ಹರಾರೆ: ಐಸಿಸಿ ವಿಶ್ವಕಪ್ ಅರ್ಹತಾ(ICC World Cup Qualifiers) ಕೂಟದ ಶನಿವಾರದ ಪಂದ್ಯದಲ್ಲಿ ಅಚ್ಚರಿಯ ಫಲಿತಾಂಶವೊಂದು ದಾಖಲಾಗಿದೆ. ಜಿಂಬಾಬ್ವೆ ತಂಡ ಬಲಿಷ್ಠ ವೆಸ್ಟ್ ಇಂಡೀಸ್(Zimbabwe vs West Indies) ತಂಡವನ್ನು 35 ರನ್ಗಳಿಂದ ಬಗ್ಗು ಬಡಿದಿದೆ. ಈ ಮೂಲಕ ಆಡಿದ ಮೂರು ಪಂದ್ಯಗಳಲ್ಲಿಯೂ ಗೆದ್ದು ಅಗ್ರಸ್ಥಾನ ಸಂಪಾದಿಸಿದೆ.
ಹರಾರೆ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಜಿಂಬಾಬ್ವೆ ಸರ್ವಾಂಗೀಣ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ 49.5 ಓವರ್ಗಳಲ್ಲಿ 268 ರನ್ ಗಳಸಿತು. ಜವಾಬಿತ್ತ ವೆಸ್ಟ್ ಇಂಡೀಸ್ ನಾಟಕೀಯ ಶೈಲಿಯಲ್ಲಿ ಕುಸಿತ ಕಂಡು ಸೋಲಿಗೆ ತುತ್ತಾಯಿತು. ಈ ಸೋಲಿನಿಂದ ವಿಂಡೀಸ್ ತಂಡದ ವಿಶ್ವ ಕಪ್ ಅರ್ಹತೆ ತೂಗುಯ್ಯಾಲೆಯಲ್ಲಿ ಸಿಲುಕಿದಂತಾಗಿದೆ. ಆಡಿದ ಮೂರು ಪಂದ್ಯದಲ್ಲಿ 2 ಪಂದ್ಯ ಗೆದ್ದು ‘ಎ’ ಗ್ರೂಪ್ನಲ್ಲಿ ಮೂರನೇ ಸ್ಥಾನದಲ್ಲಿದೆ. ನೆದರ್ಲೆಂಡ್ಸ್ ಕೂಡ ಎರಡು ಪಂದ್ಯದಲ್ಲಿ ಗೆದ್ದು ರನ್ ರೇಟ್ ಆಧಾರದಲ್ಲಿ ದ್ವಿತೀಯ ಸ್ಥಾನದಲ್ಲಿದೆ. ಅಂತಿಮ ಪಂದ್ಯ ಈ ಉಭಯ ತಂಡಗಳ ಮಧ್ಯೆಯೇ ನಡೆಯಲಿದೆ ಇಲ್ಲಿ ಯಾರು ಗೆಲುವು ಸಾಧಿಸುತ್ತಾರೋ ಅವರು ಮುಂದಿನ ಹಂತಕ್ಕೇರಲಿದ್ದಾರೆ. ಸೋತರೆ ರೇಸ್ನಿಂದ ಹೊರಬೀಳಲಿದ್ದಾರೆ.
ಉತ್ತಮ ಆರಂಭ ಪಡೆದ ವಿಂಡೀಸ್ ಒಂದು ಹಂತದಲ್ಲಿ ಈ ಪಂದ್ಯವನ್ನು ಸುಲಭವಾಗಿ ಗೆಲ್ಲುವ ಸ್ಥಿತಿಯಲ್ಲಿತ್ತು. ಆದರೆ ತಂಡದ ಮೊತ್ತ 200ರ ಗಡಿ ದಾಟಿತ್ತೇ ತಡ ನಾಟಕೀಯ ಕುಸಿತ ಕಂಡಿತು. ಜಾಸನ್ ಹೋಲ್ಡರ್, ರೋಮ್ವನ್ ಪೋವೆಲ್, ಕಿಮೊ ಪೌಲ್ ಯಾರೂ ಕೂಡ ತಂಡವನ್ನು ಆಧರಿಸಿ ನಿಲ್ಲದ ಪರಿಣಾಮ ಸೋಲು ಕಂಡಿತು. ವಿಂಡೀಸ್ ಪರ ಕೈಲ್ ಮೇಯರ್ಸ್ (56), ರೋಸ್ಟನ್ ಚೇಸ್(44), ಹೋಪ್(30) ಮತ್ತು ಪೂರನ್(34) ರನ್ ಗಳಿಸಿದರು.
Zimbabwe 🇿🇼🤩
— ICC (@ICC) June 24, 2023
The hosts register a terrific win over West Indies to assert their supremacy in the #CWC23 Qualifier 👊#CWC23 | ZIMvWI: https://t.co/wJIQndg4XH pic.twitter.com/l2Bw138Ngb
ಇದನ್ನೂ ಓದಿ Cricket Records: ವಿಲಿಯಮ್ಸ್ ದಾಖಲೆ ಮುರಿದ ಜಿಂಬಾಬ್ವೆ ಕ್ರಿಕೆಟಿಗ
ಜಿಂಬಾಬ್ವೆ ಪರ ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲಿ ಆಲ್ರೌಂಡರ್ ಪ್ರದರ್ಶನ ತೋರಿದ ಸಿಕಂದರ್ ರಾಜಾ(Sikandar Raza) ಪಂದ್ಯ ಶ್ರೇಷ್ಠ ಗೌರವ ಪಡೆದರು. ಕೆಳ ಕ್ರಮಾಂಕದಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿದ ರಾಜಾ 6 ಬೌಂಡರಿ ಮತ್ತು 2 ಸಿಕ್ಸರ್ ನೆರವಿನಿಂದ 68 ರನ್ ಬಾರಿಸಿದರು. ಬೌಲಿಂಗ್ನಲ್ಲಿಯೂ ಮಿಂಚಿದ ಅವರು ಪ್ರಮುಖ 2 ವಿಕೆಟ್ ಉರುಳಿಸಿದರು. ಜತೆಗೆ 2 ಅದ್ಭುತ ಕ್ಯಾಚ್ ಪಡೆದು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಉಳಿದಂತೆ ನಾಯಕ ಕ್ರೇಗ್ ಎರ್ವಿನ್(Craig Ervine) 47, ರಿಯಾನ್ ಬರ್ಲ್(Ryan Burl) 50 ರನ್ ಕೊಡುಗೆ ಸಲ್ಲಿಸಿದರು.