ಹೊಸದಿಲ್ಲಿ: ಆಸ್ಟ್ರೇಲಿಯಾ ಕ್ರಿಕೆಟ್ ತಂಡದ (Australia cricket team) ಆಟಗಾರ, ಆಲ್‌ರೌಂಡರ್ ಮಿಚೆಲ್ ಮಾರ್ಷ್ (Mitchell Marsh) ವಿಶ್ವಕಪ್ ಪಂದ್ಯಾವಳಿಯಿಂದ (ICC world cup 2023) ಹೊರಬಿದ್ದಿದ್ದಾರೆ. ʼಅನಿರ್ದಿಷ್ಟಾವಧಿʼಗೆ ಅವರು ತವರಿಗೆ ಮರಳುತ್ತಿದ್ದು, ʼವೈಯಕ್ತಿಕ ಕಾರಣʼ ಎಂದು ತಿಳಿಸಿದ್ದಾರೆ.
ತಂಡದ ಪ್ರೀಮಿಯಂ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಕೂಡ ಶನಿವಾರ ಇಂಗ್ಲೆಂಡ್ ತಂಡದ ಎದುರಿನ ಮುಂದಿನ ಪಂದ್ಯದಿಂದ ಹೊರಗುಳಿದ ಸುದ್ದಿ ಬಂದಿರುವ ಬೆನ್ನಿನಲ್ಲೇ ಈ ಸುದ್ದಿ ಬಂದಿದೆ.
“ಅವರು ತಂಡಕ್ಕೆ ಮರಳುವ ಟೈಮ್‌ಲೈನ್ ಅನ್ನು ದೃಢೀಕರಿಸಬೇಕಾಗಿದೆ” ಎಂದು ಆಸ್ಟ್ರೇಲಿಯಾ ತಂಡ ತಿಳಿಸಿದೆ. ಆಸ್ಟ್ರೇಲಿಯಾ ತಂಡ ಬದಲಿ ಆಟಗಾರನನ್ನು ನೇಮಿಸುತ್ತದೆಯೇ ಎಂಬುದು ಕೂಡ ಸ್ಪಷ್ಟವಾಗಿಲ್ಲ. ಈಗ ತಿಳಿದುಬಂದಿರುವ ಮಾಹಿತಿಯ ಪ್ರಕಾರ ಮಾರ್ಷ್ ಅನಿರ್ದಿಷ್ಟ ಅವಧಿಗೆ ವಿಶ್ವಕಪ್‌ನಿಂದ ಹೊರಗುಳಿದಿದ್ದಾರೆ.
ಮಾರ್ಷ್, ಆಸ್ಟ್ರೇಲಿಯಾದ ಬ್ಯಾಟಿಂಗ್ ಲೈನ್-ಅಪ್‌ನಲ್ಲಿ ಪ್ರಮುಖ ದಾಂಡಿಗನಾಗಿದ್ದರು. ಟ್ರಾವಿಸ್ ಹೆಡ್ ಅನುಪಸ್ಥಿತಿಯಲ್ಲಿ ಡೇವಿಡ್ ವಾರ್ನರ್ ಜೊತೆಗೆ ಓಪನಿಂಗ್ ಬ್ಯಾಟಿಂಗ್ ನಿರ್ವಹಿಸಿದ್ದರು. ಧರ್ಮಶಾಲಾದಲ್ಲಿ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಹೆಡ್ ಅಮೋಘ ಶತಕದೊಂದಿಗೆ ಕ್ರಮಾಂಕದ ಅಗ್ರಸ್ಥಾನಕ್ಕೆ ಮರಳಿದರೆ, ಮಾರ್ಷ್ 36 ರನ್ ಗಳಿಸಿ ನಂ.3ಕ್ಕೆ ಇಳಿದರು. ಅವರು ಎರಡು ಓವರ್ ಎಸೆದು 18 ರನ್ ಮಾತ್ರ ಕೊಟ್ಟಿದ್ದರು.
ಪಂದ್ಯಾವಳಿಯಲ್ಲಿ ನಿಧಾನಗತಿಯ ಆರಂಭದ ನಂತರ, 0 ಮತ್ತು 7 (ಭಾರತ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ), ಶ್ರೀಲಂಕಾ ವಿರುದ್ಧ 52 ಮತ್ತು ಪಾಕಿಸ್ತಾನದ ವಿರುದ್ಧ 121 ರನ್ ಗಳಿಸುವ ಮೂಲಕ ಮಾರ್ಷ್ ದಾಪುಗಾಲು ಹಾಕಿದ್ದರು.
ಮ್ಯಾಕ್ಸ್‌ವೆಲ್ ಕೂಡ ಪಂದ್ಯಾಟದಿಂದ ಹೊರಗುಳಿದಿರುವುದರಿಂದ, ಇಂಗ್ಲೆಂಡ್ ವಿರುದ್ಧದ ನಿರ್ಣಾಯಕ ಗೆಲುವಿಗಾಗಿ ಆಡುವ ಪಂದ್ಯದಲ್ಲಿ ಇಬ್ಬರು ಆಲ್‌ರೌಂಡರ್‌ಗಳಿಗಾಗಿ ಆಸ್ಟ್ರೇಲಿಯಾ ಈಗ ಪರದಾಡುತ್ತಿದೆ. ಆರು ಪಂದ್ಯಗಳಲ್ಲಿ ನಾಲ್ಕು ಗೆಲುವಿನೊಂದಿಗೆ ಆಸ್ಟ್ರೇಲಿಯಾವು ಪ್ರಸ್ತುತ ಎಂಟು ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ನ್ಯೂಜಿಲೆಂಡ್ (8 ಅಂಕಗಳು) ಅಂಕಗಳಲ್ಲಿ ಸಮಬಲದಲ್ಲಿದೆ. ಆಸ್ಟ್ರೇಲಿಯಾದ ಸೆಮಿಫೈನಲ್ ಭರವಸೆಯನ್ನು ಜೀವಂತವಾಗಿರಿಸಲು ಇಂಗ್ಲೆಂಡ್ ವಿರುದ್ಧದ ಗೆಲುವು ಅತ್ಯಗತ್ಯ.
ಇದನ್ನೂ ಓದಿ: ICC World Cup 2023: ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾರತ ಗೆದ್ದರೂ ಪಟಾಕಿ ಸಿಡಿಸುವಂತಿಲ್ಲ: ಎಲ್ಲಿ ಈ ನಿಷೇಧ?