ಬೆಂಗಳೂರು: ಪ್ರತಿ ಬಾರಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿ ಸಮೀಪಿಸಿದಾಗಲೂ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಕುರಿತು ಚರ್ಚೆಯಾಗುತ್ತದೆ. ಪ್ರತಿ ಬಾರಿ ಚರ್ಚೆಯಾಗಲು ದಕ್ಷಿಣ ಆಫ್ರಿಕಾ ತಂಡ ಬಲಿಷ್ಠವಾಗಿದೆ, ಈ ಬಾರಿ ಗೆಲ್ಲುವ ಫೇವರಿಟ್ ತಂಟಗಳಲ್ಲಿ ಒಂದಾಗಿದೆ ಎಂಬ ಮಾತುಗಳೇ ಕೇಳಿಬರುತ್ತವೆ. ಆದರೆ, ಪ್ರತಿ ಬಾರಿ ವಿಶ್ವಕಪ್ ಟೂರ್ನಿ ಮುಗಿದಾಗಲೂ ಬೇರೊಂದು ತಂಡ ಗೆದ್ದು, ಆ ತಂಡದ ಕುರಿತು, ಫೈನಲ್‌ಗೆ ತಲುಪಿದ ಟೀಮ್ ಕುರಿತು ಚರ್ಚೆಯಾಗುತ್ತದೆ. ಆ ಮೂಲಕ ದಕ್ಷಿಣ ಆಫ್ರಿಕಾ ತಂಡವು ಟೂರ್ನಿಯಿಂದ, ಚರ್ಚೆಯಿಂದ ಹೊರಗುಳಿಯುತ್ತದೆ. ಆದರೆ, ಹೊಸ ಹುರುಪಿನೊಂದಿಗೆ ಈ ಬಾರಿಯ ವಿಶ್ವಕಪ್‌ಗಾಗಿ (ICC World Cup 2023) ತೆಂಬ ಬವುಮಾ ತಂಡವು ಭಾರತಕ್ಕೆ ಆಗಮಿಸಿದೆ. ಹಾಗಾದರೆ, ದಕ್ಷಿಣ ಆಫ್ರಿಕಾ ತಂಡದ (South Africa Cricket Team Squad) ಬಲ ಯಾವುದರಲ್ಲಿ ಅಡಗಿದೆ? ಯಾವ ವಿಭಾಗದಲ್ಲಿ ದುರ್ಬಲ ಎನಿಸುತ್ತದೆ? ತಂಡದ ಸಮತೋಲನ ಹೇಗಿದೆ ಎಂಬುದರ ಮಾಹಿತಿ ಹೀಗಿದೆ.
ದಕ್ಷಿಣ ಆಫ್ರಿಕಾ ತಂಡ
ತೆಂಬ ಬವುಮಾ (ಕ್ಯಾಪ್ಟನ್), ಗೆರಾಲ್ಡ್ ಚೊಯೆಟ್ಜೀ, ಕ್ವಿಂಟನ್ ಡಿ ಕಾಕ್, ರೀಜಾ ಹೆಂಡ್ರಿಕ್ಸ್, ಮ್ಯಾಕ್ರೊ ಜಾನ್ಸೆನ್, ಹೆನ್ರಿಚ್ ಕ್ಲಾಸೀನ್, ಲಿಜಾಡ್ ವಿಲಿಯಮ್ಸ್, ಕೇಶವ ಮಹರಾಜ್, ಐಡೆನ್ ಮ್ಯಾರ್ಕ್ರಮ್, ಡೇವಿಡ್ ಮಿಲ್ಲರ್, ಲುಂಗಿ ಎನ್‌ಗಿಡಿ, ಆಂಡೈಲ್ ಫೆಖ್ಲುಕ್ವಾಯೋ, ಕಾಗಿಸೋ ರಬಾಡ, ಟಬ್ರೈಜ್ ಶಮ್ಸಿ, ರಸ್ಸೀ ವ್ಯಾ ಡೆರ್ ಡುಸೇನ್.
ದಕ್ಷಿಣ ಆಫ್ರಿಕಾ ತಂಡದ ಪಂದ್ಯಗಳ ವೇಳಾಪಟ್ಟಿ
ಮಧ್ಯಾಹ್ನ 2 ಗಂಟೆ | ದಕ್ಷಿಣ ಆಫ್ರಿಕಾ vs ಶ್ರೀಲಂಕಾ | ಅಕ್ಟೋಬರ್ 7 |
ಮಧ್ಯಾಹ್ನ 2 ಗಂಟೆ | ದಕ್ಷಿಣ ಆಫ್ರಿಕಾ vs ಆಸ್ಟ್ರೇಲಿಯಾ | ಅಕ್ಟೋಬರ್ 11 |
ಮಧ್ಯಾಹ್ನ 2 ಗಂಟೆ | ದಕ್ಷಿಣ ಆಫ್ರಿಕಾ vs ನೆದರ್ಲೆಂಡ್ಸ್ | ಅಕ್ಟೋಬರ್ 17 |
ಮಧ್ಯಾಹ್ನ 2 ಗಂಟೆ | ದಕ್ಷಿಣ ಆಫ್ರಿಕಾ vs ಇಂಗ್ಲೆಂಡ್ | ಅಕ್ಟೋಬರ್ 21 |
ಮಧ್ಯಾಹ್ನ 2 ಗಂಟೆ | ದಕ್ಷಿಣ ಆಫ್ರಿಕಾ vs ಬಾಂಗ್ಲಾದೇಶ | ಅಕ್ಟೋಬರ್24 |
ಮಧ್ಯಾಹ್ನ 2 ಗಂಟೆ | ದಕ್ಷಿಣ ಆಫ್ರಿಕಾ vs ಪಾಕಿಸ್ತಾನ | ಅಕ್ಟೋಬರ್ 27 |
ಮಧ್ಯಾಹ್ನ 2 ಗಂಟೆ | ದಕ್ಷಿಣ ಆಫ್ರಿಕಾ vs ನ್ಯೂಜಿಲ್ಯಾಂಡ್ | ನವೆಂಬರ್ 1 |
ಮಧ್ಯಾಹ್ನ 2 ಗಂಟೆ | ದಕ್ಷಿಣ ಆಫ್ರಿಕಾ vs ಭಾರತ | ನವೆಂಬರ್ 5 |
ಮಧ್ಯಾಹ್ನ 2 ಗಂಟೆ | ದಕ್ಷಿಣ ಆಫ್ರಿಕಾ vs ಅಫಘಾನಿಸ್ತಾನ | ನವೆಂಬರ್ 10 |
ಇದನ್ನೂ ಓದಿ: ICC World Cup 2023: ವಿಶ್ವಕಪ್‌ಗೆ ನ್ಯೂಜಿ’ಲ್ಯಾಂಡ್’; ತಂಡದ ಸ್ಟ್ರೆಂತ್ ಏನು? ವೀಕ್‌ನೆಸ್ ಏನೇನು?
ದಕ್ಷಿಣ ಆಫ್ರಿಕಾ ತಂಡದ ಬಲ
- ಬ್ಯಾಟಿಂಗೇ ದಕ್ಷಿಣ ಆಫ್ರಿಕಾ ತಂಡದ ಬಲವಾಗಿದೆ. ಐಡೆನ್ ಮ್ಯಾರ್ಕ್ರಮ್, ಹೆನ್ರಿಚ್ ಕ್ಲಾಸೆನ್ ಹಾಗೂ ಡೇವಿಡ್ ಮಿಲ್ಲರ್ ಮಧ್ಯಮ ಕ್ರಮಾಂಕದ ಆಧಾರ ಸ್ತಂಭವಾಗಿದ್ದಾರೆ. ಈ ಮೂವರು ಆಟಗಾರರ ಸ್ಟ್ರೈಕ್‌ರೇಟ್ 100ಕ್ಕಿಂತ ಜಾಸ್ತಿ ಇದೆ. ಯಾವುದೇ ಕ್ಷಣದಲ್ಲಿ ಬೇಕಾದರೂ ಇವರು ಪಂದ್ಯದ ಗತಿ ಬದಲಾಯಿಸಲಿದ್ದಾರೆ. ಕ್ವಿಂಟನ್ ಡಿ ಕಾಕ್, ತೆಂಬ ಬವುಮಾ ಕೂಡ ಉತ್ತಮ ಆರಂಭ ಒದಗಿಸಲು ಸಜ್ಜಾಗಿದ್ದಾರೆ.
- ಉಪಖಂಡದ ಪಿಚ್‌ಗಳಲ್ಲಿ ಸ್ಪಿನ್ನರ್‌ಗಳ ಅಬ್ಬರ ಜೋರಾಗಿದ್ದು, ದಕ್ಷಿಣ ಆಫ್ರಿಕಾ ತಂಡವು ಕೇಶವ್ ಮಹಾರಾಜ್ ಹಾಗೂ ಟಬ್ರೈಜ್ ಶಮ್ಸಿ ಅವರು ಅಬ್ಬರಿಸಿ ಬೊಬ್ಬಿರಿಯಲು ಭಾರತಕ್ಕೆ ಆಗಮಿಸಿದ್ದಾರೆ. ವೇಗಿಗಳಿಗಿಂತ ದಕ್ಷಿಣ ಆಫ್ರಿಕಾ ಸ್ಪಿನ್ನರ್‌ಗಳ ಮೇಲೆ ಈಗ ಹೆಚ್ಚು ನಿರೀಕ್ಷೆ ಇದೆ.
- ತೆಂಬ ಬವುಮಾ ಅವರು ಶಾಂತಚಿತ್ತತೆಯಿಂದ ತಂಡವನ್ನು ನಿಭಾಯಿಸುವ ರೀತಿ, ಕಾಗಿಸೋ ರಬಾಡ ಹಾಗೂ ಲುಂಗಿ ಎನ್‌ಗಿಡಿ ಅವರ ವೇಗದ ಬೌಲಿಂಗ್ ಅಟ್ಯಾಕ್ ಕೂಡ ದಕ್ಷಿಣ ಆಫ್ರಿಕಾಗೆ ಬಲವಾಗಿದೆ.
ಬವುಮಾ ಪಡೆಯ ದೌರ್ಬಲ್ಯಗಳು
- ಸ್ಪಿನ್ನರ್‌ಗಳಿಗೆ ಹೆಚ್ಚು ನೆರವಾಗುವ ಭಾರತದ ಪಿಚ್‌ಗಳಲ್ಲಿ ಕೇಶವ್ ಮಹಾರಾಜ್ ಅವರಿಗೆ ಸಾಥ್ ನೀಡುವ ಸಮರ್ಥ ಸ್ಪಿನ್ನರ್ ಕೊರತೆಯನ್ನು ದಕ್ಷಿಣ ಆಫ್ರಿಕಾ ಎದುರಿಸುತ್ತಿದೆ. ಟಬ್ರೈಜ್ ಶಮ್ಸಿ ಇದ್ದರೂ ಅನುಭವದ ಕೊರತೆ ಎದ್ದು ಕಾಣುತ್ತಿದೆ. ಮ್ಯಾರ್ಕ್ರಮ್ ಅವರು ಸಾಥ್ ನೀಡಿದರೆ ಮಾತ್ರ ದಕ್ಷಿಣ ಆಫ್ರಿಕಾ ಸ್ಪಿನ್ ಬೌಲಿಂಗ್ ಸುಧಾರಿಸುತ್ತದೆ.
- ಭಾರತದ ಪಿಚ್‌ಗಳಲ್ಲಿ ಓಪನರ್ ಕ್ವಿಂಟನ್ ಡಿ ಕಾಕ್ ಇದುವರೆಗೆ ದಕ್ಷಿಣ ಆಫ್ರಿಕಾಗೆ ಹೆಚ್ಚು ನೆರವಾಗದಿರುವುದು ತೆಂಬ ಬವುಮಾ ಅವರಿಗೆ ತಲೆನೋವಾಗಿದೆ. ಕ್ವಿಂಟನ್ ಡಿ ಕಾಕ್ ಐಪಿಎಲ್ ಆಡಿದರೂ, ವಿಶ್ವಕಪ್‌ನಲ್ಲಿ ಅವರು ಹೇಗೆ ಆಡಲಿದ್ದಾರೆ ಎಂಬುದು ಕುತೂಹಲ ಕೆರಳಿಸಿದೆ. ಇನ್ನೂ ರೀಜಾ ಹೆಂಡ್ರಿಕ್ಸ್ ಹಾಗೂ ರಸ್ಸೀ ವ್ಯಾನ್ ಡೆರ್ ಡುಸೇನ್ ಅವರ ಬ್ಯಾಟಿಂಗ್ ಸುಧಾರಿಸಬೇಕಿದೆ.
- ಕಳೆದ ಒಂದು ವರ್ಷದಲ್ಲಿ ತಂಡದ ಸ್ಥಿರ ಪ್ರದರ್ಶನದ ಕೊರತೆ, ಡೆತ್ ಓವರ್‌ಗಳಲ್ಲಿ ದುಬಾರಿಯಾಗುವುದು, ಇನ್ನೇನು ಪಂದ್ಯ ಗೆದ್ದೇಬಿಟ್ಟರು ಎನ್ನುವಷ್ಟರಕ್ಕೆ ಗೊಂದಲಕ್ಕೆ ಒಳಗಾಗಿ ಪಂದ್ಯ ಕೈಚೆಲ್ಲುವುದನ್ನು ಬಿಟ್ಟರೆ ಮಾತ್ರ ದಕ್ಷಿಣ ಆಫ್ರಿಕಾ ತಂಡಕ್ಕೆ ಚೋಕರ್ಸ್ ಎಂಬ ಹಣೆಪಟ್ಟಿ ಕಿತ್ತೆಸೆಯಲು ಸಾಧ್ಯವಾಗಲಿದೆ.
ಇದನ್ನೂ ಓದಿ: ICC World Cup 2023 : ವಿಶ್ವ ಕಪ್ ಆಡುವ ಆಸ್ಟ್ರೇಲಿಯಾ ತಂಡದ ಬಲಾಬಲದ ಕುರಿತ ವಿವರಣೆ ಇಲ್ಲಿದೆ
ವಿಶ್ವಕಪ್ ಟೂರ್ನಿಗಳಲ್ಲಿ ದಕ್ಷಿಣ ಆಫ್ರಿಕಾ ತಂಡದ ಪ್ರದರ್ಶನ
ದಕ್ಷಿಣ ಆಫ್ರಿಕಾ ತಂಡವು ವಿಶ್ವಕಪ್ ಟೂರ್ನಿಗಳಲ್ಲಿ ಕಳಪೆ ಪ್ರದರ್ಶನ ನೀಡದಿದ್ದರೂ ಅತ್ಯದ್ಭುತ ಪ್ರದರ್ಶನವಂತೂ ನೀಡಿಲ್ಲ. ಇದುವರೆಗೆ ಎಂಟು ವಿಶ್ವಕಪ್ ಟೂರ್ನಿಗಳಲ್ಲಿ ಆಡಿರುವ ದಕ್ಷಿಣ ಆಫ್ರಿಕಾ ತಂಡವು 1992, 1999, 2007 ಹಾಗೂ 2015ರಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದೇ ದಕ್ಷಿಣ ಆಫ್ರಿಕಾ ತಂಡದ ಸಾಧನೆಯಾಗಿದೆ. ಆಡಿದ ಎಂಟೂ ವಿಶ್ವಕಪ್ ಟೂರ್ನಿಯಲ್ಲಿ ಚಾಂಪಿಯನ್ ಆಗುವುದು ಬಿಡಿ, ಒಂದು ಸಲವೂ ಫೈನಲ್ ತಲುಪಿಲ್ಲ. 2019ರ ವಿಶ್ವಕಪ್‌ನಲ್ಲಂತೂ ದಕ್ಷಿಣ ಆಫ್ರಿಕಾ ತಂಡವು ಗ್ರೂಪ್ ಹಂತದ ಪಂದ್ಯದ ವೇಳೆ ಬಾಂಗ್ಲಾದೇಶದ ವಿರುದ್ಧ ಸೋತಿತ್ತು. ಸೆಮಿಫೈನಲ್‌ಗೂ ಪ್ರವೇಶಿಸದೆ ಟೂರ್ನಿಯಿಂದ ಹೊರಬಿದ್ದಿತ್ತು. ಇದೇ ಕಾರಣಕ್ಕೆ ದಕ್ಷಿಣ ಆಫ್ರಿಕಾ ತಂಡವನ್ನು ಚೋಕರ್ಸ್ ಎಂದು ಕರೆಯಲಾಗುತ್ತದೆ. ಈ ಕಳಂಕ 2023ರಲ್ಲಾದರೂ ಕೊನೆಯಾಗುತ್ತದೆಯೇ ಎಂಬುದನ್ನು ಕಾದುನೋಡಬೇಕಿದೆ.
ವಿಶ್ವಕಪ್ ಕುರಿತ ಇನ್ನಷ್ಟು ಆಸಕ್ತಿದಾಯಕ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ