ಅಹಮದಾಬಾದ್: 46 ದಿನಗಳ ಕಾಲ ನಡೆದ ವಿಶ್ವಕಪ್(ICC World Cup 2023) ಕಪ್ನ ಮಹಾಸಮರ ಮುಕ್ತಾಯ ಕಂಡಿದೆ. ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಗೆದ್ದು ಚಾಂಪಿಯನ್ ಪಟ್ಟ ಅಲಂಕರಿಸಿದೆ. ಮುಂದಿನ 4 ವರ್ಷಗಳ ಕಾಲ ಏಕದಿನ ಕ್ರಿಕೆಟ್ಗೆ ಸಾಮ್ರಾಟನಾಗಿ ಮೆರೆದಾಡಲಿದ್ದಾರೆ. ಈ ಬಾರಿಯ ಟೂರ್ನಿಯಲ್ಲಿ ಅತ್ಯಧಿಕ ರನ್ ಗಳಿಸಿದ ಸಾದಕರ ಪಟ್ಟಿಯೊಂದು ಇಲ್ಲಿದೆ.
ವಿರಾಟ್ ಕೊಹ್ಲಿ
ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ಬ್ಯಾಟಿಂಗ್ ವಿರಾಟ ದರ್ಶನ ತೋರಿದ ಕೊಹ್ಲಿ ಟೂರ್ನಿಯ ಟಾಪ್ ಸ್ಕೋರರ್ ಆಗಿ ಹೊರಮೊಮ್ಮಿದ್ದಾರೆ. ಅಲ್ಲದೆ ತಮ್ಮ ಹೆಸರಿಗೆ ನಾನಾ ದಾಖಲೆಗಳನ್ನೂ ಬರೆಸಿಕೊಂಡಿದ್ದಾರೆ. ಆಸೀಸ್ ವಿರುದ್ಧದ ಮೊದಲ ಲೀಗ್ ಪಂದ್ಯದಲ್ಲಿ ಕುಸಿದಿದ್ದ ಭಾರತ ತಂಡಕ್ಕೆ ಆಸರೆಯಾದ ಕೊಹ್ಲಿ 85 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದ್ದರು. ಅಫಘಾನಿಸ್ತಾನ ವಿರುದ್ಧ ನಡೆದ 2ನೇ ಪಂದ್ಯದಲ್ಲಿ ಕೊಹ್ಲಿ 55 ರನ್ ಬಾರಿಸಿದ್ದರು. ಬಾಂಗ್ಲಾ ವಿರುದ್ಧ ಅಮೋಘ ಪ್ರದರ್ಶನ ನೀಡಿದ ಕೊಹ್ಲಿ 97 ಎಸೆತಗಳಲ್ಲಿ 103 ರನ್ ಗಳಿಸಿದರು. ನ್ಯೂಜಿಲ್ಯಾಂಡ್ ವಿರುದ್ಧ 95 ರನ್ ಗಳಿಸಿ ಐದು ರನ್‌ನಿಂದ ಶತಕ ವಂಚಿತರಾದರು. ಶ್ರೀಲಂಕಾ ವಿರುದ್ಧ 88, ದಕ್ಷಿಣ ಆಫ್ರಿಕಾ ವಿರುದ್ಧ 101 ರನ್ ಗಳಿಸಿ ಸಚಿನ್ ಅವರ 49ನೇ ಶತಕವನ್ನು ಸರಿಗಟ್ಟಿದ್ದರು. ನೆದರ್ಲೆಂಡ್ಸ್ ವಿರುದ್ಧ 51 ರನ್ ಗಳಿಸಿದರು. ನ್ಯೂಜಿಲ್ಯಾಂಡ್ ವಿರುದ್ಧದ ಸೆಮಿಫೈನಲ್‌ನಲ್ಲಿ 117 ರನ್ ಗಳಿಸಿದ ಕೊಹ್ಲಿ, ಸಚಿನ್ ಅವರ ದಾಖಲೆ ಮುರಿದು 50ನೇ ಸೆಂಚುರಿ ಬಾರಿಸಿ ದಾಖಲೆ ನಿರ್ಮಿಸಿದರು. ಫೈನಲ್ ಪಂದ್ಯದಲ್ಲಿ 54 ರನ್ ಬಾರಿಸಿದರು. ಈ ಬಾರಿ ಆಡಿದ 11 ಪಂದ್ಯಗಳಲ್ಲಿ 765 ರನ್ ಬಾರಿಸಿದರು.
ರೋಹಿತ್ ಶರ್ಮ
ಟೂರ್ನಿಯುದ್ದಕ್ಕೂ ಆಕ್ರಮಣಕಾರಿ ಬ್ಯಾಟಿಂಗ್ ಶೈಲಿಯಲ್ಲಿ ಆಡಿದ ರೋಹಿತ್ ಶರ್ಮ ಅವರು ಈ ಬಾರಿಯ ಟೂರ್ನಿಯಲ್ಲಿ ಅತ್ಯಧಿಕ ರನ್ ಗಳಿಸಿದ ಆಟಗಾರ ಪಟ್ಟಿಯಲ್ಲಿ 2ನೇ ಸ್ಥಾನ ಪಡೆದರು. ಹಿಟ್‌ಮ್ಯಾನ್ ಖ್ಯಾತಿಗೆ ತಕ್ಕ ಆಡಿದ ಅವರು ವಿಶ್ವಕಪ್‌ನ ಬಹುತೇಕ ಎಲ್ಲ ಪಂದ್ಯಗಳಲ್ಲೂ ತಂಡಕ್ಕೆ ಅತ್ಯಂತ ಭದ್ರ ಬುನಾದಿ ಹಾಕಿಕೊಟ್ಟಿದ್ದಾರೆ. ಆಸೀಸ್ ವಿರುದ್ಧದ ಆರಂಭಿಕ ಪಂದ್ಯದಲ್ಲಿ ವೈಫಲ್ಯ ಕಂಡಿದ್ದು ಬಿಟ್ಟರೆ ಉಳಿದ ಎಲ್ಲ ಪಂದ್ಯಗಳಲ್ಲಿಯೂ ಶ್ರೇಷ್ಠ ಪ್ರದರ್ಶನ ತೋರಿದ್ದಾರೆ. ಅಫಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ 84 ಎಸೆತಗಳಲ್ಲಿ 131 ರನ್ ಬಾರಿಸಿ ವಿಶ್ವಕಪ್ನಲ್ಲಿ ಅತ್ಯಧಿಕ 7 ಶತಕ ಬಾರಿಸಿದ ಸಾಧನೆ ಮಾಡಿದ್ದರು. ಪಾಕಿಸ್ತಾನ ವಿರುದ್ಧ 51, ಬಾಂಗ್ಲಾದೇಶ ವಿರುದ್ಧ 48, ನ್ಯೂಜಿಲ್ಯಾಂಡ್ ವಿರುದ್ಧ 46, ಇಂಗ್ಲೆಂಡ್ ವಿರುದ್ಧ 87, ದಕ್ಷಿಣ ಆಫ್ರಿಕಾ ವಿರುದ್ಧ 40, ನೆದರ್ಲೆಂಡ್ಸ್ ವಿರುದ್ಧ 61 ರನ್ ಗಳಿಸಿದರು. ಸೆಮಿಫೈನಲ್‌ನಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ 47 ರನ್ ಗಳಿಸಿದ ರೋಹಿತ್ ಫೈನಲ್ ಪಂದ್ಯದಲ್ಲಿಯೂ 47 ರನ್‌ಗಳಿದರು. ಒಟ್ಟಾರೆ ಅವರು ಆಡಿದ 11 ಪಂದ್ಯಗಳಲ್ಲಿ 597 ರನ್ ಬಾರಿಸಿದರು.
ಕ್ವಿಂಟನ್ ಡಿ ಕಾಕ್
ವಿಶ್ವಕಪ್ ಆಡಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ ದಕ್ಷಿಣ ಆಫ್ರಿಕಾದ ಕ್ವಿಂಟನ್ ಡಿ ಕಾಕ್ ಅವರು ಈ ಬಾರಿಯ ವಿಶ್ವಕಪ್ನಲ್ಲಿ 4 ಶತಕ ಬಾರಿಸಿ ಮಿಂಚಿದರು. ಅತ್ಯಧಿಕ ರನ್ ಗಳಿಸಿದವರ ಯಾದಿಯಲ್ಲಿ ಅವರಿಗೆ ಮೂರನೇ ಸ್ಥಾನ. ಒಟ್ಟು 10 ಪಂದ್ಯಗಳನ್ನು ಆಡಿದ ಡಿ ಕಾಕ್ 594 ರನ್ ಬಾರಿಸಿದರು. ಶ್ರೀಲಂಕಾ ವಿರುದ್ಧ ಆಡಿದ ಮೊದಲ ಲೀಗ್ ಪಂದ್ಯದಲ್ಲಿ ಶತಕ, 2ನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧವೂ ಶತಕ ಬಾರಿಸಿ ಬ್ಯಾಕ್ ಟು ಬ್ಯಾಕ್ ಶತಕ ಬಾರಿಸಿದ್ದರು. ಇದಾದ ಬಳಿಕ ಮತ್ತೆ ಬಾಂಗ್ಲಾದೇಶ ಮತ್ತು ನ್ಯೂಜಿಲ್ಯಾಂಡ್ ವಿರುದ್ಧವೂ ಶತಕ ಬಾರಿಸಿದ್ದರು. ಬಾಂಗ್ಲಾ ವಿರುದ್ಧ 174 ರನ್ ಬಾರಿಸಿದ್ದು ಅವರ ವೈಯಕ್ತಿಕ ಗರಿಷ್ಠ ಮೊತ್ತವಾಗಿದೆ.
ಇದನ್ನೂ ಓದಿ IND vs AUS Final: ಭಾರತಕ್ಕೆ ಮತ್ತೆ ಕಂಟಕವಾದ ಅಂಪೈರ್; ನಿರೀಕ್ಷೆಯಂತೆ ಈ ಬಾರಿಯೂ ಸೋಲು
ರಚಿನ್ ರವೀಂದ್ರ
ಕರ್ನಾಟಕ ಮೂಲಕ ನ್ಯೂಜಿಲ್ಯಾಂಡ್ ಆಟಗಾರ ರಚಿನ್ ರವೀಂದ್ರ ಅವರು ಈ ಬಾರಿಯ ವಿಶ್ವಕಪ್ನಲ್ಲಿ ಅಮೋಘ ಬ್ಯಾಟಿಂಗ್ ನಡೆಸಿ ಮಿಂಚಿದರು. ಚೊಚ್ಚಲ ಬಾರಿ ವಿಶ್ವಕಪ್ನಲ್ಲಿ ಆಡಲಿಳಿದ ಅವರು 3 ಶತಕ ಬಾರಿಸಿ ಗಮನಸೆಳೆದರು. ಅಲ್ಲದೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಸೇರಿ ಅನೇಕರ ದಾಖಲೆಗಳನ್ನು ಮುರಿದಿದ್ದರು. ಒಟ್ಟಾರೆ ಅವರು 10 ಪಂದ್ಯಗಳನ್ನು ಆಡಿ 578 ರನ್ ಬಾರಿಸಿದರು.
ಡ್ಯಾರಿಲ್ ಮಿಚೆಲ್
ನ್ಯೂಜಿಲ್ಯಾಂಡ್ ತಂಡದ ಮಧ್ಯಮ ಕ್ರಮಾಂಕದ ಆಟಗಾರ ಡೇರಿಲ್ ಮಿಚೆಲ್ ಅವರು ಈ ಬಾರಿ ಅನೇಕ ಪಂದ್ಯಗಳಲ್ಲಿ ಕಿವೀಸ್ಗೆ ಆಪತ್ಬಾಂಧವರಾಗಿ ನೆರವಾಗಿದ್ದರು. ಭಾರತ ವಿರುದ್ಧ ಲೀಗ್ ಮತ್ತು ಸೆಮಿಫೈನಲ್ ಪಂದ್ಯದಲ್ಲಿ ಶತಕ ಬಾರಿಸಿ ಮಿಂಚಿದ್ದರು. ಒಟ್ಟಾರೆ ಅವರು ಆಡಿದ 10 ಪಂದ್ಯಗಳಿಂದ 552 ರನ್ ಬಾರಿಸಿದ್ದಾರೆ.