ಲಂಡನ್: ಭಾರತದ ಆತಿಥ್ಯದಲ್ಲಿ ವರ್ಷಾಂತ್ಯದಲ್ಲಿ ನಡೆಯಲಿರುವ ಬಹುನಿರೀಕ್ಷಿತ ಐಸಿಸಿ ಏಕದಿನ ವಿಶ್ವ ಕಪ್ ಟೂರ್ನಿಯ ವೇಳಾಪಟ್ಟಿ ಬಿಡುಗಡೆಗೆ ಮುಹೂರ್ತ ನಿಗದಿಯಾಗಿದೆ. ಐಸಿಸಿ ಮೂಲಗಳ ಪ್ರಕಾರ ಜೂನ್ 10 ಶನಿವಾರ ಟೂರ್ನಿಯ ವೇಳಾಪಟ್ಟಿ ಪ್ರಕಟಗೊಳ್ಳಲಿದೆ ಎಂದು ವರದಿಯಾಗಿದೆ.
ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯ ಲಂಡನ್ನಲ್ಲಿ ನಡೆಯುತ್ತಿದ್ದರು. ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಪ್ರಶಸ್ತಿಗಾಗಿ ಕಾದಾಟ ನಡೆಸುತ್ತಿದೆ. ಈ ಪಂದ್ಯ ವೀಕ್ಷಣೆಗೆ ಬಿಸಿಸಿಐ ಅಧಿಕಾರಿಗಳು ಮತ್ತು ಐಸಿಸಿ ಅಧಿಕಾರಿಗಳು ಲಂಡನ್ನಲ್ಲಿ ಸೇರಿದ್ದಾರೆ. ಇದೇ ವೇಳೆ ಸಭೆ ನಡೆಸಿ ಏಕದಿನ ಟೂರ್ನಿಯ ವೇಳಾಪಟ್ಟಿ ಮತ್ತು ತಾಣಗಳನ್ನು ಅಂತಿಮಗೊಳಿಸಿದ್ದಾರೆ ಎಂದು ವರದಿಯಾಗಿದೆ. ಆದರೆ ಶನಿವಾರ ಇದು ಅಧಿಕೃತ ಪ್ರಕಟನೆ ಮೂಲಕ ಹೊರಬೀಳಲಿದೆ ಎನ್ನಲಾಗಿದೆ. ಅಕ್ಟೋಬರ್ 5ರಿಂದ ನವೆಂಬರ್ 19ರ ವರೆಗೆ ಈ ಕ್ರೀಡಾಕೂಟ ನಡೆಯುವ ಸಾಧ್ಯತೆ ಇದೆ.
ಟೂರ್ನಿಗಾಗಿ ಕನಿಷ್ಠ 10ಕ್ಕೂ ಹೆಚ್ಚು ಸ್ಥಳಗಳನ್ನು ಆಯ್ಕೆ ಮಾಡಲಾಗಿದೆ. ಬೆಂಗಳೂರು, ಚೆನ್ನೈ, ದೆಹಲಿ, ಧರ್ಮಶಾಲಾ, ಗುವಾಹಟಿ, ಹೈದರಾಬಾದ್, ಕೋಲ್ಕೊತಾ, ಲಕ್ನೋ, ಇಂದೋರ್, ರಾಜ್‌ಕೋಟ್ ಮತ್ತು ಮುಂಬೈ ಈ ಪಟ್ಟಿಯಲ್ಲಿ ಸೇರಿವೆ ಎನ್ನಲಾಗಿದೆ.
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯ ಚೆನ್ನೈನಲ್ಲಿ ನಡೆಯುವ ಸಾಧ್ಯತೆಯಿದೆ. ಪಾಕಿಸ್ತಾನದ ಹೆಚ್ಚಿನ ಪಂದ್ಯಗಳು ಬೆಂಗಳೂರು ಮತ್ತು ಚೆನ್ನೈನಲ್ಲಿ ನಡೆಯಲಿದೆ. ಬಾಂಗ್ಲಾದೇಶದ ಪಂದ್ಯಗಳು ಕೋಲ್ಕತ್ತಾ ಮತ್ತು ಗುವಾಹಟಿಯಲ್ಲಿ ನಡೆಯುವ ಸಾಧ್ಯತೆ ಇದೆ. ಭಾರತ ಮತ್ತು ಪಾಕಿಸ್ತಾನ ವಿರುದ್ಧದ ಪಂದ್ಯ ಅಹಮದಾಬಾದ್ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ ಎಂದು ವರದಿಯಾಗಿತ್ತು. ಆದರೆ ಪಾಕಿಸ್ತಾನ ತಂಡ ಯಾವುದೇ ಕಾರಣಕ್ಕೂ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಪಂದ್ಯ ಆಡುವುದಿಲ್ಲ ಎಂದು ಹೇಳಿದೆ. ಅಂತಿಮ ಪಟ್ಟಿ ಹೇಗೆ ಇರಲಿದೆ ಎಂದು ಶನಿವಾರ ಉತ್ತರ ಸಿಗುವ ಸಾಧ್ಯತೆ ಇದೆ.
ಇದನ್ನೂ ಓದಿ World Cup 2023: ಈ ಸ್ಟೇಡಿಯಂನಲ್ಲಿ ಪಾಕ್ ತಂಡ ಭಾರತ ವಿರುದ್ಧ ವಿಶ್ವ ಕಪ್ ಆಡಲ್ಲವಂತೆ!
48 ಪಂದ್ಯಗಳು
ಒಟ್ಟು ಹತ್ತು ತಂಡಗಳನ್ನು ಎರಡು ಗುಂಪುಗಳಾಗಿ ಆಡಿಸಲಾಗುತ್ತದೆ. ಹೀಗಾಗಿ 46 ದಿನಗಳಲ್ಲಿ 48 ಪಂದ್ಯಗಳು ನಡೆಯಲಿವೆ. ಅಕ್ಟೋಬರ್-ನವೆಂಬರ್ನಲ್ಲಿ ಕೆಲ ಪ್ರದೇಶಗಳಲ್ಲಿ ಹಿಂಗಾರು ಮಳೆ ಸಾಧ್ಯತೆ ಇರುವುದರಿಂದ ಅಭ್ಯಾಸ ನಡೆಸುವ ತಾಣಗಳನ್ನು ಬಿಸಿಸಿಐ ಶಿಘ್ರದಲ್ಲೇ ಪ್ರಕಟಿಸಲಿದೆ ಎಂದು ವರದಿ ಮಾಡಿದೆ.