ಬೆಂಗಳೂರು: 48 ವರ್ಷಗಳ ಏಕದಿನ ವಿಶ್ವಕಪ್(ICC World Cup 2023) ಇತಿಹಾಸದಲ್ಲಿ ನ್ಯೂಜಿಲ್ಯಾಂಡ್ ತಂಡ ಈವರೆಗೆ ಗರಿಷ್ಠ 8 ಸೆಮಿಫೈನಲ್ ಮತ್ತು 2 ಫೈನಲ್ ಕಂಡಿದೆ. ಆದರೆ ಒಮ್ಮೆಯೂ ಕಪ್ ಎತ್ತಿಲ್ಲ. ಇದು 9ನೇ ವಿಶ್ವಕಪ್ ಸೆಮಿಫೈನಲ್ ಪಂದ್ಯ. ಈ ಹಿಂದಿನ ವಿಶ್ವಕಪ್ ಸೆಮಿ ಪಂದ್ಯದ ಒಂದು ಹಿನ್ನೋಟ ಇಲ್ಲಿದೆ.
ವಿಂಡೀಸ್ ವಿರುದ್ಧ ಮೊದಲ ಸೆಮಿಫೈನಲ್
ನ್ಯೂಜಿಲ್ಯಾಂಡ್ ತಂಡ ಚೊಚ್ಚಲ 1975ರ ವಿಶ್ವಕಪ್ ಟೂರ್ನಿಯಲ್ಲೇ ಸೆಮಿಫೈನಲ್ ಪ್ರವೇಶಿಸಿತ್ತು. ಬಲಿಷ್ಠ ವೆಸ್ಟ್ ಇಂಡೀಸ್ ವಿರುದ್ಧ ಓವಲ್‌ನಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಕಿವೀಸ್ 52.2 ಓವರ್‌ಗಳಲ್ಲಿ 158ಕ್ಕೆ ಕುಸಿಯಿತು. ಈ ಮೊತ್ತವನ್ನು ವಿಂಡೀಸ್ 40.1 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 159 ರನ್ ಬಾರಿಸಿ ಫೈನಲ್‌ಗೆ ಲಗ್ಗೆಯಿಟ್ಟಿತು. ಅಲ್ಲದೆ ಫೈನಲ್ನಲ್ಲಿಯೂ ಗೆದ್ದು ಚೊಚ್ಚಲ ಚಾಂಪಿಯನ್ ಪಟ್ಟ ಅಲಂಕರಿಸಿತು.
ಇದನ್ನೂ ಓದಿ IND vs NZ : ಸೆಮಿ ಫೈನಲ್ ನಡೆಯುವ ವಾಂಖೆಡೆ ಸ್ಟೇಡಿಯಮ್ ಯಾವ ತಂಡಕ್ಕೆ ಫೇವರಿಟ್?
2ನೇ ಆವೃತ್ತಿಯಲ್ಲೂ ಸೆಮಿ ಪ್ರವೇಶ
ಚೊಚ್ಚಲ ಆವೃತ್ತಿಯ ಸೆಮಿಯಲ್ಲಿ ಸೋಲು ಕಂಡ ನ್ಯೂಜಿಲ್ಯಾಂಡ್ ಮುಂದಿನ 1979ರ ಆವೃತ್ತಿಯಲ್ಲೂ ಸೆಮಿಗೆ ಲಗ್ಗೆಯಿಟ್ಟು ಸತತ 2ನೇ ಬಾರಿ ಸೆಮಿಫೈನಲ್ ಪ್ರವೇಶಿಸಿದ ಸಾಧನೆ ಮಾಡಿತು. ಆದರೆ ಮತ್ತೆ ಸೋತಿತು. ಆತಿಥೇಯ ಇಂಗ್ಲೆಂಡ್ ವಿರುದ್ಧ ಕೇವಲ 9 ರನ್‌ಗಳಿಂದ ಸೋಲು 2ನೇ ಬಾರಿಯೂ ಫೈನಲ್ ಪ್ರವೇಶ ಪಡೆಯುವಲ್ಲಿ ವಿಫಲಗೊಂಡಿತು. ಮೊದಲು ಬ್ಯಾಟಿಂಗ್ ನಡೆಸಿದ ಇಂಗ್ಲೆಂಡ್ 8 ವಿಕೆಟ್ಗೆ 221 ರನ್ ಬಾರಿಸಿತು. ಗುರಿ ಬೆನ್ನಟ್ಟಿದ ಕಿವೀಸ್ ಭರ್ತಿ 60 ಓವರ್ ಆಡಿ 9 ವಿಕೆಟ್ಗೆ 212 ರನ್ ಗಳಿಸಿಶಲಷ್ಟೇ ಶಕ್ತವಾಯಿತು.
ತವರಿನಲ್ಲೇ ಸೋಲಿನ ಮುಖಭಂಗ
1992ರ ವಿಶ್ವಕಪ್ ಟೂರ್ನಿಯ ಜಂಟಿ ಆತಿಥ್ಯ ವಹಿಸಿದ್ದ ನ್ಯೂಜಿಲ್ಯಾಂಡ್ ತಂಡ ಇಲ್ಲಿಯೂ ಸೆಮಿ ಹರ್ಡಲ್ಸ್ ದಾಟುವಲ್ಲಿ ವಿಫಲವಾಯಿತು. ಆಕ್ಲೆಂಡ್‌ನಲ್ಲಿ ನಡೆದ ಸೆಮಿಫೈನಲ್‌ನಲ್ಲಿ ಪಾಕಿಸ್ತಾನ ವಿರುದ್ಧ ಮೊದಲು ಬ್ಯಾಟಿಂಗ್ ನಡೆಸಿದ ಕಿವೀಸ್ 7ವಿಕೆಟ್ಗೆ 262 ರನ್ ಬಾರಿಸಿತು. ಇಮ್ರಾನ್ ಖಾನ್ ಪಡೆ ಈ ಮೊತ್ತವನ್ನು 49 ಓವರ್‌ಗಳಲ್ಲಿ 6 ವಿಕೆಟಿಗೆ 264 ಬಾರಿಸಿ ಜಯಭೇರಿ ಮೊಳಗಿಸಿತು. ಕಿವೀಸ್ ತವರಿನಲ್ಲೇ ಸೋಲಿನ ಮುಖಭಂಗ ಎದುರಿಸಿತು.
ಇದನ್ನೂ ಓದಿ IND vs NZ: ಮುಂದಿದೆ ಟೇಬಲ್ ಟಾಪ್ ಕಂಟಕ; ಪಾರಾದೀತೇ ಭಾರತ?
ನಾಲ್ಕನೇ ಪ್ರಯತ್ನದಲ್ಲೂ ಎಡವಿದ ಕಿವೀಸ್
ನ್ಯೂಜಿಲ್ಯಾಂಡ್ 1999ರಲ್ಲಿ ಮತ್ತೆ ಸೆಮಿ ಫೈನಲ್ ಕಂಡಿತು. ಇದು ನಾಲ್ಕನೇ ಸೆಮಿಫೈನಲ್ ಆಗಿತ್ತು. ಅಚ್ಚರಿ ಎಂದರೆ ಮತ್ತೆ ಪಾಕಿಸ್ತಾನವೇ ಸೆಮಿಫೈನಲ್‌ನಲ್ಲಿ ಎದುರಾಗಿತ್ತು. 1992ರಲ್ಲಿ ತವರಿನಲ್ಲಿ ಎದುರಾದ ಸೋಲಿಗೆ ಕಿವೀಸ್ ಸೇಡು ತೀರಿಸಿಕೊಂಡಿತು ಎಂದು ಎಲ್ಲರು ನಿರೀಕ್ಷೆ ಮಾಡಿದ್ದರು. ಆದರೆ ಇದು ಹುಸಿಯಾಯಿತು. ಕಿವೀಸ್ 9 ವಿಕೆಟ್ಗಳ ಹೀನಾಯ ಸೋಲು ಕಂಡಿತು. ಮ್ಯಾಂಚೆಸ್ಟರ್‌ನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಕಿವೀಸ್ 7ವಿಕೆಟ್ಗೆ 241 ರನ್ ಗಳಿಸಿತು. ಜವಾಬಿತ್ತ ಪಾಕಿಸ್ತಾನ 47.3 ಓವರ್‌ಗಳಲ್ಲಿ ಕೇವಲ ಒಂದೇ ವಿಕೆಟಿಗೆ 242 ರನ್ ಬಾರಿಸಿ ಆಮೋಘ ಗೆಲುವು ಸಾಧಿಸಿತು.
ಶ್ರೀಲಂಕಾ ವಿರುದ್ಧ ಸೋಲು
5 ಬಾರಿ ಸೆಮಿಫೈನಲ್ ಸೋಲು ಕಂಡಿದ್ದ ನ್ಯೂಜಿಲ್ಯಾಂಡ್ ತನ್ನ 5ನೇ ಪ್ರಯತ್ನದಲ್ಲಿಯೂ ಮತ್ತ ಸೋಲಿಗೆ ತುತ್ತಾಯಿತು. 2007ರಲ್ಲಿ ನಡೆದ ಟೂರ್ನಿಯ ಸೆಮಿ ಪಂದ್ಯದಲ್ಲಿ ಕಿವೀಸ್ಗೆ ಲಂಕಾ ಸವಾಲು ಎದುರಾಗಿತ್ತು. ಕಿಂಗ್‌ಸ್ಟನ್‌ನಲ್ಲಿ ನಡೆದ ಈ ಕದನಲ್ಲಿ ನ್ಯೂಜಿಲ್ಯಾಂಡ್ 81 ರನ್ ಅಂತರದಿಂದ ಸೋಲು ಕಂಡಿತು. ಮೊದಲು ಬ್ಯಾಟಿಂಗ್ ನಡೆಸಿದ ಲಂಕಾ 5 ವಿಕೆಟ್ಗೆ 289 ರನ್ ಬಾರಿಸಿ ಸವಾಲೊಡ್ಡಿತು. ಕಿವೀಸ್ 41.4 ಓವರ್‌ಗಳಲ್ಲಿ 208ಕ್ಕೆ ಸರ್ವಪತನ ಕಂಡಿತು.
ಇದನ್ನೂ ಓದಿ ICC World Cup 2023: ಮರುಕಳಿಸದಿರಲಿ 2019ರ ಸೆಮಿಫೈನಲ್ ಸೋಲಿನ ನೋವು…
ಮತ್ತೆ ಕಾಡಿದ ಲಂಕಾ
2011ರ ವಿಶ್ವಕಪ್ನಲ್ಲಿಯೂ ಶ್ರೀಲಂಕಾ ಮತ್ತು ನ್ಯೂಜಿಲ್ಯಾಂಡ್ ಸೆಮಿ ಫೈನಲ್ನಲ್ಲಿ ಮುಖಾಮುಖಿಯಾಯಿತು. ಆದರೆ ಇಲ್ಲಿಯೂ ಸೋಲು ಎದುರಾಯಿತು. ಕೊಲಂಬೊದಲ್ಲಿ ನಡೆದ ಈ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ 217 ರನ್ ಗಳಿಸಿತು. ಸುಲಭ ಗುರಿ ಬೆನ್ನಟ್ಟಿದ ಲಂಕಾ 47.5 ಓವರ್‌ಗಳಲ್ಲಿ 5ವಿಕೆಟ್ಗೆ 220 ರನ್ ಬಾರಿಸಿ ಫೈನಲ್‌ಗೆ ಲಗ್ಗೆ ಇಟ್ಟಿತು.
7ನೇ ಪ್ರಯತ್ನದಲ್ಲಿ ಗೆಲುವು
6 ಬಾರಿ ಸೆಮಿಫೈನಲ್ ಆಡಿದರೂ ಫೈನಲ್ ಪ್ರವೇಶ ಪಡೆಯದ ನ್ಯೂಜಿಲ್ಯಾಂಡ್ ತನ್ನ 7ನೇ ಪ್ರಯತ್ನದಲ್ಲಿ ಇದನ್ನೂ ಸಾಧಿಸಿತು. ಆಕ್ಲೆಂಡ್‌ನಲ್ಲಿ ನಡೆದ ಮಳೆ ಪೀಡಿತ 43 ಓವರ್‌ಗಳ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ದಕ್ಷಿಣ ಆಫ್ರಿಕಾ 5ವಿಕೆಟ್ಗೆ 281 ರನ್ ಬಾರಿಸಿತು. ನ್ಯೂಜಿಲ್ಯಾಂಡ್ ಡಿ-ಎಲ್ ನಿಯಮದಂತೆ 6ವಿಕೆಟ್ಗೆ 299 ರನ್ ಬಾರಿಸಿ ಮೊದಲ ಸಲ ವಿಶ್ವಕಪ್ ಫೈನಲ್‌ಗೆ ಲಗ್ಗೆಯಿಟಿತು. ಆದರೆ ಕಪ್ ಗೆಲ್ಲುವಲ್ಲಿ ವಿಫಲವಾಯಿತು. ಫೈನಲ್ನಲ್ಲಿ ಆಸೀಸ್ ವಿರುದ್ಧ ಹೀನಾಯ ಸೋಲು ಕಂಡಿತು.
ಭಾರತಕ್ಕೆ ಆಘಾತವಿಕ್ಕಿ ಫೈನಲ್ ಪ್ರವೇಶ
ಭಾರತ ಮತ್ತು ನ್ಯೂಜಿಲ್ಯಾಂಡ್ ತಂಡ ಮೊದಲ ವಿಶ್ವಕಪ್ ಸೆಮಿಫೈನಲ್ ಪಂದ್ಯ ಆಡಿದ್ದು 2019ರಲ್ಲಿ. ಇದು ನ್ಯೂಜಿಲ್ಯಾಂಡ್ ತಂಡದ ಸತತ 4ನೇ ಸೆಮಿಫೈನಲ್ ಪ್ರವೇಶವಾಗಿತ್ತು. ಮ್ಯಾಂಚೆಸ್ಟರ್‌ನಲ್ಲಿ ಮಳೆಯಿಂದ ಮೀಸಲು ದಿನ ನಡೆದ ಪಂದ್ಯದಲ್ಲಿ ಭಾರತವನ್ನು 18 ರನ್ನುಗಳಿಂದ ಸೋಲಿಸಿದ ಕಿವೀಸ್ ಫೈನಲ್ ಪ್ರವೇಶ ಪಡೆದಿತ್ತು. ನ್ಯೂಜಿಲ್ಯಾಂಡ್ ತಂಡ 8ಕ್ಕೆ 239 ರನ್ ಗಳಿಸಿತು. ಭಾರತ 49.3 ಓವರ್‌ಗಳಲ್ಲಿ 221ಕ್ಕೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡು ಸೋಲಿಗೆ ತುತ್ತಾಯಿತು. ಆದರೆ ಸತತ ಎರಡನೇ ಫೈನಲ್ ಅವಕಾಶದಲ್ಲಿಯೂ ನ್ಯೂಜಿಲ್ಯಾಂಡ್ ಕಪ್ ಗೆಲ್ಲುವಲ್ಲಿ ಎಡವಿತು. ಬೌಂಡರಿ ಆಧಾರದಲ್ಲಿ ಇಂಗ್ಲೆಂಡ್ ವಿರುದ್ಧ ಸೋಲು ಕಂಡಿತ್ತು. ಇದೀಗ ಮತ್ತೆ ಭಾರತ ವಿರುದ್ಧ ಸೆಮಿ ಆಡಲು ಸಿದ್ಧವಾಗಿದೆ. ಈ ಬಾರಿಯೂ ಗೆಲುವು ಸಾಧಿಸಿತೇ ಎನ್ನುವುದು ಬುಧವಾರದ ಪಂದ್ಯದ ಕೌತುಕ.