ಮುಂಬಯಿ: ಭದ್ರತಾ ಸಮಸ್ಯೆಯಿಂದಾಗಿ ಗೊಂದಲಕ್ಕೆ ಕಾರಣವಾಗಿದ್ದ ಏಕದಿನ ವಿಶ್ವಕಪ್(ICC World Cup) ಪಂದ್ಯಾವಳಿಯ ದಿನಾಂಕಗಳು ಕೊನೆಗೂ ಅಂತಿಮಗೊಂಡಿದೆ. ಭಾರತ ಸೇರಿ ಒಂಬತ್ತು ಪಂದ್ಯಗಳ ಪರಿಷ್ಕೃತ ವೇಳಾಪಟ್ಟಿಯನ್ನು ಐಸಿಸಿ ಬಿಡುಗಡೆಗೊಳಿಸಿದೆ. ಈ ಪರಿಷ್ಕೃತ(ICC World Cup Rescheduled) ವೇಳಾಪಟ್ಟಿಯ ಪ್ರಕಾರ ಭಾರತದ ಎರಡು ಪಂದ್ಯಗಳು ಅದಲು-ಬದಲಾಗಿವೆ.
ಭಾರತ ಹಾಗೂ ಪಾಕಿಸ್ತಾನ(India v Pakistan) ನಡುವಿನ ಪಂದ್ಯವನ್ನು ಅಕ್ಟೋಬರ್ 15ರಂದೇ ನಡೆಸಲು ತೀರ್ಮಾನಿಸಲಾಗಿತ್ತು. ಆದರೆ, ಭದ್ರತಾ ಕಾರಣಗಳು ಮತ್ತು ಗುಜರಾತ್‌ನಲ್ಲಿ ಅ.15ರಂದು ಅದ್ಧೂರಿಯಾಗಿ ನವರಾತ್ರಿ ಆಚರಿಸುವ ಕಾರಣದಿಂದಾಗಿ ಈ ಪಂದ್ಯ ಇದೀಗ ಒಂದು ದಿನ ಮುಂಚಿತವಾಗಿ ಅಂದರೆ ಅಕ್ಟೋಬರ್ 14ರಂದು ನಡೆಯಲಿದೆ. ಭಾರತ ತನ್ನ ಮೊದಲ ಪಂದ್ಯವನ್ನು ಅಕ್ಟೋಬರ್ 8ರಂದು ಆಸ್ಟ್ರೇಲಿಯಾ ವಿರುದ್ಧ ಆಡುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ. ಈ ಪಂದ್ಯ ಚೆನ್ನೈಯಲ್ಲಿ ನಡೆಯಲಿದೆ.
ಬೆಂಗಳೂರಿನ ಪಂದ್ಯವೂ ಅದಲು-ಬದಲು
ಪೂರ್ವನಿಗದಿಯಂತೆ ಭಾರತ ಮತ್ತು ನೆದರ್ಲೆಂಡ್ಸ್ ನಡುವಿನ ಪಂದ್ಯ ನವೆಂಬರ್ 11ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಬೇಕಿತ್ತು. ಆದರೆ ಇತರ ಪಂದ್ಯಗಳ ವೇಳಾಪಟ್ಟಿಯಲ್ಲಿ ಬದಲಾವಣೆಯಾದ ಕಾರಣ ಈ ಪಂದ್ಯ ನವೆಂಬರ್ 12ರಂದು ನಡೆಯಲಿದೆ. ಇದು ಭಾರತದ ಕೊನೆಯ ಲೀಗ್ ಪಂದ್ಯವೂ ಆಗಿದೆ.
ಇದನ್ನೂ ಓದಿ ICC World Cup 2023: ವಿಶ್ವಕಪ್ ಪಂದ್ಯಗಳ ಟಿಕೆಟ್ ಮಾರಾಟಕ್ಕೆ ದಿನಾಂಕ ನಿಗದಿ
ಉದ್ಘಾಟನ ಪಂದ್ಯದಲ್ಲಿ ಇಂಗ್ಲೆಂಡ್-ಕಿವೀಸ್ ಸೆಣಸಾಟ
ವಿಶ್ವ ಕಪ್ ಟೂರ್ನಿ ಅಕ್ಟೋಬರ್ 5 ರಿಂದ ಆರಂಭಗೊಂಡು ನವೆಂಬರ್ 19 ತನಕ ನಡೆಯಲಿದೆ. ಒಟ್ಟು 48 ಪಂದ್ಯಗಳು ನಡೆಯಲಿದ್ದು 10 ತಂಡಗಳು ಸೆಣಸಾಟ ನಡೆಸಲಿವೆ. ದೇಶದ ಪ್ರಮುಖ 10 ತಾಣಗಳಲ್ಲಿ ಈ ಪಂದ್ಯ ನಡೆಯಲಿದೆ. ಉದ್ಘಾಟನ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಮತ್ತು ನ್ಯೂಜಿಲ್ಯಾಂಡ್ ತಂಡಗಳು ಮುಖಾಮುಖಿಯಾಗಲಿವೆ. ಭಾರತ ತಂಡ ತನ್ನ ಮೊದಲ ಲೀಗ್ ಪಂದ್ಯವನ್ನು ಆಸ್ಟ್ರೇಲಿಯಾ ವಿರುದ್ಧ ಅಕ್ಟೋಬರ್ 8 ರಂದು ಆಡಲಿದೆ. ಅಕ್ಟೋಬರ್ 14 ರಂದು ಭಾರತ ತನ್ನ ಸಾಂಪ್ರದಾಯಿಕ ಬದ್ಧ ಎದುರಾಳಿ ಪಾಕಿಸ್ತಾನ ವಿರುದ್ಧ ಕಣಕ್ಕಿಳಿಯಲಿದೆ ಈ ಪಂದ್ಯ ಕಣ್ತುಬಿಂಕೊಳ್ಳಲು ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಕಾದು ಕುಳಿತಿದ್ದಾರೆ.
ಇದನ್ನೂ ಓದಿ ICC World Cup: ಭಾರತ-ಪಾಕ್ ಸೇರಿ 9 ಪಂದ್ಯಗಳ ದಿನಾಂಕ ಬದಲು; ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸಿದ ಐಸಿಸಿ
ತಂಡಗಳ ಪಟ್ಟಿ ಪ್ರಕಟಿಸಲು ಸೆಪ್ಟಂಬರ್ 5 ಅಂತಿಮ ದಿನ
ಸೆಪ್ಟಂಬರ್ 5ರ ಒಳಗೆ ಎಲ್ಲ ತಂಡಗಳ ಪಟ್ಟಿಯನ್ನು ಕಳುಹಿಸುವಂತೆ ಸೂಚಿಸಿದೆ. ಆದರೆ ಭಾರತ ಸಂಕಷ್ಟಕ್ಕೆ ಸಿಲುಕಿದೆ.ಸ್ಟಾರ್ ಆಟಗಾರ ರಿಷಭ್ ಪಂತ್ ಕಾರು ಅಪಘಾತದಲ್ಲಿ ಗಾಯಗೊಂಡು ಕ್ರಿಕೆಟ್ನಿಂದ ದೂರ ಉಳಿದಿದ್ದಾರೆ. ಕೆ.ಎಲ್. ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ಕೂಡ ಗಾಯದಿಂದ ಚೇತರಿಸಿಕೊಂಡಿದ್ದರೂ ಇನ್ನೂ ತಂಡಕ್ಕೆ ಆಗಮಿಸಿಲ್ಲ. ಏಷ್ಯಾ ಕಪ್ನಲ್ಲಿಯೂ ಉಭಯ ಆಟಗಾರರು ಆಡುವುದು ಅನುಮಾನ ಎನ್ನಲಾಗಿದೆ, ಹೀಗಿರುವಾಗ ತಂಡವನ್ನು ಪ್ರಕಟಿಸುವುದು ಹೇಗೆ ಎಂಬ ದೊಡ್ಡ ಚಿಂತೆಯೊಂದು ಬಿಸಿಸಿಐಗೆ ಕಾಡಲಾರಂಭಿಸಿದೆ.
ಬುಮ್ರಾ ಫಿಟ್ನೆಸ್
ಬೆನ್ನು ನೋವಿನ ಶಸ್ತ್ರಚಿಕಿತ್ಸೆಗೆ ಒಳಗಾಗಿ ಸರಿ ಸುಮಾರು ಒಂದು ವರ್ಷದ ಬಳಿಕ ತಂಡಕ್ಕೆ ಮರಳಿರುವ ಜಸ್ಪ್ರೀತ್ ಬುಮ್ರಾ ಅವರು ಐರ್ಲೆಂಡ್ ವಿರುದ್ಧದ ಸರಣಿಗೆ ಆಯ್ಕೆ ಆಗಿದ್ದಾರೆ. ಆದರೆ ಅವರು ಈ ಹಿಂದಿನ ಫಾರ್ಮ್ನಲ್ಲಿದ್ದಾರೆಯೇ ಎಂದು ಇನ್ನಷ್ಟೇ ತಿಳಿಯಬೇಕಿದೆ.
ಭಾರತ ಪಂದ್ಯದ ಸಂಪೂರ್ಣ ಪರಿಷ್ಕೃತ ವೇಳಾಪಟ್ಟಿ
ಭಾರತ vs ಆಸ್ಟ್ರೇಲಿಯಾ- 8 ಅಕ್ಟೋಬರ್, ಎಂಎ ಚಿದಂಬರಂ ಸ್ಟೇಡಿಯಂ, ಚೆನ್ನೈ
ಭಾರತ vs ಅಫಘಾನಿಸ್ತಾನ- 11 ಅಕ್ಟೋಬರ್, ಅರುಣ್ ಜೇಟ್ಲಿ ಕ್ರೀಡಾಂಗಣ, ದೆಹಲಿ
ಭಾರತ vs ಪಾಕಿಸ್ತಾನ- 14 ಅಕ್ಟೋಬರ್, ನರೇಂದ್ರ ಮೋದಿ ಸ್ಟೇಡಿಯಂ, ಅಹಮದಾಬಾದ್
ಭಾರತ vs ಬಾಂಗ್ಲಾದೇಶ- 19 ಅಕ್ಟೋಬರ್, ಎಂಸಿಎ ಸ್ಟೇಡಿಯಂ, ಪುಣೆ
ಭಾರತ vs ನ್ಯೂಜಿಲ್ಯಾಂಡ್- 22 ಅಕ್ಟೋಬರ್, HPCA ಸ್ಟೇಡಿಯಂ, ಧರ್ಮಶಾಲಾ
ಭಾರತ vs ಇಂಗ್ಲೆಂಡ್- 29 ಅಕ್ಟೋಬರ್, ಏಕನಾ ಕ್ರಿಕೆಟ್ ಸ್ಟೇಡಿಯಂ, ಲಕ್ನೋ
ಭಾರತ vs ಶ್ರೀಲಂಕಾ- 2 ನವೆಂಬರ್, ವಾಂಖೆಡೆ ಸ್ಟೇಡಿಯಂ, ಮುಂಬೈ
ಭಾರತ vs ದಕ್ಷಿಣ ಆಫ್ರಿಕಾ- 5 ನವೆಂಬರ್, ಈಡನ್ ಗಾರ್ಡನ್ಸ್, ಕೋಲ್ಕತ್ತಾ
ಭಾರತ vs ನೆದರ್ಲೆಂಡ್ಸ್ – 12 ನವೆಂಬರ್, ಎಂ. ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು