ಬೆಂಗಳೂರು: ಕುಮಾರ ಸಂಗಕ್ಕರ್, ಮಹೇಲ ಜಯವರ್ದನೆ, ತಿಲಕರತ್ನೆ ದಿಲ್ಶಾನ್, ಲಸಿತ್ ಮಾಲಿಂಗ ಅವರಂತಹ ದಿಗ್ಗಜ ಆಟಗಾರರ ಕೊರತೆಯಿಂದ ಜಾಗತಿಕ ಕ್ರಿಕೆಟ್‌ನಲ್ಲಿ ಮಂಕಾದಂತೆ ಕಾಣುವ ಶ್ರೀಲಂಕಾ ತಂಡವು ಪುಟಿದೇಳುವ ತವಕದಲ್ಲಿದೆ. ಇದೇ ತವಕ, ಛಲದೊಂದಿಗೆ ಭಾರತಕ್ಕೆ ಆಗಮಿಸಿರುವ ಶ್ರೀಲಂಕಾ ತಂಡವು ಸಕಲ ರೀತಿಯಲ್ಲಿ ವಿಶ್ವಕಪ್‌ಗೆ ಸಜ್ಜಾಗುತ್ತಿದೆ. ಆ ಮೂಲಕ ದೇಶದ ಕ್ರಿಕೆಟ್‌ನಲ್ಲಿ ಹೊಸ ಮನ್ವಂತರ ಸೃಷ್ಟಿಸುವ ಹಂಬಲದಲ್ಲಿದೆ. ಕಳೆದ ಎರಡು ಏಷ್ಯಾಕಪ್‌ಗಳಲ್ಲಿ (ICC World Cup 2023) ಉತ್ತಮ ಪ್ರದರ್ಶನದ ಮೂಲಕ ಲಂಕಾ ಆಟಗಾರರು ಭರವಸೆ ಮೂಡಿಸಿದ್ದಾರೆ. ಹಾಗಾದರೆ, ಶ್ರೀಲಂಕಾ ಕ್ರಿಕೆಟ್ ತಂಡದ ಬಲಾಬಲ ಹೇಗಿದೆ? ಯಾವುದರಲ್ಲಿ ಲಂಕಾ ಬಲಿಷ್ಠವಾಗಿದೆ? ಯಾವ ವಿಭಾಗದಲ್ಲಿ ವೀಕ್ ಆಗಿದೆ ಎಂಬುದರ ಕಿರು ಮಾಹಿತಿ ಇಲ್ಲಿದೆ.
ಶ್ರೀಲಂಕಾ ಕ್ರಿಕೆಟ್ ತಂಡ
ದಸುನ್ ಶನಕ (ನಾಯಕ), ಕುಸಾಲ್ ಮೆಂಡಿಸ್ (ಉಪ ನಾಯಕ), ಕೌಸಲ್ ಪೆರೇರ, ಪಾತುಮ್ ನಿಸ್ಸಾಂಕ, ದಿಮುತ್ ಕರುಣಾರತ್ನೆ, ಸದೀರ ಸಮರವಿಕ್ರಮ, ಚರಿತ್ ಅಸಲಂಕ, ಧನಂಜಯ ಡಿ ಸಿಲ್ವ, ಮಹೀಶ್ ತೀಕ್ಷಣ, ದುನಿತ್ ವೆಲ್ಲಲಗೆ, ಮಥೀಶ ಪತಿರಾಣ, ಕಸುನ್ ರಜಿತ, ದುಶನ್ ಹೇಮಂತ, ಲಹಿರು ಕುಮಾರ ಹಾಗೂ ದಿಲ್ಶಾನ್ ಮದುಶನಕ.
ಯಾವ ವಿಭಾಗದಲ್ಲಿ ಲಂಕಾ ಬಲಿಷ್ಠ?
- ಶ್ರೀಲಂಕಾ ತಂಡದಲ್ಲಿ ಆಲ್‌ರೌಂಡರ್‌ಗಳ ಪಡೆಯೇ ಇದೆ. ಧನಂಜಯ ಡಿ ಸಿಲ್ವ, ಅಲ್ಸಂಕ ಹಾಗೂ ವೆಲ್ಲಲಗೆ ಅವರು ಸ್ಪಿನ್ ಆಲ್‌ರೌಂಡರ್‌ಗಳಾಗಿದ್ದು, ಇವರು ಬ್ಯಾಟಿಂಗ್ ಜತೆಗೆ ಬೌಲಿಂಗ್‌ನಲ್ಲೂ ಕೊಡುಗೆ ನೀಡಲಿದ್ದಾರೆ.
- ಏಷ್ಯಾದ ಪಿಚ್ ಹಾಗೂ ಹವಾಮಾನದಲ್ಲಿ ಉತ್ತಮ ಪ್ರದರ್ಶನ ತೋರುವ ಸಾಮರ್ಥ್ಯವನ್ನು ಕುಸಲ್ ಪೆರೇರ, ಕುಸಲ್ ಮೆಂಡಿಸ್ ಹಾಗೂ ಧನಂಜಯ ಡಿ ಸಿಲ್ವ ಹೊಂದಿದ್ದಾರೆ. ಹಾಗಾಗಿ, ಭಾರತದಲ್ಲಿ ಇವರು ಉತ್ತಮ ಪ್ರದರ್ಶನ ತೋರುವುದು ನಿಶ್ಚಿತ.
- ಶ್ರೀಲಂಕಾ ತಂಡದಲ್ಲಿ ಯುವ ಆಟಗಾರರೇ ಹೆಚ್ಚಿರುವ ಕಾರಣ ಮಹತ್ವದ ಪಂದ್ಯಗಳಲ್ಲಿ ಅನಿರೀಕ್ಷಿತ ಪ್ರದರ್ಶನ ನಿರೀಕ್ಷಿಸಬಹುದಾಗಿದೆ. ದುನಿತ್ ವೆಲ್ಲಲಗೆ, ಪತಿರಾಣ ಹಾಗೂ ತೀಕ್ಷಣ ಅವರು ಈಗಾಗಲೇ ಅಂತಹ ಪ್ರದರ್ಶನ ತೋರಿದ್ದಾರೆ.
ಯಾವ ವಿಭಾಗ ವೀಕ್?
- ಸ್ಟಾರ್ ಪ್ಲೇಯರ್‌ಗಳು ಇರದಿರುವುದು ಶ್ರೀಲಂಕಾ ತಂಡಕ್ಕೆ ಕಂಟಕವಾಗಲಿದೆ. ಅದರಲ್ಲೂ, ವನಿಂದು ಹಸರಂಗ ಅವರಂತಹ ಮಹತ್ವದ ಆಟಗಾರರು ಗಾಯದ ಸಮಸ್ಯೆಯಿಂದ ಅಲಭ್ಯರಾಗಿರುವುದು ಲಂಕಾಗೆ ಕಾಡಲಿದೆ.
- ಅನುಭವಿ ವೇಗಿಗಳು ಇಲ್ಲದಿರುವುದು ಲಂಕಾಗೆ ಸಮಸ್ಯೆಯಾಗಿದೆ. ಲಹಿರು ಕುಮಾರ ಅವರು ಉತ್ತಮ ಬೌಲರ್ ಆಗಿದ್ದರೂ, ಲೈನ್ ಆ್ಯಂಡ್ ಲೆಂತ್ ಕೊರತೆ ಇದೆ.
- ದಸುನ್ ಶನಕ ಅವರ ನಾಯಕತ್ವದ ಬಗ್ಗೆ ಉತ್ತಮ ಅಭಿಪ್ರಾಯ ಇದ್ದರೂ ಯುವ ಪಡೆಯೇ ಇರುವುದರಿಂದ ಸಂಕಷ್ಟದ ಸಮಯದಲ್ಲಿ ಹೇಗೆ ನಿಭಾಯಿಸುತ್ತಾರೆ, ಯುವ ಪಡೆ ಹೇಗೆ ನಿಭಾಯಿಸುತ್ತದೆ ಎಂಬುದು ತಂಡವನ್ನು ಚಿಂತೆಗೀಡುಮಾಡಿದೆ.
ಇದನ್ನೂ ಓದಿ: ICC World Cup 2023: ವಿಶ್ವಕಪ್‌ಗೆ ನ್ಯೂಜಿ’ಲ್ಯಾಂಡ್’; ತಂಡದ ಸ್ಟ್ರೆಂತ್ ಏನು? ವೀಕ್‌ನೆಸ್ ಏನೇನು?
ಶ್ರೀಲಂಕಾ ಪಂದ್ಯಗಳ ವೇಳಾಪಟ್ಟಿ
ಸಮಯ | ತಂಡಗಳು | ದಿನಾಂಕ |
ಮಧ್ಯಾಹ್ನ 2 ಗಂಟೆ | ಶ್ರೀಲಂಕಾ vs ದಕ್ಷಿಣ ಆಫ್ರಿಕಾ | ಅಕ್ಟೋಬರ್ 7 |
ಮಧ್ಯಾಹ್ನ 2 ಗಂಟೆ | ಶ್ರೀಲಂಕಾ vs ಪಾಕಿಸ್ತಾನ | ಅಕ್ಟೋಬರ್ 10 |
ಮಧ್ಯಾಹ್ನ 2 ಗಂಟೆ | ಶ್ರೀಲಂಕಾ vs ಆಸ್ಟ್ರೇಲಿಯಾ | ಅಕ್ಟೋಬರ್ 16 |
ಬೆಳಗ್ಗೆ 10.30 | ಶ್ರೀಲಂಕಾ vs ನೆದರ್ಲೆಂಡ್ಸ್ | ಅಕ್ಟೋಬರ್ 21 |
ಮಧ್ಯಾಹ್ನ 2 ಗಂಟೆ | ಶ್ರೀಲಂಕಾ vs ಇಂಗ್ಲೆಂಡ್ | ಅಕ್ಟೋಬರ್ 26 |
ಮಧ್ಯಾಹ್ನ 2 ಗಂಟೆ | ಶ್ರೀಲಂಕಾ vs ಅಫಘಾನಿಸ್ತಾನ | ಅಕ್ಟೋಬರ್ 30 |
ಮಧ್ಯಾಹ್ನ 2 ಗಂಟೆ | ಶ್ರೀಲಂಕಾ vs ಭಾರತ | ನವೆಂಬರ್ 2 |
ಮಧ್ಯಾಹ್ನ 2 ಗಂಟೆ | ಶ್ರೀಲಂಕಾ vs ಬಾಂಗ್ಲಾದೇಶ | ನವೆಂಬರ್ 6 |
ಮಧ್ಯಾಹ್ನ 2 ಗಂಟೆ | ಶ್ರೀಲಂಕಾ vs ನ್ಯೂಜಿಲ್ಯಾಂಡ್ | ನವೆಂಬರ್ 9 |
ಇದನ್ನೂ ಓದಿ: ICC World Cup 2023: ‘ಚೋಕರ್ಸ್’ ಹಣೆಪಟ್ಟಿ ಕಳಚಲು ದಕ್ಷಿಣ ಆಫ್ರಿಕಾ ಪಣ; ಹೀಗಿದೆ ತಂಡದ ಬಲಾಬಲ
ವಿಶ್ವಕಪ್ ಟೂರ್ನಿಗಳಲ್ಲಿ ಶ್ರೀಲಂಕಾ ಪ್ರದರ್ಶನ
ಇದುವರೆಗೆ 12 ವಿಶ್ವಕಪ್ ಟೂರ್ನಿಗಳು ನಡೆದಿದ್ದು, ಶ್ರೀಲಂಕಾ ಉತ್ತಮ ಪ್ರದರ್ಶನವನ್ನೇ ನೀಡಿದೆ. 12 ವಿಶ್ವಕಪ್‌ಗಳಲ್ಲಿ ಒಂದು ಬಾರಿ (1996) ಶ್ರೀಲಂಕಾ ಚಾಂಪಿಯನ್ ಆಗಿದೆ. 2007 ಹಾಗೂ 2011ರಲ್ಲಿ ಸತತವಾಗಿ ಫೈನಲ್ ತಲುಪುವ ಮೂಲಕ ತನ್ನ ಪ್ರಾಬಲ್ಯವನ್ನು ಪ್ರದರ್ಶಿಸಿದೆ. ಆದರೆ, 2014ರ ಬಳಿಕ ದಿಗ್ಗಜ ಆಟಗಾರರ ಕೊರತೆಯಿಂದಾಗಿ ಶ್ರೀಲಂಕಾ ತಂಡವು ಹೆಚ್ಚಿನ ಯಶಸ್ಸು ಕಂಡಿಲ್ಲ. ಆದರೂ, 2022ರಲ್ಲಿ ಏಷ್ಯಾ ಕಪ್ ಚಾಂಪಿಯನ್ ಎನಿಸಿದೆ. ಕೆಲ ದಿನಗಳ ಹಿಂದೆ ನಡೆದ ಏಷ್ಯಾಕಪ್‌ನಲ್ಲಿ ಫೈನಲ್ ತಲುಪಿತ್ತು. ಆದರೆ, ಏಷ್ಯಾ ತಂಡಗಳ ಹೊರತಾಗಿ ವಿಶ್ವಕಪ್‌ನಲ್ಲಿ ಬೇರೆ ದೇಶಗಳ ಜತೆ ಹೇಗೆ ಕಾದಾಡುತ್ತದೆ, ಉತ್ತಮ ಪ್ರದರ್ಶನ ತೋರುತ್ತದೆ ಎಂಬುದರ ಮೇಲೆ ಶ್ರೀಲಂಕಾ ಭವಿಷ್ಯ ನಿಂತಿದೆ.
ವಿಶ್ವಕಪ್ ಕುರಿತ ಇನ್ನಷ್ಟು ಆಸಕ್ತಿದಾಯಕ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ