Site icon Vistara News

ICC World Cup 2023: ಇಂದು ವಿಶ್ವಕಪ್‌ ಫೈನಲ್‌; ಎಲ್ಲೆಡೆ ‘ಗೆದ್ದು ಬೀಗು ಇಂಡಿಯಾ’ ಪ್ರಾರ್ಥನೆ

Team India World Cup cricket Final

ICC World Cup 2023: Countdown Starts For India vs Australia Final Match

ಅಹಮದಾಬಾದ್:‌ ದೇಶಕ್ಕೆ ದೇಶವೇ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ವಿಶ್ವಕಪ್‌ ಫೈನಲ್‌ (ICC World Cup 2023) ಪಂದ್ಯಕ್ಕೆ ಕಾತುರದಿಂದ ಕಾಯುತ್ತಿದೆ. 12 ವರ್ಷಗಳ ಬಳಿಕ ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯಲ್ಲಿ ಫೈನಲ್‌ ಪ್ರವೇಶಿಸಿರುವ ಭಾರತ ತಂಡವು (Indian Cricket Team) ಮೂರನೇ ಬಾರಿ ಏಕದಿನ ವಿಶ್ವಕಪ್‌ ಎತ್ತಿಹಿಡಿಯುವ ತವಕದಲ್ಲಿದೆ. ಭಾರತ ಗೆದ್ದು ಬೀಗಲಿ, ವಿಶ್ವಕಪ್‌ ರೋಹಿತ್‌ ಪಡೆಯ ಪಾಲಾಗಲಿ ದೇಶಾದ್ಯಂತ ಶತಕೋಟಿ ಭಾರತೀಯರು ಪ್ರಾರ್ಥನೆಯಲ್ಲಿ ತೊಡಗಿದ್ದಾರೆ. ಅತ್ತ ಆಸ್ಟ್ರೇಲಿಯಾ ಕೂಡ ಗೆಲುವು ಸಾಧಿಸುವ ಮೂಲಕ ಕ್ರಿಕೆಟ್‌ನಲ್ಲಿ ತಾನೇ ಅಧಿಪತಿ ಎಂಬುದನ್ನು ಸಾಬೀತುಪಡಿಸಲು ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಇದೆಲ್ಲ ಕಾರಣಗಳಿಂದಾಗಿ ವಿಶ್ವಕಪ್‌ ಫೈನಲ್‌ ಪಂದ್ಯವು ಕುತೂಹಲ ಕೆರಳಿಸಿದೆ.

ಪಂದ್ಯ ವೀಕ್ಷಣೆಗೆ ಗಣ್ಯರ ದಂಡು

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾನುವಾರ ಮಧ್ಯಾಹ್ನ ಪಂದ್ಯ ಆರಂಭವಾಗಲಿದ್ದು, ಗಣ್ಯರ ದಂಡೇ ಅಹಮದಾಬಾದ್‌ನಲ್ಲಿ ಬೀಡುಬಿಟ್ಟಿದೆ. ಅದರಲ್ಲೂ, ಪ್ರಧಾನಿ ನರೇಂದ್ರ ಮೋದಿ, ಅಮಿತ್​ ಶಾ, ರಿಚರ್ಡ್ ಮಾರ್ಲ್ಸ್ ಮತ್ತು ಅನೇಕ ರಾಜಕೀಯ ಗಣ್ಯರು ಈ ಪಂದ್ಯವನ್ನು ವೀಕ್ಷಿಸಲಿದ್ದಾರೆ ಎಂದು ಅಹಮದಾಬಾದ್‌ನ ಪೊಲೀಸ್ ಕಮಿಷನರ್ ಜ್ಞಾನೇಂದ್ರ ಸಿಂಗ್ ಮಲಿಕ್ ತಿಳಿಸಿದ್ದಾರೆ. ಸ್ಟೇಡಿಯಂನ ಸುತ್ತಮುತ್ತ ಈಗಾಗಲೇ ವಿಶೇಷ ಭದ್ರತಾ ವ್ಯವಸ್ಥೆಯನ್ನು ಕೂಡ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಟಾಸ್ ಬಳಿಕ ಏರ್​ ಶೋ

ಪಂದ್ಯದ ಟಾಸ್​ ಆದ 5 ನಿಮಿಷದಲ್ಲಿ ಅಂದರೆ 1.35ರಿಂದ 1.50ರವರೆಗೆ ಭಾರತೀಯ ವಾಯುಪಡೆಯ ಸೂರ್ಯಕಿರಣ್ ತಂಡದಿಂದ ಏರ್ ಶೋ ನಡೆಯಲಿದೆ. ನರೇಂದ್ರ ಮೋದಿ ಸ್ಟೇಡಿಯಂನ ಬಾನಂಗಳದಲ್ಲಿ ಲೋಹದ ಹಕ್ಕಿಗಳು ತಮ್ಮ ಚಮಕ್​ ತೋರಲಿವೆ. ಈಗಾಗಲೇ ಇದ್ದಕ್ಕೆ ಬೇಕಾದ ಸಿದ್ಧತೆಯನ್ನು ಸೂರ್ಯಕಿರಣ್ ತಂಡ ನಡೆಸಿದೆ. ಕಳೆದ 2 ದಿನಗಳಿಂದ ಇಲ್ಲಿ ಪ್ರಾಯೋಗಿಕ ಹಾರಾಟ ನಡೆಸಿ ಸರ್ವ ಸನ್ನದ್ಧವಾಗಿ ನಿಂತಿದೆ.

ಮೊದಲ ಡ್ರಿಂಕ್ಸ್ ಬ್ರೇಕ್ ವೇಳೆ ಸಂಗೀತ ರಸಮಂಜರಿ

ಪಂದ್ಯದ ಮೊದಲು ಇನ್ನಿಂಗ್ಸ್​ನ ಡ್ರಿಂಕ್ಸ್ ಬ್ರೇಕ್ ವೇಳೆ ಆದಿತ್ಯ ಗಧ್ವಿ ಅವರಿಂದ ಗಾಯನ ಪ್ರದರ್ಶನ ನಡೆಯಲಿದೆ. ಇದಾದ ಬಳಿಕ ಅಮದರೆ ಮೊದಲು ಇನ್ನಿಂಗ್ ಮುಗಿದ ಬಳಿಕ ಸಿಗುವ ಸಮಯದಲ್ಲಿ ಪ್ರೀತಮ್ ಚಕ್ರವರ್ತಿ, ಜೋನಿತಾ ಗಾಂಧಿ, ನಕಾಶ್ ಅಜೀಜ್, ಅಮಿತ್ ಮಿಶ್ರಾ, ಅಕಾಸ ಸಿಂಗ್ ಮತ್ತು ತುಷಾರ್ ಜೋಶಿ ಇವರಿಂದ ಸಂಗೀತ ರಸಮಂಜರಿ ಇರಲಿದೆ.

2ನೇ ಡ್ರಿಂಕ್ಸ್ ಬ್ರೇಕ್ ವೇಳೆ ಲೇಸರ್ ಶೋ

ಈ ಬಾರಿಯ ಎಲ್ಲ ಲೀಗ್​ ಪಂದ್ಯದ ವೇಳೆಯೂ ಬಿಸಿಸಿಐ ಸ್ಟೇಡಿಯಂಗಳಲ್ಲಿ ವಿನೂತನ ಶೈಲಿಯ ಲಸರ್​ ಶೋಗಳ ಮೂಲಕ ನೆರದಿದ್ದ ಪ್ರೇಕ್ಷಕರನ್ನು ರಂಜಿಸಿತ್ತು. ಇದೀಗ ಫೈನಲ್​ ಪಂದ್ಯದಲ್ಲೂ ವಿಶಿಷ್ಠ ಶೈಲಿಯ ಲೇಸರ್ ಮತ್ತು ಲೈಟ್ ಶೋ ನಡೆಯಲಿದೆ. ಇದು ಎರಡನೇ ಇನ್ನಿಂಗ್ಸ್​ನ ಡ್ರಿಂಕ್ಸ್ ಬ್ರೇಕ್ ವೇಳೆ ಪ್ರದರ್ಶನಗೊಳ್ಳಲಿದೆ ಎಂದು ಬಿಸಿಸಿಐ ತನ್ನ ಅಧಿಕೃತ ಪ್ರಕಟನೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: ICC World Cup 2023 : ಯಾರು ಗೆಲ್ತಾರೆ ವಿಶ್ವ ಕಪ್​? ಕ್ರಿಕೆಟ್ ಪಂಡಿತರು ಏನಂತಾರೆ?

ಸಂಭಾವ್ಯ ತಂಡಗಳು ಹೀಗಿವೆ…

ಭಾರತ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ , ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್.

ಆಸ್ಟ್ರೇಲಿಯಾ : ಡೇವಿಡ್ ವಾರ್ನರ್, ಟ್ರಾವಿಸ್ ಹೆಡ್, ಮಿಚೆಲ್ ಮಾರ್ಷ್, ಸ್ಟೀವನ್ ಸ್ಮಿತ್, ಮಾರ್ನಸ್ ಲಾಬುಶೇನ್/ ಮಾರ್ಕಸ್ ಸ್ಟೊಯಿನಿಸ್, ಗ್ಲೆನ್ ಮ್ಯಾಕ್ಸ್ವೆಲ್, ಜೋಶ್ ಇಂಗ್ಲಿಸ್ (ವಿಕೆಟ್​ ಕೀಪರ್​), ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮಿನ್ಸ್, ಆಡಮ್ ಝಂಪಾ, ಜೋಶ್ ಹೇಜಲ್​ವುಡ್​​.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version