ಕರಾಚಿ: ಭಾರತದ ಆತಿಥ್ಯದಲ್ಲಿ ಇದೇ ವರ್ಷ ನಡೆಯಲಿರುವ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ(ICC World Cup 2023) ಪಾಕಿಸ್ತಾನ ತಂಡವು ತನ್ನ ಪಾಲಿನ ಪಂದ್ಯಗಳನ್ನು ಬಾಂಗ್ಲಾದೇಶದಲ್ಲಿ ಆಡುತ್ತದೆ ಎಂಬ ವಿಚಾರಕ್ಕೆ ಸಂಬಂಧಿಸಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಸ್ಪಷ್ಟನೆ ನೀಡಿದೆ. ಪಾಕ್ ಪಾಲಿನ ಪಂದ್ಯವನ್ನು ಬಾಂಗ್ಲಾದೇಶದಲ್ಲಿ ನಡೆಸುವಂತೆ ಐಸಿಸಿ ಮೇಲೆ ಯಾವುದೇ ಒತ್ತಡ ಹೇರಿಲ್ಲ ಎಂದು ಪಿಸಿಬಿ ಮುಖ್ಯಸ್ಥ ನಜಮ್ ಸೇಥಿ(Najam Sethi) ಖಚಿತಪಡಿಸಿದ್ದಾರೆ.
ಪಾಕಿಸ್ತಾನ ತಂಡ ತನ್ನ ಪಾಲಿನ ಏಕದಿನ ವಿಶ್ವ ಕಪ್ನ ಪಂದ್ಯಗಳನ್ನು ಬಾಂಗ್ಲಾದೇಶದಲ್ಲಿ ಆಡಲಿದೆ ಎಂದು ವರದಿಯಾಗಿತ್ತು. ಇದೇ ವಿಚಾರವಾಗಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪಿಸಿಬಿ ಅಧ್ಯಕ್ಷ ನಜಮ್ ಸೇಥಿ, ಏಷ್ಯಾಕಪ್‌ನಲ್ಲಿ ಭಾರತದ ಪಂದ್ಯಗಳನ್ನು ತಟಸ್ಥ ಸ್ಥಳದಲ್ಲಿ ನಡೆಸುವ ಬಗ್ಗೆಯಷ್ಟೇ ಚರ್ಚಿಸಲಾಗಿದೆ. ಆದರೆ ವಿಶ್ವ ಕಪ್ ಟೂರ್ನಿಗೆ ಪಾಕಿಸ್ತಾನ ತಂಡ ಭಾರತಕ್ಕೆ ಹೋಗುವ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ ಎಂದು ಅವರು ತಿಳಿಸಿದ್ದಾರೆ.
ಏಷ್ಯಾ ಕಪ್ಗಾಗಿ ಪಾಕಿಸ್ತಾನಕ್ಕೆ ಭಾರತ ತಂಡ ಬರಲು ಒಪ್ಪದ ಕಾರಣ ಪಾಕ್ ಕೂಡ ಭದ್ರತಾ ಕೊರತೆಯ ನೆಪವೊಡ್ಡಿ ಭಾರತದಲ್ಲಿ ನಡೆಯುವ ಏಕದಿನ ವಿಶ್ವ ಕಪ್ ಟೂರ್ನಿಯಲ್ಲಿ ನಾವು ಪಾಲ್ಗೊಳ್ಳಲು ಹಿಂದೇಟು ಹಾಕಿದ್ದು ಇದೇ ಕಾರಣಕ್ಕೆ ಪಾಕಿಸ್ತಾನದ ಪಂದ್ಯಗಳು ತಟಸ್ಥ ತಾಣವಾದ ಬಾಂಗ್ಲಾದೇಶದಲ್ಲಿ ನಡೆಯಲಿದೆ ಎಂದು ವರದಿಯಾಗಿತ್ತು. ಈ ವಿಚಾರವನ್ನು ಐಸಿಸಿ ಅಲ್ಲಗಲೆದಿದ್ದರೂ ಕೂಡ ಯಾರು ನಂಬಿರಲಿಲ್ಲ. ಆದರೆ ಇದೀಗ ಪಾಕ್ ಕ್ರಿಕೆಟ್ ಮಂಡಳಿಯೇ ಈ ವಿಚಾರವಾಗಿ ಸ್ಪಷ್ಟನೆ ನೀಡುವ ಮೂಲಕ ಎಲ್ಲ ಊಹಾಪೋಹಗಳಿಗೆ ತೆರೆ ಎಳೆದಿದೆ.
ಇದನ್ನೂ ಓದಿ ICC World Cup 2023: ಭಾರತದಲ್ಲೇ ನಡೆಯಲಿದೆ ವಿಶ್ವ ಕಪ್ ಪಂದ್ಯ; ಐಸಿಸಿ ಸ್ಪಷ್ಟನೆ
“ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ನಜ್ಮುಲ್ ಹಸನ್ ಪಪೊನ್ ಅವರನ್ನು ನಾನು ಭೇಟಿಯಾಗಿದ್ದು ದ್ವಿಪಕ್ಷೀಯ ಕ್ರಿಕೆಟ್ ಸರಣಿಯ ವಿಚಾರವಾಗಿ ಮಾತನಾಡಲಾಗಿತ್ತು. ಇದೇ ವಿಷಯವನ್ನು ಏಕದಿನ ವಿಶ್ವ ಕಪ್ಗೆ ಲಿಂಕ್ ಮಾಡಿ ಕೆಲವರು ಸುಳ್ಳು ಸುದ್ದಿ ಹಬ್ಬಿಸಿದ್ದರು. ಆದರೆ ಈ ರೀತಿಯ ಯಾವುದೇ ಚರ್ಚೆ ನಡೆದಿಲ್ಲ” ಎಂದು ನಜಮ್ ಸೇಥಿ ಹೇಳಿದ್ದಾರೆ.
ಇದನ್ನೂ ಓದಿ IPL 2023: ಭಾನುಕ ರಾಜಪಕ್ಷ ಅರ್ಧಶತಕ; 191 ರನ್ ಪೇರಿಸಿದ ಪಂಜಾಬ್ ಕಿಂಗ್ಸ್
ಭಾರತ ಮತ್ತು ಪಾಕಿಸ್ತಾನ ಕೊನೆಯ ಬಾರಿ 2012ರಲ್ಲಿ ದ್ವಿಪಕ್ಷೀಯ ಸರಣಿಯನ್ನು ಆಡಿದ್ದವು. ಭಾರತದ ಆತಿಥ್ಯದಲ್ಲಿ ನಡೆದ ಸೀಮಿತ ಓವರ್‌ಗಳ ಸರಣಿ ಅದಾಗಿತ್ತು. ಇನ್ನು 2007ರಲ್ಲಿ ಭಾರತ-ಪಾಕ್ ನಡುವೆ ಕೊನೆಯ ಟೆಸ್ಟ್ ಸರಣಿ ನಡೆದಿತ್ತು. ಇದಾದ ಬಳಿಕ ಉಭಯ ದೇಶಗಳು ಯಾವುದೇ ದ್ವಿಪಕ್ಷೀಯ ಸರಣಿ ಆಡಿಲ್ಲ. ಕೇವಲ ಐಸಿಸಿ ಟೂರ್ನಿಗಳ ಪಂದ್ಯಗಳಲ್ಲಿ ಮಾತ್ರ ಮುಖಾಮುಖಿಯಾಗುತ್ತಿವೆ.