ಅಹಮದಾಬಾದ್: ಇದೇ ಮೊದಲ ಬಾರಿಗೆ ಸಂಪೂರ್ಣವಾಗಿ ಭಾರತದ ಆತಿಥ್ಯದಲ್ಲಿ ನಡೆಯುವ ವಿಶ್ವಕಪ್ ಟೂರ್ನಿ ಗುರುವಾರ ಆರಂಭವಾಗಲಿದೆ. ಕಳೆದ ಬಾರಿ ವಿವಾದಕ್ಕೆ ಕಾರಣವಾದ ಕೆಲವು ನಿಯಮಗಳನ್ನು ಈ ಬಾರಿ ತೆಗೆದು ಹಾಕಲಾಗಿದೆ. ಅಲ್ಲದೆ ಕೆಲ ಹೊಸ ನಿಯಮವನ್ನು ಜಾರಿ ಮಾಡಲಾಗಿದೆ.
ಬೌಂಡರಿ ಕೌಂಟ್ ಇಲ್ಲ
ಕಳೆದ ಬಾರಿಯ ವಿಶ್ವಕಪ್ ಫೈನಲ್ನಲ್ಲಿ ಸೂಪರ್ ಓವರ್ ಟೈಗೊಂಡಾಗ ಫಲಿತಾಂಶಕ್ಕೆ ಬೌಂಡರಿ ಲೆಕ್ಕಾಚಾರವನ್ನು ಮಾಡಲಾಗಿತ್ತು. ಇದು ಭಾರಿ ವಿವಾದಕ್ಕೂ ಕಾರಣವಾಗಿತ್ತು. ಈ ಬಾರಿ ಬೌಂಡರಿ ನಿಯಮವನ್ನು ತೆಗೆದು ಹಾಕಲಾಗಿದೆ. ಈ ಬಾರಿ ಪಂದ್ಯಗಳು ಟೈ ಗೊಂಡರೆ ಫಲಿತಾಂಶ ಬರುವ ತನಕ ಸೂಪರ್ ಓವರ್ ಆಡಿಸಲಾಗುತ್ತದೆ.
ಬೌಂಡರಿ ಸುತ್ತಳತೆ 70 ಮೀಟರ್
ಈ ಬಾರಿ ವಿಶ್ವಕಪ್ನಲ್ಲಿ ಐಸಿಸಿ ಮಹತ್ವದ ನಿರ್ಧಾರವೊಂದನ್ನು ಜಾರಿಗೊಳಿಸಿದೆ. ಅದೆಂದರೆ ಬೌಂಡರಿಯ ದೂರ 70 ಮೀಟರ್ ಗಿಂತ ಕಡಿಮೆ ಇರುವಂತಿಲ್ಲ. ಈ ಹಿಂದೆ ನಡೆದ ವಿಶ್ವಕಪ್ನಲ್ಲಿ ಈ ರೀತಿಯ ಬೌಂಡರಿ ಗೆರೆಯ ಅಂತರದ ನಿಯಮವಿರಲಿಲ್ಲ. ಬ್ಯಾಟರ್ಗಳಿಗೆ ಸಿಕ್ಸರ್ ಬಾರಿಸುವುದು ಅಷ್ಟು ಸುಲಭವಲ್ಲ.
ಇದನ್ನೂ ಓದಿ ENG vs NZ: ಇಂಗ್ಲೆಂಡ್-ಕಿವೀಸ್ ಪಂದ್ಯದ ಪಿಚ್ ರಿಪೋರ್ಟ್, ಸಂಭಾವ್ಯ ತಂಡ ಹೀಗಿದೆ
ವಿಂಡೀಸ್ ಇಲ್ಲದ ವಿಶ್ವಕಪ್
ಅದೊಂದು ಕಾಲವಿತ್ತು… ವೆಸ್ಟ್ ಇಂಡೀಸ್(West Indies Cricket) ವಿರುದ್ಧ ಆಡುವುದೆಂದರೆ ಎಂತಹ ಆಟಗಾರರ ಎದೆಯೂ ಒಮ್ಮೆ ನಡುಗಲಾರಂಭಿಸುತಿತ್ತು. ಸೋಲಿನ ಭಯ ಮಾತ್ರವಲ್ಲ, ದೇಹದ ಯಾವ ಭಾಗಕ್ಕೆ ಎಷ್ಟು ಹಾನಿ ಆಗಲಿದೆ ಎಂಬ ಆತಂಕ ಕಾಡುತಿತ್ತು. ಈ ಬಾರಿ ಏನು ಕಾದಿದೆಯೊ ಎನ್ನುವಷ್ಟು ಹೆದರಿಕೆ. ವೆಸ್ಟ್ ಇಂಡೀಸ್ ತಂಡದ ಹೆಸರು ಕೇಳಿದರೆ ಆಟಗಾರರ ಕುಟುಂಬದವರೂ ಆತಂಕಕ್ಕೆ ಒಳಗಾಗುತ್ತಿದ್ದ ಕಾಲವದು. 1975 ಮತ್ತು 1979 ರ ಚಾಂಪಿಯನ್ ಆಗಿತ್ತು. ಆದರೆ 48 ವರ್ಷಗಳ ಏಕದಿನ ವಿಶ್ವ ಕಪ್ ಇತಿಹಾಸದಲ್ಲಿ ವೆಸ್ಟ್ ಇಂಡೀಸ್ ತಂಡವಿಲ್ಲದೆ ಇದೇ ಮೊದಲ ಬಾರಿ ಟೂರ್ನಿ ನಡೆಯುತ್ತಿದೆ.
ಸಾಫ್ಟ್ ಸಿಗ್ನಲ್ ಇರಲ್ಲ
ಈ ವರ್ಷದ ಜೂನ್‌ನಿಂದ ಸಾಫ್ಟ್ ಸಿಗ್ನಲ್ ನಿಯಮವನ್ನು ಐಸಿಸಿ ರದ್ದುಗೊಳಿಸಿದೆ. ಹೀಗಾಗಿ ಈ ಬಾರಿಯ ವಿಶ್ವಕಪ್ನಲ್ಲಿ ಸಾಫ್ಟ್ ಸಿಗ್ನಲ್ ಜಾರಿಯಲ್ಲಿ ಇರುವುದಿಲ್ಲ. ಉದಾಹರಣೆಗೆ ಫೀಲ್ಡರ್ ಒಬ್ಬ ಹಿಡಿದ ಕ್ಯಾಚ್ ಅನುಮಾನಾಸ್ಪದಗಾಗಿದ್ದರೆ ಆಗ ಫೀಲ್ಡ್ ಅಂಪೈರ್, ಥರ್ಡ್ ಅಂಪೈರ್ ಬಳಿ ಈ ಬಗ್ಗೆ ಮನವಿ ಮಾಡುತ್ತಾರೆ. ಅದಕ್ಕೂ ಮುನ್ನ ಆನ್ಪೀಲ್ಡ್ ಅಂಪೈರ್ ತಮ್ಮ ನಿರ್ಧಾರವನ್ನು ಪ್ರಕಟಿಸಬೇಕಾಗುತ್ತದೆ (ಔಟ್ ಅಥವಾ ನಾಟೌಟ್). ನಂತರ ಮೂರನೇ ಅಂಪೈರ್ ಈ ಕ್ಯಾಚ್‌ನ ವಿಡಿಯೊ ತುಣುಕನ್ನು ಪರೀಕ್ಷಿಸುತ್ತಾರೆ. ಒಂದೊಮ್ಮೆ ಈ ಕ್ಯಾಚ್‌ನ ವಿಡಿಯೊ ತುಣುಕಿನಲ್ಲಿ ಮೂರನೇ ಅಂಪೈರ್‌ಗೂ ಸರಿಯಾದ ಸ್ಪಷ್ಟತೆ ಇಲ್ಲವಾದರೆ ಆಗ ಆನ್‌ಫೀಲ್ಡ್ ಅಂಪೈರ್‌ಗಳು ನೀಡಿದ ನಿರ್ಧಾರವನ್ನೇ ಅಂತಿಮವಾಗಿ ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಈ ರೀತಿಯ ನಿರ್ಣಾಯ ಹಲವು ವಿವಾದ ಸೃಷ್ಟಿಸಿತ್ತು. ಹೀಗಾಗಿ ಈ ಬಾರಿ ಸಾಫ್ಟ್ ಸಿಗ್ನಲ್ ನಿಯಮವನ್ನು ಕೈಬಿಡಲಾಗಿದೆ.
ಸಂಪೂರ್ಣ ಭಾರತದ ಆತಿಥ್ಯ
ಏಕದಿನ ವಿಶ್ವಕಪ್ ಆತಿಥ್ಯವನ್ನು ಭಾರತ ಈ ಹಿಂದೆ ಪಾಕಿಸ್ತಾನ, ಶ್ರಿಲಂಕಾ ಜತೆ ಜಂಟಿಯಾಗಿ ನಡೆಸಿತ್ತು. ಇದೇ ಮೊದಲ ಬಾರಿ ಸಂಪೂರ್ಣವಾಗಿ ಭಾರತದ ಆತಿಥ್ಯದಲ್ಲಿ ನಡೆಯುವ ವಿಶ್ವಕಪ್ ಇದಾಗಿದೆ. ಈ ಮೊದಲು 1987, 1996 ಮತ್ತು 2011 ರಲ್ಲಿ ಜಂಟಿಯಾಗಿ ಆತಿಥ್ಯ ವಹಿಸಿತ್ತು.
ಏಕದಿನ ವಿಶ್ವಕಪ್ 2023ರ ಫೆಬ್ರವರಿ 9ರಿಂದ ಮಾರ್ಚ್ 26ರ ತನಕ ನಡೆಯಬೇಕಿತ್ತು. ಆದರೆ 2020ರಲ್ಲಿ ಕೋವಿಡ್ ಸಂಕಟದಿಂದಾಗಿ ಹಲವು ಕ್ರಿಕೆಟ್ ಟೂರ್ನಿಗಳು ನಡೆಯಲಿಲ್ಲ. ಇದರಿಂದಾಗಿ ವಿಶ್ವಕಪ್‌ನ ಅರ್ಹತಾ ಅವಧಿಯನ್ನು ವಿಸ್ತರಿಸಬೇಕಾದ ಅನಿವಾರ್ಯತೆ ಐಸಿಸಿಗೆ ಎದುರಾಗಿತ್ತು. ಇದೇ ಕಾರಣದಿಂದಾಗಿ ಐಸಿಸಿ ವಿಶ್ವಕಪ್ ಟೂರ್ನಿಯನ್ನು 6 ತಿಂಗಳ ಕಾಲ ಮುಂದೂಡಿತ್ತು.
ರೌಂಡ್ ರಾಬಿನ್ ಲೀಗ್
ಇದು 10 ತಂಡಗಳ ನಡುವಿನ ರೌಂಡ್ ರಾಬಿನ್ ಮಾದರಿಯ ಲೀಗ್ ಆಗಿದೆ. ಎಲ್ಲ ತಂಡಗಳು ಮುಖಾಮುಖಿಯಾಗಲಿವೆ. ಅಗ್ರಸ್ಥಾನ ಅಲಂಕರಿಸಿದ 4 ತಂಡಗಳು ಸೆಮಿಫೈನಲ್ ಪ್ರವೇಶ ಪಡೆಯಲಿದೆ.