ಬೆಂಗಳೂರು: ಎರಡೂ ದೇಶಗಳ ನಡುವಿನ ಹದಗೆಟ್ಟ ಸಂಬಂಧ ಹಾಗೂ ದ್ವೇಷಮಯ ವಾತಾವರಣದ ನಡುವೆ ಬದ್ಧ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳ ಮಧ್ಯೆ ಏಕದಿನ ವಿಶ್ವಕಪ್ ಕ್ರಿಕೆಟ್(ICC World Cup 2023) ಸಮರಕ್ಕೆ ಕೊನೆಗೂ ವೇದಿಕೆಯೊಂದು ಸಿದ್ಧವಾಗಿದೆ. ಸಂಪೂರ್ಣವಾಗಿ ಭಾರತದ ಆತಿಥ್ಯದಲ್ಲಿ ಇದೇ ಮೊದಲ ಬಾರಿಗೆ ನಡೆಯುವ ಈ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಮತ್ತು ಪಾಕ್ ತಂಡಗಳು ಲೀಗ್ನ ಮೊದಲ ಪಂದ್ಯವನ್ನು ಅಕ್ಟೋಬರ್ 15ರಂದು ಆಡಲಿದೆ. ಈ ಪಂದ್ಯ ವಿಶ್ವದ ಅತಿ ದೊಡ್ಡ ಕ್ರಿಕೆಟ್ ಸ್ಟೇಡಿಯಂ ಅಹಮದಾಬಾದ್ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ. ಇದಕ್ಕೂ ಮುನ್ನ ಭಾರತ ಮತ್ತು ಪಾಕಿಸ್ತಾನ ನಡುವಿನ ವಿಶ್ವ ಕಪ್ ಮುಖಾಮುಖಿಯ ಇತಿಹಾಸ ಮತ್ತು ಏಳು ಬೀಳಿನ ಸಂಪೂರ್ಣ ಮಾಹಿತಿ ಇಂತಿದೆ.
ವಿಶ್ವಕಪ್ ಇತಿಹಾಸದಲ್ಲಿ ಭಾರತ-ಪಾಕಿಸ್ತಾನ ತಂಡಗಳದ್ದೇ ಒಂದು ಪ್ರತ್ಯೇಕ ಇತಿಹಾಸ! ಬಗೆದಷ್ಟೂ ರೋಚಕ ಅಂಕಿಅಂಶ, ಘಟನಾವಳಿ, ರೋಮಾಂಚನ ಹಾಗೂ ಉದ್ವೇಗದ ಕ್ಷಣಗಳು ಉಕ್ಕಿ ಬರುತ್ತವೆ. ಇವುಗಳಲ್ಲಿ ಪ್ರಮುಖವಾದುದೆಂದರೆ, ಪಾಕಿಸ್ಥಾನ ವಿರುದ್ಧದ ಏಕದಿನ ವಿಶ್ವಕಪ್ ಮುಖಾಮುಖೀಯಲ್ಲಿ ಭಾರತ ಸೋಲರಿಯದ ಸರದಾರನಾಗಿ ಮೆರೆದಿರುವುದು. ಈ ಪ್ರತಿಷ್ಠಿತ ಕೂಟದಲ್ಲಿ ಆಡಿದ ಏಳೂ ಪಂದ್ಯಗಳಲ್ಲಿ ಟೀಮ್ ಇಂಡಿಯಾ ಪಾಕಿಸ್ತಾನವನ್ನು ಮಣ್ಣುಮುಕ್ಕಿಸಿದೆ!. ಇದೀಗ ಎಂಟನೇ ಮುಖಾಮುಖಿಯಲ್ಲಿಯೂ ಅದರಲ್ಲೂ 7 ವರ್ಷಗಳ ಬಳಿಕ ತವರಿನಲ್ಲಿ ಮತ್ತೊಮ್ಮೆ ಸೋಲಿನ ಪಂಚ್ ನೀಡಲು ಭಾರತ ಸಜ್ಜಾಗಿದೆ. ಆದರೆ ಪಾಕ್ ಸವಾಲನ್ನು ಅಷ್ಟು ಸುಲಭವಾಗಿ ಕಡೆಗಣಿಸುವಂತಿಲ್ಲ.
ಇದನ್ನೂ ಓದಿ ಪಾಕ್ ನಾಯಕ ಬಾಬರ್ ಅಜಂ ಹುಟ್ಟುಹಬ್ಬಕ್ಕೂ ವಿಶ್ವಕಪ್ ಟೂರ್ನಿಗೂ ಇದೆ ಅವಿನಾಭಾವ ಸಂಬಂಧ
ಒಟ್ಟಾರೆಯಾಗಿ ಏಕದಿನ ಮತ್ತು ಟಿ20 ಕ್ರಿಕೆಟ್ನಲ್ಲಿ ಪಾಕಿಸ್ತಾನ ವಿರುದ್ಧ ಅಜೇಯ ಓಟ ಕಾಯ್ದುಕೊಂಡು ಬಂದಿದ್ದ ಭಾರತದ ಈ ಸಾಧನೆಯ ಕೊಂಡಿ 2021ರಲ್ಲಿ ಕಳಚಿ ಬಿದ್ದಿತ್ತು. ಭಾರತದ ಆತಿಥ್ಯದಲ್ಲಿ ದುಬೈನಲ್ಲಿ ನಡೆದಿದ್ದ ಈ ಟಿ20 ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ಸಾರಥ್ಯದ ಭಾರತ ತಂಡ 10 ವಿಕೆಟ್ಗಳ ಹೀನಾಯ ಸೋಲು ಕಂಡು, ಮೊದಲ ಬಾರಿಗೆ ವಿಶ್ವಕಪ್ ಕೂಟದಲ್ಲಿ ಪಾಕ್ ವಿರುದ್ಧ ಭಾರತ ಸೋಲು ಕಂಡ ಅವಮಾನಕ್ಕೆ ಸಿಲುಕಿತ್ತು. ಏಕದಿನ ವಿಶ್ವ ಕಪ್ನಲ್ಲಿ ಮಾತ್ರ ಭಾರತ ಇದುವರೆಗೂ ಅಜೇಯ ಸಾಧನೆಯನ್ನು ಕಾಯ್ದುಕೊಂಡಿದೆ.
ಇದನ್ನೂ ಓದಿ ICC World Cup 2023: ಏಕದಿನ ವಿಶ್ವ ಕಪ್ ಟೂರ್ನಿಯ ಸಂಪೂರ್ಣ ವೇಳಾಪಟ್ಟಿ; ಬೆಂಗಳೂರಿನಲ್ಲೂ ಇದೆ ಪ್ರಮುಖ ಪಂದ್ಯ
ಏಳು ಬಾರಿ ವಿಶ್ವ ಕಪ್ ಮುಖಾಮುಖಿ
ಭಾರತ ಮತ್ತು ಪಾಕ್ ಮೊದಲ ಬಾರಿಗೆ ಮಿಶ್ವ ಕಪ್ನಲ್ಲಿ ಮುಖಾಮುಖಿಯಾಗಿದ್ದು 1992ರಲ್ಲಿ ಆ ಬಳಿಕ 1996, 1999, 2003, 2011, 2015, 2019 ಈ ಎಲ್ಲ ಮುಖಾಮುಳಿಯಲ್ಲಿಯೂ ಭಾರತ ಗೆಲುವು ಸಾಧಿಸಿದೆ.
2011ರ ಸೆಮಿಫೈನಲ್
ಭಾರತ ಮತ್ತು ಪಾಕಿಸ್ತಾನ 2011ರ ವಿಶ್ವ ಕಪ್ನ ಸೆಮಿಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗಿದ್ದವು. ಮೊಹಾಲಿಯಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಭಾರತ ತಂಡ ಸಚಿನ್ ತೆಂಡೂಲ್ಕರ್ ಅವರು(88) ಅರ್ಧಶತಕದ ನೆರವಿನಿಂದ 9 ವಿಕೆಟ್ ಕಳೆದುಕೊಂಡು 260 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಪಾಕಿಸ್ತಾನ 49.5 ಓವರ್ಗಳಲ್ಲಿ 231 ರನ್ ರನ್ ಗಳಿಸಲಷ್ಟೇ ಶಕ್ತವಾಗಿ 29 ರನ್ ಅಂತರದಿಂದ ಸೋಲು ಕಂಡಿತ್ತು. ಈ ಪಂದ್ಯದ ಮೊದಲ ಓವರ್ನಲ್ಲೇ ಪಾಕ್ ಬೌಲರ್ ಉಮ್ಮರ್ ಗುಲ್ ಅವರು ಡ್ಯಾಶಿಂಗ್ ಓಪನರ್ ವೀರೇಂದ್ರ ಸೆಹವಾಗ್ ಅವರನ್ನು ಕೆಣಕಿ ಸರಿಯಾಗಿಯೇ ದಂಡಿಸಿಕೊಂಡಿದ್ದರು. ಬೌನ್ಸರ್ ಎಸೆದು ಕೆಣಕಿದ ಗುಲ್ಗೆ ಸತತ ನಾಲ್ಕು ಬೌಂಡರಿ ಬಾರಿಸುವ ಮೂಲಕ ವೀರು ಪ್ರತ್ಯುತ್ತರ ನೀಡಿದ್ದರು. ಈ ಟೂರ್ನಿಯಲ್ಲಿ ಭಾರತ ಗೆದ್ದು 28 ವರ್ಷಗಳ ಬಳಿಕ ಭಾರತ ವಿಶ್ವ ಕಪ್ ಎತ್ತಿ ಹಿಡಿದಿತ್ತು. ಇದೀಗ 8 ಐಸಿಸಿ ಟ್ರೋಫಿಗಳನ್ನು ಕಳೆದುಕೊಂಡಿರುವ ಭಾರತ ಈ ಟೂರ್ನಿಯಲ್ಲಿ ಗೆದ್ದು ಐಸಿಸಿ ಟ್ರೋಫಿಯ ಕೊರಗನ್ನು ಹೋಗಲಾಡಿಸುವ ಯೋಜನೆಯಲ್ಲಿದೆ.