ದೋಹಾ : ವೆನ್ನೆರ್ ವೆಲೆನ್ಸಿಯಾ ಅವರು ಅವಳಿ ಗೋಲ್‌ಗಳ ನೆರವಿನಿಂದ ಮಿಂಚಿದ ಈಕ್ವೆಡಾರ್ ತಂಡ, ಫಿಫಾ ವಿಶ್ವ ಕಪ್‌ನ (FIFA WORLD CUP) ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ಕತಾರ್ ವಿರುದ್ಧ ೨-೦ ಗೋಲ್‌ಗಳ ಭರ್ಜರಿ ವಿಜಯ ದಾಖಲಿಸಿದೆ.
ಇಲ್ಲಿನ ಅಲ್ ಬಯಾತ್ ಸ್ಟೇಡಿಯಮ್‌ನಲ್ಲಿ ಭಾನುವಾರ ರಾತ್ರಿ ವಿಶ್ವ ಕಪ್‌ನ ಉದ್ಘಾಟನಾ ಸಮಾರಂಭ ನಡೆಯಿತು. ಆ ಬಳಿಕ ನಡೆದ ಪಂದ್ಯದಲ್ಲಿ ಈಕ್ವೆಡಾರ್ ತಂಡ ಸಂಪೂರ್ಣವಾಗಿ ಪಾರಮ್ಯ ಸಾಧಿಸಿತು. ಪಂದ್ಯದ ಮೊದಲಾರ್ಧದಲ್ಲಿ ವೆಲೆನ್ಸಿಯಾ ಎರಡು ಗೋಲ್‌ಗಳನ್ನು ದಾಖಲಿಸಿದರು. ಆದರೆ, ದ್ವಿತೀಯಾರ್ಧದಲ್ಲಿ ಯಾವುದೇ ಗೋಲ್‌ಗಳು ದಾಖಲಾಗದೇ ಹೋದ ಕಾರಣ ಈಕ್ವೆಡಾರ್ ತಂಡಕ್ಕೆ ಸುಲಭ ಜಯ ಲಭಿಸಿತು.
೩೩ ವರ್ಷದ ವೆನ್ನೆರ್ ವೆಲೆನ್ಸಿಯಾ ಅವರು ವಿಶ್ವ ಕಪ್‌ನ ಉದ್ಘಾಟನಾ ಪಂದ್ಯದಲ್ಲಿ ಗೋಲ್ ದಾಖಲಿಸಿದ ಆಟಗಾರನೆಂಬ ಖ್ಯಾತಿಯನ್ನೂ ತಮ್ಮದಾಗಿಸಿಕೊಂಡರು. ಫಿಫಾ Rank ಪಟ್ಟಿಯಲ್ಲಿ ಈಕ್ವೆಡಾರ್ ತಂಡ ೪೪ನೇ ಸ್ಥಾನದಲ್ಲಿದ್ದು, ಆತಿಥೇಯ ಕತಾರ್ ೫೦ನೇ ಸ್ಥಾನದಲ್ಲಿದೆ. ಇದೇ ವೇಳೆ ಉದ್ಘಾಟನಾ ಪಂದ್ಯದಲ್ಲಿ ಸೋತ ಕತಾರ್ ತಂಡ, ಆತಿಥೇಯ ತಂಡವೊಂದು ತನ್ನ ಮೊದಲ ಪಂದ್ಯದಲ್ಲಿ ಸೋಲು ಕಂಡ ಕಳಪೆ ದಾಖಲೆಯನ್ನು ಸಾಧಿಸಿತು.
ಇದನ್ನೂ ಓದಿ | Fifa World Cup | ಫಿಫಾ ವಿಶ್ವ ಕಪ್ ಫುಟ್ಬಾಲ್ ಜಾತ್ರೆಗೆ ಅದ್ಧೂರಿ ಚಾಲನೆ