ನವದೆಹಲಿ: ದಕ್ಷಿಣ ಆಫ್ರಿಕಾ ವಿರುದ್ಧ ಶುಕ್ರವಾರ (ಅಕ್ಟೋಬರ್ 27) ನಡೆದ ರೋಚಕ ಹಣಾಹಣಿಯಲ್ಲಿ ಸೋಲುಂಡ ಪಾಕಿಸ್ತಾನ ಕ್ರಿಕೆಟ್ ತಂಡವು ವಿಶ್ವಕಪ್ ಟೂರ್ನಿಯಿಂದ ಬಹುತೇಕ ಹೊರಬಿದ್ದಂತಾಗಿದೆ. ಆಡಿದ ಆರು ಪಂದ್ಯಗಳಲ್ಲಿ ನಾಲ್ಕು ಪಂದ್ಯ ಸೋಲುಂಡು, ಎರಡು ಪಂದ್ಯ ಗೆದ್ದು, ಅಂಕಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿರುವ ಬಾಬರ್ ಅಜಂ ಬಳಗವು ಸೆಮಿಫೈನಲ್ ತಲುಪಲು ಪವಾಡವೇ ನಡೆಯಬೇಕಿದೆ. ಹಾಗಾದರೆ, ಪಾಕ್ ಸೆಮೀಸ್ ತಲುಪಲು ಏನೆಲ್ಲ ಪವಾಡ ನಡೆಯಬೇಕು? ಬೇರೆ ತಂಡಗಳ ಪರಿಸ್ಥಿತಿ ಹೇಗಿದೆ ಎಂಬುದರ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
ದಕ್ಷಿಣ ಆಫ್ರಿಕಾ: ಆಡಿರುವ 6 ಪಂದ್ಯಗಳಲ್ಲಿ 5 ಪಂದ್ಯ ಗೆದ್ದು, ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ದಕ್ಷಿಣ ಆಫ್ರಿಕಾ ತಂಡವು ಉಳಿದ ಮೂರು ಪಂದ್ಯಗಳಲ್ಲಿ ಒಂದು ಪಂದ್ಯ ಗೆದ್ದರೂ ಸೆಮೀಸ್ ಹಾದಿ ಖಚಿತ. ರನ್‌ರೇಟ್ ಇರುವುದರಿಂದ ಮೂರೂ ಪಂದ್ಯ ಸೋತರೂ ದಕ್ಷಿಣ ಆಫ್ರಿಕಾ ಸೆಮೀಸ್ ಹಾದಿ ಕಮರುವುದಿಲ್ಲ.
ಭಾರತ: ಆಡಿರುವ 5 ಪಂದ್ಯಗಳಲ್ಲೂ ಜಯ ಸಾಧಿಸಿದ ಭಾರತ ತಂಡಕ್ಕೂ ಒಂದು ಪಂದ್ಯದ ಗೆಲುವಿನ ಅವಶ್ಯಕತೆ ಇದೆ. ಇನ್ನೂ ನಾಲ್ಕು ಪಂದ್ಯ ಇರುವುದರಿಂದ ಭಾರತದ ಉತ್ಸಾಹ ಹೆಚ್ಚಿದೆ.
ನ್ಯೂಜಿಲ್ಯಾಂಡ್: ಆಡಿದ 5 ಪಂದ್ಯಗಳಲ್ಲಿ 4 ಪಂದ್ಯ ಗೆದ್ದಿರುವ ನ್ಯೂಜಿಲ್ಯಾಂಡ್ ತಂಡವು ಉಳಿದ ನಾಲ್ಕು ಪಂದ್ಯಗಳಲ್ಲಿ ಎರಡು ಪಂದ್ಯ ಗೆದ್ದರೆ ಸೆಮೀಸ್‌ಗೇರುವುದು ನಿಶ್ಚಿತ.
ದಕ್ಷಿಣ ಆಫ್ರಿಕಾ ಗೆಲುವಿನ ಕ್ಷಣ
Goosebumps 🔥🔥South Africa vs Pakistan
— ICT Fan (@Delphy06) October 27, 2023
-Keshav Maharaj Winning Runs
-Babar Azam vs Nawaz #PAKvsSA pic.twitter.com/h3jRqDbcNo
ಆಸ್ಟ್ರೇಲಿಯಾ: ಐದರಲ್ಲಿ ಮೂರು ಪಂದ್ಯ ಗೆದ್ದಿರುವ ಆಸ್ಟ್ರೇಲಿಯಾ ಕೂಡ ನಾಲ್ಕು ಪಂದ್ಯಗಳಲ್ಲಿ ಎರಡು ಪಂದ್ಯ ಗೆಲ್ಲಬೇಕು. ಅಫಘಾನಿಸ್ತಾನ ಹಾಗೂ ಬಾಂಗ್ಲಾದೇಶ ತಂಡಗಳ ಎದುರು ಆಡಬೇಕಿರುವ ಕಾರಣ ಆಸೀಸ್‌ಗೆ ಹೆಚ್ಚಿನ ಚಿಂತೆ ಇಲ್ಲ.
ಶ್ರೀಲಂಕಾ: ಐದರಲ್ಲಿ ಎರಡು ಪಂದ್ಯ ಮಾತ್ರ ಗೆದ್ದು ಅಂಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿರುವ ಶ್ರೀಲಂಕಾ ತಂಡವೂ ಹಲವು ಲೆಕ್ಕಾಚಾರದಲ್ಲಿದೆ. ಉಳಿದ ನಾಲ್ಕೂ ಪಂದ್ಯ ಗೆದ್ದರೆ ಶ್ರೀಲಂಕಾ ಸೆಮೀಸ್ ಹಾದಿ ಸುಲಭವಾಗಲಿದೆ. ಇಲ್ಲದಿದ್ದರೆ ಬೇರೆ ತಂಡಗಳ ಸೋಲು, ರನ್‌ರೇಟ್ ಲೆಕ್ಕಾಚಾರವೇ ಗತಿಯಾಗಲಿದೆ.
ಪಾಕಿಸ್ತಾನ: ಆರಂಭಿಕ ಪಂದ್ಯಗಳನ್ನು ಗೆದ್ದು, ಸತತ ನಾಲ್ಕು ಪಂದ್ಯ ಗೆದ್ದಿರುವ ಪಾಕಿಸ್ತಾನವು ಟೂರ್ನಿಯಿಂದ ಬಹುತೇಕ ಔಟ್ ಆಗಿದೆ. ಕಳಪೆ ರನ್‌ರೇಟ್ ಹೊಂದಿರುವ ಬಾಬರ್ ಅಜಂ ತಂಡವು ಉಳಿದ ಮೂರು ಪಂದ್ಯಗಳನ್ನು ಗೆಲ್ಲಲೇಬೇಕಿದೆ. ಒಂದು ಪಂದ್ಯ ಸೋತರೂ ಪಾಕ್ ವಿಮಾನ ಹತ್ತಬೇಕಾಗುತ್ತದೆ. ಅಲ್ಲದೆ, ನಾಲ್ಕು ತಂಡಗಳು 12 ಅಂಕ ಗಳಿಸಿ, ಪಾಕ್ ಮೂರೂ ಪಂದ್ಯ ಗೆದ್ದರೂ ಮನೆಗೆ ಹೋಗಬೇಕಾಗುತ್ತದೆ. ಇನ್ನು ಉಳಿದ ಮೂರು ಪಂದ್ಯಗಳಲ್ಲಿ ಪಾಕಿಸ್ತಾನವು ಇಂಗ್ಲೆಂಡ್ ಹಾಗೂ ನ್ಯೂಜಿಲ್ಯಾಂಡ್ ತಂಡಗಳನ್ನು ಎದುರಿಸಲಿದೆ.
ಪಂದ್ಯ ಸೋತ ದುಃಖದಲ್ಲಿ ಬಾಬರ್ ಅಜಂ
Don't worry boys U played well but badluck 💔 is still on the top #PakVsRSA #PAKvSA #BabarAzam #parchi #umpire pic.twitter.com/da80qnKdCA
— Mansoor Ali (@Mansoorali19672) October 27, 2023
ಏಳನೇ ಸ್ಥಾನದಲ್ಲಿರುವ ಅಫಘಾನಿಸ್ತಾನವೂ ಉಳಿದ ನಾಲ್ಕು ಪಂದ್ಯ ಗೆದ್ದರೆ ಸೆಮೀಸ್‌ಗೆ ಏರಲಿದೆ. ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಬಾಂಗ್ಲಾದೇಶ, ಇಂಗ್ಲೆಂಡ್ ಹಾಗೂ ನೆದರ್ಲೆಂಡ್ಸ್ ತಂಡಗಳು ಕೂಡ ಉಳಿದ ನಾಲ್ಕೂ ಪಂದ್ಯ ಗೆಲ್ಲಬೇಕಿದೆ. ರನ್‌ರೇಟ್ ಕಳಪೆ ಇರುವುದರಿಂದ ಮೂರೂ ತಂಡಗಳಿಗೆ ಸೆಮೀಸ್ ಹಾದಿ ಬಹುತೇಕ ಮುಚ್ಚಿದಂತಿದೆ.
ಇದನ್ನೂ ಓದಿ: ICC World Cup 2023 : ದ. ಆಫ್ರಿಕಾದ ʼಮಹಾರಾಜʼನಿಗೆ ತಲೆ ಬಾಗಿದ ಪಾಕಿಸ್ತಾನಕ್ಕೆ ಮತ್ತೊಂದು ಸೋಲು
ಇಲ್ಲಿನ ಎಮ್ಎ ಚಿದಂಬರಂ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಹಣಾಹಣಿಯಲ್ಲಿ ಟಾಸ್ ಗೆದ್ದ ಪಾಕಿಸ್ತಾನ ತಂಡ ಮೊದಲು ಬ್ಯಾಟ್ ಮಾಡಿ 46. 4 ಓವರ್ಗಳಲ್ಲಿ 270 ರನ್ಗಳಿಗೆ ಆಲ್ಔಟ್ ಆಯಿತು. ಪ್ರತಿಯಾಗಿ ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ ತಂಡ ತಂಡ 47.2 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 271 ರನ್ ಬಾರಿಸಿ ಗೆಲುವು ಸಾಧಿಸಿತು.