Site icon Vistara News

World Cup History: 2015ರ ವಿಶ್ವಕಪ್; ಮೀರಿ ಎಲ್ಲರ ಪಾರುಪತ್ಯ,‌ ಆಸ್ಟ್ರೇಲಿಯಾದ್ದೇ ಆಧಿಪತ್ಯ!

Champions Australia

ICC World Cup 2015 History And Recap Of Interesting Moments

ಬೆಂಗಳೂರು: ಜಾಗತಿಕ ಕ್ರಿಕೆಟ್‌ನ ಸುಗ್ಗಿಯ ಕಾಲ ಎಂದರೆ ಅದು ವಿಶ್ವಕಪ್‌ ಟೂರ್ನಿ. ವಿಶ್ವಕಪ್‌ ಕ್ರಿಕೆಟ್ ಟೂರ್ನಿ ಆರಂಭವಾಗುತ್ತಲೇ ಎಲ್ಲರ ಕಣ್ಣು, ಗಮನ ಪ್ರತಿ ಪಂದ್ಯದ ಮೇಲೆ ಇರುತ್ತದೆ. ಟೂರ್ನಿ ಆರಂಭವಾಗುವ ಮೊದಲೇ ಯಾವ ಟೀಮ್‌ ಎಷ್ಟು ಬಲಿಷ್ಠ, ಯಾವ ತಂಡ ಎಷ್ಟು ದುರ್ಬಲ ಹಾಗೂ ಯಾವ ತಂಡ ಗೆಲ್ಲುವ ಫೇವರಿಟ್‌ ಎನ್ನುವ ಚರ್ಚೆ ಆರಂಭವಾಗುತ್ತದೆ. ಇನ್ನು ಆಟಗಾರರೂ ಅಷ್ಟೇ, ತಂಡಕ್ಕಾಗಿ ಆಡುವ, ಉತ್ತಮ ಪ್ರದರ್ಶನ ತೋರಿ ಕ್ರಿಕೆಟ್‌ ಇತಿಹಾಸದಲ್ಲಿ ಚಿರಸ್ಥಾಯಿಯಾಗುವ, ಹೀರೊ ಎನಿಸಿಕೊಳ್ಳುವ ಉಮೇದಿಯಲ್ಲಿರುತ್ತದೆ. ಇಷ್ಟೆಲ್ಲ ನಿರೀಕ್ಷೆ, ಕುತೂಹಲದಿಂದ ಆರಂಭವಾಗುವ ವಿಶ್ವಕಪ್‌ ಟೂರ್ನಿಯು ಕೂಡ ನಿರಾಸೆ ಉಂಟುಮಾಡುವುದಿಲ್ಲ. ಕ್ರಿಕೆಟ್‌ ರೋಚಕತೆ, ಕ್ರೀಡಾಂಗಣದಲ್ಲಿ ಸಿಟ್ಟು, ಸೆಡವು, ಗೊಂದಲ, ಕೊನೆಯ ಕ್ಷಣದ ಕುತೂಹಲ, ಫಲಿತಾಂಶದ ಬಳಿಕ ಸಂಭ್ರಮ, ಸೋಲಿನ ಕಹಿಗಳನ್ನು ಉಣಬಡಿಸುತ್ತದೆ. 2015ರ ವಿಶ್ವಕಪ್‌ ಟೂರ್ನಿ (World Cup 2015) ಕೂಡ ಇಂತಹ ಹಲವು ಕೌತುಕ, ಕುತೂಹಲ, ಕೋಲಾಹಲಗಳನ್ನು (World Cup History) ಹೊಂದಿದೆ. ಅವುಗಳ ಸಂಕ್ಷಿಪ್ತ ಹೂರಣ ಇಲ್ಲಿದೆ.

ಆಸ್ಟ್ರೇಲಿಯಾ-ನ್ಯೂಜಿಲ್ಯಾಂಡ್‌ ಜಂಟಿ ಆಯೋಜನೆ

2015ರ‌ ಏಕದಿನ ವಿಶ್ವಕಪ್‌ ಕ್ರಿಕೆಟ್ ಟೂರ್ನಿಯನ್ನು ನ್ಯೂಜಿಲ್ಯಾಂಡ್‌ ಹಾಗೂ ಆಸ್ಟ್ರೇಲಿಯಾ ಜಂಟಿಯಾಗಿ ಆಯೋಜನೆ ಮಾಡಿದ್ದವು. ಫೆಬ್ರವರಿ 14ರಿಂದ ಮಾರ್ಚ್‌ 25ರವರೆಗೆ ಒಟ್ಟು 14 ಪಂದ್ಯಗಳು ನಡೆದವು. ಆಸ್ಟ್ರೇಲಿಯಾ 26 ಪಂದ್ಯಗಳನ್ನು ಆಯೋಜಿಸಿದರೆ, ನ್ಯೂಜಿಲ್ಯಾಂಡ್‌ನಲ್ಲಿ 23 ಪಂದ್ಯಗಳು ನಡೆದವು. ಇದರೊಂದಿಗೆ 1992ರ ವಿಶ್ವಕಪ್‌ ಬಳಿಕ ಆಸ್ಟ್ರೇಲಿಯಾ ಹಾಗೂ ನ್ಯೂಜಿಲ್ಯಾಂಡ್‌ ತಂಡಗಳು ಎರಡನೇ ಬಾರಿಗೆ ಜಂಟಿಯಾಗಿ ವಿಶ್ವಕಪ್‌ ಆಯೋಜಿಸಿದವು. ಸೆಮಿಫೈನಲ್‌ ಪಂದ್ಯಗಳು ಆಕ್ಲೆಂಡ್‌ ಹಾಗೂ ಸಿಡ್ನಿಯಲ್ಲಿ ನಡೆದರೆ, ಫೈನಲ್‌ ಪಂದ್ಯವು ಮೆಲ್ಬೋರ್ನ್‌ನಲ್ಲಿ ನಡೆಯಿತು.

Pup queried on 'tremendous sex'

ಹೀಗಿತ್ತು ವಿಶ್ವಕಪ್‌ ಟೂರ್ನಿ ಮಾದರಿ

11ನೇ ಆವೃತ್ತಿಯ ವಿಶ್ವಕಪ್‌ ಟೂರ್ನಿಯಲ್ಲಿ 2011ರ ವಿಶ್ವಕಪ್‌ನಂತೆ 14 ತಂಡಗಳು ಪಾಲ್ಗೊಂಡವು. ಒಂದು ಗ್ರೂಪ್‌ನಲ್ಲಿ ತಲಾ ಏಳು ತಂಡಗಳಂತೆ ಎರಡು ಗ್ರೂಪ್‌ ಮಾಡಲಾಗಿತ್ತು. 14 ಕ್ರೀಡಾಂಗಣಗಳಲ್ಲಿ 49 ಪಂದ್ಯಗಳು ನಡೆದವು. ಒಂದು ಗ್ರೂಪ್‌ನ ಪ್ರತಿ ತಂಡವು ಅದೇ ಗ್ರೂಪ್‌ನ ಪ್ರತಿಯೊಂದು ತಂಡದ ವಿರುದ್ಧ ತಲಾ ಒಂದು ಪಂದ್ಯ ಆಡಿದವು. ಆಯಾ ಗ್ರೂಪ್‌ನಲ್ಲಿ ಅಗ್ರ 4 ಸ್ಥಾನ ಪಡೆದ ತಂಡಗಳು ಕ್ವಾರ್ಟರ್‌ ಫೈನಲ್‌ ತಲುಪಿದವು. ಕ್ವಾರ್ಟರ್‌ ಫೈನಲ್‌ನಲ್ಲಿ ಗೆಲುವು ಸಾಧಿಸಿದ ತಂಡಗಳು ಸೆಮಿಫೈನಲ್‌ ಹಾಗೂ ಸೆಮಿಫೈನಲ್‌ನಲ್ಲಿ ಗೆದ್ದ ತಂಡ ಫೈನಲ್‌ಗೆ ಲಗ್ಗೆ ಇಟ್ಟವು. ಫೈನಲ್‌ನಲ್ಲಿ ಪಂದ್ಯ ಟೈ ಆದರೆ ಸೂಪರ್‌ ಓವರ್‌ ಆಡಿಸುವ ನಿಯಮ ಜಾರಿ ಬಿಟ್ಟರೆ, 2015ರಲ್ಲಿ ಅಷ್ಟೇನೂ ನಿಯಮಗಳ ಬದಲಾವಣೆ ಆಗಿರಲಿಲ್ಲ. ಅಫಘಾನಿಸ್ತಾನವು ಮೊದಲ ಬಾರಿಗೆ ವಿಶ್ವಕಪ್‌ಗೆ ಅರ್ಹತೆ ಪಡೆದ ಖುಷಿ ಅನುಭವಿಸಿತು.

ಗ್ರೂಪ್‌ನಿಂದ ಸೆಮಿಫೈನಲ್‌ವರೆಗಿನ ಹಾದಿ

ಬಿ ಗ್ರೂಪ್‌ನಲ್ಲಿ ಸ್ಥಾನ ಪಡೆದಿದ್ದ ಭಾರತ ತಂಡವು ಆಡಿದ ಆರೂ ಪಂದ್ಯಗಳಲ್ಲಿ ಗೆಲುವು ಸಾಧಿಸುವ ಮೂಲಕ ಅಗ್ರ ಸ್ಥಾನಿಯಾಗಿ ಕ್ವಾರ್ಟರ್‌ ಫೈನಲ್‌ ತಲುಪಿತು. ಇದೇ ಗ್ರೂಪ್‌ನ ದಕ್ಷಿಣ ಆಫ್ರಿಕಾ, ಪಾಕಿಸ್ತಾನ ಹಾಗೂ ವೆಸ್ಟ್‌ ಇಂಡೀಸ್‌ ಕೂಡ ಕ್ವಾರ್ಟರ್‌ ಫೈನಲ್‌ಗೆ ಲಗ್ಗೆ ಇಟ್ಟವು. ಎ ಗ್ರೂಪ್‌ನಿಂದ ನ್ಯೂಜಿಲ್ಯಾಂಡ್‌, ಆಸ್ಟ್ರೇಲಿಯಾ, ಶ್ರೀಲಂಕಾ ಹಾಗೂ ಬಾಂಗ್ಲಾದೇಶ ತಂಡಗಳು ಕ್ವಾರ್ಟರ್‌ ಫೈನಲ್‌ ತಲುಪಿದವು. ಇಂಗ್ಲೆಂಡ್‌ ತಂಡವನ್ನು ಮಣಿಸಿದ ಬಾಂಗ್ಲಾದೇಶ ಕ್ವಾರ್ಟರ್‌ ಫೈನಲ್‌ಗೆ ಲಗ್ಗೆ ಇಟ್ಟರೆ, ಇಂಗ್ಲೆಂಡ್‌ ಮನೆಯ ಹಾದಿ ಹಿಡಿಯಿತು. ಕ್ವಾರ್ಟರ್‌ ಫೈನಲ್‌ನಲ್ಲಿ ಬಾಂಗ್ಲಾದೇಶ ತಂಡವನ್ನು ಬಗ್ಗುಬಡಿದ ಮಹೇಂದ್ರ ಸಿಂಗ್‌ ಧೋನಿ ಬಳಗವು 2007ರ ಸೋಲಿಗೆ ಸೇಡು ತೀರಿಸಿಕೊಂಡು ಸೆಮಿಫೈನಲ್‌ ಪ್ರವೇಶಿಸಿತು. ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಹಾಗೂ ನ್ಯೂಜಿಲ್ಯಾಂಡ್‌ ತಂಡಗಳು ಸೆಮೀಸ್‌ ಪ್ರವೇಶಿಸಿದವು.

ಇದನ್ನೂ ಓದಿ: World Cup History: ವಿಶ್ವಕಪ್​ನಲ್ಲಿ ಅತಿ ಹೆಚ್ಚು ಕ್ಯಾಚ್​ ಪಡೆದ ಆಟಗಾರರು

ಸೆಮಿಫೈನಲ್‌ ಕಾಳಗ, ಮುಗ್ಗರಿಸಿದ ಧೋನಿ ಬಳಗ

ಲೀಗ್‌ ಹಾಗೂ ಕ್ವಾರ್ಟರ್‌ ಫೈನಲ್‌ ಸೇರಿ ಒಂದೇ ಒಂದು ಪಂದ್ಯ ಸೋಲದ ಭಾರತ ತಂಡವು ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ಎದುರು ಮುಗ್ಗರಿಸಿತು. ಆಸ್ಟ್ರೇಲಿಯಾ ನೀಡಿದ 328 ರನ್‌ಗಳನ್ನು ಚೇಸ್‌ ಮಾಡುವಲ್ಲಿ ವಿಫಲವಾದ ಭಾರತ ತಂಡ 233 ರನ್‌ ಗಳಿಸಲಷ್ಟೇ ಶಕ್ತವಾಯಿತು. ಆಸ್ಟ್ರೇಲಿಯಾ ಬೌಲಿಂಗ್‌ ದಾಳಿಗೆ ನಲುಗಿದ ಧೋನಿ ಬಳಗದ ಫೈನಲ್‌ ಕನಸು ಭಗ್ನವಾಯಿತು. ಮತ್ತೊಂದೆಡೆ, ದಕ್ಷಿಣ ಆಫ್ರಿಕಾ ಹಾಗೂ ನ್ಯೂಜಿಲ್ಯಾಂಡ್‌ ನಡುವಿನ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ತೋರಿದ ನ್ಯೂಜಿಲ್ಯಾಂಡ್‌ ಪ್ರಶಸ್ತಿ ಸುತ್ತಿಗೇರಿತು.

Pup queried on 'tremendous sex'

ಮೈಕಲ್‌ ಕ್ಲಾರ್ಕ್‌ಗೆ ಬಿಬಿಸಿ ರಿಪೋರ್ಟರ್‌ ಕೇಳಿದ ‘ಟ್ರೆಮಂಡಸ್‌ ಸೆಕ್ಸ್‌’ ಪ್ರಶ್ನೆʼ

ಭಾರತದ ವಿರುದ್ಧ ಸೆಮಿಫೈನಲ್‌ನಲ್ಲಿ 95 ರನ್‌ಗಳ ಅಂತರದಿಂದ ಗೆಲುವು ಸಾಧಿಸಿದ ಬಳಿಕ ಆಸ್ಟ್ರೇಲಿಯಾ ನಾಯಕ ಮೈಕಲ್‌ ಕ್ಲಾರ್ಕ್‌ ಸುದ್ದಿಗೋಷ್ಠಿ ನಡೆಸುವ ವೇಳೆ ಹಾಸ್ಯ ಪ್ರಸಂಗವೊಂದು ನಡೆಯಿತು. ಮೈಕಲ್‌ ಕ್ಲಾರ್ಕ್‌ಗೆ ಬಿಬಿಸಿ ರಿಪೋರ್ಟರ್‌ ಒಬ್ಬರು, ‘ಯು ಹ್ಯಾವ್‌ ಹಾಡ್‌ ಟ್ರೆಮಂಡಸ್‌ ಸಕ್ಸೆಸ್’‌ (You Have Had Tremendous Success) ಎಂಬ ಪ್ರಶ್ನೆ ಕೇಳುವ ಬದಲು ‘ಯು ಹ್ಯಾವ್‌ ಹಾಡ್‌ ಟ್ರೆಮಂಡಸ್‌ ಸೆಕ್ಸ್’‌ (You Have Had Tremendous ‌Sex) ಎಂಬ ಪ್ರಶ್ನೆ ಕೇಳಿದರು. ಬಾಯಿ ತಪ್ಪಿನಿಂದ ಸಕ್ಸೆಸ್‌ ಎಂಬ ಪದಕ್ಕೆ ರಿಪೋರ್ಟರ್‌ ಸೆಕ್ಸ್‌ ಎಂಬ ಪದ ಕೇಳಿದ್ದರು. ಅಲ್ಲಿದ್ದ ಎಲ್ಲರೂ ಪ್ರಶ್ನೆ ಬಳಿಕ ಗೊಳ್ಳೆಂದು ನಕ್ಕರು. ಆಗ ಮೈಕಲ್‌ ಕ್ಲಾರ್ಕ್‌, “ನನ್ನ ಬಗ್ಗೆ ನಿಮಗೆ ಹೇಗೆ ಗೊತ್ತು? ಇದು ನನ್ನ ಜೀವನಕ್ಕೆ ಸಂಬಂಧಿಸಿದ ಪ್ರಶ್ನೆ” ಎಂದರು. ಪಕ್ಕದಲ್ಲೇ ಇದ್ದ ಸ್ಟೀವ್‌ ಸ್ಮಿತ್‌ಗೆ ನಗು ತಾಳಲು ಸಾಧ್ಯವೇ ಆಗಿರಲಿಲ್ಲ.

ಇದನ್ನೂ ಓದಿ: World cup history : ದುರ್ಬಲ ಪಾಕಿಸ್ತಾನ ಚಾಂಪಿಯನ್ ಆಗಿದ್ದು ಹೇಗೆ? 1992ರ ವಿಶ್ವ ಕಪ್​ ಸ್ಟೋರಿ ಇಲ್ಲಿದೆ

ಎಲ್ಲರನ್ನೂ ನಗಿಸಿದ ವಿಡಿಯೊ ಇಲ್ಲಿದೆ

ನ್ಯೂಜಿಲ್ಯಾಂಡ್‌ ವಿರುದ್ಧ ಫೈನಲ್‌ ಗೆದ್ದ ಆಸ್ಟ್ರೇಲಿಯಾ

ರಿಕಿ ಪಾಂಟಿಂಗ್‌ ನಿವೃತ್ತಿ, 2011ರಲ್ಲಿ ಭಾರತ ವಿಶ್ವಕಪ್‌ ಗೆಲುವು, ಕಾಡಿದ ಹಲವು ವಿವಾದಗಳಿಂದ ಮಂಕಾಗಿದ್ದ ಆಸ್ಟ್ರೇಲಿಯಾ 2015ರ ವಿಶ್ವಕಪ್‌ನಲ್ಲಿ ಲಯಕ್ಕೆ ಮರಳಿತು. ಅದರಲ್ಲೂ, 2015ರ ಫೈನಲ್‌ ಪಂದ್ಯದಲ್ಲಿ ಅಧಿಕಾರಯುತವಾಗಿ ಆಸ್ಟ್ರೇಲಿಯಾ ಗೆಲುವು ಸಾಧಿಸಿತು. ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ 45 ಓವರ್‌ಗಳಲ್ಲಿ ಕೇವಲ 183 ರನ್‌ಗಳಿಗೆ ಸರ್ವಪತನ ಕಂಡಿತು. ರಾಸ್‌ ಟೇಲರ್‌ ಹಾಗೂ ಗ್ರ್ಯಾಂಟ್‌ ಎಲಿಯಟ್‌ ಹೊರತುಪಡಿಸಿದರೆ ನ್ಯೂಜಿಲ್ಯಾಂಡ್‌ನ ಯಾವೊಬ್ಬ ಆಟಗಾರನೂ ಉತ್ತಮ ಪ್ರದರ್ಶನ ತೋರದೆ ತಂಡ ಮುಗ್ಗರಿಸಿತು. ಸುಲಭದ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ 33.1 ಓವರ್‌ಗಳಲ್ಲಿ 3 ವಿಕೆಟ್‌ ಕಳೆದುಕೊಂಡು 186 ರನ್‌ ಗಳಿಸುವ ಮೂಲಕ ದಾಖಲೆಯ ಐದನೇ ಬಾರಿಗೆ ವಿಶ್ವಕಪ್‌ ಎತ್ತಿ ಹಿಡಿಯಿತು. ಜೇಮ್ಸ್‌ ಫೌಲ್ಕ್ನರ್‌ ಪಂದ್ಯ ಶ್ರೇಷ್ಠರಾದರೆ, ಮಿಚೆಲ್‌ ಸ್ಟಾರ್ಕ್‌ ಪ್ಲೇಯರ್‌ ಆಫ್‌ ದಿ ಟೂರ್ನಿ (ಸರಣಿ ಶ್ರೇಷ್ಠ) ಎನಿಸಿದರು. ಇಡೀ ಟೂರ್ನಿಯಲ್ಲಿ ಅಂಪೈರ್‌ಗಳು ಕೊಟ್ಟ ನೋ ಬಾಲ್‌ ತೀರ್ಮಾನಗಳು ಗೊಂದಲ ಮೂಡಿಸಿದ್ದು ಬಿಟ್ಟರೆ ಯಾವುದೇ ದೊಡ್ಡ ವಿವಾದಗಳು ಆಗಿರುವುದು ಕ್ರಿಕೆಟ್‌ ಜಂಟಲ್‌ಮೆನ್ಸ್‌ ಗೇಮ್‌ ಎಂಬುದು ಸಾಬೀತುಪಡಿಸಿದಂತಾಯಿತು.

ಫೈನಲ್‌ ಪಂದ್ಯದ ಸ್ಕೋರ್‌ ಕಾರ್ಡ್‌ಗೆ ಇಲ್ಲಿ ಕ್ಲಿಕ್‌ ಮಾಡಿ

ಟೂರ್ನಿಯ ಕ್ವಿಕ್‌ ಸ್ಟ್ಯಾಟಿಸ್ಟಿಕ್ಸ್‌
1. ಅತಿ ಹೆಚ್ಚು ರನ್‌- ಮಾರ್ಟಿನ್‌ ಗುಪ್ಟಿಲ್ 547‌ ರನ್‌ (ನ್ಯೂಜಿಲ್ಯಾಂಡ್)‌
2. ಹೆಚ್ಚು ವಿಕೆಟ್‌- ಮಿಚೆಲ್‌ ಸ್ಟಾರ್ಕ್‌ 22 ವಿಕೆಟ್‌ (ಆಸ್ಟ್ರೇಲಿಯಾ)
3. ಹೆಚ್ಚು ಫೋರ್‌ – ಮಾರ್ಟಿನ್‌ ಗುಪ್ಟಿಲ್‌ 59 (ನ್ಯೂಜಿಲ್ಯಾಂಡ್)
4. ಹೆಚ್ಚು ಸಿಕ್ಸ್:‌ ಕ್ರಿಸ್ ಗೇಲ್‌ 26 (ವೆಸ್ಟ್‌ ಇಂಡೀಸ್)
5. ಬೆಸ್ಟ್‌ ಬೌಲಿಂಗ್‌- ಟಿಮ್‌ ಸೌಥಿ 33ಕ್ಕೆ 7 (ನ್ಯೂಜಿಲ್ಯಾಂಡ್‌)

ವಿಶ್ವಕಪ್‌ ಕುರಿತ ಸ್ವಾರಸ್ಯಕರ ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

Exit mobile version