ಕರಾಚಿ: ಭಾರತ ಆತಿಥ್ಯದಲ್ಲಿ ನಡೆಯುವ ಐಸಿಸಿ ಏಕದಿನ ವಿಶ್ವ ಕಪ್ ಟೂರ್ನಿಯ(ICC World Cup 2023) ವಿಚಾರದಲ್ಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಹೊಸ ಕ್ಯಾತೆಯೊಂದನ್ನು ತೆಗೆದಿದ್ದು ಒಂದೊಮ್ಮೆ ಐಸಿಸಿ ಈ ಟೂರ್ನಿಯ ವೇಳಾಪಟ್ಟಿ ಪ್ರಕಟಿಸಿದರೂ ನಾವು ಆಡಬೇಕೆ ಅಥವಾ ಬೇಡವೇ ಎಂದು ನಮ್ಮ ಸರ್ಕಾರ ನಿರ್ಧರಿಸಲಿದೆ ಎಂದು ತಿಳಿಸಿದೆ.
ಪಾಕ್ ಕ್ರಿಕೆಟ್ ಮಂಡಳಿಯ ಅಧ್ಯಕ್ಷರಾಗಿರುವ ನಜಾಮ್ ಸೇಥಿ(Najam Sethi) ಅವರು ಏಕದಿನ ವಿಶ್ವ ಕಪ್ ವಿಚಾರವಾಗಿ ಐಸಿಸಿಗೆ ಮತ್ವದ ಹೇಳಿಕೆ ನೀಡಿದ್ದಾರೆ. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ವಿಶ್ವಕಪ್ ವೇಳಾಪಟ್ಟಿ ಪ್ರಕಟಗೊಳಿಸಲು ನಮ್ಮ ಯಾವುದೇ ಅಭ್ಯಾಂತರವಿಲ್ಲ. ನಮ್ಮ ಪಂದ್ಯಗಳನ್ನು ಯಾವ ಕ್ರೀಡಾಂಗಣದಲ್ಲಿ ನಡೆಸಲು ತೀರ್ಮಾನಿಸಿದರೂ, ನಮ್ಮ ತಂಡ ಭಾರತಕ್ಕೆ ಹೋಗಬೇಕೇ ಬೇಡವೇ ಎಂಬುದನ್ನು ಸರ್ಕಾರವೇ ನಿರ್ಧರಿಸಲಿದೆ. 2016ರ ಟಿ20 ವಿಶ್ವಕಪ್ನಲ್ಲಿ ತಮ್ಮ ಪಂದ್ಯವನ್ನು ಧರ್ಮಶಾಲಾದಿಂದ ಕೋಲ್ಕತ್ತಾಕ್ಕೆ ಸ್ಥಳಾಂತರಿಸಲಾಗಿತ್ತು” ಎಂದು ಹೇಳಿದರು.
“ಭಾರತ ಕ್ರಿಕೆಟ್ ತಂಡ (Indian Cricket Team) ಪಾಕಿಸ್ತಾನಕ್ಕೆ ಪ್ರವಾಸ ಮಾಡಲು ಅಥವಾ ಪಾಕಿಸ್ತಾನ ಕ್ರಿಕೆಟ್ ತಂಡ ಭಾರತಕ್ಕೆ ಪ್ರವಾಸ ಮಾಡಲು ಪಿಸಿಬಿ ಅಥವಾ ಬಿಸಿಸಿಐ ತೀರ್ಮಾನ ಮಾಡುವುದಿಲ್ಲ. ಆಯಾ ದೇಶದ ಸರ್ಕಾರಗಳು ಈ ಬಗ್ಗೆ ನಿರ್ಧಾರ ಕೈಗೊಳ್ಳಲಿದೆ. ಹೀಗಾಗಿ ಸರ್ಕಾರ ಯಾವ ನಿರ್ಧಾರ ಕೈಗೊಳ್ಳಲಿದೆ ಎನ್ನುವುದರ ಮೇಲೆ ನಮ್ಮ ವಿಶ್ವ ಕಪ್ ಭವಿಷ್ಯ ಅಡಗಿದೆ” ಎಂದು ಹೇಳಿದರು.
ಇದನ್ನೂ ಓದಿ ICC World Cup 2023: ಮೋದಿ ಸ್ಟೇಡಿಯಂನಲ್ಲಿ ಆಡಲು ಪಾಕ್ ನಕಾರ; ವಿಶ್ವ ಕಪ್ ವೇಳಾಪಟ್ಟಿ ಮತ್ತಷ್ಟು ವಿಳಂಬ
ಹೈಬ್ರಿಡ್ ಮಾದರಿಯಲ್ಲಿ ಏಷ್ಯಾ ಕಪ್
ಬಹುನಿರೀಕ್ಷಿತ ಏಷ್ಯಾ ಕಪ್ ಟೂರ್ನಿ(Asia Cup 2023) ಆಗಸ್ಟ್ 31 ರಿಂದ ಸೆಪ್ಟೆಂಬರ್ 17 ರವರೆಗೆ ನಡೆಯಲಿದೆ. ಒಟ್ಟು ಆರು ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಲಿವೆ. ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ, ಅಫಘಾನಿಸ್ತಾನ ಮತ್ತು ನೇಪಾಳ ನಡುವೆ ಟೂರ್ನಿ ನಡೆಯಲಿದೆ.
ಹೈಬ್ರಿಡ್ ಮಾದರಿಯಲ್ಲಿ ನಡೆಯಲಿರುವ ಈ ಟೂರ್ನಿಯ ಆರಂಭಿಕ ನಾಲ್ಕು ಪಂದ್ಯಗಳು ಪಾಕಿಸ್ತಾನದಲ್ಲಿ ನಡೆಯಲಿದೆ ಉಳಿದ ಎಲ್ಲ ಪಂದ್ಯಗಳು ಶ್ರೀಲಂಕಾದಲ್ಲಿ ನಡೆಯಲಿದೆ. ಭಾರತ ತನ್ನ ಪಾಲಿನ ಪಂದ್ಯಗಳನ್ನು ಲಂಕಾದಲ್ಲಿ ಆಡಲಿದೆ.