Site icon Vistara News

ICC World Cup 2023: 9 ಪಂದ್ಯಗಳಲ್ಲಿ ಟೀಮ್ ಇಂಡಿಯಾದ ಗೆಲುವಿನ ಓಟ ಹೀಗಿತ್ತು…

ಬೆಂಗಳೂರು: ಹಾಲಿ ಆವೃತ್ತಿಯ ಐಸಿಸಿ ಏಕದಿನ ವಿಶ್ವಕಪ್‌ ಕ್ರಿಕೆಟ್‌(ICC World Cup 2023) ಪಂದ್ಯಾವಳಿಯಲ್ಲಿ ಆತಿಥೇಯ ಭಾರತದ್ದು ಅಜೇಯ ಗೆಲುವಿನ ಸಾಧನೆ. ಆಡಿದ ಎಲ್ಲ 9 ಪಂದ್ಯಗಳನ್ನು ಗೆದ್ದು ಅಗ್ರ ಸ್ಥಾನದ ಗೌರವದೊಂದಿಗೆ ರೋಹಿತ್‌ ಶರ್ಮ ಪಡೆ ಸೆಮಿಫೈನಲ್‌ ಸಮರಕ್ಕೆ ಸಜ್ಜಾಗಿದೆ. ನ.15ರಂದು ಮುಂಬಯಿಯ ವಾಂಖೆಡೆ ಸ್ಟೇಡಿಯಂನಲ್ಲಿ ನ್ಯೂಜಿಲ್ಯಾಂಡ್​ ವಿರುದ್ಧ ಕಣಕ್ಕಿಳಿಯಲಿದೆ. ಈ ಬಾರಿಯ ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಭಾರತ ಸಾಧಿಸಿದ ಎಲ್ಲ ಗೆಲುವಿನ ಸಂಕ್ಷಿಪ್ತ ವರದಿಯೊಂದನ್ನು ಇಲ್ಲಿ ವಿವರಿಸಲಾಗಿದೆ.

ಆಸ್ಟ್ರೇಲಿಯಾ ವಿರುದ್ಧ 6 ವಿಕೆಟ್​ ಜಯ

ಭಾರತ ತಂಡ ವಿಶ್ವಕಪ್​ ಅಭಿಯಾನ ಆರಂಭಿಸಿದ್ದು 5 ಬಾರಿಯ ವಿಶ್ವ ಚಾಂಪಿಯನ್​ ಆಸ್ಟ್ರೇಲಿಯಾ ವಿರುದ್ಧ ಆಡುವ ಮೂಲಕ. ಅಕ್ಟೋಬರ್​ 8ರಂದು ಚೆನ್ನೈಯ ಚಿದಂಬರಂ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ನಡೆಸಿದ ಆಸ್ಟ್ರೇಲಿಯಾ ಡೇವಿಡ್​ ವಾರ್ನರ್​ ಮತ್ತು ಸ್ಟೀವನ್​ ಸ್ಮಿತ್​ ಅವರ ಬ್ಯಾಟಿಂಗ್​ ನೆರವಿನಿಂದ 49.3 ಓವರ್​ಗಳಲ್ಲಿ 199 ರನ್​ಗೆ ಕುಸಿಯಿತು. ಗುರಿ ಬೆನ್ನಟ್ಟಿದ ಭಾರತ ಕೂಡ ಆರಂಭಿಕ ಆಘಾತ ಎದುರಿಸಿತು. 2 ರನ್​ಗೆ ಮೂರು ವಿಕೆಟ್​ ಕಳೆದುಕೊಂಡು ಸೋಲಿನತ್ತ ಮುಖ ಮಾಡಿತ್ತು. ಈ ವೇಳೆ ಜತೆಯಾದ ವಿರಾಟ್ ಕೊಹ್ಲಿ(85) ಮತ್ತು ಕೆ.ಎಲ್​ ರಾಹುಲ್(ಅಜೇಯ 97)​ ಅಸಾಮಾನ್ಯ ಬ್ಯಾಟಿಂಗ್​ ಪ್ರದರ್ಶನ ತೋರುವ ಮೂಲಕ ತಂಡಕ್ಕ ಸ್ಮರಣೀಯ ಗೆಲುವು ತಂದು ಕೊಟ್ಟರು. ಭಾರತ 41.2 ಓವರ್​ಗಳಲ್ಲಿ 4 ವಿಕೆಟ್​ಗೆ 201 ರನ್​ ಬಾರಿಸಿ ಗೆಲುವಿನ ನಗೆ ಬೀರಿತ್ತು.

ಸ್ನಾನ ಮುಗಿಸಿ ಮೈದಾನಕ್ಕೆ ಓಡಿ ಬಂದಿದ್ದ ರಾಹುಲ್​

ಈ ಪಂದ್ಯದಲ್ಲಿ ಮೊದಲು ಬೌಲಿಂಗ್​ ನಡೆಸಿದ ಭಾರತ ಘಾತಕ ಬೌಲಿಂಗ್​ ನಡೆಸಿ ಕಮಿನ್ಸ್​ ಪಡೆಯನ್ನು 199 ರನ್​ಗೆ ಕಟ್ಟಿ ಹಾಕಿತ್ತು. ಸಣ್ಣ ಮೊತ್ತವನ್ನು ನಮ್ಮ ಅಗ್ರ ಕ್ರಮಾಂಕದ ಬ್ಯಾಟರ್​ಗಳು ಬೆನ್ನಟ್ಟಬಹುದು ಎಂದು ಯೋಚಿಸಿ ರಾಹುಲ್​ ಸ್ನಾನ ಮಾಡಿ ವಿಶ್ರಾಂತಿ ಪಡೆಯವ ಯೋಜನೆಯಲ್ಲಿದ್ದರು. ಆದರೆ ಅವರು ಬಾತ್​ ರೂಮ್​ನಿಂದ ಹೊರ ಬರುತ್ತಿದ್ದಂತೆ 2 ರನ್​ಗೆ ತಂಡದ ಮೂರು ವಿಕೆಟ್​ ಉರುಳಿ ಹೋಗಿತ್ತು. ಸರಿಯಾಗಿ ದೇಹದ ಒದ್ದೆಯನ್ನು ಒರೆಸಿಕೊಳ್ಳದೆ ತರಾತುರಿಯಲ್ಲಿ ಪ್ಯಾಟ್ ಮತ್ತು ಗ್ಲೌಸ್​ ಕಟ್ಟಿಕೊಂಡು ಮೈದಾನಕ್ಕೆ ಓಡಿ ಬಂದು ಅಜೇಯ 97 ರನ್​ಗಳ ಕೊಡುಗೆ ನೀಡಿ ತಂಡಕ್ಕೆ ಗೆಲುವು ದಕ್ಕಿಸಿಕೊಟ್ಟರು. ಅವರು ಬಾತ್​ ರೂಮ್​ನಿಂದ ಓಡಿ ಬಂದ ವಿಚಾರವನ್ನು ಪಂದ್ಯದ ಮುಕ್ತಾಯಕ ಬಳಿಕ ಹೇಳಿದ್ದರು. ಈ ಪಂದ್ಯದಲ್ಲಿ ಜಡೇಜಾ ಮೂರು ವಿಕೆಟ್​ ಕಿತ್ತಿದ್ದರು. 97 ರನ್​ ಗಳಿಸಿದ ರಾಹುಲ್​ ಅವರು ಪಂದ್ಯ ಶ್ರೇಷ್ಠ ಪ್ರಶಸ್ತಿ ಗೆದ್ದಿದ್ದರು.

ಆಫ್ಘನ್​ ವಿರುದ್ಧ 8 ವಿಕೆಟ್​ ಅಮೋಘ ಗೆಲುವು

ಟೀಮ್​ ಇಂಡಿಯಾ ಎರಡನೇ ಗೆಲುವು ಸಾಧಿಸಿದ್ದು ಅಫಘಾನಿಸ್ತಾನ ವಿರುದ್ಧ. ದೆಹಲಿಯ ಅರುಣ್​ ಜೇಟ್ಲಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ನಡೆಸಿದ ಅಫಘಾನಿಸ್ತಾನ ದಿಟ್ಟ ಬ್ಯಾಟಿಂಗ್​ ನಡೆಸಿ ನಿಗದಿತ 50 ಓವರ್​ಗಳಲ್ಲಿ 8 ವಿಕೆಟ್​ಗೆ 272 ರನ್​ ಬಾರಿಸಿತು. ಸ್ಪರ್ಧಾತ್ಮಕ ಮೊತ್ತವನ್ನು ಬೆನ್ನಟ್ಟಿದ ಭಾರತ ಕೇವಲ 2 ವಿಕೆಟ್​ ನಷ್ಟಕ್ಕೆ 35 ಓವರ್​ಗಳಲ್ಲಿ 273 ರನ್​ ಬಾರಿಸಿ ಗೆಲುವು ಕಂಡಿತು. ನಾಯಕ ರೋಹಿತ್​ ಶರ್ಮ ಅವರು ಸ್ಫೋಟಕ ಬ್ಯಾಟಿಂಗ್​ ನಡೆಸಿ 131 ರನ್​ ಚಚ್ಚಿ ಶತಕ ಸಂಭ್ರಮಿಸಿದ್ದರು. ಈ ಶತಕದೊಂದಿಗೆ ವಿಶ್ವಕಪ್​ನಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ಆಟಗಾರ ಎನಿಸಿಕೊಂಡಿದ್ದರು. ಸಚಿನ್​ ಅವರ 6 ಶತಕದ ದಾಖಲೆ ಪತನಗೊಂಡಿತು. ಪಂದ್ಯದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ರೋಹಿತ್​ಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಒಲಿಯಿತು. ಜಸ್​ಪ್ರೀತ್​ ಬುಮ್ರಾ 4 ವಿಕೆಟ್​ ಕಬಳಿಸಿದ್ದರು.

ಪಾಕಿಸ್ತಾನ ವಿರುದ್ಧ ಅಜೇಯ ಸಾಧನೆ

ನರೇಂದ್ರ ಮೋದಿ ಕ್ರಿಕೆಟ್​ ಸ್ಡೇಡಿಯಂನಲ್ಲಿ ಅಕ್ಟೋಬರ್​ 14ರಂದು ನಡೆದಿದ್ದ ಈ ಪಂದ್ಯದಲ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಭಾರತ ಬಿಗಿ ಬೌಲಿಂಗ್ ದಾಳಿ ಸಂಘಟಿಸಿತು. ನಾಟಕೀಯ ಕುಸಿತ ಕಂಡ ಪಾಕಿಸ್ತಾನ 42.5 ಓವರ್ ಗಳಲ್ಲಿ 191 ರನ್ ಗಳಿಗೆ ಸರ್ವಪತನ ಕಂಡಿತು. ಗುರಿ ಬೆನ್ನಟ್ಟಿದ ಭಾರತ 30.3 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 192 ರನ್ ಗಳಿಸಿ 7 ವಿಕೆಟ್​ಗಳ ಅಂತರದ ಭರ್ಜರಿ ಗೆಲುವು ತನ್ನದಾಗಿಸಿಕೊಂಡಿತ್ತು. ನಾಯಕ ರೋಹಿತ್ ಶರ್ಮ ಈ ಪಂದ್ಯದಲ್ಲಿ ಅಬ್ಬರದ ಬ್ಯಾಟಿಂಗ್​ ನಡೆಸಿ ಗಮನಸೆಳೆದರು. 63 ಎಸೆತಗಳಲ್ಲಿ 86 ರನ್ ಗಳಿಸಿ ನೆರೆದಿದ್ದ ಅಭಿಮಾನಿಗಳಿಗೆ ಬರಪೂರ ರಂಜನೆ ನೀಡಿದರು. ಶ್ರೇಯಸ್​ ಅಯ್ಯರ್(53*)​ ಅಜೇಯ ಅರ್ಧಶತಕ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದ್ದರು. 19 ರನ್​ಗೆ 2 ವಿಕೆಟ್​ ಕಿತ್ತ ಜಸ್​ಪ್ರೀತ್​ ಬುಮ್ರಾ ಅವರು ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.


ಬಾಂಗ್ಲಾ ವಿರುದ್ಧ 7 ವಿಕೆಟ್​ ಜಯ

ಹ್ಯಾಟ್ರಿಕ್​ ಗೆಲುವು ದಾಖಲಿಸಿದ್ದ ಭಾರತ ತಂಡ ನಾಲ್ಕನೇ ಗೆಲುವು ದಾಖಲಿಸಿದ್ದು ನೆರೆಯ ಬಾಂಗ್ಲಾದೇಶ ವಿರುದ್ಧ. ಪುಣೆಯಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್​ ನಡೆಸಿದ ಬಾಂಗ್ಲಾದೇಶ ನಿಗದಿತ 50 ಓವರ್​ಗಳಲ್ಲಿ 8 ವಿಕೆಟ್​ಗೆ 256 ರನ್​ ಬಾರಿಸಿ ಸವಾಲೊಡ್ಡಿತು. ಗುರಿ ಬೆನ್ನಟ್ಟಿದ ಭಾರತ ವಿರಾಟ್​ ಕೊಹ್ಲಿಯ(103*) ಅಜೇಯ ಶತಕದ ನೆರವಿನಿಂದ 41.3 ಓವರ್​ಗಳಲ್ಲಿ ಮೂರು ವಿಕೆಟ್​ಗೆ 261 ರನ್​ ಬಾರಿಸಿ ಗೆಲುವು ದಾಖಲಿಸಿತ್ತು. ಶುಭಮನ್​ ಗಿಲ್​ 53 ರನ್​ ಬಾರಿಸಿದ್ದರು. ಬೌಲಿಂಗ್​ನಲ್ಲಿ ಮಿಂಚಿದ ಬುಮ್ರಾ, ಸಿರಾಜ್​ ಮತ್ತು ಜಡೇಜಾ ತಲಾ 2 ವಿಕೆಟ್​ ಉರುಳಿಸಿದ್ದರು. ಶತಕದ ಸಾಧನೆಗಾಗಿ ಕೊಹ್ಲಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಒಲಿದಿತ್ತು.


ಇದನ್ನೂ ಓದಿ IND vs NED: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಏಕಕಾಲಕ್ಕೆ ಮೊಳಗಿದ ‘ವಂದೇ ಮಾತರಂ’

20 ವರ್ಷಗಳ ಬಳಿಕ ಕಿವೀಸ್​ ವಿರುದ್ಧ ಗೆಲುವು

ಭಾರತ ಕಳೆದ 20 ವರ್ಷದಿಂದ ಐಸಿಸಿ ಟೂರ್ನಿಯಲ್ಲಿ ನ್ಯೂಜಿಲ್ಯಾಂಡ್​ ವಿರುದ್ಧ ಸೋಲು ಮಾತ್ರ ಕಂಡಿತ್ತು. ಆದರೆ ಈ ಸೋಲಿನ ಕೊರಗನ್ನು ನೀಗಿಸಿದ್ದು ಈ ಬಾರಿಯ ವಿಶ್ವಕಪ್​ನಲ್ಲಿ. ಧರ್ಮಶಾಲದಲ್ಲಿ ನಡೆದಿದ್ದ ಪಂದ್ಯದಲ್ಲಿ ಭಾರತ ನಾಲ್ಕು ವಿಕೆಟ್​ಗಳ ಗೆಲುವು ಸಾಧಿಸಿ 20 ವರ್ಷಗಳ ಗೆಲುವಿನ ಬರವನ್ನು ನೀಗಿಸಿತು. ಟಾಸ್​ ಸೋತು ಬ್ಯಾಟಿಂಗ್​ ಆಹ್ವಾನ ಪಡೆದ ನ್ಯೂಜಿಲ್ಯಾಂಡ್​ ರಚಿನ್​ ರವೀಂದ್ರ(75) ಅವರ ಅರ್ಧಶತಕ ಮತ್ತು ಡೇರಿಯಲ್​ ಮಿಚೆಲ್(130) ಅವರ ಶತಕದ ಸಾಹಸದಿಂದ 273ರನ್​ಗೆ ಆಲೌಟ್​ ಆಯಿತು. ಜವಾಬಿತ್ತ ಭಾರತಕ್ಕೆ ವಿರಾಟ್ ಕೊಹ್ಲಿ 95 ರನ್ ಹಾಗೂ ರವೀಂದ್ರ ಜಡೇಜಾ ಸಿಡಿಸಿದ ಅಜೇಯ 39 ರನ್ ಬಾರಿಸಿ ಗೆಲುವು ತಂದು ಕೊಟ್ಟರು. ನಾಯಕ ರೋಹಿತ್​ ಶರ್ಮ 46 ರನ್​ ಬಾರಿಸಿದರು. ಘಾತಕ ದಾಳಿ ನಡೆಸಿ 54 ರನ್​ಗೆ 5 ವಿಕೆಟ್​ ಕಿತ್ತ ಮೊಹಮ್ಮದ್​ ಶಮಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.


ಇಂಗ್ಲೆಂಡ್​ ವಿರುದ್ಧ 100 ರನ್​ ಗೆಲುವು

ಲಕ್ನೋದ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ ಆಹ್ವಾನ ಪಡೆದ ಭಾರತ ರೋಹಿತ್(87)​ ಮತ್ತು ಸೂರ್ಯಕುಮಾರ್(49)​ ಅವರ ಬ್ಯಾಟಿಂಗ್​ ಸಾಹಸದಿಂದ ನಿಗದಿತ 50 ಓವರ್​ಗಳಲ್ಲಿ​ 9 ವಿಕೆಟ್​ನಷ್ಟಕ್ಕೆ 229 ರನ್ ಗಳಿಸಿತು. ಸಣ್ಣ ಮೊತ್ತಕ್ಕೆ ಭಾರತವನ್ನು ಕಟ್ಟಿಹಾಕಿದ ಜೋಶ್​ನಲ್ಲಿ ಗುರಿ ಬೆನ್ನಟ್ಟಲಾರಂಭಿಸಿದ ಇಂಗ್ಲೆಂಡ್​ ಉತ್ತಮ ಆರಂಭ ಪಡೆದರೂ ಆ ಬಳಿಕ ನಾಟಕೀಯ ಕುಸಿತ ಕಂಡು 34.5 ಓವರ್​ಗಳಲ್ಲಿ 129 ರನ್​ಗೆ ಸರ್ವಪತನ ಕಂಡು ಹೀನಾಯ ಸೋಲು ಕಂಡಿತು. ಘಾತಕ ಬೌಲಿಂಗ್​ ದಾಳಿ ನಡೆಸಿ 22 ರನ್​ ವೆಚ್ಚದಲ್ಲಿ 4 ವಿಕೆಟ್​ ಕಿತ್ತ ಮೊಹಮ್ಮದ್​ ಶಮಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಜಸ್​ಪ್ರೀತ್​ ಬುಮ್ರಾ ಮೂರು ವಿಕೆಟ್​ ಪಡೆದಿದ್ದರು. ಭಾರತ ಭರ್ತಿ 100ರನ್​ ಅಂತರದ ಗೆಲುವು ಸಾಧಿಸಿತು.


ಇದನ್ನೂ ಓದಿ Virat kohli : ಟೀಮ್​ ಇಂಡಿಯಾ ಹೋಟೆಲ್​ನಲ್ಲಿ ಕೊಹ್ಲಿ ಜತೆ ಹೆಜ್ಜೆ ಹಾಕಿದ ಅನುಷ್ಕಾ

ಲಂಕಾ ವಿರುದ್ಧ ಗೆದ್ದು ಸೆಮಿಗೆ ಲಗ್ಗೆಯಿಟ್ಟ ಭಾರತ

ನವೆಂಬರ್​ 2ರಂದು ಮುಂಬಯಿಯ ವಾಂಖೆಡೆ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದಿದ್ದ ಪಂದ್ಯದಲ್ಲಿ ರೋಹಿತ್​ ಶರ್ಮ ಪಡೆ ಶ್ರೀಲಂಕಾ ವಿರುದ್ಧ ದಾಖಲೆಯ 302 ರನ್​ಗಳ ಗೆಲುವು ಸಾಧಿಸಿ ಹಾಲಿ ಆವೃತ್ತಿಯ ವಿಶ್ವಕಪ್ ಟೂರ್ನಿಯಲ್ಲಿ ಮೊದಲ ತಂಡವಾಗಿ ಸೆಮಿಫೈನಲ್​ ಪ್ರವೇಶಿಸಿತ್ತು. ಇತ್ತಂಡಗಳ ನಡುವಣ ಈ ಪಂದ್ಯ ಏಷ್ಯಾಕಪ್ ಫೈನಲ್​ ಪಂದ್ಯದ ಮುಂದುವರಿದ ಪುನರಾವರ್ತನೆಯಾಗಿತ್ತು. ಆ ಪಂದ್ಯದಲ್ಲಿ ಲಂಕಾ ಕಳಪೆ ಪ್ರದರ್ಶನ ತೋರಿ 50 ರನ್​ಗೆ ಆಲೌಟ್​ ಆಗಿತ್ತು. ವಿಶ್ವಕಪ್​ನಲ್ಲಿ 55 ರನ್​ಗೆ ಸರ್ವಪತನ ಕಾಣುವ ಮೂಲಕ 302 ರನ್​ ಅಂತರದ ಸೋಲು ಕಂಡಿತು.


ವಾಂಖೆಡೆ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ ಆಹ್ವಾನ ಪಡೆದ ಭಾರತ, ವಿರಾಟ್​ ಕೊಹ್ಲಿ (88), ಶುಭಮನ್​ ಗಿಲ್(92)​ ಮತ್ತು ಶ್ರೇಯಸ್​ ಅಯ್ಯರ್(82)​ ಅವರು ಬಾರಿಸಿದ ಸೊಗಸಾದ ಅರ್ಧಶತಕದ ನೆರವಿನಿಂದ ನಿಗದಿತ 50 ಓವರ್​ಗಳಲ್ಲಿ 8 ವಿಕೆಟ್​ ನಷ್ಟಕ್ಕೆ 357 ರನ್​ ಗಳಿಸಿತು. ಬೃಹತ್​ ಮೊತ್ತವನ್ನು ಕಂಡು ಆರಂಭದಲ್ಲೇ ಬೆದರಿದ ಲಂಕಾ ನಾಟಕೀಯ ಕುಸಿತ ಕಂಡು 19.4 ಓವರ್​ಗಳಲ್ಲಿ 55 ರನ್​ಗೆ ಆಲೌಟ್​ ಆಗಿ ಹೀನಾಯ ಸೋಲಿಗೆ ತುತ್ತಾಗಿತ್ತು. 18 ರನ್​ಗೆ 5 ವಿಕೆಟ್​ ಕಿತ್ತ ಮೊಹಮ್ಮದ್ ಶಮಿ ಅವರು ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.

ಇದನ್ನೂ ಓದಿ KL Rahul : ಜತೆಯಾಟದಲ್ಲಿ ಭಾರತ ಪರ ವಿಶೇಷ ದಾಖಲೆ ಬರೆದ ರಾಹುಲ್​- ಶ್ರೇಯಸ್​

ದಕ್ಷಿಣ ಆಫ್ರಿಕಾ ವಿರುದ್ಧ ದಾಖಲೆಯ ಗೆಲುವು

ಅಜೇಯ ಗೆಲುವಿನ ನಾಗಲೋಟ ಮುಂದುವರಿಸಿದ್ದ ಭಾರತದ ಈ ಪರಾಕ್ರಮಕ್ಕೆ ದಕ್ಷಿಣ ಆಫ್ರಿಕಾ ಬ್ರೇಕ್​ ಹಾಕಬಹುದು ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ ಈ ನಿರೀಕ್ಷೆ ಹುಸಿಯಾಗಿತು. ಘಾತಕ ಬೌಲಿಂಗ್​ ದಾಳಿ ನಡೆಸಿದ ಭಾರತ 243 ರನ್​ಗಳ ಅಂತರದ ಗೆಲುವು ಸಾಧಿಸಿತು. ಈ ಪಂದ್ಯದಲ್ಲಿ ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ನಡೆಸಿದ ಭಾರತ ವಿರಾಟ್​ ಕೊಹ್ಲಿಯ(101*) ಶತಕ ಮತ್ತು ಶ್ರೇಯಸ್​ ಅಯ್ಯರ್​(77) ಅವರ ಅರ್ಧಶತಕದ ನೆರವಿನಿಂದ ನಿಗದಿತ 50 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 326 ರನ್ ಬಾರಿಸಿತು. ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ಬ್ಯಾಟಿಂಗ್​ ಜೋಶ್​ ಮರೆತು 27.1 ಓವರ್​ಗಳಲ್ಲಿ 83 ರನ್​ ಬಾರಿಸಿ ಸರ್ವಪತನ ಕಂಡಿತು. ಭಾರತ 243 ರನ್​ಗಳ ಭರ್ಜರಿ ಗೆಲುವು ಸಾಧಿಸಿತು. ಭಾರತ ಪರ ಜಡೇಜಾ 5 ವಿಕೆಟ್​ ಕಿತ್ತು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಉಳಿದಂತೆ ಮೊಹಮ್ಮದ್ ಶಮಿ ಮತ್ತು ಕುಲದೀಪ್​ ಯಾದವ್ ತಲಾ 2 ವಿಕೆಟ್​ ಕಿತ್ತರು.


ಸಚಿನ್​ ದಾಖಲೆ ಸರಗಟ್ಟಿದ ಕೊಹ್ಲಿ

ಇದೇ ಪಂದ್ಯದಲ್ಲಿ ಅಜೇಯ ಶತಕ ಬಾರಿಸಿದ ವಿರಾಟ್​ ಕೊಹ್ಲಿ ಅವರು ಕ್ರಿಕೆಟ್​ ದಿಗ್ಗಜ ಸಚಿನ್​ ತೆಂಡೂಲ್ಕರ್​ ಅವರ ಏಕದಿನ ಕ್ರಿಕೆಟ್​ನ ಸಾರ್ವಕಾಲಿಕ 49 ಶತಕದ ದಾಖಲೆಯನ್ನು ಸರಿಗಟ್ಟಿದ್ದರು. ನಿಧಾನಗತಿ ಬ್ಯಾಟಿಂಗ್​ ನಡೆಸಿದ್ದ ಕೊಹ್ಲಿ 121 ಎಸೆತಗಳಿಂದ ಅಜೇಯ 101 ರನ್​ ಬಾರಿಸಿದ್ದರು. ಅವರ ಈ ಸಾಧನೆಗಾಗಿ ಪಂದ್ಯ ಶ್ರೇಷ್ಠ ಪ್ರಸಶ್ತಿ ನೀಡಿ ಗೌರವಿಸಲಾಗಿತ್ತು.

ಡಚ್ಚರನ್ನೂ ಸದೆ ಬಡಿದ ಭಾರತ

ಭಾನುವಾರ ಚಿನ್ನಸ್ವಾಮಿ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ ತನ್ನ ನಿರ್ಧಾರಕ್ಕೆ ಪೂರಕವಾಗಿ ಆಡಿತು. ಆರಂಭದಿಂದಲೂ ಕೊನೇ ತನಕ ರನ್​ಗಳನ್ನು ಗಳಿಸುತ್ತಾ ನಿಗದಿತ 50 ಓವರ್​ಗಳಲ್ಲಿ 4 ವಿಕೆಟ್​ ನಷ್ಟಕ್ಕೆ 410 ರನ್ ಬಾರಿಸಿತು. ಪ್ರತಿಯಾಗಿ ಆಡಿದ ಸ್ಕಾಟ್ ಎಡ್ವರ್ಡ್ ನೇತೃತ್ವದ ಡಚ್ಚರ ಪಡೆ 47. 5 ಓವರ್​ಗಳಲ್ಲಿ 250 ರನ್​ಗಳಿಗೆ ಆಲ್​ಔಟ್ ಆಗಿ ಸೋಲೊಪ್ಪಿಕೊಂಡಿತು. ಭಾರತ ಈ ಗೆಲುವಿನೊಂದಿಗೆ ಆಡಿದ ಎಲ್ಲ 9 ಲೀಗ್​ ಪಂದ್ಯಗಳನ್ನು ಗೆದ್ದು ವಿಶ್ವಕಪ್​ನಲ್ಲಿ ದಾಖಲೆ ಬರೆಯಿತು. ಅತ್ಯಧಿಕ ಪಂದ್ಯಗಳನ್ನು ಗೆದ್ದ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.


ದಾಖಲೆ ಬರೆದ ರಾಹುಲ್​

ನೆದರ್ಲೆಂಡ್ಸ್ ವಿರುದ್ಧ ನಡೆದ ಈ ಪಂದ್ಯದಲ್ಲಿ ಕೆ.ಎಲ್ ರಾಹುಲ್ 62 ಎಸೆತಗಳಲ್ಲಿ ಶತಕ ಬಾರಿಸುವ ಮೂಲಕ ವಿಶ್ವಕಪ್​ನಲ್ಲಿ ಅತಿ ವೇಗದ ಶತಕ ಬಾರಿಸಿದ ಭಾರತೀಯ ಬ್ಯಾಟರ್​​ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ವೇಳೆ ಅವರು 2023 ರ (ಹಾಲಿ ಆವೃತ್ತಿಯ) ವಿಶ್ವಕಪ್​ನಲ್ಲಿ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ 63 ಎಸೆತಗಳಲ್ಲಿ ಶತಕ ಬಾರಿಸಿದ ರೋಹಿತ್ ಶರ್ಮಾ ಅವರ ದಾಖಲೆ ಅವರು ಮುರಿದರು. ಶ್ರೇಯಸ್​ ಅಯ್ಯರ್​ ಅವರು ಅಜೇಯ 128 ರನ್​ ಬಾರಿಸಿ ಚೊಚ್ಚಲ ವಿಶ್ವಕಪ್​ ಶತಕವನ್ನು ದಾಖಲಿಸಿದರು. ಜತೆಗೆ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಪಡೆದರು. ರೋಹಿತ್​(61), ಶುಭಮನ್​ ಗಿಲ್(51) ಮತ್ತು ವಿರಾಟ್​ ಕೊಹ್ಲಿ 51 ರನ್​ ಬಾರಿಸಿದರು. ಬೌಲಿಂಗ್​ನಲ್ಲಿಯೂ ಮಿಂಚಿದ ರೋಹಿತ್​ ಮತ್ತು ವಿರಾಟ್​ ತಲಾ 1 ವಿಕೆಟ್​ ಪಡೆದರು. ಉಳಿದಂತೆ ಕುಲ್​ದೀಪ್​, ಬುಮ್ರಾ, ಸಿರಾಜ್​ ಮತ್ತು ಜಡೇಜಾ ತಲಾ 2 ವಿಕೆಟ್​ ಕಿತ್ತರು. ಶಮಿ ವಿಕೆಟ್​ ಲೆಸ್​ ಎನಿಸಿಕೊಂಡರು.

Exit mobile version