ಬೆಂಗಳೂರು: ಐಸಿಸಿ ವಿಶ್ವ ಕಪ್ನ (ICC World Cup 2023) ಲೀಗ್ ಹಂತದಲ್ಲಿ ಲಂಕಾ ತಂಡವನ್ನು ಮಣಿಸಿದ ನ್ಯೂಜಿಲ್ಯಾಂಡ್ ತಂಡ ಸೆಮೀಸ್ ಅವಕಾಶವನ್ನು ಹೆಚ್ಚಿಸಿಕೊಂಡಿದೆ. ಚಿನ್ನಸ್ವಾಮಿ ಸ್ಟೇಡಿಯಮ್ನಲ್ಲಿ ನಡೆದ ಹಣಾಹಣಿಯಲ್ಲಿ ಲಂಕಾ ಬಳಗವನ್ನು ಐದು ವಿಕೆಟ್ಗಳಿಂದ ಸೋಲಿಸಿದ ನ್ಯೂಜಿಲ್ಯಾಂಡ್ ತಂಡ ಹಾಲಿ ಆವೃತ್ತಿಯಲ್ಲಿ ಐದನೇ ಗೆಲುವು ಕಂಡಿದೆ. ಇದರೊಂದಿಗೆ ಕಿವೀಸ್ ತಂಡ ಒಟ್ಟು 10 ಅಂಕ ಸಂಪಾದಿಸಿಕೊಂಡಿದೆ. ಇದು ಸೆಮಿಫೈನಲ್ ಹಾದಿಯನ್ನು ಖಚಿತಪಡಿಸಿಕೊಂಡರೂ, ಪಾಕಿಸ್ತಾನ ಹಾಗೂ ಇಂಗ್ಲೆಂಡ್ ತಂಡಗಳ ನಡುವಿನ ಪಂದ್ಯ ಫಲಿತಾಂಶದ ತನಕ ಕೇನ್ ವಿಲಿಯಮ್ಸನ್ ತಂಡ ಕಾಯಬೇಕಾಗಿದೆ. ಆ ಪಂದ್ಯ ಶನಿವಾರ ನಡೆಯಲಿದೆ.
ನ್ಯೂಜಿಲ್ಯಾಂಡ್ ತಂಡ ಪಂದ್ಯಕ್ಕೆ ಮೊದಲು ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿಯೇ ಇತ್ತು. ಹೀಗಾಗಿ ಲಂಕಾ ವಿರುದ್ಧದ ಪಂದ್ಯದ ಬಳಿಕ ಅಂಕಪಟ್ಟಿಯಲ್ಲಿ ಯಾವುದೇ ಬದಲಾವಣೆ ಸಂಭವಿಸಿಲ್ಲ. 10 ಅಂಕ ಹಾಗೂ +0.743 ನೆಟ್ರನ್ರೇಟ್ ಕಿವೀಸ್ ಕೈಯಲ್ಲಿದೆ. ಸೆಮೀಸ್ ರೇಸ್ನಲ್ಲಿ ಇನ್ನು ಪಾಕಿಸ್ತಾನ ಹಾಗೂ ಅಫಘಾನಿಸ್ತಾನ ತಂಡಗಳಿವೆ. ಇವೆರಡೂ ಐದು ಹಾಗೂ ಆರನೇ ಸ್ಥಾನದಲ್ಲಿವೆ. ಅಫಘಾನಿಸ್ತಾನ ಈಗ 8 ಅಂಕ ಹೊಂದಿದ್ದು, ಮೈನಸ್ (-0.338) ನೆಟ್ರನ್ರೇಟ್ ಹೊಂದಿದೆ. ನವೆಂಬರ್ 10ರಂದು ಈ ತಂಡ ಬಲಿಷ್ಠ ದಕ್ಷಿಣ ಆಫ್ರಿಕಾ ವಿರುದ್ಧ ಆಡಲಿದೆ. ಒಂದು ವೇಳೆ ಗೆದ್ದರೆ ಬೃಹತ್ ರನ್ಗಳ ಅಂತರ ಇಟ್ಟುಕೊಳ್ಳಬೇಕಾಗುತ್ತದೆ. ಇನ್ನು ಪಾಕಿಸ್ತಾನ ಶನಿವಾರ ಇಂಗ್ಲೆಂಡ್ಗೆ ಎದುರಾಗಲಿದೆ ಪಾಕ್ +0.036 ನೆಟ್ರನ್ರೇಟ್ ಹೊಂದಿದೆ. ಹೀಗಾಗಿ ಸೆಮೀಸ್ಗೇರುವ ಅವಕಾಶ ಉಂಟು. ಆದರೆ, ಇಂಗ್ಲೆಂಡ್ ವಿರುದ್ಧ 275 ರನ್ಗಳ ಅಂತರದಿಂದ ಜಯ ಸಾಧಿಸಬೇಕು. ಇವೆರಡೂ ಅಷ್ಟೊಂದು ಸುಲಭದ ಗುರಿಯಾಗದಿರುವ ಕಾರಣ ಭಾರತ ಹಾಗೂ ನ್ಯೂಜಿಲ್ಯಾಂಡ್ ನಡುವೆ ಮೊದಲ ಸೆಮಿಫೈನಲ್ ಪಂದ್ಯ ಬಹುತೇಕ ಫಿಕ್ಸ್. ಈ ಪಂದ್ಯ ಮುಂಬಯಿಯ ವಾಂಖೆಡೆ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆಯಲಿದೆ.
ಭಾರತ ಅಂಕಪಟ್ಟಿಯ ಅಗ್ರಸ್ಥಾನಿಯಾಗಿದ್ದರೆ, ನಂತರದಲ್ಲಿ ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ತಂಡಗಳಿವೆ. ಈ ಮೂರು ತಂಡಗಳಿಗೂ ಇನ್ನೊಂದು ಪಂದ್ಯಗಳು ಬಾಕಿ ಇವೆ. ಇಂಗ್ಲೆಂಡ್ ಏಳನೇ ಸ್ಥಾನದಲ್ಲಿದ್ದರೆ, ಬಾಂಗ್ಲಾ 8ನೇ ಸ್ಥಾನದಲ್ಲಿದೆ. ನೆದರ್ಲ್ಯಾಂಡ್ಸ್ 10ನೇ ಸ್ಥಾನದಲ್ಲಿದೆ.
ಅಂಕಪಟ್ಟಿ ಈ ರೀತಿ ಇದೆ
ತಂಡ | ಪಂದ್ಯ | ಗೆಲುವು | ಸೋಲು | ಅಂಕ | ನೆಟ್ ರನ್ರೇಟ್ |
ಭಾರತ | 8 | 8 | 0 | 16 | +2.456 |
ದಕ್ಷಿಣ ಆಫ್ರಿಕಾ | 8 | 6 | 2 | 12 | +1.376 |
ಆಸ್ಟ್ರೇಲಿಯಾ | 8 | 6 | 2 | 12 | +0.861 |
ನ್ಯೂಜಿಲ್ಯಾಂಡ್ | 9 | 5 | 4 | 10 | +0.743 |
ಪಾಕಿಸ್ತಾನ | 8 | 4 | 4 | 8 | +0.036 |
ಅಫಘಾನಿಸ್ತಾನ | 8 | 4 | 4 | 8 | -0.338 |
ಇಂಗ್ಲೆಂಡ್ | 8 | 2 | 6 | 4 | -0.885 |
ಬಾಂಗ್ಲಾದೇಶ | 8 | 2 | 6 | 4 | -1.142 |
ಶ್ರೀಲಂಕಾ | 9 | 2 | 7 | 4 | -1.419 |
ನೆದರ್ಲ್ಯಾಂಡ್ಸ್ | 8 | 2 | 6 | 4 | -1.635 |
ಇಂಗ್ಲೆಂಡ್ ತಂಡದ ಚಾಂಪಿಯನ್ಸ್ ಟ್ರೋಫಿ ಆಸೆ ಜೀವಂತ
ಸತತ 6 ಸೋಲಿನಿಂದಾಗಿ ಕಂಗೆಟ್ಟು 10ನೇ ಸ್ಥಾನದಲ್ಲಿದ್ದ ಇಂಗ್ಲೆಂಡ್ ತಂಡ ಪಾಕಿಸ್ತಾನದಲ್ಲಿ ನಡೆಯುವ 2025 ಚಾಂಪಿಯನ್ಸ್ ಟ್ರೋಫಿಗೆ ಅರ್ಹತೆ ಕಳೆದುಕೊಳ್ಳುವ ಆತಂಕದಲ್ಲಿತ್ತು. ಆದರೆ ನೆದರ್ಲೆಂಡ್ಸ್ ವಿರುದ್ಧ ಗೆದ್ದು ಇದೀಗ 7ನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ. ಇದರೊಂದಿಗೆ ಚಾಂಪಿಯನ್ಸ್ ಟ್ರೋಫಿ ಆಸೆ ಮತ್ತೆ ಚಿಗುರೊಡೆದಿದೆ. ಇಂಗ್ಲೆಂಡ್ಗೆ ಇನ್ನೊಂದು ಪಂದ್ಯ ಬಾಕಿ ಉಳಿದಿದೆ. ಇದನ್ನು ಗೆದ್ದರೆ ಈ ಸ್ಥಾನದಲ್ಲೇ ಮುಂದುವರಿಯಲಿದೆ. ಜತೆಗೆ ಚಾಂಪಿಯನ್ಸ್ ಟ್ರೋಫಿಗೂ ನೇರ ಅರ್ಹತೆ ಪಡೆಯಲಿದೆ.
ಈ ಸುದ್ದಿಯನ್ನೂ ಓದಿ: Virat Kohli : ವಿರಾಟ್ ಕೊಹ್ಲಿಗೆ ವಿಶೇಷ ರೀತಿಯಲ್ಲಿ ಶುಭಾಶಯ ಹೇಳಿದ ಸಚಿನ್ ತೆಂಡೂಲ್ಕರ್
ಸೋತರೆ ಕಷ್ಟ
ಒಂದೊಮ್ಮೆ ಪಾಕಿಸ್ತಾನ ವಿರುದ್ಧದ ಅಂತಿಮ ಪಂದ್ಯವನ್ನು ಇಂಗ್ಲೆಂಡ್ ಸೋತರೆ, ಅತ್ತ ಶ್ರೀಲಂಕಾ ಮತ್ತು ಬಾಂಗ್ಲಾದೇಶ ಗೆಲುವು ಸಾಧಿಸಿದರೆ ಇಂಗ್ಲೆಂಡ್ 7ನೇ ಸ್ಥಾನದಿಂದ ಕೆಳಗೆ ಕುಸಿಯುವ ಜತೆಗೆ ಅಧಿಕೃತವಾಗಿ ಚಾಂಪಿಯನ್ಸ್ ಟ್ರೋಫಿಯಿಂದ ಹೊರಬೀಳಲಿದೆ.
ಅಗ್ರ 7 ಸ್ಥಾನಗಳಿಗೆ ಅರ್ಹತೆ
ಐಸಿಸಿ ನಿಯಮಗಳ ಪ್ರಕಾರ 2023ರ ಸಾಲಿನ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಅಂಕಪಟ್ಟಿಯ ಅಗ್ರ 7ರಲ್ಲಿ ಸ್ಥಾನ ಪಡೆಯುವ ತಂಡಗಳು ನೇರವಾಗಿ ಪಾಕಿಸ್ತಾನದ ಆತಿಥ್ಯದಲ್ಲಿ ನಡೆಯುವ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಅರ್ಹತೆ ಪಡೆದುಕೊಳ್ಳಲಿವೆ. ಈ ಟೂರ್ನಿಯ ಅರ್ಹತಾ ಸುತ್ತನ್ನು ಐಸಿಸಿ ಸಮಿತಿ 2021ರಲ್ಲೇ ಅಂತ್ಯಗೊಳಿಸಿದೆ. ಐಸಿಸಿ ಮಾನದಂಡದ ಪ್ರಕಾರ ಪ್ರಸಕ್ತ ಸಾಗುತ್ತಿರುವ ವಿಶ್ವಕಪ್‌ನಲ್ಲಿ ಅಗ್ರ 7ರೊಳಗೆ ಸ್ಥಾನ ಪಡೆದ ತಂಡಗಳು ಅರ್ಹತೆ ಗಿಟ್ಟಿಸಿಕೊಳ್ಳಲಿದೆ. 7 ರಿಂದ ಕೆಳಗಿರುವ ತಂಡಗಳು ಟೂರ್ನಿಯಿಂದ ಹೊರಬೀಳಲಿದೆ. ಸದ್ಯ ಇಂಗ್ಲೆಂಡ್ 7ನೇ ಸ್ಥಾನದಲ್ಲಿದೆ. ಮುಂದಿನ ಪಂದ್ಯ ಗೆದ್ದರೆ ಅರ್ಹತೆ ಪಡೆಯಲಿದೆ. ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದಿದ್ದರೂ ಚಾಂಪಿಯನ್ಸ್ ಟ್ರೋಫಿಗೆ ಅರ್ಹತೆ ಪಡೆದ ಖುಷಿಯೊಂದು ಇಂಗ್ಲೆಂಡ್ ಪಾಲಿಗೆ ಸಿಗಲಿದೆ.