ಪರ್ಧೆಗಳ ಮೂಲಕ ತಮ್ಮ ಸ್ಥಾನಗಳನ್ನು ಗಳಿಸಿವೆ. 2024 ರ ಆವೃತ್ತಿಯನ್ನು ಹೊಸ ಸ್ವರೂಪದಲ್ಲಿ ಆಡಲಾಗುವುದು – ಈವೆಂಟ್​​ನ ಎರಡನೇ ಹಂತದಲ್ಲಿ ‘ಸೂಪರ್ ಸಿಕ್ಸರ್ಸ್’ ಮಾದರಿಯಲ್ಲಿ ನಡೆಯಲಿದೆ.

Exit mobile version