Site icon Vistara News

ind vs pak : ಭಾರತ- ಪಾಕ್ ಪಂದ್ಯಕ್ಕೆ ಮಳೆಯ ಆತಂಕವಿಲ್ಲ, ಆದರೂ ಒಂದು ಸಣ್ಣ ಸಮಸ್ಯೆ

Narendra modi stadium

ಅಹಮದಾಬಾದ್​​: ಭಾರತ ತನ್ನ ಮೊದಲ ವಿಶ್ವಕಪ್ ಪಂದ್ಯವನ್ನು ಭಾನುವಾರ ಆಸ್ಟ್ರೇಲಿಯಾ ವಿರುದ್ಧ ಆಡಲು ಸಜ್ಜಾಗಿದೆ. ಆದರೆ ಅಕ್ಟೋಬರ್ 14 ರಂದು ಅಹಮದಾಬಾದ್​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಜಿದ್ದಾಜಿದ್ದಿನ ಮುಖಾಮುಖಿಗಾಗಿ ಒಂದು ಶತಕೋಟಿಗೂ ಹೆಚ್ಚು ಕ್ರಿಕೆಟ್ ಅಭಿಮಾನಿಗಳು ಕಾಯುತ್ತಿದ್ದಾರೆ. ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಶುಕ್ರವಾರ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯಕ್ಕೆ ಹಸಿರು ನಿಶಾನೆ ತೋರಿಸಿದೆ. ಅಂದು ಮಳೆ ಬರುವ ಸಾಧ್ಯತೆಗಳು ಇಲ್ಲ ಎಂದು ಹೇಳಿದೆ. ಈ ಮೂಲಕ ಅಭಿಮಾನಿಗಳು ನಿರಾಳರಾಗಿದ್ದಾರೆ.

ಲಘು ಅಥವಾ ಮಧ್ಯಮ ಪ್ರಮಾಣದಲ್ಲಿ ಮಳೆ ಬಂದರೂ , ಸ್ವಲ್ಪ ಹೊತ್ತು ಮಾತ್ರ ಬರಲಿದೆ. ಪಂದ್ಯಕ್ಕೆ ಅಡ್ಡಿಯಾಗುವುದಿಲ್ಲ ಎಂದು ಐಎಂಡಿ ಗುಜರಾತ್ ಸ್ಪಷ್ಟಪಡಿಸಿದೆ. ಇದೇ ವೇಲೆ ಹದಗೆಡುತ್ತಿರುವ ಗಾಳಿಯ ಗುಣಮಟ್ಟದ ಬಗ್ಗೆ ಅಹಮದಾಬಾದ್ ನಿವಾಸಿಗಳಿಗೆ ಅದು ಇನ್ನೂ ಎಚ್ಚರಿಕೆ ನೀಡಿದೆ. ಗಾಳಿಯಲ್ಲಿ ಹೆಚ್ಚುತ್ತಿರುವ ಮಾಲಿನ್ಯವು ಸೂಕ್ಷ್ಮ ಕಣಗಳು (ಮಕ್ಕಳು ಅಥವಾ ಹಿರಿಯ ವಯಸ್ಕರು) ಜನರ ಮೇಲೆ ತೀವ್ರ ಪರಿಣಾಮ ಬೀರುತ್ತದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಅಕ್ಟೋಬರ್ 14 ರಂದು ಅಹಮದಾಬಾದ್​​ನಲ್ಲಿ ಮಳೆಯಾಗುವ ಸಾಧ್ಯತೆಯಿಲ್ಲ ಮತ್ತು ನಗರದ ಗರಿಷ್ಠ ತಾಪಮಾನ 35 ಡಿಗ್ರಿ ಸೆಲ್ಸಿಯಸ್ ತಲುಪುವ ನಿರೀಕ್ಷೆಯಿದೆ. ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ಇರುತ್ತದೆ ಎಂದು ಐಎಂಡಿ ತಿಳಿಸಿದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ ದಿನದಂದು ಆರ್ದ್ರತೆಯು 35% ಎಂದು ಊಹಿಸಲಾಗಿದೆ.

ಭಾರತ-ಪಾಕಿಸ್ತಾನ ಫೈಟ್​

ಪಾಕಿಸ್ತಾನ ತಂಡವು ಫಾರ್ಮ್​ನಲ್ಲಿ ಉಳಿಯಲು ಹೆಣಗಾಡುತ್ತಿರುವ ಸಮಯದಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ವಿಶ್ವಕಪ್ ಪಂದ್ಯವು ನಡೆಯಲಿದೆ. ಕಳೆದ ತಿಂಗಳು, ಪಾಕ್​ ಏಷ್ಯಾ ಕಪ್ 2023 ಅನ್ನು ಕಳೆದುಕೊಂಡಿದೆ. ನಂತರ ಭಾರತವು ಅವರನ್ನು ವಿಶ್ವದ ನಂ.1 ಏಕದಿನ ಶ್ರೇಯಾಂಕದಿಂದ ಕೆಳಗೆ ಇಳಿಸಿತ್ತು. ವಿಶ್ವ ಕಪ್​ ಅಭ್ಯಾಸ ಪಂದ್ಯಗಳಲ್ಲಿ ಪಾಕಿಸ್ತಾನ ತಂಡವು ಉತ್ತಮವಾಗಿ ಕಾಣಲಿಲ್ಲ. ಎರಡೂ ಹಣಾಹಣಿಯಲ್ಲಿ ಸೋಲು ಕಂಡಿತ್ತು.

ಇದನ್ನೂ ಓದಿ: World cup history : ದುರ್ಬಲ ಪಾಕಿಸ್ತಾನ ಚಾಂಪಿಯನ್ ಆಗಿದ್ದು ಹೇಗೆ? 1992ರ ವಿಶ್ವ ಕಪ್​ ಸ್ಟೋರಿ ಇಲ್ಲಿದೆ

ಐಸಿಸಿ ವಿಶ್ವಕಪ್ 2023 ಕ್ಕೆ ಮುಂಚಿತವಾಗಿ ಭಾರತವು ಉತ್ತಮ ಸ್ಥಿತಿಯಲ್ಲಿದೆ. ಏಷ್ಯಾ ಕಪ್ 2023 ರ ಗೆಲುವು ಒಂದು ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಭಾರತದ ಅಗ್ರ ಬ್ಯಾಟಿಂಗ್ ಕ್ರಮಾಂಕದ ಉತ್ತಮ ಫಾರ್ಮ್ ತಂಡಕ್ಕೆ ಸಿಹಿ ಸುದ್ದಿಯಾಗಿದೆ. ಭಾರತ ಐಸಿಸಿ ವಿಶ್ವಕಪ್ 2023 ಅನ್ನು ಗೆಲ್ಲುವ ನೆಚ್ಚಿನ ತಂಡವಾಗಿದೆ ಮತ್ತು ಕಳೆದ ರಾತ್ರಿ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ಪಂದ್ಯದ ನಡೆದ ನರೇಂದ್ರ ಮೋದಿ ಸ್ಟೇಡಿಯಮ್​ಲ್ಲಿ ಪಂದ್ಯ ನಡೆಯಲಿದೆ. ಏತನ್ಮಧ್ಯೆ ಭಾರತ ತಂಡಕ್ಕೆ ಕಹಿ ಸುದ್ದಿಯೊಂದು ಚೆನ್ನೈನಿಂದ ಬಂದಿದೆ. ಉತ್ತಮ ಫಾರ್ಮ್​ನಲ್ಲಿರುವ ಆರಂಭಿಕ ಬ್ಯಾಟರ್​ ಶುಭ್​ಮನ್ ಗಿಲ್ ಡೆಂಗ್ಯೂ ಜ್ವರಕ್ಕೆ ಒಳಗಾಗಿದ್ದಾರೆ. ಅವರು ಮೊದಲ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಆದರೆ, ಪಾಕ್ ವಿರುದ್ಧ ಹಣಾಹಣಿ ಕುರಿತು ಇನ್ನೂ ಮಾಹಿತಿ ಇಲ್ಲ.

ಏಕದಿನ ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತ ಮತ್ತು ಪಾಕಿಸ್ತಾನ 7 ಬಾರಿ ಮುಖಾಮುಖಿಯಾಗಿದ್ದು, ಭಾರತವು ತನ್ನ ನೆರೆಹೊರೆಯವರ ವಿರುದ್ಧ ಎಲ್ಲಾ 7 ಪಂದ್ಯಗಳನ್ನು ಗೆದ್ದು ಕ್ಲೀನ್ ರೆಕಾರ್ಡ್ ಹೊಂದಿದೆ.

Exit mobile version