ಮುಂಬಯಿ: ಸ್ಫೋಟಕ ಬ್ಯಾಟಿಂಗ್ ಹಾಗೂ ಸಂಘಟಿತ ಬೌಲಿಂಗ್ ದಾಳಿ ನಡೆಸಿದ ಮುಂಬಯಿ ಇಂಡಿಯನ್ಸ್ ತಂಡ ಮಹಿಳೆಯರ ಪ್ರಿಮಿಯರ್ ಲೀಗ್ನ (WPL 2023) ಉದ್ಘಾಟನಾ ಪಂದ್ಯದಲ್ಲಿ ಗುಜರಾತ್ ಜಯಂಟ್ಸ್ ವಿರುದ್ಧ 143 ರನ್ಗಳ ಭರ್ಜರಿ ವಿಜಯ ದಾಖಲಿಸಿದೆ. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಮುಂಬಯಿ ತಂಡ 207 ರನ್ ಪೇರಿಸಿದರೆ ಗುರಿ ಬೆನ್ನಟ್ಟಿದ ಗುಜರಾತ್ ಟೈಟನ್ಸ್ 15.1 ಓವರ್ಗಳಲ್ಲಿ 64 ರನ್ಗಳಿಗೆ 9 ವಿಕೆಟ್ ಕಳೆದುಕೊಂಡಿತು. ಗುಜರಾತ್ ನಾಯಕಿ ಬೆತ್ಮೂನಿ ಗಾಯದಿಂದಾಗಿ ಬ್ಯಾಟಿಂಗ್ ಮುಂದುವರಿಸಲಿಲ್ಲ. ಈ ಮೂಲಕ ಮೊದಲ ಪಂದ್ಯದಲ್ಲಿಯೇ ಮುಂಬಯಿ ತಂಡ ದಾಖಲೆಯ ವಿಜಯ ತನ್ನದಾಗಿಸಿಕೊಂಡಿತು.
ಟಾಸ್ ಸೋತು ಬ್ಯಾಟಿಂಗ್ಗೆ ಆಹ್ವಾನ ಪಡೆದರೂ ಸ್ಥಳೀಯ ಅಭಿಮಾನಿಗಳ ಬೆಂಬಲದೊಂದಿಗೆ ಆಡಿದ ಮುಂಬಯಿ ಇಂಡಿಯನ್ಸ್ ಬಿರುಸಿನ ಬ್ಯಾಟಿಂಗ್ ಪ್ರದರ್ಶನ ನೀಡಿತು. ನಾಯಕಿ ಹರ್ಮನ್ಪ್ರೀತ್ ಕೌರ್ (66 ರನ್, 30 ಎಸೆತ, 14 ಫೋರ್) ಅವರ ಸ್ಫೋಟಕ ಅರ್ಧ ಶತಕ ಹಾಗೂ ಆರಂಭಿಕ ಬ್ಯಾಟರ್ ಹೇಲಿ ಮ್ಯಾಥ್ಯೂಸ್ (47) ಹಾಗೂ ಅಮೇಲಿಯಾ ಕೆರ್ (45) ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಎದುರಾಳಿ ತಂಡಕ್ಕೆ 208 ರನ್ಗಳ ಗುರಿಯನ್ನು ಒಡ್ಡಿತು.
ಮಹಿಳೆಯ ಪ್ರೀಮಿಯರ್ ಲೀಗ್ ಟ್ವೀಟ್ ಇಲ್ಲಿದೆ
ದೊಡ್ಡ ಮೊತ್ತದ ರನ್ ಪೇರಿಸಿದ ವಿಶ್ವಾಸದಲ್ಲಿ ಬೌಲಿಂಗ್ ಮಾಡಿದ ಮುಂಬಯಿ ಇಂಡಿಯನ್ಸ್ ಗುಜರಾತ್ ಜಯಂಟ್ಸ್ ತಂಡದ ವಿಕೆಟ್ಗಳನ್ನು ಸತತವಾಗಿ ಉರುಳಿಸಿದರು. 12 ರನ್ಗಳಾಗುವಷ್ಟರಲ್ಲಿ 4 ವಿಕೆಟ್ ಕಳೆದುಕೊಂಡು ಗುಜರಾತ್, 49 ರನ್ಗಳಿಗೆ 8 ವಿಕೆಟ್ ನಷ್ಟ ಮಾಡಿಕೊಂಡಿತು. ದಯಾಲನ್ ಹೇಮಲತಾ (29) ಏಕಾಂಗಿ ಹೋರಾಟ ನಡೆಸಿದರು.
ಮುಂಬಯಿ ಬೌಲರ್ ಸೈಕಾ ಇಶಾಖ್ (4 ವಿಕೆಟ್), ನ್ಯಾಟ್ ಸ್ಕೀವರ್ (2 ವಿಕೆಟ್) ಅಮೇಲಿಯಾ ಕೆರ್ (2 ವಿಕೆಟ್) ಎದುರಾಳಿ ಬ್ಯಾಟರ್ಗಳನ್ನು ಸತತವಾಗಿ ಪೆವಿಲಿಯನ್ಗೆ ಅಟ್ಟಿ ತಂಡಕ್ಕೆ ದೊಡ್ಡ ಮೊತ್ತದ ಜಯ ತಂದುಕೊಡುವಲ್ಲಿ ಪ್ರಧಾನ ಪಾತ್ರ ವಹಿಸಿದರು.
ಮುಂಬಯಿ ಬ್ಯಾಟರ್ಗಳ ಅಬ್ಬರದ ಆಟ
ಟಾಸ್ ಗೆದ್ದ ಗುಜರಾತ್ ತಂಡದ ನಾಯಕಿ ಬೆತ್ ಮೂನಿ ಎದುರಾಳಿ ತಂಡವನ್ನು ಕಡಿಮೆ ಮೊತ್ತಕ್ಕೆ ಕಟ್ಟಿ ಹಾಕುವ ಯೋಜನೆ ರೂಪಿಸಿದ್ದರೂ ಅದು ಯಶಸ್ಸು ಕಾಣಲಿಲ್ಲ. ಆರಂಭಿಕ ಬ್ಯಾಟರ್ ಹೇಲಿ ಮ್ಯಾಥ್ಯೂಸ್ ಭರ್ಜರಿ ಆರಂಭ ತಂದುಕೊಟ್ಟರೆ, ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಇಳಿದ ನ್ಯಾಟ್ ಸ್ಕೀವರ್ ಬ್ರಂಟ್ (23) ರನ್ ಗಳಿಕೆಯನ್ನು ಮುಂದುವರಿಸಿದರು. ಏತನ್ಮಧ್ಯೆ, ಆರಂಭಿಕ ಬ್ಯಾಟರ್ ಯಸ್ತಿಕಾ ಭಾಟಿಯಾ 1 ರನ್ಗೆ ಔಟಾಗಿ ನಿರಾಸೆ ಮೂಡಿಸಿದರು.
ಇದನ್ನೂ ಓದಿ : WPL 2023 : ಹರ್ಮನ್ಪ್ರೀತ್ ಕೌರ್ ಸ್ಫೋಟಕ ಅರ್ಧ ಶತಕ, ಗುಜರಾತ್ ತಂಡಕ್ಕೆ 208 ರನ್ ಗೆಲುವಿನ ಗುರಿ
ಮೂರು ವಿಕೆಟ್ ಉರುಳಿದ ಬಳಿಕ ಮುಂಬಯಿ ತಂಡ ಬ್ಯಾಟಿಂಗ್ನಲ್ಲಿ ಅಬ್ಬರಿಸಿತು. ಹರ್ಮನ್ಪ್ರಿತ್ ಕೌರ್ ಹಾಗೂ ಅಮೇಲಿಯಾ ಕೆರ್ವಿಸ್ಫೋಟಕ ಬ್ಯಾಟಿಂಗ್ ನಡೆಸಿದರು. ಈ ಜೋಡಿ ನಾಲ್ಕನೇ ವಿಕೆಟ್ಗೆ 89 ರನ್ ಬಾರಿಸಿತು. ಅದರಲ್ಲೂ ಹರ್ಮನ್ಪ್ರೀತ್ ಕೌರ್ ಅಬ್ಬರಿಸಿದರು. ಅವರು ಸತತ ಏಳು ಸೇರಿದಂತೆ ಒಟ್ಟು 14 ಫೋರ್ ಬಾರಿಸಿ ಎದುರಾಳಿ ತಂಡಕ್ಕೆ ಆಘಾತ ಉಂಟು ಮಾಡಿದರು. ಕೊನೆಯಲ್ಲಿ ಪೂಜಾ ವಸ್ತ್ತಾಕರ್ 15 ರನ್ಗಳ ಕೊಡುಗೆ ಕೊಟ್ಟರು.
ಗುಜರಾತ್ ತಂಡದ ಪರ ಸ್ನೇಹಾ ರಾಣಾ 2 ವಿಕೆಟ್ ಪಡೆದರು.