ಮುಂಬಯಿ: ಹಲವು ಗೊಂದಲಗಳಿಗೆ ಎಡೆಮಾಡಿಕೊಟ್ಟಿದ್ದ ಏಷ್ಯಾಕಪ್ ಟೂರ್ನಿಯ ವೇಳಾಪಟ್ಟಿ ಕೊನೆಗೂ ಗುರುವಾರ ಪ್ರಕಟಗೊಂಡಿತು. ಆದರೆ ಇದೀಗ ಐಸಿಸಿ ಏಕದಿನ ವಿಶ್ವ ಕಪ್ ಟೂರ್ನಿಯ(ICC World Cup 2023) ವೇಳಾಪಟ್ಟಿ ಮತ್ತಷ್ಟು ವಿಳಂಬಗೊಳ್ಳುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಇದಕ್ಕೆ ಕಾರಣ ಪಾಕಿಸ್ತಾನ ತಂಡ ಭಾರತ ವಿರುದ್ಧ ಅಹಮದಾಬಾದ್ನಲ್ಲಿ ಪಂದ್ಯ ಆಡಲು ಒಪ್ಪದಿರುವುದು.
ಏಷ್ಯಾ ಕಪ್ನಲ್ಲಿ ಭಾರತ ತಂಡ ಭದ್ರತಾ ಕಾರಣಗಳಿಂದಾಗಿ ಪಾಕಿಸ್ತಾನದಲ್ಲಿ ಆಡಲು ನಿರಾಕರಿಸಿತ್ತು. ಇದೇ ಕಾರಣಕ್ಕೆ ಈ ಟೂರ್ನಿಯನ್ನು ಹೈಬ್ರಿಡ್ ಮಾದರಿಯಲ್ಲಿ ಮೊದಲ ನಾಲ್ಕು ಪಂದ್ಯಗಳು ಪಾಕಿಸ್ತಾನ ಮತ್ತು ಉಳಿದ 9 ಪಂದ್ಯಗಳನ್ನು ಲಂಕಾದಲ್ಲಿ ನಡೆಸಲಾಗುತ್ತದೆ. ಭಾರತದ ಎಲ್ಲ ಪಂದ್ಯಗಳು ಲಂಕಾದಲ್ಲಿ ನಡೆಯಲಿದೆ. ಇದಕ್ಕೆ ಸೇಡು ತೀರಿಸಲು ಮುಂದಾದ ಪಾಕ್, ಅಹಮದಾಬಾಸದ್ನಲ್ಲಿ ಪಂದ್ಯ ಆಡುವುದಿಲ್ಲ ಎಂದು ಪಟ್ಟು ಹಿಡಿದಿದೆ.
ಪಾಕಿಸ್ತಾನವೂ ಕೂಡ ಭದ್ರತಾ ಕಾರಣಗಳಿಂದಾಗಿ ವಿಶ್ವದ ಬೃಹತ್ ಕ್ರಿಕೆಟ್ ಸ್ಟ್ರೇಡಿಯಂ ಅಹಮದಾಬಾದ್ನಲ್ಲಿ ಆಡಲು ಹಿಂದೇಟು ಹಾಕಿದೆ. ಹೀಗಾಗಿ ವೇಳಾಪಟ್ಟಿ ಪ್ರಕಟ ತಡವಾಗಿದೆ. ಒಂದು ವೇಳೆ ಅಹ್ಮದಾಬಾದ್‌ನಲ್ಲಿ ಪಂದ್ಯ ನಡೆಯದಿದ್ದರೆ ಕೋಲ್ಕತಾ ಅಥವಾ ಮುಂಬಯಿಗೆ ಪಾಕಿಸ್ತಾನದ ಪಂದ್ಯಗಳು ಸ್ಥಳಾಂತರಗೊಳ್ಳುವ ಸಾಧ್ಯತೆಯಿದೆ.
ಇದನ್ನೂ ಓದಿ ICC World Cup 2023: ಕಿವೀಸ್ಗೆ ಮತ್ತೆ ಆಘಾತ; ಮತ್ತೊಬ್ಬ ಸ್ಟಾರ್ ಆಟಗಾರ ವಿಶ್ವ ಕಪ್ನಿಂದ ಔಟ್
ಪಾಕಿಸ್ಥಾನ ತನ್ನ ಇನ್ನುಳಿದ ಪಂದ್ಯಗಳನ್ನು ಬೆಂಗಳೂರು, ಹೈದರಾಬಾದ್, ಚೆನ್ನೈ, ಕೋಲ್ಕತಾದಲ್ಲಿ ಆಡಲಿದೆ. ಈ ಬಗ್ಗೆ ಯೋಚಿಸಲು ಪಿಸಿಬಿಗೆ ಐಸಿಸಿ ಸಮಯ ನೀಡಿದೆ. ಒಂದು ವೇಳೆ ಪಾಕ್ ಅಹ್ಮದಾಬಾದ್‌ನಲ್ಲಿ ಆಡಲು ಒಪ್ಪಿದರೆ, ತಂಡಕ್ಕೆ ಬಿಗಿಭದ್ರತೆ ನೀಡುವುದು ಐಸಿಸಿಯ ಹೊಣೆ ಆಗುತ್ತದೆ. ಸದ್ಯಕ್ಕೆ ಪಾಕ್ ಯಾವುದೇ ಕಾರಣಕ್ಕೂ ಅಹಮದಾಬಾದ್ನಲ್ಲಿ ಪಂದ್ಯ ಆಡುವುದಿಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದೆ. ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ಪಂದ್ಯ ನಡೆದರೇ ಮಾತ್ರ ಜಾಹಿರಾತು ಸೇರಿ ಎಲ್ಲ ಮಾಧ್ಯಮಗಳಿಗೂ ಅತ್ಯಧಿಕ ಆದಾಯ ಹರಿದು ಬರುತ್ತದೆ. ಈ ಎಲ್ಲ ಕಾರಣದಿಂದ ಬಿಸಿಸಿಐ(BCCI) ಪಾಕ್ ಬೇಡಿಕೆಗೆ ಒಪ್ಪಿಗೆ ಸೂಚಿಸಿದರೂ ಅಚ್ಚರಿಯಿಲ್ಲ.