Site icon Vistara News

ICC World Cup 2023: ವಿಶ್ವಕಪ್ ಕ್ರಿಕೆಟ್‌‌ ಪಂದ್ಯಾವಳಿಯಲ್ಲಿ ಭಾರತ ಗೆದ್ದರೂ ಪಟಾಕಿ ಸಿಡಿಸುವಂತಿಲ್ಲ: ಎಲ್ಲಿ ಈ ನಿಷೇಧ?

icc world cup fire works

ಹೊಸದಿಲ್ಲಿ: ಗುರುವಾರ ಹಾಗೂ ಸೋಮವಾರ ಮುಂಬಯಿ ಮತ್ತು ದೆಹಲಿಯಲ್ಲಿ ವಿಶ್ವಕಪ್‌ ಕ್ರಿಕೆಟ್‌ (ICC World Cup 2023) ಪಂದ್ಯಗಳು ನಡೆಯಲಿದ್ದು, ಈ ಸಂದರ್ಭದಲ್ಲಿ ಗೆಲುವಿನ ಸಂಭ್ರಮಾಚರಣೆಗೆ ಪಟಾಕಿ ಸಿಡಿಸುವುದನ್ನು ಬಿಸಿಸಿಐ (BCCI) ಬ್ಯಾನ್‌ (Crackers ban) ಮಾಡಿದೆ.

ಬಾಂಬೆ ಹೈಕೋರ್ಟ್ (Bombay high court) ಮುಂಬೈನ ಗಾಳಿಯ ಗುಣಮಟ್ಟವನ್ನು ಗಮನಿಸಿ ಸ್ವಯಂಪ್ರೇರಿತವಾಗಿ ವಿಚಾರಣೆ ಪ್ರಕ್ರಿಯೆ ಪ್ರಾರಂಭಿಸಿದ ಬಳಿಕ ಬಿಸಿಸಿಐ ಈ ನಿರ್ಧಾರವನ್ನು ತಿಳಿಸಿದೆ. ಎರಡೂ ನಗರಗಳಲ್ಲಿ ವಾಯುವಿನ ಗುಣಮಟ್ಟ ತೀವ್ರವಾಗಿ ಕುಸಿದಿರುವ ಹಿನ್ನೆಲೆಯಲ್ಲಿ, ಈ ನಗರಗಳಲ್ಲಿ ನಡೆಯಲಿರುವ ಮುಂಬರುವ ಪಂದ್ಯಗಳ ಸಂದರ್ಭದಲ್ಲಿ ಪಟಾಕಿ ಸಿಡಿಸುವುದರಿಂದ ದೂರವುಳಿಯಲು ಬಿಸಿಸಿಐ ನಿರ್ಧರಿಸಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ಹೇಳಿದ್ದಾರೆ.

ಗುರುವಾರ ಮುಂಬಯಿಯ ವಾಂಖೆಡೆ ಸ್ಟೇಡಿಯಂನಲ್ಲಿ ಭಾರತ ಶ್ರೀಲಂಕಾ ಮುಖಾಮುಖಿಯಾಗಲಿದ್ದು, ಸೋಮವಾರ ದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ಬಾಂಗ್ಲಾದೇಶ ಮತ್ತು ಶ್ರೀಲಂಕಾ ಮುಖಾಮುಖಿಯಾಗಲಿವೆ. ಮುಂಬಯಿಯಲ್ಲಿ ಇನ್ನೂ ಎರಡು ಪಂದ್ಯಗಳು ನಡೆಯಲಿವೆ. ನವೆಂಬರ್ 7ರಂದು ಮತ್ತು ಸೆಮಿಫೈನಲ್ ನವೆಂಬರ್ 15ರಂದು ಆಯೋಜಿಸಲಾಗಿದೆ.

“ಈ ವಿಷಯವನ್ನು ಐಸಿಸಿಗೆ ಔಪಚಾರಿಕವಾಗಿ ತಿಳಿಸಲಾಗಿದೆ. ಮುಂಬಯಿ ಮತ್ತು ದೆಹಲಿಯಲ್ಲಿ ಯಾವುದೇ ಪಟಾಕಿ ಪ್ರದರ್ಶನ ಇರುವುದಿಲ್ಲ. ಪಟಾಕಿ ಸಿಡಿಸುವುದರಿಂದ ಮಾಲಿನ್ಯದ ಮಟ್ಟ ಹೆಚ್ಚಾಗಬಹುದು. ಮಂಡಳಿಯು ಪರಿಸರ ಮಾಲಿನ್ಯದ ಸಮಸ್ಯೆಗಳ ಬಗ್ಗೆ ಸೂಕ್ಷ್ಮತೆ ಹೊಂದಿದೆ” ಎಂದು ಜಯ್‌ ಶಾ ಹೇಳಿದ್ದಾರೆ.

ಮುಂಬೈ ಮತ್ತು ನವದೆಹಲಿ ಎರಡೂ ಕಡೆ ಗಾಳಿಯ ಗುಣಮಟ್ಟದ ಬಗೆಗೆ ಬಿಸಿಸಿಐ ಕಾಳಜಿ ವ್ಯಕ್ತಪಡಿಸಿದೆ. ಕ್ರಿಕೆಟ್‌ನ ಸಂಭ್ರಮಾಚರಣೆಗೆ ಸೂಕ್ತವಾದ ರೀತಿಯಲ್ಲಿ ಐಸಿಸಿ ವಿಶ್ವಕಪ್ ಅನ್ನು ಆಯೋಜಿಸಲು ನಾವು ಶ್ರಮಿಸುತ್ತೇವೆ. ಹಾಗೆಯೇ ಆರೋಗ್ಯ ಮತ್ತು ಸುರಕ್ಷತೆಗೆ ಆದ್ಯತೆ ನೀಡಲು ನಾವು ಬದ್ಧರಾಗಿದ್ದೇವೆ ಎಂದಿದ್ದಾರೆ ಶಾ.

ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ದತ್ತಾಂಶದ ಪ್ರಕಾರ, ಮಂಗಳವಾರ ಮುಂಬಯಿಯಲ್ಲಿ ಗಾಳಿಯ ಗುಣಮಟ್ಟದ ಎಕ್ಯೂಐ (AQI) ರೀಡಿಂಗ್ 172 (ಮಧ್ಯಮ) ಆಗಿದ್ದು, ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿ 260ರ ಆತಂಕಕಾರಿ ಮಟ್ಟವನ್ನು ಮುಟ್ಟಿದೆ. ದೆಹಲಿಯಲ್ಲಿ, ಈ ಅಕ್ಟೋಬರ್‌ನ ಗಾಳಿಯ ಗುಣಮಟ್ಟವು 2020ರಿಂದ ಕೆಟ್ಟದಾಗಿದೆ. ಮುಂಬೈ ಮತ್ತು ದೆಹಲಿಯನ್ನು ಪಟಾಕಿ ಮುಕ್ತ ಮಾಡುವ ಮೂಲಕ ಕ್ರಿಕೆಟ್ ಮಂಡಳಿಯು ಉತ್ತಮ ಸಂದೇಶ ನೀಡುತ್ತಿದೆ ಎಂದು ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. “ಇದು ಸಾರ್ವಜನಿಕ ಹಿತಾಸಕ್ತಿ ನಡೆಯಾಗಿದ್ದು ನಾಗರಿಕರಲ್ಲಿ ಪರಿಸರ ಜಾಗೃತಿಯನ್ನು ಹೆಚ್ಚಿಸುತ್ತದೆ. ಗಮನಾರ್ಹವಾದ ಸಾಮಾಜಿಕ ಬದಲಾವಣೆಯನ್ನು ತರುವ ಮಾರ್ಗವಾಗಿದೆ” ಎಂದಿದ್ದಾರೆ.

ಏಕದಿನ ವಿಶ್ವಕಪ್ ಪಂದ್ಯಗಳ ವೇಳೆ ಪಟಾಕಿ ಸಿಡಿಸುವುದು ಸಂಭ್ರಮದ ಒಂದು ಭಾಗವಾಗಿದೆ. ಲೈಟ್‌ ಶೋ, ಸಿಡಿಮದ್ದಿನ ಪ್ರದರ್ಶನ ಸಾಕಷ್ಟು ಗಮನ ಸೆಳೆಯುತ್ತದೆ. ಬಾಂಬೆ ಹೈಕೋರ್ಟ್ ಮಂಗಳವಾರ ಮುಂಬೈನಲ್ಲಿನ “ಹದಗೆಡುತ್ತಿರುವ” ವಾಯು ಗುಣಮಟ್ಟ ಸೂಚ್ಯಂಕದ ಬಗ್ಗೆ ಕಳವಳ ವ್ಯಕ್ತಪಡಿಸಿತ್ತು. ಈ ಸಮಸ್ಯೆಯ ಬಗ್ಗೆ ಸ್ವಯಂಪ್ರೇರಿತವಾಗಿ (ಸ್ವತಃ) ವಿಚಾರಣೆಯನ್ನು ಕೈಗೆತ್ತಿಕೊಂಡಿತ್ತು.

ಐಸಿಸಿ ವಿಶ್ವಕಪ್‌ನಲ್ಲಿ ಭಾರತ ಇದುವರೆಗೆ ಆಡಿರುವ ಎಲ್ಲಾ ಆರು ಪಂದ್ಯಗಳನ್ನು ಗೆದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ಅನುಸರಿಸುತ್ತವೆ. ಹಾಲಿ ಚಾಂಪಿಯನ್ ಇಂಗ್ಲೆಂಡ್ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.

ಇದನ್ನೂ ಓದಿ: ICC World Cup 2023: ವಿಶ್ವಕಪ್​ನಲ್ಲಿ ಆಸೀಸ್​ ಹಿಂದಿಕ್ಕಿ ಅನಗತ್ಯ ದಾಖಲೆ ಬರೆದ ಇಂಗ್ಲೆಂಡ್​

Exit mobile version