Site icon Vistara News

ICC World Cup: ಭಾರತ-ಪಾಕ್​ ಸೇರಿ 9 ಪಂದ್ಯಗಳ ದಿನಾಂಕ ಬದಲು; ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸಿದ ಐಸಿಸಿ

ದುಬೈ: ಏಕದಿನ ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಗೆ(ICC World Cup 2023) ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಆದರೆ ವೇಳಾಪಟ್ಟಿ ಪ್ರಕಟಗೊಂಡು ಒಂದು ತಿಂಗಳು ಕಳೆದರು ಕೆಲ ಪಂದ್ಯಗಳ ವಿಚಾರದಲ್ಲಿ ಒಂದಲ್ಲ ಒಂದು ಕಾರಣದಿಂದ ಸಮಸ್ಯೆಯಾಗುತ್ತಲೇ ಇತ್ತು. ಇದೀಗ ಈ ಎಲ್ಲ ಗೊಂದಲಕ್ಕೆ ಅಂತಿಮವಾಗಿ ತೆರೆ ಬಿದ್ದಿದೆ. ಬುಧವಾರ ಐಸಿಸಿ ಫೈನಲ್​ ಲೀಸ್ಟ್​ ಪ್ರಕಟಿಸಿದೆ. ಅದರಂತೆ ಕೆಲವು ಪಂದ್ಯಗಳ ವೇಳಾಪಟ್ಟಿಯಲ್ಲಿ ಬದಲಾವಣೆಯಾಗಿದೆ. ನಿರೀಕ್ಷೆಯಂತೆ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೆಜ್​ ಪಂದ್ಯ ಅಕ್ಟೋಬರ್​ 15ರ ಬದಲು ಅಕ್ಟೋಬರ್​ 14ರಂದು ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ.

ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯವನ್ನು ಅಕ್ಟೋಬರ್‌ 15ರಂದೇ ನಡೆಸಲು ತೀರ್ಮಾನಿಸಲಾಗಿತ್ತು. ಆದರೆ, ಭದ್ರತಾ ಕಾರಣಗಳು ಮತ್ತು ಗುಜರಾತ್‌ನಲ್ಲಿ ಅ.15ರಂದು ಅದ್ಧೂರಿಯಾಗಿ ನವರಾತ್ರಿ ಆಚರಿಸುವ ಕಾರಣದಿಂದಾಗಿ ಇದೇ ದಿನಾಂಕದಂದು ಪಂದ್ಯ ಆಯೋಜಿಸದಿರಲು ತೀರ್ಮಾನಿಸಲಾಗಿತ್ತು. ಈಗ ನಿಗದಿತ ದಿನಾಂಕಕ್ಕಿಂತ ಒಂದು ದಿನ ಮೊದಲೇ ಪಂದ್ಯ ನಡೆಯಲಿದೆ. ಇದರಿಂದಾಗಿ ಅಭಿಮಾನಿಗಳು ನಿಗದಿತ ದಿನಾಂಕಕ್ಕಿಂತ ಒಂದು ದಿನ ಮೊದಲೇ ರಣರೋಚಕ ಪಂದ್ಯದ ಖುಷಿಯನ್ನು ಅನುಭವಿಸಲಿದ್ದಾರೆ.

ಭಾರತದ ಮತ್ತೊಂದು ಪಂದ್ಯವು ಬದಲು

ಪಾಕಿಸ್ತಾನ ಜತೆಗಿನ ಪಂದ್ಯ​ ಮಾತ್ರವಲ್ಲದೆ ನೆದರ್ಲೆಂಡ್ಸ್​ ವಿರುದ್ಧದ ಭಾರತದ ಪಂದ್ಯವೂ ಬದಲಾಗಿದೆ. ಹೊಸ ವೇಳಾಪಟ್ಟಿಯ ಪ್ರಕಾರ ನವೆಂಬರ್ 11 ರಂದು ನಡೆಯಬೇಕಿದ್ದ ನೆದರ್ಲೆಂಡ್ಸ್ ವಿರುದ್ಧದ ಪಂದ್ಯ ಇದೀಗ ನವೆಂಬರ್ 12 ರಂದು ನಡೆಯಲ್ಲಿದೆ.

ಇದನ್ನೂ ಓದಿ ICC World Cup: ಏಕದಿನ ವಿಶ್ವಕಪ್​ಗೆ ಬಲಿಷ್ಠ ತಂಡ ಪ್ರಕಟಿಸಿದ ಆಸ್ಟ್ರೇಲಿಯಾ

ಮೂರು ದಿನ ಕಾಲಾವಕಾಶ

ಬಾಬರ್‌ ಅಜಂ ನೇತೃತ್ವದ ತಂಡವು ಅಕ್ಟೋಬರ್‌ 12ರಂದು ಶ್ರೀಲಂಕಾ ವಿರುದ್ಧ ಹೈದರಾಬಾದ್‌ನಲ್ಲಿ ಆಡಬೇಕಿದ್ದ ಪಂದ್ಯವನ್ನು ಅಕ್ಟೋಬರ್‌ 10ರಂದೇ ಆಡುವುದರಿಂದ ಭಾರತದ ವಿರುದ್ಧ ನಡೆಯುವ ಪಂದ್ಯಕ್ಕೆ ಮೂರು ದಿನ ಕಾಲಾವಕಾಶ ಸಿಗಲಿದೆ.

ಇಂಗ್ಲೆಂಡ್​-ಪಾಕ್​ ಪಂದ್ಯ ಅದಲು ಬದಲು

ಪೂರ್ವ ನಿಗದಿಯಂತೆ ಪಾಕಿಸ್ತಾನ ಮತ್ತು ಹಾಲಿ ಚಾಂಪಿಯನ್​ ಇಂಗ್ಲೆಂಡ್​ ನಡುವೆ ನವೆಂಬರ್​ 12ರಂದು ಕೋಲ್ಕತಾದಲ್ಲಿ ಪಂದ್ಯ ನಡೆಯಬೇಕಿತ್ತು. ಆದರೆ ಈ ಪಂದ್ಯಕ್ಕೆ ಸಮಸ್ಯೆಯೊಂದು ಎದುರಾಗಿತ್ತು. ಇದೇ ದಿನ
ಬಂಗಾಳದ ಅತೀ ದೊಡ್ಡ ಹಬ್ಬವಾದ ಕಾಳಿ ಪೂಜೆ ನಡೆಯಲಿದೆ. ಈ ಹಬ್ಬದಲ್ಲಿ ಅಪಾರ ಸಂಖ್ಯೆಯ ಜನ ಸೇರಲಿದ್ದಾರೆ. ಹೀಗಾಗಿ ಈ ಪಂದ್ಯಕ್ಕೆ ಮತ್ತು ನಗರದಾದ್ಯಂತ ಏಕಕಾಲಕ್ಕೆ ಭದ್ರತೆ ಒದಗಿಸುವುದು ಸಮಸ್ಯೆಯಾಗಿ ಕಾಡುವ ಭೀತಿ ಇದೆ ಎಂದು ಇಲ್ಲಿನ ಭದ್ರತಾ ಹಾಗೂ ಪೊಲೀಸ್‌ ಇಲಾಖೆ ತಿಳಿಸಿತ್ತು. ಇದೀಗ ಈ ಪಂದ್ಯ ಒಂದು ದಿನ ಮುನ್ನವಾಗಿ ಅಂದರೆ ನವೆಂಬರ್​ 11ರಂದು ನಡೆಯಲಿದೆ.

Exit mobile version