ಚಿತ್ತಗಾಂಗ್ : ಇಶಾನ್ ಕಿಶನ್ (೨೧೦) ಅವರ ವಿಶ್ವ ದಾಖಲೆಯ ದ್ವಿಶತಕ ಹಾಗೂ ವಿರಾಟ್ ಕೊಹ್ಲಿಯ (೧೧೩) ಅವರ ಅಮೋಘ ಶತಕದ ಮತ್ತು ಬೌಲರ್‌ಗಳ ಕರಾರುವಾಕ್ ದಾಳಿಯಿಂದ ಮಿಂಚಿದ ಭಾರತ ತಂಡ, ಆತಿಥೇಯ ಬಾಂಗ್ಲಾದೇಶ ವಿರುದ್ಧದ ಏಕ ದಿನ ಸರಣಿಯ (INDvsBAN) ಕೊನೇ ಪಂದ್ಯದಲ್ಲಿ 227 ರನ್‌ಗಳ ಭಾರಿ ಅಂತರದ ಜಯ ದಾಖಲಿಸಿದೆ. ಭಾರತ ತಂಡ ಮೊದಲೆರಡು ಪಂದ್ಯಗಳಲ್ಲಿ ಸೋತು ಸರಣಿ ಕಳೆದುಕೊಂಡಿದ್ದರಿಂದ ಈ ಪಂದ್ಯಕ್ಕೆ ಹೆಚ್ಚಿನ ಮಹತ್ವ ಇರಲಿಲ್ಲ. ಆದರೆ ದುರ್ಬಲ ಬಾಂಗ್ಲಾ ತಂಡದಿಂದ ವೈಟ್‌ವಾಷ್ ಮುಖಭಂಗ ಆಗುವುದರಿಂದ ತಪ್ಪಿಸಿಕೊಂಡಿತು. ಜತೆಗೆ ಬೃಹತ್ ಅಂತರದ ಜಯದೊಂದಿಗೆ ಸರಣಿ ಸೋಲಿನ ಕಹಿ ಮರೆಯಿತು.
ಇಲ್ಲಿನ ಜಹಾರ್ ಅಹಮದ್ ಚೌಧರಿ ಕ್ರಿಕೆಟ್ ಸ್ಟೇಡಿಯಮ್‌ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲಾದೇಶ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟ್ ಮಾಡಲು ಆಹ್ವಾನ ಪಡೆದ ಕೆ. ಎಲ್ ರಾಹುಲ್ ನೇತೃತ್ವ ಭಾರತ ತಂಡ ಇಶಾನ್ ಹಾಗೂ ವಿರಾಟ್ ಕೊಹ್ಲಿಯ ೨೯೦ ರನ್‌ಗಳ ಎರಡನೇ ವಿಕೆಟ್ ಜತೆಯಾಟದ ನೆರವು ಪಡೆದು ನಿಗದಿತ ೫೦ ಓವರ್‌ಗಳಲ್ಲಿ ೮ ವಿಕೆಟ್ ನಷ್ಟಕ್ಕೆ ೪೦೯ ರನ್ ಪೇರಿಸಿತು. ಗುರಿ ಬೆನ್ನಟ್ಟಿದ ಬಾಂಗ್ಲಾದೇಶ ತಂಡ 34 ಓವರ್‌ಗಳಲ್ಲಿ 182 ರನ್‌ಗಳಿಗೆ ಸರ್ವಪತನಗೊಂಡು ಸೋಲೊಪ್ಪಿಕೊಂಡಿತು.
ಭಾರತ ತಂಡ ಪೇರಿಸಿದ್ದ ರನ್ ಶಿಖರಕ್ಕೆ ಪ್ರತಿಯಾಗಿ ಆಡಿದ ಬಾಂಗ್ಲಾದೇಶ ತಂಡದ ಪರ ಪರ ಶಕಿಬ್ ಅಲ್ ಹಸನ್ (೪೩) ಸ್ವಲ್ಪ ಪ್ರತಿರೋಧ ತೋರಿದರು. ನಾಯಕ ಲಿಟನ್ ದಾಸ್ (೨೯), ಯಾಸಿರ್ ಅಲಿ (೨೫) ಅಲ್ಪ ನೆರವು ಕೊಟ್ಟರು. ಉಳಿದ ಆಟಗಾರರು ಭಾರತದ ಬೌಲರ್‌ಗಳ ಮೋಡಿಗೆ ಸಿಲುಕಿ ಪೆವಿಲಿಯನ್ ಪರೇಡ್ ನಡೆಸಿದರು. ಭಾರತ ತಂಡದ ಬೌಲಿಂಗ್ ವಿಭಾಗದಲ್ಲಿ ಶಾರ್ದೂಲ್ ಠಾಕೂರ್ (೩೦ ರನ್‌ಗಳಿಗೆ ೩ ವಿಕೆಟ್), ಅಕ್ಷರ್ ಪಟೇಲ್ (೨೨ ರನ್‌ಗಳಿಗೆ ೨ ವಿಕೆಟ್ ) ಪ್ರಭಾವಿ ಬೌಲಿಂಗ್ ನಡೆಸಿದರು.
ದಾಖಲೆಯ ಮೊತ್ತ
ಇನಿಂಗ್ಸ್ ಆರಂಭಿಸಿದ ಭಾರತ ತಂಡಕ್ಕೆ ಶಿಖರ್ ಧವನ್ (೦೩) ಅವರ ವಿಕೆಟ್ ಬೇಗನೆ ಪತನಗೊಳ್ಳುವ ಮೂಲಕ ಹಿನ್ನಡೆ ಎದುರಾಯಿತು. ಆದರೆ, ವಿರಾಟ್ ಹಾಗೂ ಇಶಾನ್ ಮುನ್ನುಗ್ಗಿ ಆಡಿದರು. ಇಶಾನ್ ೧೨೬ ಎಸೆತಗಳಲ್ಲಿ ದ್ವಿಶತಕ ಪೂರೈಸುವ ಜತೆಗೆ ಈ ಸಾಧನೆ ಮಾಡಿದ ಭಾರತದ ನಾಲ್ಕನೇ ಆಟಗಾರ ಎಂಬ ಖ್ಯಾತಿ ತಮ್ಮದಾಗಿಸಿಕೊಂಡರು. ಇದೇ ವೇಳೆ ವಿರಾಟ್ ಕೊಹ್ಲಿ ೭೨ನೇ ಶತಕ ಅಂತಾರಾಷ್ಟ್ರೀಯ ಶತಕ ಬಾರಿಸಿದರು. ಈ ಮೂಲಕ ಅವರು ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಅವರನ್ನು ಹಿಂದಿಕ್ಕಿದರು. ವಿರಾಟ್ ಕೊಹ್ಲಿ ೨೦೧೯ರ ಬಳಿಕ ಬಾರಿಸಿದ ಮೊದಲ ಒಡಿಐ ಶತಕ ಇದಾಗಿದೆ.
ಸ್ಕೋರ್ ವಿವರ : ಭಾರತ ೫೦ ಓವರ್‌ಗಳಲ್ಲಿ ೮ ವಿಕೆಟ್‌ಗೆ ೪೦೯ (ಇಶಾನ್ ಕಿಶನ್ ೨೧೦, ವಿರಾಟ್ ಕೊಹ್ಲಿ ೧೧೩, ವಾಷಿಂಗ್ಟನ್ ಸುಂದರ್ ೩೭; ಶಕಿಬ್ ಅಲ್ ಹಸನ್ ೬೮ಕ್ಕೆ೨).
ಬಾಂಗ್ಲಾದೇಶ: ೩೪ ಓವರ್‌ಗಳಲ್ಲಿ ೧೮೨ (ಶಕಿಬ್ ಅಲ್ ಹಸನ್ ೪೩, ಯಾಸಿರ್ ಅಲಿ ೨೫, ಶಾರ್ದುಲ್ ಠಾಕೂರ್ ೩೦ಕ್ಕೆ೩, ಅಕ್ಷರ್ ಪಟೇಲ್ ೨೨ಕ್ಕೆ೨, ಉಮ್ರಾನ್ ಮಲಿಕ್ ೪೩ಕ್ಕೆ೨).
ಇದನ್ನೂ ಓದಿ | INDvsBAN | ಬಾಂಗ್ಲಾದೇಶ ವಿರುದ್ಧದ 2ನೇ ಪಂದ್ಯದಲ್ಲೂ ಭಾರತಕ್ಕೆ 5 ರನ್ ಸೋಲು; ಸರಣಿ ಕಳೆದುಕೊಂಡ ರೋಹಿತ್ ಪಡೆ