ಆಕ್ಲೆಂಡ್: ಭಾರತದ ಆತಿಥ್ಯದಲ್ಲಿ ಇದೇ ವರ್ಷ ನಡೆಯುವ ಏಕದಿನ ವಿಶ್ವ ಕಪ್ಗೆ ಈಗಾಗಲೇ 8 ತಂಡಗಳು ನೇರ ಪ್ರವೇಶ ಪಡೆದಿದೆ. ವಿಶ್ವಕಪ್(World Cup 2023) ಟೂರ್ನಿ ಅಕ್ಟೋಬರ್ನಿಂದ ಆರಂಭಗೊಳ್ಳಲಿದೆ ಎಂದು ತಿಳಿದುಬಂದಿದೆ. ಫೈನಲ್ ಪಂದ್ಯ ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ(narendra modi cricket stadium) ನಡೆಯಲಿದೆ ಎಂದು ವರದಿಯಾಗಿದೆ. ಆದರೆ ಇದೀಗ ನ್ಯೂಜಿಲ್ಯಾಂಡ್ ತಂಡಕ್ಕೆ ದೊಡ್ಡ ಆತಂಕವೊಂದು ಎದುರಾಗಿದೆ.
16ನೇ ಆವೃತ್ತಿಯ ಐಪಿಎಲ್ನ ಉದ್ಘಾಟನಾ ಪಂದ್ಯದಲ್ಲಿ ಫೀಲ್ಡಿಂಗ್ ನಡೆಸುವ ವೇಳೆ ಕೇನ್ ವಿಲಿಯಮ್ಸನ್(kane williamson) ಮಂಡಿನೋವಿನ ಗಾಯಕ್ಕೆ ತುತ್ತಾಗಿ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ. ಅವರ ಬದಲು ದಸುನ್ ಶನಕ ಅವರನ್ನು ಬದಲಿ ಆಟಗಾರನಾಗಿ ಗುಜರಾತ್ ಟೈಟಾನ್ಸ್ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಆದರೆ ಇದೀಗ ವಿಲಿಯಮ್ಸನ್ಗೆ ಶಸ್ತ್ರಚಿಕಿತ್ಸೆಯ ಅಗತ್ಯವಿದೆ ಎಂದು ತಿಳಿದುಬಂದಿದೆ. ಶಸ್ತ್ರಚಿಕಿತ್ಸೆ ಬಳಿಕ ಕನಿಷ್ಠ 6 ರಿಂದ 7 ತಿಂಗಳುಗಳ ಕಾಲ ವಿಶ್ರಾಂತಿ ಬೇಕೆಂದು ವೈದ್ಯರು ತೀಳಿಸಿದ್ದಾರೆ. ಹೀಗಾಗಿ ಅವರು ಏಕದಿನ ವಿಶ್ವ ಕಪ್ ವೇಳೆ ತಂಡಕ್ಕೆ ಮರಳುವುದು ಅನುಮಾನ. ಸದ್ಯದ ಮಾಹಿತಿ ಪ್ರಕಾರ ಅವರು ವಿಶ್ವ ಕಪ್ನಿಂದ ಹೊರಬೀಳುವ ಸಾಧ್ಯತೆಯಿದೆ ಎನ್ನಲಾಗಿದೆ.
ಇದನ್ನೂ ಓದಿ IPL 2023: ಗುಜರಾತ್ ಟೈಟಾನ್ಸ್ ಸೇರಿಕೊಂಡ ದಸುನ್ ಶನಕ
ವಿಲಿಯಮ್ಸನ್ ಅವರ ಮಂಡಿ ಊತವಾಗಿದ್ದು, ಸ್ಕ್ಯಾನ್ ವೇಳೆ ಗಾಯದ ಗಂಭೀರತೆ ತೀವ್ರವಾಗಿರುವುದು ಕಂಡು ಬಂದಿದೆ. ಇದಕ್ಕೆ ಶಸ್ತ್ರಚಿಕಿತ್ಸೆಯ ಅಗತ್ಯವಿದೆ ಎನ್ನಲಾಗಿದೆ. ಗಾಯದ ಬಗ್ಗೆ ವಿಲಿಯಮ್ಸನ್ ಕೂಡ ಮಾಹಿತಿ ಹಂಚಿಕೊಂಡಿದ್ದಾರೆ. “ಚೇತರಿಕೆಗೆ ಸ್ವಲ್ಪ ಸಮಯ ಬೇಕಾಗಿದೆ. ಆದರೆ ನಾನು ಸಾಧ್ಯವಾದಷ್ಟು ಬೇಗ ಮೈದಾನಕ್ಕೆ ಮರಳಲು ಪ್ರಯತ್ನಿಸುತ್ತೇನೆ” ಎಂದು ವಿಲಿಯಮ್ಸನ್ ಹೇಳಿದ್ದಾರೆ. ಸದ್ಯ ಅವರ ಈ ಹೇಳಿಕೆಯಿಂದಲೇ ಅವರು ಗಂಭೀರ ಗಾಯದಿಂದ ಬಳಲುತ್ತಿರುವುದು ಸ್ಪಷ್ಟವಾಗಿದೆ.
ಒಂದೊಮ್ಮೆ ಕೇನ್ ವಿಲಿಯಮ್ಸನ್ ಅವರು ಏಕದಿನ ವಿಶ್ವ ಕಪ್ನಿಂದ ಹೊರಬಿದ್ದರೆ ನ್ಯೂಜಿಲ್ಯಾಂಡ್ಗೆ ದೊಡ್ಡ ಹಿನ್ನಡೆಯಾಗಲಿದೆ. ಇವರ ನಾಯಕತ್ವದಲ್ಲಿಯೇ 2019ರಲ್ಲಿ ತಂಡ ಫೈನಲ್ ತಲುಪಿತ್ತು. ಇಲ್ಲಿ ಇಂಗ್ಲೆಂಡ್ ವಿಡುದ್ಧ ಬೌಂಡರಿ ಆಧಾರದಲ್ಲಿ ಸೋಲು ಕಂಡು ದ್ವಿತೀಯ ಸ್ಥಾನ ಪಡೆದಿತ್ತು. ಈ ಬಾರಿಯ ಟೂರ್ನಿಯಲ್ಲಿ ಕಪ್ ಗೆಲ್ಲುವ ಯೋಜನೆಯಲ್ಲಿದ್ದ ಕಿವೀಸ್ಗೆ ಇದೀಗ ವಿಲಿಯಮ್ಸನ್ ಗಾಯ ಚಿಂತೆಗೀಡು ಮಾಡಿದೆ.