Site icon Vistara News

WPL 2023 : ಫೈನಲ್​ ಪಂದ್ಯದಲ್ಲಿ ಟಾಸ್​ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್​ ತಂಡದಿಂದ ಬ್ಯಾಟಿಂಗ್ ಆಯ್ಕೆ

#image_title

ಮುಂಬಯಿ: ಮಹಿಳೆಯರ ಪ್ರೀಮಿಯರ್​ ಲೀಗ್​ನ (WPL 2023) ಫೈನಲ್​ ಪಂದ್ಯದಲ್ಲಿ ಟಾಸ್ ಗೆದ್ದಿರುವ ಡೆಲ್ಲಿ ಕ್ಯಾಪಿಟಲ್ಸ್​ ತಂಡದ ನಾಯಕಿ ಮೆಗ್​ಲ್ಯಾನಿಂಗ್​ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಹೀಗಾಗಿ ಹರ್ಮನ್​ಪ್ರೀತ್​ ಕೌರ್ ನೇತೃತ್ವದ ಮುಂಬಯಿ ಇಂಡಿಯನ್ಸ್​ ತಂಡ ಮೊದಲು ಬೌಲಿಂಗ್​ ಮಾಡಬೇಕಾಗಿದೆ. ಇಲ್ಲಿನ ಬ್ರಬೊರ್ನ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ಈ ಪಂದ್ಯ ನಡೆಯುತ್ತಿದೆ.

ಟಾಸ್​ ಗೆದ್ದ ಬಳಿಕ ಮಾತನಾಡಿದ ಮೆಗ್​ ಲ್ಯಾನಿಂಗ್​, ಇಲ್ಲಿ ಮೊದಲು ಬ್ಯಾಟ್​ ಮಾಡಿ ಗೆಲ್ಲುವ ಅವಕಾಶವೇ ಹೆಚ್ಚಿದೆ. ನಮ್ಮ ತಂಡಕ್ಕೆ ಮತ್ತೊಂದು ಬಾರಿ ಉತ್ತಮ ಪ್ರದರ್ಶನ ನೀಡಲು ಅವಕಾಶ ಸಿಕ್ಕಿದೆ. ಮುಂಬಯಿ ತಂಡ ಬಲಿಷ್ಠವಾಗಿದ್ದು ಅವರೆದುರು ಉತ್ತಮ ಪ್ರದರ್ಶನ ನೀಡಲಿದ್ದೇವೆ ಎಂದು ಹೇಳಿದರು.

ಇದನ್ನೂ ಓದಿ : WPL 2023: ಫೈನಲ್​ಗೆ ಲಗ್ಗೆಯಿಟ್ಟ ಖಷಿಯಲ್ಲಿ ತಂಡದ ಆಟಗಾರ್ತಿಯರೊಂದಿಗೆ ಕುಣಿದು ಕುಪ್ಪಳಿಸಿದ ನೀತಾ ಅಂಬಾನಿ; ವಿಡಿಯೊ ವೈರಲ್

ಮುಂಬಯಿ ತಂಡ ನಾಯಕಿ ಹರ್ಮನ್​ಪ್ರೀತ್​ ಕೌರ್ ಮಾತನಾಡಿ, ನಾವು ಟಾಸ್​ ಗೆದ್ದಿದ್ದರೂ ಬೌಲಿಂಗ್ ಆಯ್ಕೆ ಮಾಡುವ ನಿರ್ಧಾರ ಕೈಗೊಂಡಿದ್ದೆವು. ಹೀಗಾಗಿ ಟಾಸ್ ಸೋಲಿನಿಂದ ಯಾವುದೇ ವ್ಯತ್ಯಾಸ ಆಗಿಲ್ಲ. ನಾವು ಪಾಸಿಟಿವ್ ಯೋಚನೆ ಮಾಡುತ್ತಿದ್ದೇವೆ. ನಾವು ಡೆಲ್ಲಿ ತಂಡವನ್ನು ಉತ್ತಮ ಬೌಲಿಂಗ್ ಮಾಡುವ ಮೂಲಕ ಕಡಿವಾಣ ಹಾಕಿ ಗೆಲ್ಲುತ್ತೇವೆ ಎಂದು ಹೇಳಿದ್ದಾರೆ.

ಜಿದ್ದಾ ಜಿದ್ದಿನ ನಿರೀಕ್ಷೆ

ಉದ್ಘಾಟನಾ ಆವೃತ್ತಿಯ ಟೂರ್ನಿಯ ಆರಂಭದಿಂದಲೂ ಎರಡೂ ತಂಡಗಳು ಉತ್ತಮ ಪ್ರದರ್ಶನ ನೀಡುತ್ತಾ ಬಂದಿವೆ. ಡೆಲ್ಲಿ ತಂಡ ಒಟ್ಟು ಎಂಟು ಪಂದ್ಯಗಳಲ್ಲಿ ಆರು ಪಂದ್ಯಗಳಲ್ಲಿ ಗೆದ್ದು 1.856 ನೆಟ್​ ರನ್​ರೇಟ್​ನೊಂದಿಗೆ 12 ಅಂಕಗಳನ್ನು ಗಳಿಸಿ ನೇರವಾಗಿ ಫೈನಲ್​ ಪಂದ್ಯಕ್ಕೆ ಪ್ರವೇಶ ಪಡೆದಿತ್ತು. ಮುಂಬಯಿ ತಂಡವೂ ಎಂಟು ಹಣಾಹಣಿಗಳಲ್ಲಿ ಆರು ಪಂದ್ಯಗಳನ್ನು ಗೆಲ್ಲುವ ಮೂಲಕ 12 ಅಂಕಗಳನ್ನು ಪಡೆದಿದ್ದರೂ 1.711 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದುಕೊಂಡಿತ್ತು. ಹೀಗಾಗಿ ಯುಪಿ ವಾರಿಯರ್ಸ್​ ವಿರುದ್ಧ ಪ್ಲೇಆಪ್​ ಪಂದ್ಯದಲ್ಲಿ ಆಡಿ ಫೈನಲ್​ಗೆ ಪ್ರವೇಶ ಪಡೆಯಿತು.

ಡೆಲ್ಲಿ ತಂಡದ ಬ್ಯಾಟಿಂಗ್ ವಿಭಾಗದ ಬಲಿಷ್ಠವಾಗಿದೆ. ಶಫಾಲಿ ವರ್ಮಾ, ಮೆಗ್​ ಲ್ಯಾನಿಂಗ್​, ಅಲೀಸ್ ಕ್ಯಾಪ್ಸ್​, ಮರಿಜನ್ ಕಪ್​, ಜೆಮಿಮಾ ರೋಡ್ರಿಗಸ್​ ಉತ್ತಮ ಇನಿಂಗ್ಸ್ ಕಟ್ಟುವ ಸಾಮರ್ಥ್ಯ ಹೊಂದಿದ್ದಾರೆ. ಅರುಂಧತಿ ರೆಡ್ಡಿ, ಶಿಖಾ ಪಾಂಡೆ ಬೌಲಿಂಗ್​ ವಿಭಾಗದಲ್ಲಿ ಮಿಂಚುವ ಸಾಮರ್ಥ್ಯ ಹೊಂದಿದ್ದಾರೆ. ಇದೇ ವೇಳೆ ಮುಂಬಯಿ ತಂಡವೂ ಅಷ್ಟೇ ಬಲವನ್ನು ಹೊಂದಿದೆ. ನಾಯಕಿ ಹರ್ಮನ್​ಪ್ರೀತ್​ ಕೌರ್​, ಹೇಲಿ ಮ್ಯಾಥ್ಯೂಸ್​, ಅಮೇಲಿಯಾ ಕೆರ್​, ನ್ಯಾಟ್​ ಸೀವರ್​ ಬ್ರಂಟ್​ ಬ್ಯಾಟಿಂಗ್​ನಲ್ಲಿ ಅಬ್ಬರಿಸುವ ಸಾಮರ್ಥ್ಯ ಹೊಂದಿದ್ದಾರೆ. ಮುಂಬಯಿ ಬೌಲಿಂಗ್​ ವಿಭಾಗವಂತೂ ಮಾರಕವಾಗಿದೆ. ಇಸ್ಸಿ ವಾಂಗ್​, ಪೂಜಾ ವಸ್ತ್ರಾಕರ್​, ಹೇಲಿ ಮ್ಯಾಥ್ಯೂಸ್​, ಸೈಕಾ ಇಶಾಖ್​ ಎದುರಾಳಿ ತಂಡವನ್ನು ಬಗ್ಗು ಬಡಿಯವ ತಾಕತ್ತು ಹೊಂದಿದ್ದಾರೆ.

ತಂಡಗಳು ಇಂತಿವೆ

ಮುಂಬಯಿ ಇಂಡಿಯನ್ಸ್​: ಹೇಲಿ ಮ್ಯಾಥ್ಯೂಸ್, ಯಸ್ತಿಕಾ ಭಾಟಿಯಾ (ವಿಕೆಟ್​ ಕೀಪರ್​), ನ್ಯಾಟ್ ಸ್ಕಿವರ್-ಬ್ರಂಟ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ಅಮೆಲಿಯಾ ಕೆರ್, ಪೂಜಾ ವಸ್ತ್ರಾಕರ್, ಇಸ್ಸಿ ವಾಂಗ್, ಅಮನ್​ಜೋತ್ ಕೌರ್, ಹುಮೈರಾ ಕಾಜಿ, ಜಿಂಟಿಮಣಿ ಕಲಿತಾ, ಸೈಕಾ ಇಶಾಕ್.

ಡೆಲ್ಲಿ ಕ್ಯಾಪಿಟಲ್ಸ್​: ಮೆಗ್ ಲ್ಯಾನಿಂಗ್ (ನಾಯಕಿ), ಶಫಾಲಿ ವರ್ಮಾ, ಆಲಿಸ್ ಕ್ಯಾಪ್ಸೆ, ಜೆಮಿಮಾ ರೋಡ್ರಿಗಸ್, ಮರಿಜನೆ ಕಪ್, ತಾನಿಯಾ ಭಾಟಿಯಾ (ವಿಕೆಟ್​ಕೀಪರ್​), ಮಿನ್ನು ಮಣಿ, ಜೆಸ್ ಜೊನಾಸ್ಸೆನ್, ರಾಧಾ ಯಾದವ್, ಅರುಂಧತಿ ರೆಡ್ಡಿ, ಶಿಖಾ ಪಾಂಡೆ.

Exit mobile version