Site icon Vistara News

ICC World Cup 2023: ಹೈದರಾಬಾದ್ ಬಿರಿಯಾನಿಗೆ ಮನಸೋತ ಪಾಕ್​ ಆಟಗಾರರು; ತವರಿಗೆ ಹೋಗಲು ಹಿಂದೇಟು

Hyderabadi biryani vs Karachi biryani

ಹೈದರಾಬಾದ್​: ಏಕದಿನ ವಿಶ್ವಕಪ್​ ಟೂರ್ನಿಯಲ್ಲಿ ಪಾಲ್ಗೊಳ್ಳಲು ಭಾರತಕ್ಕೆ ಬಂದಿರುವ ಪಾಕಿಸ್ತಾನ ತಂಡದ ಆಟಗಾರರು ಸದ್ಯ ಹೈದರಾಬಾದ್​ನಲ್ಲಿ ತಂಗಿದ್ದಾರೆ. ಇಲ್ಲಿನ ವಿಶಿಷ್ಟ ರುಚಿಯ, ವಿನೂತನ ಖಾದ್ಯಗಳನ್ನು ಸವಿಯುತ್ತಾ ಎಂಜಾಯ್​ ಮಾಡುತ್ತಿದ್ದಾರೆ. ಹೈದರಾಬಾದ್​ನ ಫೇಮಸ್​ ಬಿರಿಯಾನಿ(Hyderabadi biryani) ತಿಂದ ಪಾಕ್​ ಆಟಗಾರರು ಇದರ ರುಚಿ ಕಂಡು ಕರಾಚಿ ಬಿರಿಯಾನಿಗಿಂತ(Karachi biryani) ಸೂಪರ್​ ಆಗಿದೆ ಎಂದಿದ್ದಾರೆ. ಈ ವಿಡಿಯೊವನ್ನು ಐಸಿಸಿ ತನ್ನ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದೆ.

ಅದ್ಭುತ ಬಿರಿಯಾನಿ…

ಹೈದರಾಬಾದ್​ ಎಂದರೆ ನೆನಪಾಗುವುದೇ ಬಿರಿಯಾನಿ. ಇದು ಇಲ್ಲಿನ ವಿಶೇಷತೆಯಾಗಿದೆ. ಹೈದರಾಬಾದ್​ ಬಿರಿಯಾನಿ ತಿಂದ ಬಳಿಕ ಪಾಕ್​ ಆಟಗಾರರಲ್ಲಿ ಅಭಿಪ್ರಾಯ ಕೇಳಲಾಯಿತು. ಈ ವೇಳೆ ಪಾಕಿಸ್ತಾನ ಕ್ರಿಕೆಟ್​ ತಂಡದ ನಾಯಕ ಬಾಬರ್​ ಅಜಂ, ಫಖಾರ್​ ಜಮಾನ್, ಹಸನ್​ ಅಲಿ​ ಸೇರಿ ಕೆಲವರು ಹಿಂದೆಂದೂ ಈ ರೀತಿಯ ಬಿರಿಯಾನಿ ತಿಂದಿಲ್ಲ. ನಮ್ಮ ದೇಶದ ಕರಾಚಿ ಬಿರಿಯಾನಿಗಿಂತ ಹೈದರಾಬಾದ್ ಬಿರಿಯಾನಿ ಸೂಪರ್​ ಆಗಿದೆ ಎಂದು ಹೇಳಿದ್ದಾರೆ. ಅಲ್ಲದೆ 20ಕ್ಕೆ 20 ಅಂಕವನ್ನು ನೀಡಿದ್ದಾರೆ.

ಫೀಲ್ಡಿಂಗ್​ ನಡೆಸಲು ಕಷ್ಟವಾಯಿತು

ನ್ಯೂಜಿಲ್ಯಾಂಡ್​ ವಿರುದ್ಧದ ಅಭ್ಯಾಸ ಪಂದ್ಯದ ವೇಳೆ ಪಾಕ್​ ಆಟಗಾರ ಸೋಲು ಕಂಡಿತು. ಪಂದ್ಯದ ಬಳಿಕ ಹರ್ಷಾ ಬೋಗ್ಲೆ ಅವರು ಶಾದಾಬ್‌ ಖಾನ್‌ ಬಳಿ ಮಾತನಾಡುವ ವೇಳೆ ನೀವು ಬಿರಿಯಾನಿ ತಿಂದಿದ್ದೀರಾ? ಹೇಗಿದೆ ರುಚಿ ಎಂದು ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಶಾದಾಬ್‌ ಖಾನ್‌ ಬಹಳ ಚೆನ್ನಾಗಿತ್ತು. ರುಚಿಯಾದ ಬಿರಿಯಾನಿ ತಿಂದು ಪೀಲ್ಡಿಂಗ್​ ನಡೆಸಲು ಕೂಡ ಕಷ್ಟವಾಯಿತು ಎಂದಿದ್ದರು. ಅಷ್ಟರ ಮಟ್ಟಿಗೆ ಬಿರಿಯಾನಿ ತಿಂದೆವು ಎನ್ನುವ ಅರ್ಥದಲ್ಲಿ ಅವರು ಈ ಮಾತನ್ನು ಹೇಳಿದ್ದಾರೆ.

ಕೇಸರಿ ಶಾಲು ಹಾಕಿ ಸ್ವಾಗತ

ಕಳೆದ ವಾರ ಹೈದರಾಬಾದ್​ ವಿಮಾನ ನಿಲ್ದಾಣಕ್ಕೆ ಬಂದ ಪಾಕಿಸ್ತಾನ ತಂಡದ ಆಟಗಾರರಿಗೆ ಕೇಸರಿ ಶಾಲು ಹಾಕಿ ಭವ್ಯ ಸ್ವಾಗತ ಕೋರಿ ಬರಮಾಡಿಕೊಳ್ಳಲಾಗಿತ್ತು. ಈ ವೇಳೆ ಭಾರಿ ಬಿಗಿ ಭದ್ರತೆಯೂ ಮಾಡಲಾಗಿತ್ತು. ಪಾಕ್​ ಆಟಗಾರರು ಕೇಸರಿ ಶಾಲು ಧರಿಸಿದ ಫೋಟೊ ಮತ್ತು ವಿಡಿಯೊ ವೈರಲ್​ ಆಗಿತ್ತು. ಪಾಕ್​ ತಂಡದ ನಾಯಕ ಬಾಬರ್​ ಅಜಂ ಅವರನ್ನು ನೆಟ್ಟಿಗರು ತೆಲಂಗಾಣದ ಯುವ ಬಿಜೆಪಿ ಯುವ ಘಟಕದ ನಾಯಕ ಎಂದು ಟ್ರೋಲ್ ಕೂಡ​ ಮಾಡಿದ್ದರು.

7 ವರ್ಷಗಳ ಬಳಿಕ ಭಾರತಕ್ಕೆ ಆಗಮನ

ಪಾಕಿಸ್ತಾನ ತಂಡ 7 ವರ್ಷಗಳ ಬಳಿಕ ಭಾರತಕ್ಕೆ ಕಾಲಿಟ್ಟಿದೆ. 2016ರಲ್ಲಿ ನಡೆದಿದ್ದ ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಆಡಲು ಕೊನೆಯ ಬಾರಿ ಪಾಕ್​ ತಂಡ ಭಾರತಕ್ಕೆ ಬಂದಿತ್ತು. ಮುಂಬಯಿ ದಾಳಿಯ ಬಳಿಕ ಭಾರತ ಮತ್ತು ಪಾಕಿಸ್ತಾನ ದ್ವಿಪಕ್ಷೀಯ ಸರಣಿ ಆಡುವುದನ್ನು ನಿಲ್ಲಿಸಿದೆ. ಕೇವಲ ಐಸಿಸಿ ಟೂರ್ನಿಗಳಲ್ಲಿ ಮಾತ್ರ ಮುಖಾಮುಖಿಯಾಗುತ್ತಿವೆ.

ಇದನ್ನೂ ಓದಿ ICC World Cup 2023 : ನಾಯಕರ ದಿನದಂದು ತೂಕಡಿಸಿದ ದಕ್ಷಿಣ ಆಫ್ರಿಕಾ ನಾಯಕ ಫುಲ್ ಟ್ರೋಲ್​!

ವೀಸಾ ಸಮಸ್ಯೆ ಎದುರಿಸಿದ್ದ ಪಾಕ್​

​ಪಾಕಿಸ್ತಾನ ತಂಡ ಕೆಲವು ದಿನಗಳ ಹಿಂದೆಯೇ ಭಾರತಕ್ಕೆ ಬರಬೇಕಿತ್ತು. ಆದರೆ ವೀಸಾ ಸಮಸ್ಯೆಯಿಂದ ಪ್ರಯಾಣ ಅಸಾಧ್ಯವಾಗಿತ್ತು. ಇದೇ ವಿಚಾರವಾಗಿ ಪಾಕ್​ ಕ್ರಿಕೆಟ್​ ಮಂಡಳಿ ವಿಶ್ವಕಪ್​ಗೆ ಪೂರ್ವ ತಯಾರಿ ನಡೆಸಲು ಸರಿಯಾದ ವ್ಯವಸ್ಥೆ ಇಲ್ಲವೆಂದು ಜಾಗತಿಕ ಸಂಸ್ಥೆಯೊಂದಿಗೆ ಕಳವಳ ವ್ಯಕ್ತಪಡಿಸಿತ್ತು. ಕೊನೆಗೆ ಐಸಿಸಿ ಮಧ್ಯಪ್ರವೇಶಿಸಿ ಈ ಸಮಸ್ಯೆಯನ್ನು ಬಗೆಹರಿಸಿ ಸೋಮವಾರ ಪಾಕಿಸ್ತಾನ ಕ್ರಿಕೆಟ್ ತಂಡದ ಸದಸ್ಯರಿಗೆ ಭಾರತೀಯ ವೀಸಾಗಳನ್ನು ನೀಡುವ ವ್ಯವಸ್ಥೆ ಮಾಡಿತ್ತು.

ಇದನ್ನೂ ಓದಿ ICC World Cup 2023: ವಿಶ್ವಕಪ್​ ಟೂರ್ನಿಗೆ ಡೂಡಲ್‌ ಮೂಲಕ ಶುಭ ಕೋರಿದ ಗೂಗಲ್‌

ಭಾರತ-ಪಾಕ್​ ಮುಖಾಮುಖಿ

ಭಾರತ ಮತ್ತು ಪಾಕ್​ ನಡುವಣ ಹೈವೋಲ್ಟೇಜ್​ ಕದನ ಅಕ್ಟೋಬರ್​ 14ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆಯಲಿದೆ. ಈ ಪಂದ್ಯ ಕಣ್ತುಂಬಿಕೊಳ್ಳಲು ಕ್ರಿಕೆಟ್​ ಅಭಿಮಾನಿಗಳು ಚಾತಕ ಪಕ್ಷಿಯಂತೆ ಕಾದು ಕುಳಿತ್ತಿದ್ದಾರೆ. ಪಾಕಿಸ್ತಾನ ತಂಡ ಅಕ್ಟೋಬರ್ 6ರಂದು ನೆದರ್ಲೆಂಡ್ಸ್ ವಿರುದ್ಧ ಆಡುವ ಮೂಲಕ ತನ್ನ ವಿಶ್ವಕಪ್ ಅಭಿಯಾನ ಆರಂಭಿಸಲಿದೆ.

Exit mobile version