ಹರಾರೆ: ಐಸಿಸಿ ವಿಶ್ವ ಕಪ್ ಅರ್ಹತಾ ಪಂದ್ಯಾವಳಿಯಲ್ಲಿ(ICC World Cup Qualifiers) ಜಿಂಬಾಬ್ವೆ ತಂಡ ನೂತನ ದಾಖಲೆಯೊಂದನ್ನು ತನ್ನ ಹೆಸರಿಗೆ ಬರೆದಿದೆ. ಏಕದಿನ ಕ್ರಿಕೆಟ್ನಲ್ಲಿ ಅತ್ಯಧಿಕ ಮೊತ್ತದಿಂದ ಗೆದ್ದ ವಿಶ್ವದ ಎರಡನೇ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸೋಮವಾರ ಇಲ್ಲಿ ನಡೆದಿದ್ದ ಪಂದ್ಯದಲ್ಲಿ ಜಿಂಬಾಬ್ವೆ ತಂಡ ಯುಎಸ್ಎ(Zimbabwe vs United States) ವಿರುದ್ಧ 304 ರನ್ ಗಳ ದಾಖಲೆಯ ಗೆಲುವು ದಾಖಲಿಸಿತು. ಅತ್ಯಧಿಕ ಮೊತ್ತದಿಂದ ಗೆದ್ದ ಪಟ್ಟಿಯಲ್ಲಿ ಭಾರತಕ್ಕೆ ಅಗ್ರ ಸ್ಥಾನ. ಇದೇ ವರ್ಷ ಶ್ರೀಲಂಕಾ ವಿರುದ್ಧ ತಿರುವನಂತಪುರಂನಲ್ಲಿ ನಡೆದಿದ್ದ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ 317 ರನ್ ಅಂತರದಿಂದ ಗೆಲುವು ಸಾಧಿಸಿತ್ತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಜಿಂಬಾಬ್ವೆ ತಂಡ ನಾಯಕ ಸೀನ್ ವಿಲಿಯಮ್ಸ್(Sean Williams) ಅವರ ಅಮೋಘ ಆಟದ ನೆರವಿನಿಂದ 50 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 408 ರನ್ ಗಳಿಸಿತು. ಬೃಹತ್ ಗುರಿ ಬೆನ್ನಟ್ಟಿದ ಯುಎಸ್ಎ ಬಿಗಿ ದಾಳಿಗೆ ನಲುಗಿ 25.1 ಓವರ್ ಗಳಲ್ಲಿ 104 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ ಭಾರಿ ಅಂತರದ ಸೋಲಿಗೆ ಸುತ್ತಾಯಿತು.
ಜಿಂಬಾಬ್ವೆ ಪರ ಆರಂಭಿಕ ಆಟಗಾರ ಜಾಯ್ಲಾರ್ಡ್ ಗುಂಬಿ 78 ರನ್, ಇನ್ನೋಸೆಂಟ್ ಕೈಯಾ 32 ರನ್ ಗಳಿಸಿದರೆ. ಬಳಿಕ ಬಂದ ನಾಯಕ ಸೀನ್ ವಿಲಿಯಮ್ಸ್ ಸ್ಪೋಟಕ ಆಟವಾಡಿ 101 ಎಸೆತಗಳಲ್ಲಿ ಬರೋಬ್ಬರಿ 174 ರನ್ ಬಾರಿಸಿದರು. ಅವರ ಈ ಮನಮೋಹಕ ಬ್ಯಾಟಿಂಗ್ ಇನಿಂಗ್ಸ್ನಲ್ಲಿ 21 ಬೌಂಡರಿ ಮತ್ತು 5 ಆಕರ್ಷಕ ಸಿಕ್ಸರ್ಗಳು ಒಳಗೊಂಡಿದ್ದವು. ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಆಲ್ರೌಂಡರ್ ಸಿಂಕಂದರ್ ರಾಜಾ(Sikandar Raza) 48 ರನ್ ಗಳಿಸಿದರು. ಅಂತಿಮ ಹಂತದಲ್ಲಿ ಬಿರುಸಿನ ಬ್ಯಾಟಿಂಗ್ ನಡೆಸಿದ ರಿಯಾನ್ ಬರ್ಲ್ 17 ಎಸೆತಗಳಲ್ಲಿ 47 ರನ್ ಗಳಿಸಿ ತಂಡದ ಬೃಹತ್ ಮೊತ್ತಕ್ಕೆ ಉತ್ತಮ ಕೊಡುಗೆ ನೀಡಿದರು. ಯುಎಸ್ಎ ಪರ ಅಭಿಷೇಕ್ ಪರಾಡ್ಕರ್ 3 ವಿಕೆಟ್ ಪಡೆದರು. ಜಸ್ದೀಪ್ ಸಿಂಗ್ 2, ನೋಸ್ತುಶ್ ಕೆಂಜಿಗೆ 1 ವಿಕೆಟ್ ಉರುಳಿಸಿದರು.
ಇದನ್ನೂ ಓದಿ ICC World Cup Qualifiers: ಕೈಲ್ ಫಿಲಿಪ್ ಬೌಲಿಂಗ್ಗೆ ನಿಷೇಧ ವಿಧಿಸಿದ ಐಸಿಸಿ
ಏಕದಿನದಲ್ಲಿ ಅತ್ಯಧಿಕ ರನ್ ಅಂತರದಿಂದ ಗೆದ್ದ ತಂಡಗಳು
ಭಾರತ vs ಶ್ರೀಲಂಕಾ (ಭಾರತದ ಗೆಲುವಿನ ಅಂತರ 317 ರನ್) ತಿರುವನಂತಪುರಂ, 2023
ಜಿಂಬಾಬ್ವೆ vs ಯುಎಸ್ಎ(ಜಿಂಬಾಬ್ವೆಯ ಗೆಲುವಿನ ಅಂತರ 304 ರನ್) ಹರಾರೆ, 2023
ನ್ಯೂಜಿಲ್ಯಾಂಡ್ vs ಐರ್ಲೆಂಡ್(ನ್ಯೂಜಿಲ್ಯಾಂಡ್ ಗೆಲುವಿನ ಅಂತರ 290 ರನ್) ಅಬರ್ಡೀನ್, 2008
ಆಸ್ಟ್ರೇಲಿಯಾ vs ಅಫಘಾನಿಸ್ತಾನ(ಆಸ್ಟ್ರೇಲಿಯಾ ಗೆಲುವಿನ ಅಂತರ 275 ರನ್) ಪರ್ತ್, 2015
ದಕ್ಷಿಣ ಆಫ್ರಿಕಾ vs ಜಿಂಬಾಬ್ವೆ(ದಕ್ಷಿಣ ಆಫ್ರಿಕಾ ಗೆಲುವಿನ ಅಂತರ 272) ಬೆನೋನಿ, 2010