ಮುಂಬಯಿ: ‘ಇಂಡಿಯಾ ಲಿಫ್ಟ್ ದಿ ವರ್ಲ್ಡ್ ಕಪ್, ಆಫ್ಟರ್ 28 ಇಯರ್ಸ್” ಭಾರತೀಯ ಕ್ರಿಕೆಟ್ ಅಭಿಮಾನಿಗಳು ಎಂದೂ ಮರೆಯದ ಸಾಲುಗಳಿವು. ಮುಂಬೈಯ ವಾಂಖೆಡೆ ಮೈದಾನದಲ್ಲಿ ನಾಯಕ ಮಹೇಂದ್ರ ಸಿಂಗ್ ಧೋನಿ(MS Dhoni) ಅವರು ಶ್ರೀಲಂಕಾದ ಕುಲಶೇಖರನ್ ಎಸೆತಕ್ಕೆ ಸಿಕ್ಸರ್ ಬಾರಿಸಿ ಜಯ ತಂದಿತ್ತರೆ, ಇಡೀ ದೇಶವೇ ಹುಚ್ಚೆದ್ದು ಕುಣಿದಿತ್ತು. ಭಾರತದ ಎರಡನೇ ಏಕದಿನ ವಿಶ್ವಕಪ್(ICC World Cup 2011) ಸಂಭ್ರಮಕ್ಕೆ ಈಗ 12 ವರ್ಷದ ಸಂಭ್ರಮ.
2011 ಏಪ್ರಿಲ್ 2ರಂದು ಟೀಮ್ ಇಂಡಿಯಾ ಶ್ರೀಲಂಕಾ ವಿರುದ್ಧ ಆರು ವಿಕೆಟ್ಗಳ ಅಂತರದಿಂದ ಜಯ ಸಾಧಿಸಿತು. ಮೊದಲು ಬ್ಯಾಟಿಂಗ್ ಮಾಡಿದ್ದ ಶ್ರೀಲಂಕಾ ತಂಡ ನಾಯಕ ಮಹೇಲಾ ಜಯವರ್ಧನೆ ಶತಕದ ನೆರವಿನಿಂದ 275 ರನ್ ಗಳಿಸಿತ್ತು. ಗುರಿ ಬೆನ್ನಟ್ಟಿದ ಭಾರತ ತಂಡ ಗೌತಮ್ ಗಂಭೀರ್(gautam gambhir) ಅವರ 97 ರನ್ ಮತ್ತು ನಾಯಕ ಮಹೇಂದ್ರ ಸಿಂಗ್ ಧೋನಿ ಅಜೇಯ 91 ರನ್ ನೆರವಿನಿಂದ ಜಯಭೇರಿ ಬಾರಿಸಿ ಇತಿಹಾಸ ನಿರ್ಮಿಸಿತ್ತು.
ತನ್ನ ಕೊನೆಯ ವಿಶ್ವಕಪ್ ಆಡಿದ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್(sachin tendulkar) ಅವರನ್ನು ಭಾರತ ತಂಡದ ಆಟಗಾರರು ಮೈದಾನದ ಸುತ್ತ ಹೆಗಲಲ್ಲಿ ಹೊತ್ತು ಮೆರವಣಿಗೆ ನಡೆಸಿದ್ದರು. 1983ರಲ್ಲಿ ಕಪಿಲ್ ದೇವ್ ನಾಯಕತ್ವದ ಭಾರತ ತಂಡ ಮೊಟ್ಟ ಮೊದಲ ಬಾರಿ ಐಸಿಸಿ ಏಕದಿನ ವಿಶ್ವಕಪ್ ಮುಡಿಗೇರಿಸಿಕೊಂಡಿತ್ತು. ಇದಾದ ಬಳಿಕ 28 ವರ್ಷಗಳ ಬಳಿಕ ಧೋನಿ ನಾಯಕತ್ವದ ಟೀಮ್ ಇಂಡಿಯಾ ವಿಶ್ವಕಪ್ ಗೆದ್ದು ಸಂಭ್ರಮಿಸಿತ್ತು.
ಇದನ್ನೂ ಓದಿ IPL 2023: ಡೆಲ್ಲಿ ಕ್ಯಾಪಿಟಲ್ಸ್ ತಂಡದ ಡಗೌಟ್ನಲ್ಲಿ ರಿಷಭ್ ಪಂತ್ ಜೆರ್ಸಿ; ಫೋಟೊ ವೈರಲ್
ಗುಂಪು ಹಂತದಲ್ಲಿ ಉತ್ತಮ ಪ್ರದರ್ಶನ ತೋರಿದ್ದ ಶ್ರೀಲಂಕಾ ತಂಡ, ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ಭಾರತಕ್ಕೆ ತಲೆ ಬಾಗಿತ್ತು. ಮೊದಲು ಬ್ಯಾಟಿಂಗ್ ಮಾಡಿದ್ದ ಶ್ರೀಲಂಕಾ ನಿಗದಿತ 50 ಓವರ್ಗಳಿಗೆ ಆರು ವಿಕೆಟ್ ಕಳೆದುಕೊಂಡು 274 ರನ್ ಗಳಿಸಿತ್ತು.
ಗುರಿ ಬೆನ್ನಟ್ಟಿದ ಭಾರತ ಆರಂಭದಲ್ಲಿಯೇ ಸಚಿನ್ ತೆಂಡೂಲ್ಕರ್ ಹಾಗೂ ವಿರೇಂದ್ರ ಸೆಹವಾಗ್ ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತ ಕಂಡಿತು. ಉಭಯ ಆಟಗಾರರ ವಿಕೆಟ್ ಲಸೀತ್ ಮಾಲಿಂಗ್ ಕಿತ್ತರು. ಈ ವೇಳೆ ಭಾರತದ ಅಭಿಮಾನಿಗಳು ನಿರಾಸೆಗೊಂಡರು. ಆದರೆ ಗೌತಮ್ ಗಂಭೀರ್ ಹಾಗೂ ಅಂದಿನ ನಾಯಕ ಮಹೇಂದ್ರ ಸಿಂಗ್ ಧೋನಿಯವರ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಭಾರತ ಪಂದ್ಯ ಗೆದ್ದು ವಿಶ್ವಕಪ್ ಎತ್ತಿ ಹಿಡಿದಿತ್ತು. ಈ ಸಂಭ್ರಕ್ಕೆ ಇದೀಗ 12 ವರ್ಷ ತುಂಬಿದೆ. ಈ ತಂಡದಲ್ಲಿದ್ದ ವಿರಾಟ್ ಕೊಹ್ಲಿ ಮತ್ತು ಆರ್. ಅಶ್ವಿನ್ ಅವರು ಮಾತ್ರ ಇದೀಗ ಟೀಮ್ ಇಂಡಿಯಾ ಪರ ಆಡುತ್ತಿದ್ದಾರೆ. ಉಳಿದೆಲ್ಲ ಆಟಗಾರರು ನಿವೃತ್ತಿ ಹೇಳಿದ್ದಾರೆ.