ನವ ದೆಹಲಿ: ಭಾರತ ಮತ್ತು ಪಾಕಿಸ್ತಾನದಲ್ಲಿ ನಡೆಯುವ ವಿಶ್ವ ಕಪ್ ಹಾಗೂ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿ ಚರ್ಚೆಯ ವಿಷಯವಾಗಿದೆ. ಪಾಕಿಸ್ತಾನಕ್ಕೆ ಬಂದು ನಾವು ಆಡುವುದಿಲ್ಲ ಎಂದು ಬಿಸಿಸಿಐ ಹೇಳುತ್ತಿದೆ. ಹಾಗಾದರೆ ನಾವು ಭಾರತಕ್ಕೆ ಹೋಗಿ ವಿಶ್ವ ಕಪ್ನಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಪಾಕಿಸ್ತಾನ ಹೇಳುತ್ತಿದೆ. ಆದರೆ, ಇದರೆಲ್ಲರ ಒಟ್ಟು ಪರಿಣಾಮ ತಟ್ಟುವುದು ಪಾಕಿಸ್ತಾನಕ್ಕೆ. ಭಾರತ ತಂಡ ಪಾಕಿಸ್ತಾನಕ್ಕೆ ಹೋಗದಿದ್ದರೆ ಅವರು ಭಾರತಕ್ಕೆ ಬರದೇ ಹೋದರೆ ಅಲ್ಲಿನ ಕ್ರಿಕೆಟ್ಗೆ ಹಾನಿಯಾಗಲಿದೆ. ಅಲ್ಲಿನ ಕ್ರಿಕೆಟ್ ತಂಡ ಬಹುತೇಕ ಮೂಲೆಗುಂಪು ಆಗಲಿದೆ. ಈ ವಿಷಯದ ಅರಿವಿರುವ ಪಾಕಿಸ್ತಾನ ತಂಡದ ಮಾಜಿ ಆಟಗಾರರು ತರೇಹವಾರಿ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಅಂತೆಯೇ ಪಾಕಿಸ್ತಾನದ ಮಾಜಿ ಪ್ರಧಾನಿ ಹಾಗೂ ಕ್ರಿಕೆಟ್ ತಂಡದ ಮಾಜಿ ನಾಯಕ ಇಮ್ರಾನ್ ಖಾನ್ ಕೂಡ ಈ ಬಗ್ಗೆ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಬಿಸಿಸಿಐ ಅಹಂಕಾರ ಪ್ರದರ್ಶನ ಮಾಡುವ ಜತೆಗೆ ಪಾಕಿಸ್ತಾನ ಕ್ರಿಕೆಟ್ ತಂಡವನ್ನು ಮೂಲೆಗುಂಪು ಮಾಡುವ ಪ್ರಯತ್ನ ಮಾಡುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಭಾರತದಲ್ಲೇ ನಡೆಯಲಿದೆ ಏಷ್ಯಾ ಕಪ್
1992ರ ವಿಶ್ವ ಕಪ್ ಗೆದ್ದಿರುವ ಪಾಕಿಸ್ತಾನ ತಂಡದ ನಾಯಕರಾದ ಇಮ್ರಾನ್ ಖಾನ್, ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಕ್ರಿಕೆಟ್ ಸಂಬಂಧ ಒಂದು ದುಃಖದ ಕತೆ. ಬಿಸಿಸಿಐ ತಾನು ದೊಡ್ಡ ಸೂಪರ್ ಪವರ್ ಎಂಬ ರೀತಿಯಲ್ಲಿ ವರ್ತಿಸುತ್ತದೆ. ತನ್ನ ವಿರುದ್ಧ ಯಾರು ಆಡಬೇಕು ಎಂಬುದನ್ನು ಬಿಸಿಸಿಐ ನಿರ್ಧರಿಸುತ್ತದೆ. ಯಾಕೆಂದರೆ ಅದಕ್ಕೆ ಬೇಕಾದ ದುಡ್ಡು ಸಂಗ್ರಹಿಸುವ ಸಾಮರ್ಥ್ಯ ಅವರಿಗೆ ಇದೆ. ಹೀಗಾಗಿ ದುರ್ವರ್ತನೆ ತೋರುತ್ತಿದೆ ಎಂದು ಅವರು ಹೇಳಿದ್ದಾರೆ.
ಬಿಸಿಸಿಐ ಪಾಕಿಸ್ತಾನ ಕ್ರಿಕೆಟ್ ವಿರುದ್ಧ ಸಂಚು ರೂಪಿಸುತ್ತಿದೆ. ಆದರೆ, ಪಾಕಿಸ್ತಾನ ಕ್ರಿಕೆಟ್ ಪಿಎಸ್ಎಲ್ ಮೂಲಕ ತನ್ನದೇ ಆದ ಘನತೆಯನ್ನು ಸೃಷ್ಟಿಸಿಕೊಂಡಿದೆ. ವಿದೇಶಿ ಆಟಗಾರರು ಅದರಲ್ಲೂ ಪಾಲ್ಗೊಳ್ಳುತ್ತಿದ್ದಾರೆ. ಪಾಕಿಸ್ತಾನದ ಆಟಗಾರರಿಗೆ ಭಾರತ ಐಪಿಎಲ್ನಲ್ಲಿ ಆಡುವುದಕ್ಕೆ ಅವಕಾಶ ಕೊಡುವುದಿಲ್ಲ ಎಂದಾದರೆ ಪಾಕಿಸ್ತಾನ ತನ್ನದೇ ಆದ ಗುಣಮಟ್ಟ ಹೊಂದಿದೆ ಎಂದರ್ಥ ಎಂದು ಅವರು ಹೇಳಿದರು.
ಭಾರತದ ಆತಿಥ್ಯದಲ್ಲಿ ಇದೇ ವರ್ಷ ನಡೆಯಲಿರುವ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ(ICC World Cup 2023) ಪಾಕಿಸ್ತಾನ ತಂಡವು ತನ್ನ ಪಾಲಿನ ಪಂದ್ಯಗಳನ್ನು ಬಾಂಗ್ಲಾದೇಶದಲ್ಲಿ ಆಡುತ್ತದೆ ಎಂದು ವರದಿಯಾಗಿತ್ತು. ಇದೀಗ ಈ ಬಗ್ಗೆ ಐಸಿಸಿ ಮಹತ್ವದ ಮಾಹಿತಿಯೊಂದನ್ನು ನೀಡಿದೆ. ಐಸಿಸಿ(ICC) ಸಭೆಯಲ್ಲಿ ಈ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ ಎಲ್ಲ ಪಂದ್ಯಗಳು ಭಾರತದಲ್ಲಿಯೇ ನಡೆಯಲಿದೆ ಎಂದು ಸ್ಪಷ್ಟಪಡಿಸಿದೆ.
ಏಷ್ಯಾ ಕಪ್ಗಾಗಿ ಪಾಕಿಸ್ತಾನಕ್ಕೆ ಭಾರತ ತಂಡ ಬರಲು ಒಪ್ಪದ ಕಾರಣ ಪಾಕ್ ಕೂಡ ಭದ್ರತಾ ಕೊರತೆಯ ನೆಪವೊಡ್ಡಿ ಭಾರತದಲ್ಲಿ ನಡೆಯುವ ಏಕದಿನ ವಿಶ್ವ ಕಪ್ ಟೂರ್ನಿಯಲ್ಲಿ ನಾವು ಪಾಲ್ಗೊಳ್ಳಲು ಹಿಂದೇಟು ಹಾಕಿದೆ. ಇದೇ ಕಾರಣಕ್ಕೆ ಪಾಕಿಸ್ತಾನದ ಪಂದ್ಯಗಳು ತಟಸ್ಥ ತಾಣವಾದ ಬಾಂಗ್ಲಾದೇಶದಲ್ಲಿ ನಡೆಯಲಿದೆ ಎಂದು ವರದಿಯಾಗಿತ್ತು. ಆದರೆ ಇದೀಗ ಐಸಿಸಿ ಇದು ಸುಳ್ಳು ಸುದ್ದಿ ಎಂದು ತಿಳಿಸಿದೆ.
ಈ ಬಾರಿಯ ಏಷ್ಯಾ ಕಪ್ ಪಾಕಿಸ್ತಾನದ ಆತಿಥ್ಯದಲ್ಲಿ ನಡೆಯಲಿದೆ. ಆದರೆ ಪಾಕಿಸ್ತಾನದಲ್ಲಿ ಪಂದ್ಯಗಳು ನಡೆದರೆ ಭಾರತ ಈ ಟೂರ್ನಿಯಲ್ಲಿ ಆಡುವುದಿಲ್ಲ ಎಂದು ಬಿಸಿಸಿ ಹೇಳಿತ್ತು. ಇದೇ ವಿಚಾರವಾಗಿ ಪಾಕ್ ಕ್ರಿಕೆಟ್ ಮಂಡಳಿ ಮತ್ತು ಬಿಸಿಸಿಐ(BCCI) ಮಧ್ಯೆ ಕಿತ್ತಾಟ ನಡೆಯುತ್ತಲೇ ಇತ್ತು. ಇದೇ ವಿಚಾರವಾಗಿ ಕಳೆದ ವಾರ ದುಬೈಯಲ್ಲಿ ನಡೆದ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಸಭೆಯಲ್ಲಿ ಈ ಬಾರಿ ಪಾಕಿಸ್ತಾನದ ಆತಿಥ್ಯದಲ್ಲೇ ಏಷ್ಯಾ ಕಪ್ ನಡೆಸುವಂತೆ ನಿರ್ಧಾರ ಕೈಗೊಳ್ಳಲಾಗಿತ್ತು. ಆದರೆ ಭಾರತದ ಪಂದ್ಯಗಳು ಮಾತ್ರ ಸಾಗರೋತ್ತರ ತಟಸ್ಥ ಸ್ಥಳದಲ್ಲಿ ನಡೆಯುವ ಸಾಧ್ಯತೆಯಿದೆ ಎಂದು ವರದಿಯಾಗಿತ್ತು.
ಇದೇ ಸಿಟ್ಟಿನಲ್ಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಭಾರತದ ಆತಿಥ್ಯದಲ್ಲಿ ನಡೆಯುವ ಏಕದಿನ ವಿಶ್ವ ಟೂರ್ನಿಯಲ್ಲಿ ಪಾಕಿಸ್ತಾನದ ಪಂದ್ಯಗಳು ಬಾಂಗ್ಲಾದೇಶನಲ್ಲಿ ನಡೆಸುವಂತೆ ಮನವಿ ಮಾಡಿದೆ ಎಂದು ವರದಿಯಾಗಿತ್ತು. ಇನ್ನು ಕೆಲ ವರದಿಗಳ ಪ್ರಕಾರ ಪಾಕ್ ಪಂದ್ಯಗಳು ಬಾಂಗ್ಲಾದಲ್ಲಿ ನಡೆಯಲಿದೆ ಎಂದು ಖಚಿತ ಪಡಿಸಿತ್ತು. ಆದರೆ ಈ ಎಲ್ಲ ಅನುಮಾನಗಳಿಗೆ ಐಸಿಸಿ ತೆರೆ ಎಳೆದಿದೆ.
ಇದನ್ನೂ ಓದಿ IND VS PAK: ಏಕದಿನ ವಿಶ್ವಕಪ್; ತಟಸ್ಥ ತಾಣದಲ್ಲಿ ನಡೆಯಲಿದೆ ಪಾಕಿಸ್ತಾನದ ಪಂದ್ಯಗಳು!
‘ಪಿಸಿಬಿ ಮುಖ್ಯಸ್ಥ ನಜಾಮ್ ಸೇಥಿ ಮತ್ತು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ನಜ್ಮುಲ್ ಹಸನ್ ಪಪೊನ್ ಅವರಿಬ್ಬರು ಭೇಟಿಯಾಗಿ ದ್ವಿಪಕ್ಷೀಯ ಕ್ರಿಕೆಟ್ ಸರಣಿಯ ವಿಚಾರವಾಗಿ ಮಾತನಾಡಿದ್ದಾರೆ. ಆದರೆ ಇಲ್ಲಿ ಭಾರತದ ಆತಿಥ್ಯದಲ್ಲಿ ನಡೆಯುವ ಏಕದಿನ ವಿಶ್ವ ಕಪ್ ಕುರಿತು ಯಾವುದೇ ಚರ್ಚೆ ನಡೆದಿಲ್ಲ’ ಎಂದು ಐಸಿಸಿ ಸ್ಪಷ್ಟಪಡಿಸಿದೆ.
ಇದನ್ನೂ ಓದಿ Asia Cup 2023 : ಪಾಕ್ನಲ್ಲೇ ಏಷ್ಯಾ ಕಪ್; ಭಾರತ, ಪಾಕಿಸ್ತಾನ ಪಂದ್ಯ ತಟಸ್ಥ ತಾಣದಲ್ಲಿ
‘ವಿಶ್ವಕಪ್ ಟೂರ್ನಿಯಲ್ಲಿ ಆಡಲು ಭಾರತಕ್ಕೆ ಪ್ರವಾಸ ಮಾಡುವ ಎಲ್ಲ ತಂಡಗಳಿಗೂ ಬಿಸಿಸಿಐ ಈಗಾಗಲೇ ವೀಸಾ ವ್ಯವಸ್ಥೆ ಮಾಡಿದೆ. ಹೀಗಿರುವಾಗ ಪಾಕಿಸ್ತಾನ ಅಂತಿಮ ಹಂತದಲ್ಲಿ ಈ ರೀತಿಯ ಗೊಂದಲದ ಹೇಳಿಹೆ ನೀಡುವುದು ಅಸಂಬದ್ಧವಾಗಲಿದೆ’ ಎಂದು ಐಸಿಸಿ ಮಂಡಳಿಯ ಸದಸ್ಯರೊಬ್ಬರು ಹೇಳಿದ್ದಾರೆ.