ಬೆಂಗಳೂರು: ಏಕದಿನ ವಿಶ್ವಕಪ್ನ(icc world cup 2023) ಅತ್ಯಂತ ಯಶಸ್ವಿ ತಂಡ, 5 ಬಾರಿಯ ಚಾಂಪಿಯನ್, ಹ್ಯಾಟ್ರಿಕ್ ಸರದಾರ ಆಸ್ಟ್ರೇಲಿಯಾ ಈ ಬಾರಿ ಅತ್ಯಂತ ಹೀನಾಯ ಸ್ಥಿತಿಗೆ ಬಂದು ನಿಂತಿದೆ. ಅಂಕ ಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ಕುಸಿದಿದೆ. ಇದು 48 ವರ್ಷಗಳ ವಿಶ್ವಕಪ್ ಇತಿಹಾಸದಲ್ಲಿ ಆಸ್ಟ್ರೇಲಿಯಾಕ್ಕೆ ಎದುರಾದ ಭಾರಿ ಮುಖಭಂಗ ಇದಾಗಿದೆ
ಸರ್ವಾಧಿಕ 5 ಬಾರಿ ಪ್ರಶಸ್ತಿಯನ್ನು ಗೆದ್ದ ಆಸೀಸ್ 2 ಬಾರಿ ರನ್ನರ್ ಆಗಿದೆ. ಒಟ್ಟು 12 ಆವೃತ್ತಿಯ ವಿಶ್ವಕಪ್ ಟೂರ್ನಿಯಲ್ಲಿ 7 ಬಾರಿ ಫೈನಲ್ ಪ್ರವೇಶಿಸಿದ ಸಾಧನೆ ಮಾಡಿತ್ತು. ಈ ಬಾರಿ ಭಾರತದ ಆತಿಥ್ಯದಲ್ಲಿ ವಿಶ್ವಕಪ್ ನಡೆಯುತ್ತಿದ್ದರೂ ಆಸ್ಟ್ರೇಲಿಯಾವೇ ಕಪ್ ಗೆಲ್ಲುವ ನೆಚ್ಚಿನ ತಂಡವಾಗಿತ್ತು. ಆದರೆ ತಂಡದ ಕಳಪೆ ಪ್ರದರ್ಶನ ನೋಡುವಾಗ ಆಸೀಸ್ಗಿಂತ ನೆದರ್ಲೆಂಡ್, ಅಫಘಾನಿಸ್ತಾನ ತಂದಡ ಪ್ರದರ್ಶನವೇ ಲೇಸು ಎನಿಸತೊಡಗಿದೆ.
ಇದನ್ನೂ ಓದಿ ENG vs AFG: ಇಂಗ್ಲೆಂಡ್ ವಿರುದ್ಧ ಗೆದ್ದು ದಾಖಲೆ ಬರೆದ ಆಫ್ಘನ್
ಆಸ್ಟ್ರೇಲಿಯಾ ತಂಡದ ವಿಶ್ವಕಪ್ ಹಾದಿ
ಆಸ್ಟ್ರೇಲಿಯಾ ತಂಡ ಮೊದಲ ಬಾರಿ ಚಾಂಪಿಯನ್ ಆದದ್ದು 1987ರ ವಿಶ್ವಕಪ್ ಟೂರ್ನಿಯಲ್ಲಿ. ಚೊಚ್ಚಲ ಆವೃತ್ತಿಯ ವಿಶ್ವಕಪ್ ಟೂರ್ನಿಯಲ್ಲಿ ಆಸಿಸ್ ಫೈನಲ್ ಪ್ರವೇಶ ಪಡೆದಿತ್ತು. ಆದರೆ ಇಲ್ಲಿ ಬಲಿಷ್ಠ ವಿಂಡೀಸ್ ವಿರುದ್ಧ ಮಂಡಿಯೂರಿ ರನ್ನರ್ ಅಪ್ ಆಗಿತ್ತು. 1987ರಲ್ಲಿ ಕಪ್ ಗೆಲ್ಲುವಲ್ಲಿ ಯಶಸ್ಸು ಕಂಡಿತು. ಈ ಟೂರ್ನಿಯ ಆತಿಥ್ಯವನ್ನು ಭಾರತ- ಪಾಕಿಸ್ತಾನ ಜಂಟಿಯಾಗಿ ನಿರ್ವಹಿಸಿದ್ದವು. ಇದು 50 ಓವರ್ಗಳ ಮಾದರಿಯಾಗಿತ್ತು. 8 ತಂಡಗಳು ಪ್ರಶಸ್ತಿಗಾಗಿ ಹೋರಾಟ ನಡೆಸಿದ್ದವು. ರೋಚಕ ಫೈನಲ್‌ನಲ್ಲಿ ಆಸ್ಟ್ರೇಲಿಯಾ 7 ರನ್ಗಳಿಂದ ಆಂಗ್ಲರಿಗೆ ಸೋಲಿನ ಆಘಾತ ನೀಡಿದ್ದರು.
Afghanistan's big win over England earns them two valuable points, shaking up the #CWC23 standings 👊 pic.twitter.com/3ttBfO7LA1
— ICC Cricket World Cup (@cricketworldcup) October 16, 2023
ಇದಾದ ಬಳಿಕ ಆಸೀಸ್ ದ್ವಿತೀಯ ವಿಶ್ವಕಪ್ ಜಯಿಸಿದ್ದು 12 ವರ್ಷಗಳ ಬಳಿಕ. ಇಂಗ್ಲೆಂಡ್‌ನಲ್ಲಿ ನಡೆದ 1999ರ ವಿಶ್ವಕಪ್‌ನಲ್ಲಿ. ಫೈನಲ್‌ನಲ್ಲಿ ಹಾಲಿ ಚಾಂಪಿಯನ್ ಆಗಿದ್ದ ಪಾಕಿಸ್ತಾನವನ್ನು ಕಡೆವಿ ಆಸೀಸ್ ದ್ವಿತೀಯ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. 2ನೇ ಕಪ್ ನಿರೀಕ್ಷೆಯಲ್ಲಿದ್ದ ಪಾಕಿಸ್ತಾನದ ಯೋಜನೆ ವಿಫಲಗೊಂಡಿತು. ಈ ಆವೃತ್ತಿಯಲ್ಲಿ ಒಟ್ಟು 12 ತಂಡಗಳು ಪಾಲ್ಗೊಂಡಿದ್ದವು. ಫೈನಲ್‌ನಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಪಾಕಿಸ್ತಾನ ಅತ್ಯಂತ ಕಳಪೆ ಮಟ್ಟದ ಆಟವಾಡಿ ಕೇವಲ 132 ರನ್ಗೆ ಕುಸಿತ ಕಂಡಿತು. ಆಸ್ಟ್ರೇಲಿಯಾ ಈ ಮೊತ್ತವನ್ನು 2 ವಿಕೆಟ್ ನಷ್ಟಕ್ಕೆ ಬಾರಿಸಿ ಗೆದ್ದು ಬೀಗಿತ್ತು.
ಆಸ್ಟ್ರೇಲಿಯಾ ಮೂರನೇ ವಿಶ್ವಕಪ್ ಎತ್ತಿ ಹಿಡಿದದ್ದು 2003ರಲ್ಲಿ ಸೌರವ್ ಗಂಗೂಲಿ ಸಾರಥ್ಯದ ಭಾರತ ತಂಡ ಅಭೂತಪೂರ್ವ ಪ್ರದರ್ಶನ ತೋರಿ ಫೈನಲ್‌ಗೇರಿತು. ಎಲ್ಲರು ಕೂಡ ಭಾರತ 2ನೇ ಬಾರಿ ವಿಶ್ವಕಪ್ ಗೆಲ್ಲಲಿದೆ ಎಂದು ನಿರೀಕ್ಷೆ ಮಾಡಿದ್ದರು. ಆದರೆ ಫೈನಲ್‌ನಲ್ಲಿ ಸ್ಟಾರ್ ಆಟಗಾರರೆಲ್ಲ ಕೈಕೊಟ್ಟ ಕಾರಣ ಆಸ್ಟ್ರೇಲಿಯಾ ಮೂರನೇ ವಿಶ್ವಕಪ್ ವಿಜಯ ಸಾಧಿಸಿತು. ಭಾರತ ಫೈನಲ್‌ನಲ್ಲಿ 125 ರನ್‌ಗಳ ಸೋಲು ಕಂಡಿತು.
ಹ್ಯಾಟ್ರಿಕ್ ಸಾಧನೆ
2007ರ ವಿಶ್ವಕಪ್ನಲ್ಲಿಯೂ ಆಸ್ಟ್ರೇಲಿಯಾ ತಂಡ ಕಪ್ ಗೆದ್ದು ಹ್ಯಾಟ್ರಿಕ್ ಸಾಧನೆ ಮಾಡಿತು. ಮಳೆ ಪೀಡಿತ ಫೈನಲ್‌ನಲ್ಲಿ ಶ್ರೀಲಂಕಾ ತಂಡವನ್ನು ಆಸೀಸ್ ಡಕ್ವರ್ತ್ ನಿಯಮದ ಪ್ರಕಾರ 53 ರನ್ಗಳಿಂದ ಮಣಿಸಿ ಹ್ಯಾಟ್ರಿಕ್ ವಿಶ್ವಕಪ್‌ಗೆ ಮುತ್ತಿಟ್ಟಿತು. ಒಟ್ಟಾರೆಯಾಗಿ ನಾಲ್ಕನೇ ವಿಶ್ವಕಪ್ ಗೆಲುವು ಇದಾಗಿತ್ತು.
ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ ಜಂಟಿಯಾಗಿ ಆತಿಥ್ಯ ವಹಿಸಿಕೊಂಡ 2015ರ ವಿಶ್ವಕಪ್‌ನಲ್ಲಿ ಉಭಯ ದೇಶಗಳ ಮಧ್ಯೆಯೇ ಫೈನಲ್ ಪಂದ್ಯ ಕೂಡ ಏರ್ಪಟ್ಟಿತ್ತು. ಹಾಲಿ ಚಾಂಪಿಯನ್ ಆಗಿದ್ದ ಭಾರತ ಸೆಮಿಫೈನಲ್ನಲ್ಲಿ ಆಸೀಸ್ ವಿರುದ್ಧ ಸೋಲು ಕಂಡು ನಿರಾಸೆ ಮೂಡಿಸಿತ್ತು. ಫೈನಲ್‌ನಲ್ಲಿ ನ್ಯೂಜಿಲ್ಯಾಂಡ್ ತಂಡವನ್ನು 7 ವಿಕೆಟ್ಗಳಿಂದ ಮಣಿಸಿದ ಆಸೀಸ್ 5ನೇ ಕಿರೀಟ ಗೆದ್ದ ಸಾಧನೆ ಮಾಡಿತು. 2019ರಲ್ಲಿ ಆಸೀಸ್ ಸೆಮಿಫೈನಲ್ ಪ್ರವೇಶ ಪಡೆದಿತ್ತು. ಆದರೆ ಒಮ್ಮೆಯೂ ಆಸೀಸ್ ತಂಡ ಕೊನೆಯ ಸ್ಥಾನಕ್ಕೆ ಕುಸಿತ ಇತಿಹಾಸವೇ ಇರಲಿಲ್ಲ. ಇದೇ ಮೊದಲ ಬಾರಿ 10ನೇ ಸ್ಥಾನ ಪಡೆದಿದ್ದು. ಸದ್ಯ ಮುಂದಿನ 7 ಪಂದ್ಯಗಳಲ್ಲಿ ಸತತ ಗೆಲುವು ಸಾಧಿಸಿದರೆ ಆಸೀಸ್ ಸೆಮಿಫೈನಲ್ ಟಿಕೆಟ್ ಪಡೆಯಬಹುದು. ಕನಿಷ್ಠ ಪಕ್ಷ ಕೊನೆಯ ಸ್ಥಾನದಿಂದಾದರೂ ತಪ್ಪಿಸಿಕೊಳ್ಳಬಹುದು. ಸದ್ಯ ಅಂಕಪಟ್ಟಿಯಲ್ಲಿ ಭಾರತ ಅಗ್ರಸ್ಥಾನ ಪಡೆದರೆ, ನ್ಯೂಜಿಲ್ಯಾಂಡ್ ದ್ವಿತೀಯ, ದಕ್ಷಿಣ ಆಫ್ರಿಕಾ ಮೂರನೇ, ಪಾಕಿಸ್ತಾನ ನಾಲ್ಕನೇ ಸ್ಥಾನ ಪಡೆದಿದೆ.