Site icon Vistara News

IND vs ENG | ಸೆಮಿ ಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ 10 ವಿಕೆಟ್‌ ಸೋಲು, ಟೀಮ್‌ ಇಂಡಿಯಾದ ವಿಶ್ವ ಕಪ್‌ ಅಭಿಯಾನ ಅಂತ್ಯ

ind vs eng

ಅಡಿಲೇಡ್‌ : ಟೀಮ್‌ ಇಂಡಿಯಾದ ದುರ್ಬಲ ಬೌಲಿಂಗ್‌ ವಿಭಾಗವನ್ನು ಚಿಂದಿ ಉಡಾಯಿಸಿದ ಇಂಗ್ಲೆಂಡ್‌ ತಂಡ, ಟಿ೨೦ ವಿಶ್ವ ಕಪ್‌ನ ಸೆಮಿ ಫೈನಲ್‌ ಪಂದ್ಯದಲ್ಲಿ 10 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿತು. ಇದರೊಂದಿಗೆ ಭಾರತ ತಂಡದ ವಿಶ್ವ ಕಪ್‌ ಅಭಿಯಾನ ಉಪಾಂತ್ಯಕ್ಕೆ ಕೊನೆಗೊಂಡಿತು. ಇಂಗ್ಲೆಂಡ್ ತಂಡದ ಆರಂಭಿಕ ಬ್ಯಾಟರ್‌ಗಳಾದ ಜೋಸ್‌ ಬಟ್ಲರ್‌ (80) ಹಾಗೂ ಅಲೆಕ್ಸ್‌ ಹೇಲ್ಸ್‌ (86) ಅಜೇಯ ಸ್ಫೋಟಕ ಅರ್ಧಶತಕ ಬಾರಿಸಿ ಭಾರತದ ಫೈನಲ್ ಆಸೆಗೆ ತಣ್ಣೀರು ಎರಚಿದರು. ಈ ಜೋಡಿ ಮುರಿದ ಮೊದಲ ವಿಕೆಟ್‌ಗೆ ೧೭೦ ರನ್‌ ಬಾರಿಸಿತು. ಭಾನುವಾರ ನಡೆಯುವ ಫೈನಲ್‌ ಪಂದ್ಯದಲ್ಲಿ ಇಂಗ್ಲೆಂಡ್‌ ತಂಡ ಪಾಕಿಸ್ತಾನವನ್ನು ಎದುರಿಸಲಿದೆ. ಅಂತೆಯೇ ನಾಯಕತ್ವ ವಹಿಸಿಕೊಂಡ ಮೊದಲ ಟೂರ್ನಿಯಲ್ಲೇ ಫೈನಲ್‌ ತಲುಪಿದ ಹೆಗ್ಗಳಿಕೆಯನ್ನು ಜೋಸ್‌ ಬಟ್ಲರ್‌ ತಮ್ಮದಾಗಿಸಿಕೊಂಡರು.

ಅಡಿಲೇಡ್​ ಓವಲ್​ ಕ್ರಿಕೆಟ್​ ಸ್ಟೇಡಿಯಮ್‌ ನಡೆದ ಮುಖಾಮುಖಿಯಲ್ಲಿ ಟಾಸ್​ ಸೋತು ಮೊದಲು ಬ್ಯಾಟ್​ ಮಾಡಿದ ಟೀಮ್​ ಇಂಡಿಯಾ ನಿಗದಿತ 20 ಓವರ್​ಗಳಲ್ಲಿ ೬ ವಿಕೆಟ್​ಗೆ ೧೬೮ ರನ್​ ಗಳಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಇಂಗ್ಲೆಂಡ್‌ ತಂಡ 16 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೇ ೧೭೦ ರನ್‌ ಬಾರಿಸಿ ಅಮೋಘ ಗೆಲುವಿಗೆ ಪಾತ್ರವಾಯಿತು. ಇದರೊಂದಿಗೆ ವಿರಾಟ್‌ ಕೊಹ್ಲಿ (೫೦) ಅರ್ಧ ಶತಕ ಹಾಗೂ ಹಾರ್ದಿಕ್‌ ಪಾಂಡ್ಯ ಅವರ ಸ್ಫೋಟಕ ೬೩ ರನ್‌ಗಳು ವ್ಯರ್ಥಗೊಂಡವು. ಈ ಸೋಲಿನ ಮೂಲಕ ಭಾರತದ ಕೋಟ್ಯಂತರ ಕ್ರಿಕೆಟ್‌ ಅಭಿಮಾನಿಗಳು ನಿರಾಸೆ ಅನುಭವಿಸಿದರು. ಕಳೆದ ವರ್ಷ ಯುಎಇನಲ್ಲಿ ನಡೆದ ವಿಶ್ವ ಕಪ್‌ನಲ್ಲಿ ಭಾರತ ತಂಡ ಪಾಕಿಸ್ತಾನದ ವಿರುದ್ಧದ ಗುಂಪು ಹಂತದ ಪಂದ್ಯದಲ್ಲಿ ಇದೇ ರೀತಿ ೧೦ ವಿಕೆಟ್‌ಗಳ ಸೋಲು ಎದುರಿಸಿತ್ತು.

ಭಾರತಕ್ಕೆ ಆರಂಭಿಕ ಆಘಾತ

ಇದಕ್ಕೂ ಮೊದಲು ಬ್ಯಾಟ್‌ ಮಾಡಿದ ಭಾರತ ತಂಡ ಆರಂಭಿಕ ವೈಫಲ್ಯ ಎದುರಿಸಿತು. ಬಾಂಗ್ಲಾ ಮತ್ತು ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಸತತ ಅರ್ಧಶತಕ ಬಾರಿಸಿ ಮಿಂಚಿದ್ದ ಕನ್ನಡಿಗ ಕೆ.ಎಲ್. ರಾಹುಲ್​ ಈ ಪಂದ್ಯದಲ್ಲಿ ಬ್ಯಾಟಿಂಗ್​ ವೈಫಲ್ಯ ಅನುಭವಿಸಿದರು. ಕ್ರಿಸ್​ ವೋಕ್ಸ್​ ಅವರ ಮೊದಲ ಓವರ್​ನಲ್ಲೇ ಔಟಾಗುವ ಮೂಲಕ ಭಾರತಕ್ಕೆ ಆರಂಭಿಕ ಆಘಾತ ನೀಡಿದರು. ರಾಹುಲ್​ ಗಳಿಕೆ 5 ರನ್.​ ಅದರಲ್ಲಿ ಒಂದು ಬೌಂಡರಿ ಸೇರಿತ್ತು. ರಾಹುಲ್​ ವಿಕೆಟ್​ ಬಳಿಕ ನಿಧಾನಗತಿಯ ಆಟದ ಮೂಲಕ ತಂಡಕ್ಕೆ ನೆರವಾಗುವ ಸೂಚನೆ ನೀಡಿದ ನಾಯಕ ರೋಹಿತ್​ ಕೂಡ 27 ರನ್​ಗೆ ಆಟ ಮುಗಿಸಿದರು. ಕೊಹ್ಲಿ ಜತೆ ದ್ವಿತೀಯ ವಿಕೆಟ್​ಗೆ 47 ರನ್​ ಒಟ್ಟುಗೂಡಿಸಿದ್ದೇ ಸಮಾಧಾನಕರ ಸಂಗತಿ.

ಕೊಹ್ಲಿ ಆಸರೆ

ಒಂದೆಡೆ ತಂಡದ ವಿಕೆಟ್​ ಬೀಳುತ್ತಿದ್ದರೂ ಮತ್ತೊಂದು ಬದಿಯಲ್ಲಿ ಕ್ರೀಸ್‌ನಲ್ಲಿ ತಳವೂಡಿ ನಿಂತು ಆಂಗ್ಲರ ಬೌಲಿಂಗ್​ ದಾಳಿಯನ್ನು ಸಮರ್ಥವಾಗಿ ಎದುರಿಸುವಲ್ಲಿ ಯಶಸ್ಸು ಕಂಡ ವಿರಾಟ್​ ಕೊಹ್ಲಿವ೪ ಫೋರ್‌, ೧ ಸಿಕ್ಸರ್​ ಜತೆಗೆ ತಂಡದ ಮೊತ್ತವನ್ನು ಹೆಚ್ಚಿಸಿದರು. ೪೦ ಎಸೆತ ಎದುರಿಸಿದ ಅವರು ಅರ್ಧಶತಕ ಪೂರ್ತಿಗೊಳಿಸಿದ ಬೆನ್ನಲ್ಲೇ ವಿಕೆಟ್‌ ಒಪ್ಪಿಸಿದರು. ಇನ್ನು ಪ್ರತಿ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್​ ನಡೆಸಿ ತಂಡದ ಬೃಹತ್​ ಮೊತ್ತಕ್ಕೆ ಕಾರಣರಾಗುತ್ತಿದ್ದ ಸೂರ್ಯಕುಮಾರ್​ ಯಾದವ್​ ಆದಿಲ್ ರಶೀದ್​ ಅವರ ಎಸೆತದಲ್ಲಿ ಸಿಕ್ಸರ್​ ಬಾರಿಸಲು ಪ್ರಯತ್ನಿಸಿ ಸಾಲ್ಟ್​ಗೆ ಕ್ಯಾಚ್​ ನೀಡುವ ಮೂಲಕ ನಿರಾಶೆ ಮೂಡಿಸಿದರು. ಸೂರ್ಯಕುಮಾರ್​ ಗಳಿಕೆ 14 ರನ್​ಗೆ ಸೀಮಿತ ಗೊಂಡಿತು. ಹಾರ್ದಿಕ್‌ ಪಾಂಡ್ಯ ಕೂಡ ೬ ರನ್‌ಗಳಿಗೆ ಔಟಾಗಿ ನಿರಾಸೆ ಮೂಡಿಸಿದರು.

ಸಿಡಿದ ಹಾರ್ದಿಕ್​ ಪಾಂಡ್ಯ

ಸತತ ಬ್ಯಾಟಿಂಗ್ ವೈಫಲ್ಯ ಕಂಡಿದ್ದ ಹಾರ್ದಿಕ್​ ಪಾಂಡ್ಯ ಈ ಮಹತ್ವದ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್​ ನಡೆಸಿದರು. ಕೇವಲ ೩೩ ಎಸೆತಗಳಲ್ಲಿ ೬೩ ರನ್‌ ಬಾರಿಸಿ ಕೊನೇ ಹಂತದಲ್ಲಿ ತಂಡಕ್ಕೆ ನೆರವಾದರು. ಅವರ ಇನಿಂಗ್ಸ್‌ನಲ್ಲಿ ೫ ಸಿಕ್ಸರ್‌ ಹಾಗೂ ೪ ಫೋರ್‌ಗಳು ಸೇರಿಕೊಂಡಿದ್ದವು. ಆದರೆ, ಜೋರ್ಡನ್‌ ಎಸೆದ ಇನಿಂಗ್ಸ್‌ನ ಕೊನೇ ಎಸೆತದಲ್ಲಿ ಹಿಟ್‌ ವಿಕೆಟ್‌ ಅಗುವ ಮೂಲಕ ನಿರಾಸೆ ಎದುರಿಸಿದರು. ಆ ಎಸೆತವನ್ನು ಅವರು ಬೌಂಡರಿ ಗೆರೆಗಿಂತ ಆಚೆ ಅಟ್ಟಿದ್ದರೂ, ಆ ೪ ರನ್‌ಗಳು ನಷ್ಟವಾದವು.

ಸಂಕ್ಷಿಪ್ತ ಸ್ಕೋರ್​: ಭಾರತ 20 ಓವರ್​ಗಳಲ್ಲಿ ೬ ವಿಕೆಟ್​ಗೆ ೧೬೮ ( ರೋಹಿತ್​ ಶರ್ಮಾ 27, ವಿರಾಟ್‌ ಕೊಹ್ಲಿ ೫೦, ಹಾರ್ದಿಕ್‌ ಪಾಂಡ್ಯ ೬೩; ಕ್ರಿಸ್‌ ಜೋರ್ಡಾನ್‌ 43ಕ್ಕೆ೩).

ಇಂಗ್ಲೆಂಡ್: ೧೬ ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೇ ೧೭೦ (ಜೋಸ್‌ ಬಟ್ಲರ್‌ ೮೦*, ಅಲೆಕ್ಸ್‌ ಹೇಲ್ಸ್‌ ೮೬*; ಅರ್ಶ್‌ದೀಪ್‌ ಸಿಂಗ್‌ ೧೫ಕ್ಕೆ೦).

ಇದನ್ನೂ ಓದಿ | IND VS ENG | 35 ವರ್ಷಗಳ ಬಳಿಕ ಭಾರತ-ಇಂಗ್ಲೆಂಡ್​ ಮಧ್ಯೆ ಸೆಮಿಫೈನಲ್​ ಕಾದಾಟ

Exit mobile version