Site icon Vistara News

ICC World Cup 2023: ವಿಶ್ವಕಪ್‌ಗೆ ನ್ಯೂಜಿ’ಲ್ಯಾಂಡ್’; ತಂಡದ ಸ್ಟ್ರೆಂತ್‌ ಏನು? ವೀಕ್‌ನೆಸ್‌ ಏನೇನು?

New Zealand Tea,

ICC World Cup 2023: Positive And Negative Points Of New Zealand Squad

ಬೆಂಗಳೂರು: ಸ್ಥಿರ ಪ್ರದರ್ಶನಕ್ಕೆ ಮತ್ತೊಂದು ಹೆಸರಾಗಿರುವ ನ್ಯೂಜಿಲ್ಯಾಂಡ್‌ ಕ್ರಿಕೆಟ್‌ ತಂಡವು (New Zealand World Cup Squad) ಏಕದಿನ ವಿಶ್ವಕಪ್‌ಗಾಗಿ (ICC World Cup 2023) ಭಾರತಕ್ಕೆ ಆಗಮಿಸಿದೆ. ಅದು ಏಕದಿನ ಇರಲಿ, ಟಿ-20 ವಿಶ್ವಕಪ್‌ ಇರಲಿ, ಟೂರ್ನಿಯುದ್ದಕ್ಕೂ ಉತ್ತಮ ಪ್ರದರ್ಶನ ತೋರಿ, ಕೊನೆಯಲ್ಲಿ ಎಡವಿಬಿಡುವ ಚಾಳಿಯು ನ್ಯೂಜಿಲ್ಯಾಂಡ್‌ ತಂಡವನ್ನು ಹಲವು ವರ್ಷಗಳಿಂದ ಬಾಧಿಸುತ್ತಿದೆ. ಆದರೂ, ಈ ಬಾರಿ ಭಾರತದಲ್ಲಿ ಕಪ್‌ ಎತ್ತಿಹಿಡಿಯುವ ಮೂಲಕ ಇತಿಹಾಸ ಸೃಷ್ಟಿಸುವ ಉತ್ಸಾಹದೊಂದಿಗೆ ಆಗಮಿಸಿರುವ ಕೇನ್‌ ವಿಲಿಯಮ್ಸನ್‌ ಪಡೆಯ ಸ್ಟ್ರೆಂತ್‌ ಏನು? ವೀಕ್‌ನೆಸ್‌ಗಳು ಏನೇನಿವೆ? ಇನ್ನೂ ಎಲ್ಲಿ ತಂಡ ಸುಧಾರಿಸಿಕೊಳ್ಳಬೇಕು ಎಂಬುದರ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ICC World Cup 2023: ವಿಶ್ವಕಪ್‌ ಫೈಟ್‌ಗೆ ಪಾಕ್‌ ಸಜ್ಜು; ತಂಡದ ಬಲ-ದೌರ್ಬಲ್ಯಗಳೇನು? ಇಲ್ಲಿದೆ ವಿವರಣೆ

ನ್ಯೂಜಿಲ್ಯಾಂಡ್‌ 15 ಆಟಗಾರರ ತಂಡ

ಕೇನ್‌ ವಿಲಿಯಮ್ಸನ್‌ (ನಾಯಕ), ಟ್ರೆಂಟ್‌ ಬೌಲ್ಟ್‌, ಮಾರ್ಕ್‌ ಚಾಪ್‌ಮ್ಯಾನ್‌, ಡೆವೊನ್‌ ಕಾನ್ವೆ, ಲಾಕಿ ಫರ್ಗ್ಯೂಸನ್‌, ಮ್ಯಾಟ್‌ ಹೆನ್ರಿ, ಟಾಮ್‌ ಲಾಥಮ್‌, ಡೆರಿಲ್‌ ಮಿಚೆಲ್‌, ಜಿಮ್ಮಿ ನೀಶಮ್‌, ಗ್ಲೆನ್‌ ಫಿಲಿಪ್ಸ್‌, ರಾಚಿನ್‌ ರವೀಂದ್ರ, ಮಿಚ್‌ ಸ್ಯಾಂಟ್ನರ್‌, ಐಶ್‌ ಸೋಧಿ, ಟಿಮ್‌ ಸೌಥಿ ಹಾಗೂ ವಿಲ್‌ ಯಂಗ್.‌

ವಿಲಿಯಮ್ಸನ್‌ ಪಡೆಯ ಸಾಮರ್ಥ್ಯವೇನು?

  1. ಕೇನ್‌ ವಿಲಿಯಮ್ಸನ್‌ ಎಂಬ ಕೂಲ್‌ ಕ್ಯಾಪ್ಟನ್‌ ವಿಶ್ವಕಪ್‌ನಲ್ಲಿ ತಂಡವನ್ನು ಮುನ್ನಡೆಸುತ್ತಿರುವುದು ನ್ಯೂಜಿಲ್ಯಾಂಡ್‌ ತಂಡಕ್ಕೆ ಪ್ಲಸ್‌ ಪಾಯಿಂಟ್‌ ಆಗಿದೆ. ಒತ್ತಡದ ಸಂದರ್ಭದಲ್ಲೂ ತಂಡವನ್ನು ನಿಭಾಯಿಸುವ ರೀತಿ, ತೆಗೆದುಕೊಳ್ಳುವ ನಿರ್ಧಾರಗಳು ನ್ಯೂಜಿಲ್ಯಾಂಡ್‌ ತಂಡದ ಭವಿಷ್ಯವನ್ನೇ ನಿರ್ಧರಿಸಲಿದೆ.
  2. ಅದ್ಭುತ ಬೌಲಿಂಗ್‌ ಲೈನ್‌ಅಪ್‌ ಹೊಂದಿರುವ ಕಾರಣದಿಂದಲೇ ನ್ಯೂಜಿಲ್ಯಾಂಡ್‌ ತಂಡವು ವಿಶ್ವಕಪ್‌ ಗೆಲ್ಲುವ ಫೇವರಿಟ್‌ ತಂಡಗಳಲ್ಲಿ ಒಂದಾಗಿದೆ. ಟ್ರೆಂಟ್‌ ಬೌಲ್ಟ್‌, ಮ್ಯಾಟ್‌ ಹೆನ್ರಿ ಹಾಗೂ ಲಾಕೀ ಫರ್ಗ್ಯೂಸನ್‌ ತ್ರಿವಳಿಗಳ ಬೌಲಿಂಗ್‌ ದಾಳಿಯನ್ನು ಎದುರಿಸುವುದು ಜಗತ್ತಿನ ಯಾವ ಬಲಿಷ್ಠ ತಂಡಕ್ಕೂ ಕಠಿಣ ಸವಾಲೇ.
  3. ಸ್ಪಿನ್‌ ವಿಭಾಗದಲ್ಲೂ ನ್ಯೂಜಿಲ್ಯಾಂಡ್‌ ತಂಡವು ಬಲಿಷ್ಠವಾಗಿತ್ತು. ಇತ್ತೀಚಿನ ವರ್ಷಗಳಲ್ಲಿ ಐಶ್‌ ಸೌಧಿ ಅವರು ತಂಡಕ್ಕಾಗಿ ಹಲವು ಬಾರಿ ಉತ್ತಮ ಪ್ರದರ್ಶನ ತೋರಿದೆ. ಇನ್ನು ಫೀಲ್ಡಿಂಗ್‌ನಲ್ಲೂ ನ್ಯೂಜಿಲ್ಯಾಂಡ್‌ ಸಮರ್ಥ ತಂಡ ಎನಿಸಿರುವುದು ಪ್ರಮುಖ ಬಲವಾಗಿದೆ.

ಕಾಡುತ್ತಿರುವ ದೌರ್ಬಲ್ಯಗಳು ಯಾವವು?

  1. ಬ್ಯಾಟಿಂಗ್‌ ಬಲದ ಜತೆಗೆ ನಾಯಕತ್ವದಿಂದಲೂ ಖ್ಯಾತಿಯಾಗಿರುವ ಕೇನ್‌ ವಿಲಿಯಮ್ಸನ್‌ ಅವರು ಗಾಯದ ಸಮಸ್ಯೆಯಿಂದಾಗಿ ನೂರಕ್ಕೆ ನೂರರಷ್ಟು ಫಿಟ್‌ ಆಗದ ಕಾರಣ ಕೆಲವು ಆರಂಭಿಕ ಪಂದ್ಯಗಳಿಗೆ ಅಲಭ್ಯರಾಗಿರುವುದು ನ್ಯೂಜಿಲ್ಯಾಂಡ್‌ ತಂಡಕ್ಕೆ ಅರಗಿಸಿಕೊಳ್ಳಲು ಕಷ್ಟವಾಗುತ್ತಿದೆ.
  2. ಭಾರತದ ನೆಲದಲ್ಲಿ ಸ್ಪಿನ್ನರ್‌ಗಳನ್ನು ಎದುರಿಸುವುದು ನ್ಯೂಜಿಲ್ಯಾಂಡ್‌ ತಂಡಕ್ಕೆ ಕಷ್ಟವಾಗಬಹುದು. ಅದರಲ್ಲೂ, ಗ್ಲೆನ್‌ ಫಿಲಿಪ್ಸ್‌, ಡೆರಿಲ್‌ ಮಿಚೆಲ್‌ ಅವರು ಭಾರತದಲ್ಲಿ ಸ್ಪಿನ್ನರ್‌ಗಳಿಗೆ ತಡಕಾಡಿದ ಉದಾಹರಣೆ ಸಾಕಷ್ಟಿವೆ. ಸ್ಪಿನ್ನರ್‌ಗಳ ವಿರುದ್ಧ ಒಳ್ಳೆಯ ರೆಕಾರ್ಡ್‌ ಇರುವ ವಿಲಿಯಮ್ಸನ್‌ ಅನುಪಸ್ಥಿತಿಯು ಕೆಲವು ಪಂದ್ಯಗಳಲ್ಲಿ ಬಾಧಿಸಲಿದೆ.
  3. ಬೌಲಿಂಗ್‌ ವಿಭಾಗದಲ್ಲೂ ಕಿವೀಸ್‌ ತಂಡಕ್ಕೆ ಗಾಯದ ಸಮಸ್ಯೆ ಕಾಡುತ್ತಿದೆ. ಪ್ರಮುಖ ಬೌಲರ್‌ ಆದ ಟಿಮ್‌ ಸೌಥಿ ಅವರು ಕೂಡ ಬಲಗೈ ಹೆಬ್ಬೆರಳಿನ ಗಾಯದಿಂದಾಗಿ ಮೊದಲ ಕೆಲ ಪಂದ್ಯಗಳನ್ನು ಮಿಸ್‌ ಮಾಡಲಿದ್ದಾರೆ. ಮತ್ತೊಂದೆಡೆ, ಡಸ್ಟಿ ಪಿಚ್‌ಗಳಲ್ಲಿ ವಿಲ್‌ ಯಂಗ್‌, ಮಾರ್ಕ್‌ ಚಂಪನ್‌ ಅವರ ಅನನುಭವವೂ ತಲೆನೋವಾಗಲಿದೆ.

ನ್ಯೂಜಿಲ್ಯಾಂಡ್‌ ತಂಡದ ಪಂದ್ಯಗಳ ವೇಳಾಪಟ್ಟಿ

ಅಕ್ಟೋಬರ್‌ 5: ನ್ಯೂಜಿಲ್ಯಾಂಡ್‌ vs ಇಂಗ್ಲೆಂಡ್‌

ಅಕ್ಟೋಬರ್‌ 9: ನ್ಯೂಜಿಲ್ಯಾಂಡ್‌ vs ನೆದೆರ್ಲೆಂಡ್ಸ್‌

ಅಕ್ಟೋಬರ್‌ 13: ನ್ಯೂಜಿಲ್ಯಾಂಡ್‌ vs ಬಾಂಗ್ಲಾದೇಶ

ಅಕ್ಟೋಬರ್‌ 18: ನ್ಯೂಜಿಲ್ಯಾಂಡ್‌ vs ಅಫಘಾನಿಸ್ತಾನ

ಅಕ್ಟೋಬರ್‌ 22: ನ್ಯೂಜಿಲ್ಯಾಂಡ್‌ vs ಭಾರತ

ಅಕ್ಟೋಬರ್‌ 28: ನ್ಯೂಜಿಲ್ಯಾಂಡ್‌ vs ಆಸ್ಟ್ರೇಲಿಯಾ

ನವೆಂಬರ್‌ 1: ನ್ಯೂಜಿಲ್ಯಾಂಡ್‌ vs ದಕ್ಷಿಣ ಆಫ್ರಿಕಾ

ನವೆಂಬರ್‌ 4: ನ್ಯೂಜಿಲ್ಯಾಂಡ್‌ vs ಪಾಕಿಸ್ತಾನ

ನವೆಂಬರ್‌ 9: ನ್ಯೂಜಿಲ್ಯಾಂಡ್‌ vs ಶ್ರೀಲಂಕಾ

ಇದನ್ನೂ ಓದಿ: ICC World Cup 2023 : ವಿಶ್ವ ಕಪ್​ಗೆ ಆಡುವ ಭಾರತ ತಂಡದ ಬಲಾಬಲವೇನು? ಗೆಲುವಿನ ಅವಕಾಶ ಎಷ್ಟಿದೆ?

ಇತ್ತೀಚಿನ ವಿಶ್ವಕಪ್‌ಗಳಲ್ಲಿ ನ್ಯೂಜಿಲ್ಯಾಂಡ್‌ ಪ್ರದರ್ಶನ

ಇತ್ತೀಚಿನ ಒಂದು ದಶಕದಲ್ಲಿ ನಡೆದ ಐಸಿಸಿ ಏಕದಿನ ಹಾಗೂ ಟಿ20 ವಿಶ್ವಕಪ್‌ನಲ್ಲಿ ನ್ಯೂಜಿಲ್ಯಾಂಡ್‌ ಉತ್ತಮ ಪ್ರದರ್ಶನ ತೋರಿದೆ. 2015ರ ಏಕದಿನ ವಿಶ್ವಕಪ್‌ ಫೈನಲ್‌ ತಲುಪಿದ್ದ ನ್ಯೂಜಿಲ್ಯಾಂಡ್‌ ತಂಡವು ಆಸ್ಟ್ರೇಲಿಯಾ ವಿರುದ್ಧ ಹೀನಾಯವಾಗಿ ಸೋಲನುಭವಿಸಿತು. 2019ರ ವಿಶ್ವಕಪ್‌ನಲ್ಲೂ ಅದ್ಭುತ ಆಟವಾಡಿದ ನ್ಯೂಜಿಲ್ಯಾಂಡ್‌, ಫೈನಲ್‌ನಲ್ಲಿ ಟೈ ಆಗಿ, ಸೂಪರ್‌ ಓವರ್‌ನಲ್ಲೂ ಸಮಬಲ ಸಾಧಿಸಿ, ಕೊನೆಗೆ ಬೌಂಡರಿ ಲೆಕ್ಕಾಚಾರದಲ್ಲಿ ಇಂಗ್ಲೆಂಡ್‌ ಚಾಂಪಿಯನ್‌ ಎನಿಸಿತು. ದುರದೃಷ್ಟದಿಂದ ಆ ಸಾಲಿನ ವಿಶ್ವಕಪ್‌ ನ್ಯೂಜಿಲ್ಯಾಂಡ್‌ ಕೈತಪ್ಪಿತು. 2021ರ ಟಿ20 ವಿಶ್ವಕಪ್‌ನಲ್ಲೂ ನ್ಯೂಜಿಲ್ಯಾಂಡ್‌ ಕ್ರಿಕೆಟ್‌ ತಂಡವು ಫೈನಲ್‌ನಲ್ಲಿ ಎಡವಿತು. ಆದರೂ, 2021ರ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಗೆದ್ದಿರುವ ನ್ಯೂಜಿಲ್ಯಾಂಡ್‌ ಈ ಬಾರಿಯೂ ಮೋಡಿ ಮಾಡುತ್ತದೆಯೇ ಎಂಬುದಕ್ಕೆ ಕಾಲವೇ ಉತ್ತರಿಸಲಿದೆ.

ವಿಶ್ವಕಪ್‌ ಕುರಿತ ಇನ್ನಷ್ಟು ಆಸಕ್ತಿದಾಯಕ ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

Exit mobile version