Site icon Vistara News

ICC World Cup 2023: ಮರುಕಳಿಸದಿರಲಿ 2019ರ ಸೆಮಿಫೈನಲ್ ಸೋಲಿನ​ ನೋವು…

2019 world cup semi final

ಮುಂಬಯಿ: ಭಾರತ ಮತ್ತು ನ್ಯೂಜಿಲ್ಯಾಂಡ್​(IND vs NZ) ತಂಡಗಳು ಬುಧವಾರ ನಡೆಯುವ ವಿಶ್ವಕಪ್​ನ(ICC World Cup 2023) ಮೊದಲ ಸೆಮಿಫೈನಲ್​ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ​ಇತ್ತಂಡಗಳು ಮುಖಾಮುಖಿಯಾಗುವಾಗ ನೆನಪಾಗುವುದು 2019ರಲ್ಲಿ ಧೋನಿ ರನೌಟ್​(ms dhoni run out 2019) ಆಗಿ ಭಾರತದ ಫೈನಲ್‌ ಕನಸು ಕಮರಿ ಹೋದದ್ದು. ಇದೀಗ ನಾಲ್ಕು ವರ್ಷಗಳ ಬಳಿಕ ಮತ್ತೆ ಇತ್ತಂಡಗಳು ವಿಶ್ವಕಪ್​ ಸೆಮಿಯಲ್ಲಿ ಸೆಣಸಾಡಲಿವೆ. ಅಂದಿನ ಪಂದ್ಯದ ಘಟನೆಯ ವಿಡಿಯೊವನ್ನು ಐಸಿಸಿ ಈ ಪಂದ್ಯಕ್ಕೂ ಮುನ್ನ ಮೆಲುಕು ಹಾಕಿದೆ. ಈ ವಿಡಿಯೊ ವೈರಲ್​ ಆಗಿದೆ.

ಲೀಗ್​ನಲ್ಲಿ ಅಮೋಘ ಪ್ರದರ್ಶನ

ಕ್ರಿಕೆಟ್​ ಜನಕರ ನಾಡು ಲಂಡನ್​ನಲ್ಲಿ ನಡೆದ ಈ ವಿಶ್ವಕಪ್​ ಟೂರ್ನಿಯಲ್ಲಿ ಭಾರತ ವಿರಾಟ್​ ಕೊಹ್ಲಿ ಸಾರಥ್ಯದಲ್ಲಿ ಕಣಕ್ಕಿಳಿದಿತ್ತು. ಲೀಗ್​ ಹಂತದಲ್ಲಿ ಅಮೋಘ ಸಾಧನೆ ತೋರಿದ ಭಾರತ ಆಡಿದ 9 ಪಂದ್ಯಗಳ ಪೈಕಿ 7 ರಲ್ಲಿ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯಿತು. ರೋಹಿತ್​ ಶರ್ಮ ಅವರು ವಿಶ್ವಕಪ್​ ಇತಿಹಾಸದ ಆವೃತ್ತಿಯಯೊಂದರಲ್ಲೇ ಸರ್ವಾಧಿಕ 5 ಶತಕ ಬಾರಿಸಿದ್ದರು. ತಂಡ ಎಲ್ಲ ವಿಭಾಗದಲ್ಲೂ ಬಲಿಷ್ಠವಾಗಿತ್ತು. ಭಾರತದ ಪ್ರದರ್ಶನವನ್ನು ಕಂಡಾಗ ಎಲ್ಲ ಕ್ರಿಕೆಟ್​ ಪಂಡಿತರು ಕೂಡ ಕೊಹ್ಲಿ ಪಡೆ ಕಪ್​ ಗೆಲ್ಲುವುದರಲ್ಲಿ ಯಾವುದೇ ಅನುಮಾನ ಬೇಡ ಎಂದಿದ್ದರು. ಆದರೆ ಸೆಮಿಫೈನಲ್​ನಲ್ಲಿ ಸಂಭವಿದ್ದೇ ಬೇರೆ, ಭಾರತದ ಫೈನಲ್​ ಹಾದಿಗೆ ನ್ಯೂಜಿಲ್ಯಾಂಡ್​ ಅಡ್ಡಗಾಲಿಕ್ಕಿತು.

ಇದನ್ನೂ ಓದಿ ICC World Cup 2023: ಸೆಮಿ ಪಂದ್ಯಗಳ ಅಂಪೈರ್​ ಪಟ್ಟಿ, ಮಳೆ ನಿಯಮ ಹೀಗಿದೆ

ಮಳೆಯಿಂದ ಮೀಸಲು ದಿನ ಬ್ಯಾಟಿಂಗ್​

ಅದು, ಮ್ಯಾಂಚೆಸ್ಟರ್‌ನಲ್ಲಿ ನಡೆದ ಮುಖಾಮುಖಿಯಾಗಿತ್ತು. ಮೊದಲು ಬ್ಯಾಟಿಂಗ್​ ನಡೆಸಿದ ನ್ಯೂಜಿಲ್ಯಾಂಡ್​ ತಂಡ 8ಕ್ಕೆ 239 ರನ್‌ ಗಳಿಸಿತು. ಭಾರತದ ಬ್ಯಾಟಿಂಗ್​ ವೇಳೆ ಮಳೆ ಅಡ್ಡಿಪಡಿಸಿದ ಕಾರಣ ಪಂದ್ಯ ಮೀಸಲು ದಿನಕ್ಕೆ ಮುಂದುವರಿಯಿತು. ಮೀಸಲು ದಿನದಲ್ಲಿ ಭಾರತ ಗೆಲುವಿಗೆ 239 ರನ್‌ ಚೇಸಿಂಗ್‌ ಲಭಿಸಿತ್ತು. ಇನಿಂಗ್ಸ್​ ಆರಂಭಗೊಂಡು 5 ರನ್​ ಗಳಿಸುವಷ್ಟರಲ್ಲಿ 3 ವಿಕೆಟ್‌ ಕಳೆದುಕೊಂಡ ವಿರಾಟ್​ ಕೊಹ್ಲಿ ಬಳಗಕ್ಕೆ ಭಾರೀ ಗಂಡಾಂತರ ಎದುರಾಗಿತ್ತು. ಆದರೆ ಮಹೇಂದ್ರ ಸಿಂಗ್​ ಧೋನಿ ಮತ್ತು ರವೀಂದ್ರ ಜಡೇಜಾ ಸೇರಿಕೊಂಡು ಇನ್ನಿಂಗ್ಸ್‌ ಒಂದನ್ನು ಕಟ್ಟತೊಡಗಿದರು. ಶತಕದ ಜತೆಯಾಟ ದಾಖಲಾಯಿತು. ಭಾರತ ಗೆಲುವಿನ ಹಾದಿಗೆ ಮರಳುತ್ತಿತ್ತು. ಇದೇ ವೇಳೆ ಜಡೇಜಾ ನಿರ್ಗಮನ. ಆ ಬಳಿಕವೂ ಧೋನಿ ಹೋರಾಟವನ್ನು ಜಾರಿಯಲ್ಲಿರಿಸಿದ್ದರು.

ಗೆಲುವು ಕಸಿದ ಗಪ್ಟಿಲ್​

49ನೇ ಓವರ್‌ನಲ್ಲಿ ಧೋನಿ ಅರ್ಧ ಶತಕ ಪೂರೈಸಿದರು. ಧೋನಿ ಸ್ಟ್ರೈಕ್​ನಲ್ಲಿರುವವರೆಗೆ ಭಾರತಕ್ಕೆ ಗೆಲುವ ಖಚಿತ ಎಂದು ಎಲ್ಲ ಭಾರತೀಯರು ನಂಬಿದ್ದರು. ಆದರೆ ಎರಡು ರನ್​ ಓಡುವಾಗ ಮಾರ್ಟಿನ್‌ ಗಪ್ಟಿಲ್‌ ಅವರ ಡೈರೆಕ್ಟ್‌ ಥ್ರೋ ಧೋನಿಯನ್ನು ರನೌಟ್‌ ಮಾಡಿತು. ಅಲ್ಲಿಗೆ ಭಾರತದ ಫೈನಲ್‌ ಕನಸು ಕಮರಿ ಹೋಯಿತು. ಧೋನಿ ಕಣ್ಣೀರು ಸುರಿಸುತ್ತಾ ಪೆವಿಲಿಯನ್‌ ಕಡೆಗೆ ನಡೆದರು. ಡಗ್​ಔಟ್​ನಲ್ಲಿದ್ದ ರೋಹಿತ್​ ಶರ್ಮ, ವಿರಾಟ್​ ಕೊಹ್ಲಿ ಸೇರಿ ಎಲ್ಲ ಆಟಗಾರರು ಕೂಡ ಕಣ್ಣೀರು ಕಾಹಿದರು. ಅತ್ತ ಸ್ಟೇಡಿಯಂನಲ್ಲಿ ನೀರವ ಮೌನ ಉಂಡಾಯಿತು. ಎಲ್ಲ ಭಾರತೀಯಕರು ಕೂಡ ಸೋಲಿನ ಬೇಸರದಲ್ಲಿ ಗಪ್ಟಿಲ್​ಗೆ ಹಿಡಿ ಶಾಪ ಹಾಕುತ್ತ ಸ್ಟೇಡಿಯಂನಿಂದ ಹೊರ ನಡೆದರು. ಭಾರತ 18 ರನ್​ಗಳ ಸೋಲು ಕಂಡಿತು.

ಇದನ್ನೂ ಓದಿ IND vs NZ: ಮುಂದಿದೆ ಟೇಬಲ್​ ಟಾಪ್​ ಕಂಟಕ; ಪಾರಾದೀತೇ ಭಾರತ?

ಮತ್ತೆ ಎದುರಾಳಿ

4 ವರ್ಷಗಳ ಬಳಿಕ ಮತ್ತೆ ಭಾರತ ಮತ್ತು ನ್ಯೂಜಿಲ್ಯಾಂಡ್​ ಸೆಮಿಫೈನಲ್​ ಮುಖಾಮುಖಿಯಾಗುತ್ತಿವೆ. ಪಂದ್ಯ ಆರಂಭಕ್ಕೂ ಮುನ್ನವೇ ಭಾರತೀಯ ಕ್ರಿಕೆಟ್​ ಅಭಿಮಾನಿಗಳಲ್ಲಿ ಆತಂಕ ಮೂಡಿದೆ. ಎಲ್ಲರ ಬಾಯಲ್ಲೂ ಕೂಡ ಇದೇ ಮಾತು, ಪ್ರತಿ ಬಾರಿಯೂ ಭಾರತದ ಗೆಲುವಿಗೆ ಅಡ್ಡಗಾಲಿಡುವ ಕಿವೀಸ್​ ಅಪಾಯಕಾರಿ ಎನ್ನುವುದು. ಕಳೆದ 20 ವರ್ಷಗಳಿಂದ ಕಿವೀಸ್​ ವಿರುದ್ಧ ಐಸಿಸಿ ಟೂರ್ನಿಯಲ್ಲಿ ಗೆಲುವು ಸಾಧಿಸದಿದ್ದ ಭಾರತ ಲೀಗ್​ ಪಂದ್ಯದಲ್ಲಿ ಗೆದ್ದು ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದೆ. ಇದೇ ವಿಶ್ವಾಸದಲ್ಲಿ ಸೆಮಿಯಲ್ಲಿಯೂ ಬಗ್ಗುಬಡಿಯಲಿ ಎನ್ನುವುದು ನಮ್ಮೆಲ್ಲರ ಆಶಯವಾಗಿದೆ.

Exit mobile version