ಬೆಂಗಳೂರು: ಗುರುವಾರ ನಡೆದ ವಿಶ್ವಕಪ್ನ 41ನೇ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ನ್ಯೂಜಿಲ್ಯಾಂಡ್ ಗೆಲುವು ಸಾಧಿಸಿದ ಕಾರಣದಿಂದ ಪಾಕಿಸ್ತಾನ ತಂಡದ ಸೆಮಿ ಫೈನಲ್ ಹಾದಿ ಕಠಿಣವಾಗಿದೆ. ಪಾಕ್ ತಂಡ ಸೆಮಿಫೈನಲ್‌ಗೆ ಪ್ರವೇಶಿಸಬೇಕಾದರೆ ಪವಾಡವೇ ಸಂಭವಿಸಬೇಕಿದೆ. ಹೀಗಾದರೆ ಮಾತ್ರ ಪಾಕ್ಗೆ ಅವಕಾಶ ಸಿಗಲಿದೆ. ಪಾಕ್ ತಂಡ ಸೆಮಿ ಲೆಕ್ಕಾಚಾರ ಹೀಗಿದೆ.
ಪಾಕಿಸ್ತಾನ ತಂಡ ಶನಿವಾರ ನಡೆಯುವ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್(England vs Pakistan) ವಿರುದ್ಧ ಕಣಕ್ಕಿಳಿಯಲಿದೆ. ಸದ್ಯ ಪಾಕ್ ತಂಡ ಆಡಿದ 8 ಪಂದ್ಯಗಳಲ್ಲಿ ತಲಾ 4 ಗೆಲುವು ಮತ್ತು ಸೋಲು ಕಾಣುವ ಮೂಲಕ 8 ಅಂಕ ಪಡೆದಿದೆ. +0.036 ರನ್ ರೇಟ್ ಹೊಂದಿದೆ. ಅಂಕಪಟ್ಟಿಯಲ್ಲಿ 5ನೇ ಸ್ಥಾನವನ್ನು ಅಲಂಕರಿಸಿದೆ. ಶ್ರೀಲಂಕಾ ವಿರುದ್ಧ ಗೆದ್ದ ನ್ಯೂಜಿಲ್ಯಾಂಡ್ 10 ಅಂಕದೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ನ್ಯೂಜಿಲ್ಯಾಂಡ್ ತಂಡ ಲಂಕಾ ವಿರುದ್ಧ ಸೋಲು ಕಾಣುತ್ತಿದ್ದರೆ, ಆಗ ಪಾಕಿಸ್ತಾನಕ್ಕೆ ಯಾವುದೇ ಚಿಂತೆ ಇರುತ್ತಿರಲಿಲ್ಲ. ಜಸ್ಟ್ ಪಂದ್ಯ ಗೆದ್ದರೆ ಸಾಕಿತ್ತು. ಆದರೆ ಈಗ ಪವಾಡ ನಡೆದಂತೆ ಗೆಲ್ಲಬೇಕಾದ ಸ್ಥಿತಿ ಎದುರಾಗಿದೆ.
ಮೊದಲು ಬ್ಯಾಟಿಂಗ್ ನಡೆಸಿದರೆ
ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಬಾಬರ್ ಅಜಂ ಪಡೆ ಮೊದಲು ಬ್ಯಾಟಿಂಗ್ ನಡೆಸಿ ಮಾಡಿ 300 ರನ್ ಗಳಿಸಿದರೆ, ಇಂಗ್ಲೆಂಡ್ ತಂಡವನ್ನು ಕೇವಲ 13 ರನ್‌ಗಳಿಗೆ ಆಲ್‌ಔಟ್ ಮಾಡಬೇಕು. ಆ ಮೂಲಕ ಪಾಕಿಸ್ತಾನ 287 ರನ್‌ಗಳ ಭಾರಿ ಅಂತರದಲ್ಲಿ ಗೆಲುವು ಪಡೆಯಬೇಕು. ಆಗ ಮಾತ್ರ ಪಾಕಿಸ್ತಾನ ಉತ್ತಮ ರನ್ ರೇಟ್ ಸಾಧಿಸಿ ಕಿವೀಸ್ ತಂಡವನ್ನು ಹಿಂದಿಕ್ಕಿ ಸೆಮಿಫೈನಲ್‌ಗೆ ಅರ್ಹತೆ ಪಡೆಯಬಹುದು.
ಇದನ್ನೂ ಓದಿ Mohammed Shami: ‘ಇದು ಲೋಕಲ್ ಪಂದ್ಯವಲ್ಲ’ ಹಸನ್ ರಾಝಾಗೆ ಬೌನ್ಸರ್ ಎಸೆದ ಶಮಿ
ಬೌಲಿಂಗ್ ಆಯ್ದುಕೊಂಡರೆ ಏನು ಗತಿ?
ಒಂದೊಮ್ಮೆ ಪಾಕಿಸ್ತಾನ ಈ ಪಂದ್ಯದಲ್ಲಿ ಮೊದಲು ಬೌಲಿಂಗ್ ನಡಸುವ ಸನ್ನಿವೇಶ ಎದುರಾದರೆ ಇಂಗ್ಲೆಂಡ್ ತಂಡವನ್ನು ಕೇವಲ 100 ರನ್‌ಗಳಿಗೆ ಆಲ್‌ಔಟ್ ಮಾಡಬೇಕು. ಬಳಿಕ ಪಾಕ್ ಈ ಮೊತ್ತವನ್ನು ಕೇವಲ 2.5 ಓವರ್‌ಗಳಿಗೆ ಚೇಸ್ ಮಾಡಬೇಕು. ಆ ಮೂಲಕ 283 ಎಸೆತಗಳು ಬಾಕಿ ಇರುವಾಗಲೇ ಪಾಕ್ ಪಂದ್ಯವನ್ನು ಗೆಲ್ಲಬೇಕು. ಇದು ಸಾಧ್ಯವಾಗದೇ ಇದ್ದರೆ ಪಾಕ್ ವಿಶ್ವಕಪ್ ಅಭಿಯಾನ ಕೊನೆಗೊಳ್ಳುತ್ತದೆ. ಮತ್ತೊಂದೆಡೆ, -0.338 ರನ್‌ರೇಟ್ ಹೊಂದಿರುವ ಅಫ್ಘಾನಿಸ್ತಾನವು ಸೆಮಿಸ್‌ಗೆ ಅರ್ಹತೆ ಪಡೆಯಲು ಇಂದು ನಡೆಯುವ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯವನ್ನು ಕನಿಷ್ಠ 438 ರನ್‌ಗಳಿಂದ ಗೆಲ್ಲಬೇಕಾಗಿದೆ. ಇದಕ್ಕಿಂತ ಕಡಿಮೆ ರನ್ನಿಂದ ಗೆದ್ದರೆ ಅಫಘಾನಿಸ್ತಾನವೂ ಟೂರ್ನಿಯಿಂದ ಹೊರಬೀಳಲಿದೆ.
ಇಂಗ್ಲೆಂಡ್ಗೂ ಗೆಲುವು ಅಗತ್ಯ
ಪಾಕಿಸ್ತಾನದ ಆತಿಥ್ಯದಲ್ಲಿ 2025ರಲ್ಲಿ ನಡೆಯುವ ಚಾಂಪಿಯನ್ಸ್ ಟ್ರೋಫಿಗೆ ಅರ್ಹತೆ ಪಡೆಯಬೇಕಿದ್ದರೆ ಇಂಗ್ಲೆಂಡ್ ತಂಡಕ್ಕೂ ಈ ಪಂದ್ಯದಲ್ಲಿ ಗೆಲುವು ಅತ್ಯಗತ್ಯ. ಈ ಟೂರ್ನಿಗೆ ಅರ್ಹತೆ ಪಡೆಯುವ ಮಾನದಂಡ ಅಂಕಪಟ್ಟಿಯಲ್ಲಿ ಅಗ್ರ 7ಸ್ಥಾನಗಳ ಒಳಗಡೆ ಸ್ಥಾನ ಪಡೆದಿರಬೇಕು. ಸದ್ಯ ಇಂಗ್ಲೆಂಡ್ ತಂಡ 7ನೇ ಸ್ಥಾನದಲ್ಲಿದೆ. ಇದೇ ಸ್ಥಾನದಲ್ಲಿ ಉಳಿಯಬೇಕಿದ್ದರೆ. ಬಟ್ಲರ್ ಪಡೆಗೆ ಪಾಕ್ ವಿರುದ್ಧ ಗೆಲುವು ಕಾಣಲೇಬೇಕು. ಅಲ್ಲದೆ ಇಂಗ್ಲೆಂಡ್ ನಾಯಕ ಜಾಸ್ ಬಟ್ಲರ್ ಕೂಡ ನಾವು ಪಾಕಿಸ್ತಾನ ವಿರುದ್ಧ ಗೆದ್ದೇ ಗೆಲ್ಲುತ್ತೇವೆ ಎಂಬ ವಿಶ್ವಾಸದ ಮಾತುಗಳನ್ನಾಡಿದ್ದಾರೆ. ಹೀಗಾಗಿ ಪಾಕ್ಗೆ ಸೋಲು ಖಚಿತ ಎನ್ನಲಡ್ಡಿಯಿಲ್ಲ.